ವಿಶ್ವವ್ಯಾಪಿ ಜಾಲದ ಮೂಲಕ ಮುಕ್ತವಾಗಿ ಲಭ್ಯವಿರುವುದು, ಮತ್ತು ಯಾರು ಬೇಕಾದರೂ ಬಳಸಲು ಸಾಧ್ಯವಿರುವುದು MOOCಗಳ ವೈಶಿಷ್ಟ್ಯ
ವಿಶ್ವವ್ಯಾಪಿ ಜಾಲದ ಮೂಲಕ ಮುಕ್ತವಾಗಿ ಲಭ್ಯವಿರುವುದು, ಮತ್ತು ಯಾರು ಬೇಕಾದರೂ ಬಳಸಲು ಸಾಧ್ಯವಿರುವುದು MOOCಗಳ ವೈಶಿಷ್ಟ್ಯ Image by Gerd Altmann from Pixabay
ಪ್ರಶ್ನೆ-ಉತ್ತರ

ಓದಿ+ನೋಡಿ: MOOC ಅಂದರೆ ಏನು?

ಟಿ. ಜಿ. ಶ್ರೀನಿಧಿ

ವಿವಿಧ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ವಿಶ್ವವ್ಯಾಪಿ ಜಾಲ, ಅಂದರೆ ವರ್ಲ್ಡ್‌ವೈಡ್ ವೆಬ್ ಅನ್ನು ಬಳಸುವುದು ನಮ್ಮ ಅಭ್ಯಾಸ. ಚಿತ್ರ ಬರೆಯುವುದು ಹೇಗೆ, ಮೊಬೈಲಿನಲ್ಲಿರುವ ಯಾವುದೋ ಸೌಲಭ್ಯ ಬಳಸುವುದು ಹೇಗೆ, ವಿಶೇಷ ತಿಂಡಿತಿನಿಸುಗಳನ್ನು ತಯಾರುಮಾಡುವುದು ಹೇಗೆ ಎನ್ನುವುದನ್ನೆಲ್ಲ ನಾವು ಆನ್‌ಲೈನ್ ಹುಡುಕಾಟದ ಮೂಲಕವೇ ತಿಳಿದುಕೊಳ್ಳುತ್ತೇವೆ. ಅವತ್ತು ಮನೆಗೆ ಡ್ರ್ಯಾಗನ್ ಫ್ರೂಟ್ ತಂದಾಗ ಅದನ್ನು ಹೆಚ್ಚುವುದು ಹೇಗೆ ಅಂತ ನಾನೂ ಯೂಟ್ಯೂಬಿನಲ್ಲಿ ಹುಡುಕಿದ್ದೆ.

ಇವೆಲ್ಲವೂ ಕಲಿಕೆಯ ವಿಧಾನಗಳೇ ಸರಿ. ಆದರೆ ನಮ್ಮ ಆನ್‌ಲೈನ್ ಕಲಿಕೆ ಇಷ್ಟಕ್ಕೇ ಸೀಮಿತ ಆಗಬೇಕಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಕೋರ್ಸ್‌ಗಳನ್ನು ಮಾಡುವ ಮೂಲಕ ನಾವು ಹೇಗೆ ಹೊಸ ವಿಷಯಗಳನ್ನು ವಿವರವಾಗಿ ಕಲಿಯುತ್ತೇವೋ ಅದೇ ರೀತಿ ಆನ್‌ಲೈನ್ ಕೋರ್ಸ್‌ಗಳನ್ನೂ - ಯಾವುದೇ ಶುಲ್ಕ ನೀಡದೆ - ಮಾಡಬಹುದು. ಇದನ್ನು ಸಾಧ್ಯವಾಗಿಸಿರುವುದು MOOC ಎಂಬ ಪರಿಕಲ್ಪನೆ.

MOOC ಅಂದರೆ Massive open online course. ವಿಶ್ವವ್ಯಾಪಿ ಜಾಲದ ಮೂಲಕ ಮುಕ್ತವಾಗಿ ಲಭ್ಯವಿರುವುದು, ಮತ್ತು ಯಾರು ಬೇಕಾದರೂ ಬಳಸಲು ಸಾಧ್ಯವಿರುವುದು ಈ ಕೋರ್ಸ್‌ಗಳ ವೈಶಿಷ್ಟ್ಯ. ಪಾಠದ ವೀಡಿಯೊಗಳು, ಬಹುಮಾಧ್ಯಮ ಪ್ರಸ್ತುತಿಗಳು, ಓದಿಕೊಳ್ಳಲು ಪೂರಕ ಸಾಮಗ್ರಿ - ಹೀಗೆ ವಿವಿಧ ಅಂಶಗಳು ಇಂತಹ ಕೋರ್ಸ್‌ಗಳಲ್ಲಿ ಇರುವುದು ಸಾಧ್ಯ. ಇವೆಲ್ಲದರ ಜೊತೆಗೆ ಇಲ್ಲಿ ಆನ್‌ಲೈನ್‌ ಪರೀಕ್ಷೆಗಳೂ ಇರುತ್ತವೆ.

ಕಂಪ್ಯೂಟರ್ ವಿಜ್ಞಾನ, ಇಂಜಿನಿಯರಿಂಗ್, ವಾಣಿಜ್ಯ ಅಧ್ಯಯನ, ನಿರ್ವಹಣೆ, ಸಂವಹನ, ಜೀವವಿಜ್ಞಾನ ಹೀಗೆ ವಿವಿಧ ವಿಷಯಗಳಿಗೆ ಸಂಬಂಧಪಟ್ಟ MOOCಗಳು ಲಭ್ಯವಿವೆ. ಹೆಸರಾಂತ ವಿಶ್ವವಿದ್ಯಾನಿಲಯಗಳು, ಸರಕಾರಗಳು, ವಾಣಿಜ್ಯ ಹಾಗೂ ಸ್ವಯಂಸೇವಾ ಸಂಸ್ಥೆಗಳು ಇದನ್ನೆಲ್ಲ ಸಾಧ್ಯವಾಗಿಸಿವೆ. ಸದ್ಯ ಇಂತಹ ಬಹುತೇಕ ಕೋರ್ಸ್‌ಗಳು ಇಂಗ್ಲಿಷ್ ಮಾಧ್ಯಮದಲ್ಲೇ ಇದ್ದರೂ, ಮುಂದೆ ಬೇಡಿಕೆ ಹಾಗೂ ಆಸಕ್ತಿ ಬೆಳೆದಿದ್ದೇ ಆದರೆ ಕನ್ನಡ ಹಾಗೂ ಇನ್ನಿತರ ಭಾರತೀಯ ಭಾಷೆಗಳಲ್ಲೂ ಇವು ಹೆಚ್ಚಿನ ಸಂಖ್ಯೆಯಲ್ಲಿ ದೊರಕುವುದು ಸಾಧ್ಯವಾಗಬಹುದು.

ನಿಮ್ಮ ನೆಚ್ಚಿನ ಸರ್ಚ್ ಇಂಜನ್‌ನಲ್ಲಿ MOOC ಎಂದು ಹುಡುಕುವ ಮೂಲಕ ನೀವು ಇಂತಹ ಕೋರ್ಸ್‌ಗಳು ಎಲ್ಲೆಲ್ಲಿ ಸಿಗುತ್ತವೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಇಂತಹ ಕೋರ್ಸ್‌ಗಳು ಉಚಿತವಾಗಿರಬೇಕು ಎಂದು MOOC ಪರಿಕಲ್ಪನೆ ಹೇಳುತ್ತದಾದರೂ, ಕೊಂಚ ಬದಲಾವಣೆಯ ಜೊತೆ ಅದನ್ನು ಅಳವಡಿಸಿಕೊಂಡಿರುವ ಸಂಸ್ಥೆಗಳೂ ಇವೆ. ಅಂತಹ ಸಂಸ್ಥೆಗಳು ಕೋರ್ಸ್‌ಗಾಗಿ ಇಂತಿಷ್ಟು ಶುಲ್ಕ ನಿಗದಿಪಡಿಸಿರುತ್ತವೆ ಅಥವಾ ಪರೀಕ್ಷೆ ಪಾಸುಮಾಡಿದ ಪ್ರಮಾಣಪತ್ರ ಬೇಕು ಎಂದರೆ ಮಾತ್ರ ಶುಲ್ಕವನ್ನು ಅಪೇಕ್ಷಿಸುತ್ತವೆ.

MOOC ಪರಿಕಲ್ಪನೆಯಡಿ ಕೋರ್ಸ್‌ಗಳನ್ನು ಉಚಿತವಾಗಿ ನೀಡುತ್ತಿರುವ ತಾಣಗಳಿಗೆ ಮೂರು ಉದಾಹರಣೆಗಳು ಇಲ್ಲಿವೆ: https://swayam.gov.in/ | https://www.mooc.org/ | https://www.coursera.org/

ಸಾಮಾನ್ಯವಾಗಿ ಕೋರ್ಸ್‌ಗಳಿಗೆ ಶುಲ್ಕ ವಿಧಿಸುವ ಹಲವು ತಾಣಗಳು ಕೂಡ ಕೋವಿಡ್-೧೯ ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಕೆಲವು ಅಥವಾ ಎಲ್ಲ ಕೋರ್ಸ್‌ಗಳನ್ನೂ ಉಚಿತವಾಗಿ ನೀಡುತ್ತಿವೆ.

ವೀಡಿಯೊ ಸೌಜನ್ಯ: ಸಂವಾದ