ಕೊರೊನಾ ಕಾಲದಲ್ಲಿ ಚಿಕ್ಕಿಯ ಸದ್ದು!
ಮಕ್ಕಳ ಮೆಚ್ಚಿನ ತಿನಿಸುಗಳಲ್ಲಿ ರುಚಿಗೆಡದಂತೆ ಸ್ಪಿರುಲಿನಾವನ್ನು ಬೆರೆಸಿ, ಅಗತ್ಯ ಪೌಷ್ಟಿಕತೆಯನ್ನು ಒದಗಿಸಲು ವಿಜ್ಞಾನಿಗಳು ನಡೆಸಿದ ಪ್ರಯೋಗಗಳ ಫಲವೇ ಸ್ಪಿರುಲಿನಾ ಚಿಕ್ಕಿejnana.com

ಕೊರೊನಾ ಕಾಲದಲ್ಲಿ ಚಿಕ್ಕಿಯ ಸದ್ದು!

ಕಡಲೆಕಾಯಿ ಮಿಠಾಯಿಗೂ ಸ್ಪಿರುಲಿನಾಗೂ ಏನು ಸಂಬಂಧ? ಇದನ್ನು ಕೋವಿಡ್-೧೯ ಸಂದರ್ಭದಲ್ಲಿ ವಿತರಿಸಿದ್ದು ಏಕೆ? ಇಷ್ಟಕ್ಕೂ ಈ ಸ್ಪಿರುಲಿನಾ ಎಂದರೆ ಏನು?

ಕೋವಿಡ್-೧೯ ಜಾಗತಿಕ ಸೋಂಕು ತಂದೊಡ್ಡಿದ ಲಾಕ್‌ಡೌನ್ ಸಂದರ್ಭದಲ್ಲಿ ನೆರವಿನ ಅಗತ್ಯವಿದ್ದ ಅನೇಕರಿಗೆ ಆಹಾರ ಪದಾರ್ಥಗಳನ್ನು ವಿತರಿಸಿದ ಉದಾಹರಣೆಗಳನ್ನು ನಾವೆಲ್ಲ ನೋಡಿದ್ದೇವೆ. ದಿನಸಿ, ಹಣ್ಣುಹಂಪಲು, ಹಾಲು ಸೇರಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಹೀಗೆ ವಿತರಿಸಲಾಯಿತು. ಇವುಗಳ ಪೈಕಿ ವಿಶಿಷ್ಟವೆಂದು ತೋರಿದ್ದು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ (ಸಿಎಸ್ಐಆರ್-ಸಿಎಫ್‌ಟಿಆರ್‌ಐ) ವಿವಿಧೆಡೆಗಳಲ್ಲಿ ವಿತರಿಸಿದ ಸ್ಪಿರುಲಿನಾ ಚಿಕ್ಕಿ.

ಚಿಕ್ಕಿ, ಅಂದರೆ ಕಡಲೆಕಾಯಿ ಮಿಠಾಯಿ, ನಮಗೆಲ್ಲ ಚಿರಪರಿಚಿತ. ನೆಲಗಡಲೆ ಹಾಗೂ ಬೆಲ್ಲ ಬಳಸಿ ತಯಾರಿಸಲಾಗುವ ಇದು ಸಿಹಿಪ್ರಿಯರಿಗೆ ಇಷ್ಟವಾದ ತಿನಿಸು ಮಾತ್ರವೇ ಅಲ್ಲ, ಅಗತ್ಯದ ಸನ್ನಿವೇಶಗಳಲ್ಲಿ ತಕ್ಷಣವೇ ಚೈತನ್ಯ ನೀಡುವ ಆಪದ್ಭಾಂಧವನೂ ಹೌದು. ಇದಕ್ಕೂ ಸ್ಪಿರುಲಿನಾಗೂ ಏನು ಸಂಬಂಧ? ಇದನ್ನು ಕೋವಿಡ್-೧೯ ಸಂದರ್ಭದಲ್ಲಿ ವಿತರಿಸಿದ್ದು ಏಕೆ? ಇಷ್ಟಕ್ಕೂ ಈ ಸ್ಪಿರುಲಿನಾ ಎಂದರೆ ಏನು? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನವೇ ಈ ಬರಹ.

ಸ್ಪಿರುಲಿನಾ ಒಂದು ಪಾಚಿ. ಇದು ಸಿಹಿನೀರಿನಲ್ಲಿ ಬೆಳೆಯುವ, ಬರಿಗಣ್ಣಿಗೆ ಕಾಣಿಸದ ಸೂಕ್ಷ್ಮಜೀವಿ. ಪ್ರತಿ ನೂರು ಗ್ರಾಂ ಸ್ಪಿರುಲಿನಾದ ಪುಡಿಯಲ್ಲಿ ಅರವತ್ತೈದರಿಂದ ಎಪ್ಪತ್ತೊಂದು ಗ್ರಾಂ ಪ್ರೊಟೀನು, ನಾಲ್ಕರಿಂದ ಒಂಬತ್ತು ಗ್ರಾಂ ಕೊಬ್ಬು ಹಾಗೂ ಸುಮಾರು ಹದಿನಾರು ಗ್ರಾಮ್ ಕಾರ್ಬೊಹೈಡ್ರೇಟು ಇರುತ್ತವೆ. ಜೊತೆಗೆ ಸಾಮಾನ್ಯವಾಗಿ ಬೇರೆ ಕಾಳು, ಧಾನ್ಯಗಳಲ್ಲಿ ಇರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಶಿಯಂ ಮತ್ತು ಕಬ್ಬಿಣದ ಅಂಶಗಳೂ ಸಿಗುತ್ತವೆ. ಅಲ್ಲದೆ ನಮ್ಮ ದೇಹ ಜೀವಸತ್ವವನ್ನು ತಯಾರಿಸಿಕೊಳ್ಳಲು ಬೇಕಾದ ಕೆರೋಟಿನಾಯ್ಡ್ ಅಂಶಗಳು ಸಾಕಷ್ಟಿವೆ. ಹೀಗಾಗಿ ಇದೊಂದು ಒಳ್ಳೆಯ ಪೌಷ್ಟಿಕ ಆಹಾರ. ಅಷ್ಟೇ ಅಲ್ಲ, ನಮ್ಮ ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಹಾಗೂ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಬೆಳೆಯಲೂ ಇದು ಸಹಕಾರಿ.

ವಿವಿಧ ಸ್ಥಳಗಳಲ್ಲಿ ಈವರೆಗೆ ಒಟ್ಟು ಒಂದೂಮುಕ್ಕಾಲು ಟನ್‌ಗಳಷ್ಟು ಸ್ಪಿರುಲಿನಾ ಚಿಕ್ಕಿಯನ್ನು ವಿತರಿಸಲಾಗಿದೆ
ವಿವಿಧ ಸ್ಥಳಗಳಲ್ಲಿ ಈವರೆಗೆ ಒಟ್ಟು ಒಂದೂಮುಕ್ಕಾಲು ಟನ್‌ಗಳಷ್ಟು ಸ್ಪಿರುಲಿನಾ ಚಿಕ್ಕಿಯನ್ನು ವಿತರಿಸಲಾಗಿದೆejnana.com

ಹಾಗಾದರೆ ಸ್ಪಿರುಲಿನಾವನ್ನೇ ಆಹಾರವನ್ನಾಗಿ ಸೇವಿಸಬಹುದೇ? ಅದರ ಬಣ್ಣ ಮತ್ತು ವಾಸನೆ ನಮ್ಮಲ್ಲಿ ಬಹುತೇಕ ಮಂದಿಗೆ ಹಿಡಿಸಲಾರದು. ಹೀಗಾಗಿ ಸಾಮಾನ್ಯವಾಗಿ ಸ್ಪಿರುಲಿನಾವನ್ನು ಗುಳಿಗೆ ಇಲ್ಲವೇ ಕ್ಯಾಪ್ಸೂಲುಗಳ ರೂಪದಲ್ಲಿ ನೀಡುತ್ತಾರೆ. ಇದರ ಬದಲು ಮಕ್ಕಳು ಇಷ್ಟಪಡುವಂತಹ ತಿನಿಸುಗಳಲ್ಲಿ ರುಚಿಗೆಡದಂತೆ ಸ್ಪಿರುಲಿನಾವನ್ನು ಬೆರೆಸಿ, ನಮ್ಮ ದೇಹಕ್ಕೆ ಅಗತ್ಯವಾದಷ್ಟು ಪೌಷ್ಟಿಕತೆಯನ್ನು ಒದಗಿಸಲು ವಿಜ್ಞಾನಿಗಳು ನಡೆಸಿದ ಪ್ರಯೋಗಗಳ ಫಲವೇ ಸ್ಪಿರುಲಿನಾ ಚಿಕ್ಕಿ.

ಪೌಷ್ಟಿಕ ಆಹಾರವಾಗಿ ಎಲ್ಲರೂ ಸೇವಿಸಬಹುದಾದ ಈ ಕಡಲೆಕಾಯಿ ಮಿಠಾಯಿಯಲ್ಲಿನ ಪೋಷಕಾಂಶಗಳು ರೋಗದಿಂದ ಚೇತರಿಸಿಕೊಳ್ಳುತ್ತಿರುವವರು ಬಲು ಬೇಗನೆ ಆರೋಗ್ಯವಂತರಾಗಲೂ ನೆರವಾಗಬಲ್ಲವು. ನೆರವಿನ ಅಗತ್ಯವಿದ್ದವರಿಗೆ ಸ್ಪಿರುಲಿನಾ ಚಿಕ್ಕಿಯನ್ನು ನೀಡುವುದರ ಹಿನ್ನೆಲೆಯಲ್ಲಿದ್ದದ್ದು ಇದೇ ಉದ್ದೇಶ. ಆದರೆ ಕೋವಿಡ್‌-೧೯ಕ್ಕೆ ಇದೇ ಔಷಧವೆಂದು ಕೆಲ ಮಾಧ್ಯಮಗಳು ಸುದ್ದಿಹಬ್ಬಿಸಿದ್ದು ಮಾತ್ರ ವಿಪರ್ಯಾಸದ ಸಂಗತಿ.

ಸಂಶೋಧನಾಲಯವು ಹಲವು ಟನ್‌ಗಳಷ್ಟು ಅಧಿಕ ಪ್ರೊಟೀನು ಬಿಸ್ಕತ್ತು ಹಾಗೂ ಅಧಿಕ ಪ್ರೊಟೀನು ರಸ್ಕುಗಳನ್ನೂ ಈಗಾಗಲೇ ವಿತರಿಸಿದೆ
ಸಂಶೋಧನಾಲಯವು ಹಲವು ಟನ್‌ಗಳಷ್ಟು ಅಧಿಕ ಪ್ರೊಟೀನು ಬಿಸ್ಕತ್ತು ಹಾಗೂ ಅಧಿಕ ಪ್ರೊಟೀನು ರಸ್ಕುಗಳನ್ನೂ ಈಗಾಗಲೇ ವಿತರಿಸಿದೆejnana.com

ಸಿಎಫ್‌ಟಿಆರ್‌ಐನ ಪರಿಣತರು ರೂಪಿಸಿದ ಈ ವಿಶೇಷ ಚಿಕ್ಕಿಯನ್ನು ಸಂಸ್ಥೆಯ ಲೈಸೆನ್ಸುದಾರ ಸಹಯೋಗದಲ್ಲಿ ಬೃಹತ್ ಪ್ರಮಾಣದಲ್ಲಿ ತಯಾರಿಸಿ ಹಲವು ಸಂಘಟನೆಗಳ ನೆರವಿನೊಂದಿಗೆ ದೇಶದೆಲ್ಲೆಡೆ ವಿತರಿಸಲಾಗಿದ್ದು ವಿಶೇಷ. ವಿವಿಧ ಸ್ಥಳಗಳಲ್ಲಿ ಈವರೆಗೆ ಒಟ್ಟು ಒಂದೂಮುಕ್ಕಾಲು ಟನ್‌ಗಳಷ್ಟು ಸ್ಪಿರುಲಿನಾ ಚಿಕ್ಕಿಯನ್ನು ವಿತರಿಸಲಾಗಿದೆಯೆಂದು ಸಿಎಫ್‌ಟಿಆರ್‌ಐ ತಿಳಿಸಿದೆ.

ಇದಲ್ಲದೆ ಸಂಶೋಧನಾಲಯವು ಹಲವು ಟನ್‌ಗಳಷ್ಟು ಅಧಿಕ ಪ್ರೊಟೀನು ಬಿಸ್ಕತ್ತು ಹಾಗೂ ಅಧಿಕ ಪ್ರೊಟೀನು ರಸ್ಕುಗಳನ್ನೂ ಈಗಾಗಲೇ ವಿತರಿಸಿದೆ ಹಾಗೂ ಇವುಗಳನ್ನು ಕೋವಿಡ್-೧೯ ಸೋಂಕಿತರಿಗೂ ನೀಡಲಾಗಿದೆ. ಸಾಮಾನ್ಯ ಬಿಸ್ಕತ್ತುಗಳಲ್ಲಿ ಶೇಕಡ ೮-೯ರಷ್ಟಿರುವ ಪ್ರೊಟೀನು ಪ್ರಮಾಣದ ಹೋಲಿಕೆಯಲ್ಲಿ ಈ ಬಿಸ್ಕತ್ತುಗಳು ಶೇಕಡ ೧೪ರಷ್ಟು ಪ್ರೊಟೀನನ್ನು ಪೂರೈಸುತ್ತವೆ ಎನ್ನುವುದು ಅವುಗಳ ವೈಶಿಷ್ಟ್ಯ. ಮ್ಯಾಂಗೊ ಬಾರ್, ಮಿಶ್ರ ಹಣ್ಣಿನ ಬಾರ್ ಹಾಗೂ ಏಲಕ್ಕಿ ಪರಿಮಳಭರಿತ ನೀರು - ಇವು ಸಿಎಫ್‌ಟಿಆರ್‌ಐ ವಿವಿಧೆಡೆಗಳಲ್ಲಿ ಪೂರೈಸಿರುವ ಇನ್ನಿತರ ಆಹಾರ ಪದಾರ್ಥಗಳಾಗಿವೆ.

[೨೮ ಮೇ ೨೦೨೦: ಸ್ಪಿರುಲಿನಾದ ಪ್ರಮುಖ ಘಟಕಗಳ ಅಂಕಿ-ಅಂಶಗಳನ್ನು ಸರಿಪಡಿಸಿ ಪ್ರಕಟಿಸಲಾಗಿದೆ]

Related Stories

No stories found.
ಇಜ್ಞಾನ Ejnana
www.ejnana.com