ಆಸಕ್ತ ಲೇಖಕರು ತಾವು ಬರೆಯಬೇಕೆಂದಿರುವ ವಿಷಯ ಕುರಿತು ಪ್ರಸ್ತಾವನೆ ಕಳಿಸಬೇಕಿದ್ದು,  ಅದು ಸ್ವೀಕೃತಿಯಾದಲ್ಲಿ ಪುಸ್ತಕ ಬರೆಯುವ ಅವಕಾಶ ನೀಡಲಾಗುವುದು
ಆಸಕ್ತ ಲೇಖಕರು ತಾವು ಬರೆಯಬೇಕೆಂದಿರುವ ವಿಷಯ ಕುರಿತು ಪ್ರಸ್ತಾವನೆ ಕಳಿಸಬೇಕಿದ್ದು, ಅದು ಸ್ವೀಕೃತಿಯಾದಲ್ಲಿ ಪುಸ್ತಕ ಬರೆಯುವ ಅವಕಾಶ ನೀಡಲಾಗುವುದು|Image by Free-Photos from Pixabay
ವೈವಿಧ್ಯ

ತಂತ್ರಜ್ಞಾನ ಕುರಿತ ಪುಸ್ತಕಗಳ ರಚನೆ: ಆಸಕ್ತ ಲೇಖಕರಿಗೆ ಇಲ್ಲಿದೆ ಅವಕಾಶ!

ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಪ್ರಸಾರಾಂಗವು 'ಜನಪ್ರಿಯ ತಾಂತ್ರಿಕ ಶಿಕ್ಷಣ ಮಾಲೆ'ಯನ್ನು ಪ್ರಾರಂಭಿಸಿದ್ದು, ಆಸಕ್ತ ಬರಹಗಾರರಿಗೆ ಕನ್ನಡದಲ್ಲಿ ತಾಂತ್ರಿಕ ಪುಸ್ತಕಗಳನ್ನು ಬರೆಯುವ ಹೊಸ ಅವಕಾಶವನ್ನು ಒದಗಿಸಿದೆ.

ಇಜ್ಞಾನ ತಂಡ

ನಮ್ಮ ತಾಯ್ನುಡಿಯಲ್ಲಿ ವಿಜ್ಞಾನ-ತಂತ್ರಜ್ಞಾನ ಕುರಿತ ಮಾಹಿತಿ ಹೆಚ್ಚಿನ ಪ್ರಮಾಣದಲ್ಲಿ ದೊರಕುವಂತಾದರೆ ಅದರಿಂದ ಅನೇಕ ಅನುಕೂಲಗಳಿವೆ. ತಕ್ಷಣದ ಸನ್ನಿವೇಶದಲ್ಲಿ, ಕನ್ನಡ ಮಾಧ್ಯಮದಲ್ಲಿ ಅಧ್ಯಯನ ನಡೆಸಿರುವ ವಿದ್ಯಾರ್ಥಿಗಳಿಗೆ ಇದು ಮಹತ್ವದ ನೆರವು ನೀಡಬಲ್ಲದು. ಅದೇರೀತಿ ಮುಂದಿನ ದಿನಗಳಲ್ಲಿ ಎಲ್ಲ ಹಂತಗಳ ಶಿಕ್ಷಣವನ್ನೂ ಕನ್ನಡ ಮಾಧ್ಯಮದಲ್ಲೇ ನೀಡಲು ಬೇಕಾದ ಸದೃಢ ಅಡಿಪಾಯವನ್ನೂ ಇದು ಹಾಕಿಕೊಡಬಲ್ಲದು.

ಇದನ್ನು ಸಾಧ್ಯವಾಗಿಸುವ ಒಂದು ವಿಧಾನ, ಈ ವಿಷಯಗಳನ್ನು ಕುರಿತ ಪುಸ್ತಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರೆಸುವುದು ಮತ್ತು ಅಚ್ಚುಕಟ್ಟಾಗಿ ಪ್ರಕಟಿಸುವುದು. ಮೊದಲಿಗೆ, ಇಂತಹ ಮಾಹಿತಿಗೆ ವಿಸ್ತೃತವಾದ ಮಾರುಕಟ್ಟೆ ಸೃಷ್ಟಿಯಾಗುವವರೆಗೆ, ಸರಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳು ಈ ಕೆಲಸದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ. ವ್ಯಾವಹಾರಿಕ ದೃಷ್ಟಿಕೋನದಿಂದಾಚೆಗೂ ಯೋಚನೆ ಮಾಡಬೇಕಾಗುತ್ತದೆ.

ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲೊಂದಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ಇದೀಗ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದೆ. ತಂತ್ರಜ್ಞಾನದ ವಿವಿಧ ಆಯಾಮಗಳನ್ನು ಜನಸಾಮಾನ್ಯರಿಗೂ ಪರಿಚಯಿಸುವ ನಿಟ್ಟಿನಲ್ಲಿ ವಿವಿಯ ಪ್ರಸಾರಾಂಗವು 'ಜನಪ್ರಿಯ ತಾಂತ್ರಿಕ ಶಿಕ್ಷಣ ಮಾಲೆ'ಯನ್ನು ಪ್ರಾರಂಭಿಸಿದ್ದು, ಆಸಕ್ತ ಬರಹಗಾರರಿಗೆ ಕನ್ನಡದಲ್ಲಿ ತಾಂತ್ರಿಕ ಪುಸ್ತಕಗಳನ್ನು ಬರೆಯುವ ಹೊಸ ಅವಕಾಶವನ್ನು ಒದಗಿಸಿದೆ.

ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಅಧ್ಯಾಪಕರು ಹಾಗೂ ಸಂಶೋಧಕರು ಮಾತ್ರವೇ ಅಲ್ಲದೆ ಆಸಕ್ತ ಸಾರ್ವಜನಿಕರೂ ಈ ಪುಸ್ತಕಮಾಲೆಗಾಗಿ ಬರೆಯಬಹುದಾಗಿದೆ. ಇದಕ್ಕಾಗಿ ಆಸಕ್ತ ಲೇಖಕರು ತಾವು ಬರೆಯಬೇಕೆಂದಿರುವ ವಿಷಯ ಕುರಿತು ವಿವಿ ಸೂಚಿಸಿರುವ ನಮೂನೆಯಲ್ಲಿ ಪ್ರಸ್ತಾವನೆಯನ್ನು ಕಳಿಸಬೇಕಿದ್ದು, ಅದು ಸ್ವೀಕೃತಿಯಾದಲ್ಲಿ ಪುಸ್ತಕವನ್ನು ಬರೆಯುವ ಅವಕಾಶ ನೀಡಲಾಗುವುದು. ಪ್ರಕಟಣೆಗೆ ಆಯ್ಕೆಯಾದ ಕೃತಿಗಳನ್ನು ವಿಶ್ವವಿದ್ಯಾನಿಲಯವೇ ಪ್ರಕಟಿಸಿ ಬಿಡುಗಡೆ ಮಾಡುವುದಲ್ಲದೆ ಸೂಕ್ತ ಗೌರವಧನವನ್ನೂ ಕೊಟ್ಟು ಲೇಖಕರನ್ನು ಗೌರವಿಸಲಿದೆ.

ನಿಗದಿತ ನಮೂನೆಯಲ್ಲಿ ಪ್ರಸ್ತಾವನೆ ಕಳಿಸಲು ಕೊನೆಯ ದಿನ ಮೇ ೩೧, ೨೦೨೦.

ವಿಶ್ವವಿದ್ಯಾನಿಲಯವು ಮೇ ೮, ೨೦೨೦ರಂದು ಪ್ರಕಟಿಸಿರುವ ಪ್ರಕಟಣೆಯಲ್ಲಿ ಈ ಯೋಜನೆಯ ಸಂಪೂರ್ಣ ವಿವರಗಳನ್ನು ನೀಡಲಾಗಿದೆ. ಆಸಕ್ತ ಲೇಖಕರು ಆ ಪ್ರಕಟಣೆಯನ್ನು ಇಲ್ಲಿ ಗಮನಿಸಬಹುದಾಗಿದೆ.

Attachment
PDF
Prakatane-08052020172445.pdf
Preview
ಇಜ್ಞಾನ Ejnana
www.ejnana.com