ನೂರರ ನೋಟ
ಪ್ರತಿ ಸಾಧನವೂ 'ಕನೆಕ್ಟೆಡ್' ಆಗುತ್ತಿರುವ ಈ ಸಂದರ್ಭದಲ್ಲಿ ಮನುಷ್ಯನ ಮೆದುಳೇ ನೇರವಾಗಿ ಯಂತ್ರಗಳೊಡನೆ ವ್ಯವಹರಿಸುವುದು ಸಾಧ್ಯವಾಗಬಹುದೇ?Image by Gerd Altmann from Pixabay

ನೂರರ ನೋಟ

ಮುಂದಿನ ದಶಕಗಳಲ್ಲಿ, ಶತಮಾನದಲ್ಲಿ ತಂತ್ರಜ್ಞಾನ ಜಗತ್ತು ಯಾವೆಲ್ಲ ಬದಲಾವಣೆಗಳಿಗೆ ಸಾಕ್ಷಿಯಾಗಬಹುದು?

ಕಾಲ ಕಳೆದಂತೆ ವರ್ಷಗಳು ಬದಲಾಗುವುದು ಸಾಮಾನ್ಯ. ಆದರೆ ಹಾಗೆ ಬದಲಾಗಲಿರುವ ವರ್ಷದ ಸಂಖ್ಯೆ ವಿಶೇಷ ಅನ್ನಿಸಿದಾಗ ಅದರ ಬಗ್ಗೆ ಕುತೂಹಲ-ನಿರೀಕ್ಷೆಗಳು ಮೂಡುತ್ತವೆ. ೨೦೦೦ ಹಾಗೂ ೨೦೨೦ರ ಪ್ರಾರಂಭವನ್ನು ಕಾಯುತ್ತಿದ್ದಾಗ ಇಂಥದ್ದೇ ನಿರೀಕ್ಷೆಗಳಿದ್ದವು.

೧೯೦೦ನೇ ಇಸವಿಯಲ್ಲೂ ಹೀಗೇ ಆಗಿತ್ತಂತೆ. ಹೊಸ ವರ್ಷದಲ್ಲಷ್ಟೇ ಅಲ್ಲ, ಮುಂದಿನ ನೂರು ವರ್ಷಗಳಲ್ಲಿ ಏನೆಲ್ಲ ಆಗಬಹುದು ಎನ್ನುವುದರ ಬಗ್ಗೆ ಜಾನ್ ವಾಟ್ಕಿನ್ಸ್ ಎಂಬ ತಂತ್ರಜ್ಞ ಆ ವರ್ಷ ಒಂದು ಲೇಖನ ಬರೆದಿದ್ದ. 'ಲೇಡೀಸ್ ಹೋಮ್ ಜರ್ನಲ್' ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಆ ಲೇಖನದಲ್ಲಿ ಮುಂದಿನ ದಿನಗಳು ಹೇಗಿರಬಹುದು ಎನ್ನುವುದರ ಬಗ್ಗೆ ಕುತೂಹಲಕರ ನಿರೀಕ್ಷೆಗಳ ಪಟ್ಟಿ ಇತ್ತು. ಟೆಕ್ ಲೋಕದ ದೃಷ್ಟಿಯಿಂದ ನೋಡುವುದಾದರೆ "ಚೀನಾದಲ್ಲಿ ನಡೆದ ಘಟನೆಯ ಚಿತ್ರ ಮುಂದಿನ ಒಂದು ಗಂಟೆಯಲ್ಲಿ ಅಮೆರಿಕಾದ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ", "ಅಟ್ಲಾಂಟಿಕ್ ಸಾಗರದ ನಡುವೆ ಹಡಗಿನಲ್ಲಿರುವ ವ್ಯಕ್ತಿ ಶಿಕಾಗೋದಲ್ಲಿರುವ ತನ್ನ ಪತ್ನಿಯ ಜೊತೆ ಫೋನಿನಲ್ಲಿ ಮಾತನಾಡುತ್ತಾನೆ" ಮುಂತಾದವು ಈ ಪಟ್ಟಿಯಲ್ಲಿದ್ದ ಪ್ರಮುಖ ಅಂಶಗಳು.

ಅದಾಗಿ ನೂರು ವರ್ಷಕ್ಕೆ, ಅಂದರೆ ೨೦೦೦ನೇ ಇಸವಿಯಲ್ಲಿ ಇದೆಲ್ಲ ಹೇಗೆ ನಿಜವಾಗಿತ್ತು ಎನ್ನುವುದು ನಮಗೆ ಚೆನ್ನಾಗಿಯೇ ಗೊತ್ತು. ಡಿಜಿಟಲ್ ಛಾಯಾಗ್ರಹಣ ಮತ್ತು ಅಂತರಜಾಲದ ನೆರವಿನಿಂದ ಯಾವುದೇ ಘಟನೆಯ ಚಿತ್ರವನ್ನು ಪ್ರಪಂಚದ ಯಾವುದೇ ಮೂಲೆಗೆ ತಲುಪಿಸುವುದು ಆ ವೇಳೆಗಾಗಲೇ ಸಾಮಾನ್ಯವಾಗಿತ್ತು. ದೂರಸಂಪರ್ಕ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಅಟ್ಲಾಂಟಿಕ್ ಸಾಗರದಲ್ಲಿರುವವರು ಮಾತ್ರವೇ ಏಕೆ, ಆಡುಗೋಡಿಯಲ್ಲಿ ಬಸ್ ಕಾಯುತ್ತಿರುವವರೂ ಮನೆಗೆ ಕರೆಮಾಡಿ ಮಾತನಾಡಲು ಬೇಕಾದ ವ್ಯವಸ್ಥೆ ಆ ವೇಳೆಗೆ ಬಂದುಬಿಟ್ಟಿತ್ತು.

೨೦೦೦ನೇ ಇಸವಿಯ ಕ್ಯಾಲೆಂಡರ್ ನೋಡಿ ಈಗಾಗಲೇ ಇಪ್ಪತ್ತು ವರ್ಷ ಕಳೆದಿದೆ. ಮುಂದಿನ ನೂರು ವರ್ಷಗಳಲ್ಲಿ ಏನೆಲ್ಲ ಆಗಬಹುದು ಎನ್ನುವ ಬಗ್ಗೆ ನಮ್ಮಲ್ಲಿ ಮತ್ತೆ ಕುತೂಹಲ ಮೂಡಿದೆ. ಮುಂದಿನ ದಶಕಗಳಲ್ಲಿ, ಶತಮಾನದಲ್ಲಿ ತಂತ್ರಜ್ಞಾನ ಜಗತ್ತು ಯಾವೆಲ್ಲ ಬದಲಾವಣೆಗಳಿಗೆ ಸಾಕ್ಷಿಯಾಗಬಹುದು ಎನ್ನುವ ಕುರಿತು ಲಕ್ಷಾಂತರ ಪುಟಗಳಷ್ಟು ಮಾಹಿತಿ ಅಂತರಜಾಲದಲ್ಲಿ ಕಾಣಿಸಿಕೊಂಡಿವೆ. ಹಲವು ಪುಸ್ತಕಗಳೂ ಪ್ರಕಟವಾಗಿವೆ.

೧೯೦೦ರಲ್ಲಿದ್ದ ಸನ್ನಿವೇಶದಿಂದ, ಅಷ್ಟೇ ಏಕೆ ೨೦೦೦ದಲ್ಲಿದ್ದ ಸನ್ನಿವೇಶದಿಂದಲೂ ನಾವೀಗ ಸಾಕಷ್ಟು ಮುಂದೆ ಬಂದಿದ್ದೇವೆ. ಹಾಗಾಗಿ ಇಂದು ಅಸಾಧ್ಯವೆನಿಸುವ ಯಾವುದೇ ಕೆಲಸ ಸಾಧ್ಯವಾಗಲು ೧೦೦ ವರ್ಷಗಳಷ್ಟು ದೀರ್ಘಕಾಲ ಬೇಕಾಗಲಿಕ್ಕಿಲ್ಲ ಎಂದು ನಮಗೆ ಗೊತ್ತು. ಅದೇರೀತಿ ಕಳೆದ ನೂರು ವರ್ಷಗಳಲ್ಲಿ ಸಾಧ್ಯವಾಗದೆ ಇರುವ ಕೆಲ ಸಂಗತಿಗಳು ಮುಂದಿನ ದಶಕಗಳಲ್ಲಿ ಸಾಧ್ಯವಾಗಿಬಿಡುತ್ತವೆ ಎಂದು ಸುಮ್ಮನೆ ನಂಬುವುದಕ್ಕೂ ನಮಗೆ ಹಿಂಜರಿಕೆ.

ಹೀಗೆಲ್ಲ ಇದ್ದರೂ ಕೆಲವು ವಿಷಯಗಳು ಮಾತ್ರ ವಿಜ್ಞಾನಿಗಳಿಂದ ಸಾಮಾನ್ಯರವರೆಗೆ ಎಲ್ಲರ ಗಮನವನ್ನೂ ಸೆಳೆಯುವುದನ್ನು ಮುಂದುವರೆಸಿವೆ. ಅಂತರಜಾಲ ಹಾಗೂ ವಸ್ತುಗಳ ಅಂತರಜಾಲದ (ಐಓಟಿ) ಮೂಲಕ ಪ್ರತಿ ಸಾಧನವೂ 'ಕನೆಕ್ಟೆಡ್' ಆಗುತ್ತಿರುವ ಈ ಸಂದರ್ಭದಲ್ಲಿ ಮನುಷ್ಯನ ಮೆದುಳೇ ನೇರವಾಗಿ ಯಂತ್ರಗಳೊಡನೆ ವ್ಯವಹರಿಸುವುದು ಸಾಧ್ಯವಾಗಬಹುದೇ ಎನ್ನುವುದು ಇಂತಹ ವಿಷಯಗಳಲ್ಲೊಂದು.

ಒಂದು ಕಂಪ್ಯೂಟರು ಇನ್ನೊಂದು ಕಂಪ್ಯೂಟರಿನ ಜೊತೆ ಸಂಪರ್ಕ ಏರ್ಪಡಿಸಿಕೊಳ್ಳಬೇಕಾದರೆ ಅದರಲ್ಲಿ ಆ ಸಾಮರ್ಥ್ಯ ಇರಬೇಕು. ಸ್ಥಳೀಯ ಜಾಲವೋ ಅಂತರಜಾಲವೋ ಯಾವುದೋ ಒಂದು ಜಾಲದ ಸಂಪರ್ಕಕ್ಕೆ ಅವೆರಡೂ ಕಂಪ್ಯೂಟರುಗಳು ಬಂದಾಗ ಮಾತ್ರ ಅವುಗಳ ನಡುವಿನ ಸಂವಹನ ಸಾಧ್ಯವಾಗುತ್ತದೆ. ಇದೇ ರೀತಿ, ಮನುಷ್ಯರ ಮೆದುಳು ಹಾಗೂ ಕಂಪ್ಯೂಟರಿನ ನಡುವೆ ನೇರ ಸಂಪರ್ಕವನ್ನು ಸಾಧ್ಯವಾಗಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.

ಈ ಪ್ರಯತ್ನ ಸಂಪೂರ್ಣವಾಗಿ ಯಶಸ್ವಿಯಾದಾಗ ನಾವು ನಮ್ಮ ಆಲೋಚನೆಗಳಿಂದಲೇ ಕಂಪ್ಯೂಟರನ್ನು ನಿಯಂತ್ರಿಸುವುದು, ಅಂತರಜಾಲದ ಮೂಲೆಯಲ್ಲೆಲ್ಲೋ ಇರುವ ಮಾಹಿತಿಯನ್ನು ಬೇಕೆಂದಾಗ ಕಣ್ಮುಂದೆ ತಂದುಕೊಳ್ಳುವುದು ಸಾಧ್ಯವಾಗಲಿದೆ. ಹೊಸ ಟ್ರೆಂಡ್ ಎಂದು ಇದನ್ನೆಲ್ಲ ಮಾಡುವುದು ಹಾಗಿರಲಿ, ಅಪಘಾತ ಅಥವಾ ಅನಾರೋಗ್ಯದಿಂದಾಗಿ ಸಾಮಾನ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದವರಿಗೂ ಇದು ಉಪಯುಕ್ತವಾಗುವ ನಿರೀಕ್ಷೆಯಿದೆ.

ಹಾಗೆ ನೋಡಿದರೆ ಈ ಪರಿಕಲ್ಪನೆ ತೀರಾ ಹೊಸದೇನೂ ಅಲ್ಲ. ಬ್ರೈನ್-ಕಂಪ್ಯೂಟರ್ ಇಂಟರ್‌ಫೇಸ್ (ಬಿಸಿಐ) ಅಥವಾ ಬ್ರೈನ್-ಮಶೀನ್ ಇಂಟರ್‌ಫೇಸ್ (ಬಿಎಂಐ) ಎಂಬ ಹೆಸರಿನಲ್ಲಿ ಮನುಷ್ಯ ಹಾಗೂ ಯಂತ್ರಗಳ ನಡುವೆ ಸಂಪರ್ಕ ಕಲ್ಪಿಸುವ ಹಲವು ಪ್ರಯತ್ನಗಳು ಹಲವು ದಶಕಗಳಿಂದಲೇ ನಡೆಯುತ್ತಿವೆ. ಮನುಷ್ಯನ ಮೆದುಳಿನ ಚಟುವಟಿಕೆಗಳನ್ನು ಕಂಪ್ಯೂಟರಿಗೆ ತಿಳಿಸುವ, ಹೆಡ್‌ಫೋನಿನಂತೆ ಧರಿಸಬಹುದಾದ ಹಲವು ಪ್ರಾಯೋಗಿಕ ಸಾಧನಗಳು ಮಾರುಕಟ್ಟೆಗೂ ಬಂದಿವೆ. ಅಷ್ಟೇ ಏಕೆ, ದೇಹಗಳ ಅಂತರಜಾಲ (ಇಂಟರ್‌ನೆಟ್ ಆಫ್ ಬಾಡೀಸ್) ಎಂಬ ಪರಿಕಲ್ಪನೆಯಡಿ ಮನುಷ್ಯನ ದೇಹದೊಳಕ್ಕೆ ಸೇರಿಸಬಹುದಾದ ಸಾಧನಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ.

ಈ ಪ್ರಯತ್ನಗಳನ್ನು ಇನ್ನಷ್ಟು ವಿಸ್ತೃತವಾಗಿ ನಡೆಸುವ, ಇನ್ನೂ ಹೆಚ್ಚಿನ ಫಲಿತಾಂಶಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ವಿಶ್ವದೆಲ್ಲೆಡೆಯ ಹಲವು ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ. ಅಮೆರಿಕಾದ ಡಿಫೆನ್ಸ್ ಅಡ್ವಾನ್ಸ್‌ಡ್ ರೀಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ (DARPA), ಟೆಸ್ಲಾ ಕಾರಿನ ಸೃಷ್ಟಿಕರ್ತ ಇಲಾನ್ ಮಸ್ಕ್ ಒಡೆತನದ ನ್ಯೂರಾಲಿಂಕ್ ಹಾಗೂ ಫೇಸ್‌ಬುಕ್ - ಇವು ಇಂತಹ ಸಂಸ್ಥೆಗಳ ಸಾಲಿನಲ್ಲಿ ಕಾಣುವ ಪ್ರಮುಖ ಹೆಸರುಗಳು. ನಾವು ಯೋಚಿಸಿದ ವಿಷಯವೆಲ್ಲ ತನ್ನಷ್ಟಕ್ಕೆ ತಾನೇ ಟೈಪ್ ಆಗುವುದರಿಂದ ಪ್ರಾರಂಭಿಸಿ ಮನುಷ್ಯರ ಬುದ್ಧಿಮತ್ತೆಗೆ ಎಐ ಬೆಂಬಲ ನೀಡುವವರೆಗೆ ಹತ್ತಾರು ಸಾಧ್ಯತೆಗಳ ಬಗ್ಗೆ ಈ ಸಂಸ್ಥೆಗಳು ಕೆಲಸಮಾಡುತ್ತಿವೆ.

ಇಷ್ಟೆಲ್ಲ ಕೆಲಸದ ಪರಿಣಾಮವಾಗಿ ಈ ಕ್ಷೇತ್ರ ಮಹತ್ವದ ಬೆಳವಣಿಗೆಗಳನ್ನು ಕಾಣಬಹುದು ಎನ್ನುವ ನಿರೀಕ್ಷೆ ಎಲ್ಲರಲ್ಲೂ ಇದೆ. ಆ ಬೆಳವಣಿಗೆಗಳ ಪರಿಣಾಮ ಏನಾಗಬಹುದೋ ಎಂಬ ಭೀತಿಯೂ ಇದೆ. ಇದೆಲ್ಲ ಸ್ಪಷ್ಟವಾಗಲು ಇನ್ನು ನೂರು ವರ್ಷ ಬೇಕಾಗುತ್ತದೋ ನೂರು ತಿಂಗಳೇ ಸಾಕಾಗುತ್ತದೋ ಎಂಬ ಕುತೂಹಲವೂ ಅದರ ಜೊತೆಯಲ್ಲಿದೆ.

ವಿಜ್ಞಾನ-ತಂತ್ರಜ್ಞಾನಗಳ ಲೋಕದ ಆಗುಹೋಗುಗಳ ಬಗ್ಗೆ ಆಸಕ್ತಿಯನ್ನು ನಿರಂತರವಾಗಿಸುವುದು ಇದೇ ಕುತೂಹಲ. ಅದರ ಪರಿಣಾಮವಾಗಿಯೇ ನಿಮ್ಮ ಟೆಕ್ ಲೋಕ ಅಂಕಣ ಇದೀಗ ನೂರು ಕಂತುಗಳನ್ನು ಪೂರೈಸಿದೆ. ನಿಮ್ಮ ಕುತೂಹಲಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು.

ಫೆಬ್ರುವರಿ ೧೯, ೨೦೨೦ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
ಇಜ್ಞಾನ Ejnana
www.ejnana.com