ನವಿಲುಗಳ ಸಂಖ್ಯೆ ಜಾಸ್ತಿಯಾಗುತ್ತಿರುವ ಬಗ್ಗೆ, ಹಿಂದೆ ಇಲ್ಲದ ಜಾಗಗಳನ್ನೂ ಈಗ ಅವು ಆಕ್ರಮಿಸಿಕೊಳ್ಳುತ್ತಿರುವುದಕ್ಕೆ ಈಗ ಒಂದಿಷ್ಟು ಪುರಾವೆಗಳಿವೆ. ಜಗತ್ತಿನ ಹಲವೆಡೆಗಳಲ್ಲಿ ಅದನ್ನು ಆಕ್ರಮಣಕಾರಿ (ಇನ್‌ವೇಸಿವ್) ಪ್ರಬೇಧ ಎಂದು ಗುರುತಿಸಲಾಗಿದೆ.
ನವಿಲುಗಳ ಸಂಖ್ಯೆ ಜಾಸ್ತಿಯಾಗುತ್ತಿರುವ ಬಗ್ಗೆ, ಹಿಂದೆ ಇಲ್ಲದ ಜಾಗಗಳನ್ನೂ ಈಗ ಅವು ಆಕ್ರಮಿಸಿಕೊಳ್ಳುತ್ತಿರುವುದಕ್ಕೆ ಈಗ ಒಂದಿಷ್ಟು ಪುರಾವೆಗಳಿವೆ. ಜಗತ್ತಿನ ಹಲವೆಡೆಗಳಲ್ಲಿ ಅದನ್ನು ಆಕ್ರಮಣಕಾರಿ (ಇನ್‌ವೇಸಿವ್) ಪ್ರಬೇಧ ಎಂದು ಗುರುತಿಸಲಾಗಿದೆ. Photo by Amol Mande: https://www.pexels.com/photo/peacock-and-peahen-2683940/
ಪ್ರಶ್ನೆ-ಉತ್ತರ

ವನ್ಯಜೀವಿಗಳು ಅಳಿವಿನಂಚಿಗೆ ಸರಿಯುವ ಬಗ್ಗೆ ಕೇಳಿದ್ದೇವೆ. ಆದರೆ ಅವುಗಳ ಸಂಖ್ಯೆ ಜಾಸ್ತಿಯಾಗುವುದೂ ಸಾಧ್ಯವೇ?

ಇಜ್ಞಾನ ತಂಡ

ನವಿಲುಗಳು - ಮಂಗಟ್ಟೆ ಪಕ್ಷಿಗಳು (ಗ್ರೇ ಹಾರ್ನ್‌ಬಿಲ್) ಈಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಿವೆ ಎನ್ನಿಸುತ್ತಿದೆಯಲ್ಲ, ಅದು ನಮ್ಮ ಕಲ್ಪನೆಯೋ ನಿಜವೋ?

ಜೀವಿಗಳ ಸಂಖ್ಯೆ ಕಡಿಮೆಯಾಗುವ ಹಾಗೆ ಜಾಸ್ತಿಯಾಗುವುದೂ ಇದೆ. ಒಂದು ಸಹಜವಾದ್ದು, ಇನ್ನೊಂದು ಅಸಹಜ. ಅಳಿಯುವ ಆತಂಕ ಜನರನ್ನು ಸುಲಭಕ್ಕೆ ತಟ್ಟುತ್ತದೆ. ಹೀಗಾಗಿ ವಿನಾಶದಂಚಿನ ಜೀವಿಗಳ ಬಗ್ಗೆ ಸಂಶೋಧನೆಗಳೂ ಹೆಚ್ಚು, ಜನಪ್ರಿಯ ವಿಜ್ಞಾನದ ಲೇಖನಗಳೂ ಹೆಚ್ಚು. ಆದರೆ ಅಸಹಜವಾಗಿ ಹೆಚ್ಚಾಗುವುದೂ, ತಮ್ಮ ಮೂಲ ಸ್ಥಾನ ಅಲ್ಲದೇ ಬೇರೆಡೆಗೂ ಹರಡಿ ಅಲ್ಲಿನ ಸ್ಥಳೀಯ ವೈವಿಧ್ಯಕ್ಕೆ ಕುತ್ತು ತರುವುದೂ ಅಷ್ಟೇ ಆತಂಕಕಾರಿ.

ವಿಕಾಸದ ದೀರ್ಘಕಾಲದ ಲೆಕ್ಕಾಚಾರದಲ್ಲಿ ಜೀವಿಗಳ ಸಂಖ್ಯೆ ಬೇರೆಬೇರೆ ಕಾರಣಗಳಿಗಾಗಿ ಹೆಚ್ಚು-ಕಡಿಮೆ ಆಗುವುದು, ಅಳಿದುಹೋಗುವುದು ಸಹಜ. ಹಿಂದೊಮ್ಮೆ ಜಗತ್ತನ್ನಾವರಿಸಿದ್ದ ಡೈನೋಸಾರುಗಳೂ ಮತ್ತವರ ಸಂಬಂಧಿಗಳೂ ಇಲ್ಲವಾಗಿದ್ದೂ ಸಹಜವೇ. ಆ ಕಾಲದಲ್ಲಿ ಅಪರೂಪವಾಗಿದ್ದ ಮೂಷಿಕಗಳತಹ ಸಸ್ತನಿಗಳು ಈಗ ಎಲ್ಲೆಡೆ ಕಾಣಸಿಗುವುದು ಕೂಡ ವಿಕಾಸದ ಸಹಜ ಪ್ರಕ್ರಿಯೆ. ಹಾಗೆಯೇ ಆ ಕಾಲದಲ್ಲಿ ಅಪರೂಪವಾಗಿದ್ದ ಕೆಲವು ಹೂಗಿಡಗಳು ಈಗ ವಿಪರೀತವಾಗಿ ಎಲ್ಲೆಡೆಯೂ ಪಸರಿಸಿವೆಯಷ್ಟೇ? ವಿಕಾಸದ ಪ್ರಕ್ರಿಯೆಯಲ್ಲಿ ಹೆಚ್ಚು ಕಮ್ಮಿಯಾಗಿವುದು, ಹಳೆಯ ಪ್ರಬೇಧಗಳು ಅಳಿದು ಹೋಗುವುದೆಲ್ಲ ಸಹಜ.

ಆದರೆ ಕಳೆದೆರೆಡು ಶತಮಾನಗಳ ಅವಧಿಯಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಬಹುತೇಕ ನಾವೇ ಹೊಣೆ.

ಪ್ರಾಣಿಗಳ ಸಂಖ್ಯೆಯಲ್ಲಿ ಆಗುವ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸರಿಯಾದ ಆರಂಭಿಕ ಮಾಹಿತಿ ಅಥವಾ ಆಧಾರ (ಬೇಸ್‌ಲೈನ್) ಬೇಕು. ಪ್ರಾಯಶಃ ಹುಲಿ, ಸಿಂಹ ಹಾಗೂ ಆನೆಗಳನ್ನು ಹೊರತುಪಡಿಸಿ ನಮ್ಮಲ್ಲಿ ಈ ಬಗೆಯ ಮಾಹಿತಿ ಸಂಗ್ರಹ ಬಹಳ ಕಡಿಮೆ. ಅರಣ್ಯ ಇಲಾಖೆ ಆಗಾಗ ಸಂರಕ್ಷಿತ ಅರಣ್ಯಗಳಲ್ಲಿ ಮಾಡುವ ಸ್ಯಾಂಪಲ್ ಸರ್ವೇಯಲ್ಲೂ ಕೂಡಾ ಸಾಕಷ್ಟು ಸಮಸ್ಯೆಗಳಿವೆ. ಈಗೀಗ ಆನುವಂಶಿಕ (ಜನೆಟಿಕ್) ಮಾಹಿತಿ ಆಧರಿಸಿ ಹಿಂದೊಮ್ಮೆ ಎಷ್ಟಿದ್ದವು, ಅವುಗಳ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಆಗಿತ್ತೇ ಎಂದೆಲ್ಲ ಲೆಕ್ಕಾಚಾರ ಹಾಕಲೂ ಸಾಧ್ಯವಾಗಿದೆ.

ನವಿಲುಗಳ ಸಂಖ್ಯೆ ಜಾಸ್ತಿಯಾಗುತ್ತಿರುವ ಬಗ್ಗೆ, ಹಿಂದೆ ಇಲ್ಲದ ಜಾಗಗಳನ್ನೂ ಈಗ ಅವು ಆಕ್ರಮಿಸಿಕೊಳ್ಳುತ್ತಿರುವುದಕ್ಕೆ ಈಗ ಒಂದಿಷ್ಟು ಪುರಾವೆಗಳಿವೆ. ಜಗತ್ತಿನ ಹಲವೆಡೆಗಳಲ್ಲಿ ಅದನ್ನು ಆಕ್ರಮಣಕಾರಿ (ಇನ್‌ವೇಸಿವ್) ಪ್ರಬೇಧ ಅಂತ ಗುರುತಿಸಿ ಕಾಲಕಾಲಕ್ಕೆ ಕೊಲ್ಲಲಾಗುತ್ತದೆ. ಗುಬ್ಬಿಗಳೂ ಹಾಗೇ, ನಾವಿಲ್ಲಿ ಕಡಿಮೆ ಆಗುತ್ತಿದೆ ಎಂದು ಅಲವತ್ತುಕೊಳ್ಳುತ್ತಿರುವಾಗ ಬೇರೆಡೆಗಳಲ್ಲಿ ಅವುಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಭಾರತದಲ್ಲಿಯೂ ಒಟ್ಟಾರೆ ಗುಬ್ಬಿಗಳ ಸಂಖ್ಯೆಯೇನೂ ಕಡಿಮೆಯಾದಂತಿಲ್ಲ, ಬದಲಿಗೆ ಅವುಗಳ ಆವಾಸದ ಸ್ಥಳ ಬದಲಾಗುತ್ತಿದೆ ಅಷ್ಟೇ ಎನ್ನುತ್ತಿವೆ ಕೆಲವು ಅಧ್ಯಯನಗಳು. ಆದರೆ ಐವತ್ತು ವರ್ಷಗಳ ಕೆಳಗೆ ಎಷ್ಟಿದ್ದವು ಎಂಬುದಕ್ಕೆ ನಮ್ಮಲ್ಲಿ ದತ್ತಾಂಶಗಳು ಇಲ್ಲವಾದ್ದರಿಂದ ನಿಖರವಾಗಿ ಹೇಳುವುದು ಕಷ್ಟವೇ. ಹಾಗೆಯೇ ಗ್ರೇ ಹಾರ್ನ್‌ಬಿಲ್ ಪಕ್ಷಿಗಳೂ ಹೊಸ ಆವಾಸಗಳಿಗೆ ಹೊಂದಿಕೊಳ್ಳುತ್ತಿವೆ. ಆದರೆ ಸಂಖ್ಯೆ ಹೆಚ್ಚಾಗುತ್ತಿದೆಯೇ ಎಂದು ಹೇಳಲು ನಮ್ಮಲ್ಲಿ ದತ್ತಾಂಶಗಳಿಲ್ಲ. ಇರುವುದೆಲ್ಲ ಬರೀ ಹೇಳಿಕೆಯ ಪುರಾವೆಗಳು ಮಾತ್ರವೇ.

ಹಾಗೆಯೇ ಚಿರತೆಗಳು ಹೆಚ್ಚುಹೆಚ್ಚಾಗಿ ಮನುಷ್ಯರ ಕಣ್ಣಿಗೆ ಬೀಳುತ್ತಿರುವುದು ಅವುಗಳ ಆವಾಸ ನಾಶದಿಂದಲೋ, ಅಥವಾ ಅದಕ್ಕೆ ಬೇರೇನಾದರೂ ಕಾರಣ ಇದೆಯೋ?

ಚಿರತೆಗಳದ್ದೂ ಇದೇ ಸಮಸ್ಯೆ, ನಿಖರ ದತ್ತಾಂಶವಿಲ್ಲ. ಹಾಗೆಂದು ಚಿರತೆಗಳೊಂದಿಗೆ ಮಾನವ ಸಂಘರ್ಷ ಹೊಸದೇನಲ್ಲವಲ್ಲ? ಜಿಮ್ ಕಾರ್ಬೆಟ್‌ನ ಕಾಲದಿಂದಲೂ ಅಂತಹ ಘಟನೆಗಳ ದಾಖಲಾತಿಗಳಿವೆ. ಆರಂಭಿಕ ಮಾಹಿತಿ ಇಲ್ಲದೆಯೇ ಚಿರತೆಗಳ ಸಂಖ್ಯೆಯಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ ನಿಖರವಾಗಿ ಹೇಳುವುದು ಕಷ್ಟವಿದೆ.

ನಮ್ಮ ಸುತ್ತಮುತ್ತ ಈಗಿರುವ ಲಂಟಾನಾ, ಪಾರ್ಥೇನಿಯಂ, ಕೋವಿಡ್ ಕಾಲದಲ್ಲಿ ದಾಳಿ ಮಾಡಿದ್ದ ಮಿಡತೆಗಳು ಎಲ್ಲವೂ ಹೀಗೇ ತಮ್ಮ ಮೂಲಸ್ಥಾನ ಬಿಟ್ಟು ಬೇರೆಡೆಗೆ ಹೋಗಿ ವ್ಯಾಪಿಸಿಕೊಂಡಿರುವ ಜೀವಿಗಳಿಗೆ ಉದಾಹರಣೆಗಳು. ಹೊಸ ಜಾಗದಲ್ಲಿ ಹಳೆಯ ವೈರಿಗಳು ಇಲ್ಲದ ಕಾರಣ ಅವುಗಳ ಸಂತತಿ ಅತಿಯಾಗತೊಡಗುತ್ತದೆ. ಮನುಷ್ಯ ಪ್ರಣೀತ ನಿರ್ನಾಮ ಹಾಗೂ ಆಕ್ರಮಣ ಎರಡೂ ಸಮಸ್ಯೆಗಳೇ.

ನಾವು ಮನುಷ್ಯರ ಸಂಖ್ಯೆಯೂ ಈಗ ಹಾಗೇ ಜಾಸ್ತಿ ಆಗಿದೆಯಲ್ಲ? 1900ರ ಸುಮಾರಿಗೆ ಎರಡು ಬಿಲಿಯನ್‌ಗಿಂತ ಕಡಿಮೆ ಇದ್ದ ಪ್ರಬೇಧ ನಮ್ಮದು, ಈಗ ನೂರು ವರ್ಷಗಳಲ್ಲಿ ನಾಲ್ಕು ಪಟ್ಟು ಜಾಸ್ತಿ ಆಗಿಬಿಟ್ಟಿದ್ದೇವೆ!

(ಪ್ರಸನ್ನ ಆಡುವಳ್ಳಿ ಭೋಪಾಲದ ಐಐಎಸ್‌ಇಆರ್ ಸಂಸ್ಥೆಯಲ್ಲಿ ಸಂಶೋಧಕರು. ಅವರ 'ಜೀವಯಾನ' ಅಂಕಣ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದೆ.)