ಮನುಷ್ಯನಿಗೆ ಹಾರುವ ಆಸೆ ಕಲಿಸಿದ ಪಕ್ಷಿಗಳು ಜೀವಜಗತ್ತಿನಲ್ಲಿ ವಿಶೇಷ ಸ್ಥಾನ ಪಡೆದಿವೆ
ಮನುಷ್ಯನಿಗೆ ಹಾರುವ ಆಸೆ ಕಲಿಸಿದ ಪಕ್ಷಿಗಳು ಜೀವಜಗತ್ತಿನಲ್ಲಿ ವಿಶೇಷ ಸ್ಥಾನ ಪಡೆದಿವೆ T G Srinidhi / ejnana.com
ಪ್ರಶ್ನೆ-ಉತ್ತರ

ಪಕ್ಷಿವೀಕ್ಷಣೆ ಮಾಡುವುದು ಹೇಗೆ?

ಕಲ್ಗುಂಡಿ ನವೀನ್

ಇಂದು ಜಗತ್ತಿನಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಹವ್ಯಾಸ ಪಕ್ಷಿವೀಕ್ಷಣೆ (ಇಂಗ್ಲಿಷಿನಲ್ಲಿ 'ಬರ್ಡ್ ವಾಚಿಂಗ್'). ಮನುಷ್ಯನಿಗೆ ಹಾರುವ ಆಸೆ, ರೀತಿ ಕಲಿಸಿದ ಪಕ್ಷಿಗಳು ತಮ್ಮ ಗರಿಹೊದಿಕೆ ಮತ್ತು ಕೂಗಿನಿಂದಾಗಿ ಜೀವಜಗತ್ತಿನಲ್ಲಿ ವಿಶೇಷ ಸ್ಥಾನವನ್ನು ಪಡೆದಿವೆ. ಸುಮಾರು ಅರವತ್ತು ದಶಲಕ್ಷ ವರ್ಷಗಳಷ್ಟು ಹಿಂದಿನ ಇತಿಹಾಸ ಹೊಂದಿರುವ ಇವು ಜೀವ ಜಗತ್ತಿನ ಬಹುಮುಖ್ಯ ಕೊಂಡಿ. ಅರಣ್ಯಗಳ ಬೆಳೆವಣಿಗೆಯಲ್ಲಿ ಹಕ್ಕಿಗಳ ಪಾತ್ರ ಅನಿವಾರ್ಯ. ಇಂತಹ ಪಕ್ಷಿಗಳ ವೀಕ್ಷಣೆ ಒಂದು ಒಳ್ಳೆಯ ಹವ್ಯಾಸವೂ ಆಗಬಹುದು, ಗಂಭೀರವಾಗಿ ನಿರ್ವಹಿಸಿದಾಗ ವಿಜ್ಞಾನಕ್ಕೆ ಕೊಡುಗೆಯೂ ಆಗಬಹುದು.

ಪಕ್ಷಿ ವೀಕ್ಷಣೆಗೆ ಮುಖ್ಯವಾಗಿ ಬೇಕಾಗಿರುವುದು ತಾಳ್ಮೆ! ಇನ್ನು ಪರಿಕರಗಳು ಎಂದರೆ ಒಂದು ಪುಟ್ಟ ನೋಟ್‍ಬುಕ್‍, ಪೆನ್ನು, ಒಂದು ಉತ್ತಮ ಬೈನಾಕ್ಯುಲರ್ ಮತ್ತು ಒಂದು ಒಳ್ಳೆಯ ಕ್ಷೇತ್ರಕೈಪಿಡಿ (ಉದಾ: ಸಲೀಂ ಆಲಿಯವರ ಬುಕ್ ಆಫ್ ಇಂಡಿಯನ್ ಬರ್ಡ್ಸ್, ಪೂರ್ಣಚಂದ್ರ ತೇಜಸ್ವಿಯವರ ಹಕ್ಕಿಪುಕ್ಕ, ಅದೇ ಹೆಸರಿನ ಈ ಜಾಲತಾಣ ಇತ್ಯಾದಿ).

ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆ ಪಕ್ಷಿ ವೀಕ್ಷಣೆಗೆ ಒಳ‍್ಳೆಯ ಸಮಯ. ಪಕ್ಷಿವೀಕ್ಷಣೆಗೆ ಒಳ್ಳೆಯ ಸ್ಥಳ ನಿಮ್ಮ ಮನೆಯ ಸುತ್ತಮುತ್ತವೇ! ಕಂಡ ಹಕ್ಕಿಯ ಪ್ರಧಾನ ಮತ್ತು ಇತರ ಬಣ್ಣಗಳು, ಗಾತ್ರ, ಕೊಕ್ಕಿನ ಮಾಟ, ಬಾಲದ ಉದ್ದ, ಕೇಳಿಸಿದ್ದರೆ ಕೂಗು ಹಾರುವ ರೀತಿ ಹೀಗೆ ಕಂಡುಬಂದ ಎಲ್ಲವಿವರಗಳನ್ನು ನೋಟ್‍ಪುಸ್ತಕದಲ್ಲಿ ದಾಖಲಿಸಿಕೊಂಡು, ಕ್ಷೇತ್ರಕೈಪಿಡಿಯೊಂದಿಗೆ ಹೋಲಿಸಿ, ನಾವು ನೋಡಿದ ಪಕ್ಷಿ ಯಾವುದೆಂದು ಗುರುತು ಹಿಡಿಯಬಹುದು. ಪರಿಣತ ಪಕ್ಷಿವೀಕ್ಷಕರೊಂದಿಗೆ ಕೆಲವು ಬಾರಿಯಾದರೂ ಪಕ್ಷಿವೀಕ್ಷಣೆ ಮಾಡುವುದು ಇನ್ನೂ ಒಳ್ಳೆಯದು.

ಬೆಂಗಳೂರು, ಮೈಸೂರು ಸೇರಿದಂತೆ ಹಲವೆಡೆ ಆಗಿಂದಾಗ್ಗೆ ಪಕ್ಷಿವೀಕ್ಷಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಇಂತಹ ಕಾರ್ಯಕ್ರಮಗಳ ಪ್ರಯೋಜನವನ್ನೂ ಪಡೆದುಕೊಳ್ಳಬಹುದು. ಇ-ಬರ್ಡ್‌ನಂತಹ ಜಾಲತಾಣಗಳಿಗೆ ಭೇಟಿಕೊಡುವುದು ಕೂಡ ಉಪಯುಕ್ತವಾಗಬಲ್ಲದು.