ಅಂತರಜಾಲಕ್ಕೂ ಕರೋನಾ ಎಫೆಕ್ಟ್!
ಕರೋನಾವೈರಸ್ ಬರುವ ಮೊದಲೂ ಜನರು ಮನೆಯಲ್ಲಿ ಅಂತರಜಾಲ ಸಂಪರ್ಕ ಬಳಸುತ್ತಿದ್ದರು, ಈಗಲೂ ಬಳಸುತ್ತಿದ್ದಾರೆ. ಆದರೆ ಆಗ ಇಲ್ಲದ ಸಮಸ್ಯೆ ಈಗೇಕೆ?Image by LEEROY Agency from Pixabay

ಅಂತರಜಾಲಕ್ಕೂ ಕರೋನಾ ಎಫೆಕ್ಟ್!

ಕೋವಿಡ್-೧೯ ಹರಡುವುದನ್ನು ತಡೆಯಲು ವರ್ಕ್ ಫ್ರಮ್ ಹೋಮ್ ನೆರವಾಗುತ್ತಿದೆ, ನಿಜ. ಆದರೆ ಅದರಿಂದಾಗಿ ಇನ್ನೊಂದು ಅನಿರೀಕ್ಷಿತ ಪರಿಣಾಮವೂ ಆಗಿದೆ: ವಿಶ್ವದೆಲ್ಲೆಡೆಯ ಬಳಕೆದಾರರು ತಮ್ಮ ಅಂತರಜಾಲ ಸಂಪರ್ಕ ಸರಿಯಿಲ್ಲ ಎಂದು ದೂರಲು ಪ್ರಾರಂಭಿಸಿದ್ದಾರೆ!

ಕರೋನಾವೈರಸ್ ಭೀತಿ ಪ್ರಪಂಚವನ್ನೆಲ್ಲ ಆವರಿಸಿಕೊಳ್ಳುತ್ತಿದ್ದಂತೆ, ಮಾಹಿತಿ ತಂತ್ರಜ್ಞಾನ ಬಳಸಿ ಕೆಲಸಮಾಡುವ ಬಹುದೊಡ್ಡ ಸಂಖ್ಯೆಯ ಉದ್ಯೋಗಿಗಳು ಮನೆಯಿಂದಲೇ ಕೆಲಸಮಾಡುತ್ತಿದ್ದಾರೆ. ಗಂಡ ಹೆಂಡತಿ ಇಬ್ಬರೂ ಮನೆಯ ಒಂದೊಂದು ಮೂಲೆಯಲ್ಲಿ ತಮ್ಮತಮ್ಮ ಹೋಮ್ ಆಫೀಸ್ ಸ್ಥಾಪಿಸಿಕೊಂಡು ಕಾರ್ಯನಿರತರಾಗಿರುವುದು ಇದೀಗ ಎಲ್ಲ ಕಡೆ ಸಾಮಾನ್ಯವಾಗಿಬಿಟ್ಟಿದೆ.

ಜನರು ಗುಂಪುಸೇರುವುದನ್ನು, ಒಂದುಕಡೆಯಿಂದ ಇನ್ನೊಂದೆಡೆಗೆ ಪ್ರಯಾಣಿಸುವುದನ್ನು ತಪ್ಪಿಸುವ ಮೂಲಕ ವೈರಸ್ ಹರಡುವುದನ್ನು ನಿಯಂತ್ರಿಸಲು ಈ ಕ್ರಮ ನೆರವಾಗುತ್ತಿದೆ, ನಿಜ. ಆದರೆ ವರ್ಕ್ ಫ್ರಮ್ ಹೋಮ್ ಭರಾಟೆಯಿಂದಾಗಿ ಇನ್ನೊಂದು ಅನಿರೀಕ್ಷಿತ ಪರಿಣಾಮವೂ ಆಗಿದೆ: ವಿಶ್ವದೆಲ್ಲೆಡೆಯ ಬಳಕೆದಾರರು ತಮ್ಮ ಅಂತರಜಾಲ ಸಂಪರ್ಕ ಅಸಮರ್ಪಕವಾಗಿದೆ ಎಂದು ದೂರಲು ಪ್ರಾರಂಭಿಸಿದ್ದಾರೆ!

ಹೌದು, ಇಷ್ಟೆಲ್ಲ ಜನರು ಇದ್ದಕ್ಕಿದ್ದಂತೆ ಮನೆಯಿಂದ ಕೆಲಸ ಮಾಡಲು ಪ್ರಾರಂಭಿಸಿದ್ದರ ನೇರ ಪರಿಣಾಮ ಇದೀಗ ಅಂತರಜಾಲದ ಮೂಲಸೌಕರ್ಯದ ಮೇಲೆ ಆಗುತ್ತಿದೆ. ಅಂದರೆ, ಅಂತರಜಾಲ ಸಂಪರ್ಕ ಒದಗಿಸುವ ವ್ಯವಸ್ಥೆಗಳ ಮೇಲೆ ನಿರೀಕ್ಷಿತ ಮಟ್ಟಕ್ಕಿಂತ ವಿಪರೀತ ಹೆಚ್ಚಿನ ಒತ್ತಡ ಬೀಳುತ್ತಿರುವುದರಿಂದ ಅವುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಕಂಡುಬರುತ್ತಿದೆ.

ಇದು ಹೇಗೆ ಎಂದು ನೀವು ಕೇಳಬಹುದು. ಕರೋನಾವೈರಸ್ ಬರುವ ಮೊದಲೂ ಜನರು ಮನೆಯಲ್ಲಿ ಅಂತರಜಾಲ ಸಂಪರ್ಕ ಬಳಸುತ್ತಿದ್ದರು, ಈಗಲೂ ಬಳಸುತ್ತಿದ್ದಾರೆ. ಆದರೆ ಆಗ ಇಲ್ಲದ ಸಮಸ್ಯೆ ಈಗೇಕೆ?

ಈ ಪ್ರಶ್ನೆಗೆ ಉತ್ತರ ಸರಳ - ಮನೆಯಲ್ಲಿ ಅಂತರಜಾಲ ಬಳಸುವುದಕ್ಕೂ ಮನೆಯಿಂದ ಕೆಲಸ ಮಾಡಲು ಅಂತರಜಾಲ ಬಳಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಎರಡೂ ಕೆಲಸಗಳಲ್ಲಿ ಬಳಕೆಯಾಗುವ ತಂತ್ರಾಂಶಗಳು ಬೇರೆ, ಆ ತಂತ್ರಾಂಶಗಳು ಬಳಸುವ ದತ್ತಾಂಶದ ಪ್ರಮಾಣವೂ ಬೇರೆ.

ಅಂತರಜಾಲ ಬಳಸಿ ಯಾವುದೇ ಕೆಲಸ ಮಾಡಿಕೊಳ್ಳುವಾಗ ನಾವು ಬಳಸುವ ಸಾಧನ (ಕಂಪ್ಯೂಟರ್, ಮೊಬೈಲ್ ಇತ್ಯಾದಿ) ಇನ್ನೊಂದು ಬದಿಯಲ್ಲಿರುವ ಸಾಧನದ ಜೊತೆ (ಉದಾ: ಜಾಲತಾಣದ ಸರ್ವರ್) ಒಂದಷ್ಟು ದತ್ತಾಂಶವನ್ನು ವಿನಿಮಯ ಮಾಡಿಕೊಳ್ಳುತ್ತದೆ. ವಾಟ್ಸಾಪ್ ಮೂಲಕ ಒಂದು ಪಠ್ಯ ಸಂದೇಶ ಕಳಿಸುವಾಗ ಬಹಳ ಕಡಿಮೆಯಿರುವ ಈ ಪ್ರಮಾಣ, ಎಚ್‌ಡಿ ಗುಣಮಟ್ಟದ ವೀಡಿಯೋ ವೀಕ್ಷಿಸುವ ಸಂದರ್ಭದಲ್ಲಿ ಬಹಳ ಜಾಸ್ತಿಯಿರುತ್ತದೆ. ಹೀಗೆ ಎಷ್ಟು ಪ್ರಮಾಣದ ದತ್ತಾಂಶ ವಿನಿಮಯವಾಗುತ್ತದೆ ಎನ್ನುವುದರ ಜೊತೆಗೆ ಆ ವಿನಿಮಯ ಎಷ್ಟು ಬೇಗನೆ ಆಗುತ್ತದೆ ಎನ್ನುವುದನ್ನೂ ನಮಗೆ ಅಂತರಜಾಲ ಸಂಪರ್ಕ ನೀಡುವ ಸಂಸ್ಥೆಗಳು - ನಾವು ನೀಡುವ ಶುಲ್ಕದ ಆಧಾರದ ಮೇಲೆ - ನಿಗದಿಪಡಿಸುತ್ತವೆ.

ಯಾವುದೇ ಸಂಪರ್ಕ ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಪ್ರಮಾಣದ ದತ್ತಾಂಶದ ಹರಿವನ್ನು ನಿಭಾಯಿಸಬಲ್ಲದು ಎನ್ನುವುದನ್ನು ಸೂಚಿಸುವುದೇ ಅದರ ಬ್ಯಾಂಡ್‌ವಿಡ್ತ್. ನಮ್ಮಲ್ಲಿ ಸದ್ಯ ಇದನ್ನು ಮೆಗಾಬಿಟ್ಸ್ ಪರ್ ಸೆಕೆಂಡ್ (ಎಂಬಿಪಿಎಸ್) ಏಕಮಾನ ಬಳಸಿ ಅಳೆಯಲಾಗುತ್ತಿದೆ. ನಮ್ಮ ಸಂಪರ್ಕದ ಬ್ಯಾಂಡ್‌ವಿಡ್ತ್ ೨೦ ಎಂಬಿಪಿಎಸ್ ಎಂದರೆ ಆ ಸಂಪರ್ಕದ ಮೂಲಕ ಸೆಕೆಂಡಿಗೆ ಸುಮಾರು ೨ ಕೋಟಿ ಬಿಟ್ (೨೦ ಮೆಗಾಬಿಟ್) ದತ್ತಾಂಶದ ವರ್ಗಾವಣೆ ಸಾಧ್ಯ ಎಂದರ್ಥ. ನಾವು ಕಳುಹಿಸುವ ಹಾಗೂ ಪಡೆದುಕೊಳ್ಳುವ ಅಷ್ಟೂ ದತ್ತಾಂಶವನ್ನು (ಜಾಲತಾಣಗಳನ್ನು ನೋಡುವುದೂ ಸೇರಿದಂತೆ) ಇದು ಒಳಗೊಂಡಿರುತ್ತದೆ.

ಯಾವುದೇ ಸಮಯದಲ್ಲಿ ದತ್ತಾಂಶದ ವರ್ಗಾವಣೆಗೆ ಲಭ್ಯವಿರುವ ಬ್ಯಾಂಡ್‌ವಿಡ್ತ್ ಹಲವು ಸಂಗತಿಗಳನ್ನು ಆಧರಿಸಿರುವುದರಿಂದ ಈ ಸಂಖ್ಯೆಯನ್ನು ಇಂತಿಷ್ಟೇ ಎಂದು ಹೇಳುವ ಬದಲು ಇಷ್ಟರವರೆಗೆ (ಉದಾ: 'ಅಪ್‌ ಟು ೫೦ ಎಂಬಿಪಿಎಸ್') ಎಂದು ಸೂಚಿಸುವುದು ಸಾಮಾನ್ಯ ಅಭ್ಯಾಸ. ಅಂದರೆ, 'ಅಪ್‌ ಟು ೫೦ ಎಂಬಿಪಿಎಸ್' ಬ್ಯಾಂಡ್‌ವಿಡ್ತ್ ಇರುವ ಸಂಪರ್ಕದ ನಿಜವಾದ ಬ್ಯಾಂಡ್‌ವಿಡ್ತ್ ೫೦ ಎಂಬಿಪಿಎಸ್ ಅಥವಾ ಅದಕ್ಕಿಂತ ಕಡಿಮೆ ಎಷ್ಟು ಬೇಕಾದರೂ ಆಗಿರಬಹುದು. ಮನೆಯ ಸಂಪರ್ಕಕ್ಕೆ ಲಭ್ಯವಿರುವ ಒಟ್ಟಾರೆ ಬ್ಯಾಂಡ್‌ವಿಡ್ತ್ ಅನ್ನು ಆ ಸಂಪರ್ಕ ಬಳಸುವ ಅಷ್ಟೂ ಸಾಧನಗಳು ಹಂಚಿಕೊಳ್ಳುತ್ತವೆ.

ಆಫೀಸುಗಳಲ್ಲಿ ಹೆಚ್ಚಿನ ಬ್ಯಾಂಡ್‌ವಿಡ್ತ್ ಇರುವ ಅಂತರಜಾಲ ಸಂಪರ್ಕಗಳು ಬಳಕೆಯಾಗುತ್ತವೆ. ಆದರೆ ಮನೆಯ ಅಂತರಜಾಲ ಸಂಪರ್ಕಗಳು ನಿಭಾಯಿಸಲು ಸಾಧ್ಯವಿರುವ ದತ್ತಾಂಶದ ಪ್ರಮಾಣ ಕಡಿಮೆ.
ಆಫೀಸುಗಳಲ್ಲಿ ಹೆಚ್ಚಿನ ಬ್ಯಾಂಡ್‌ವಿಡ್ತ್ ಇರುವ ಅಂತರಜಾಲ ಸಂಪರ್ಕಗಳು ಬಳಕೆಯಾಗುತ್ತವೆ. ಆದರೆ ಮನೆಯ ಅಂತರಜಾಲ ಸಂಪರ್ಕಗಳು ನಿಭಾಯಿಸಲು ಸಾಧ್ಯವಿರುವ ದತ್ತಾಂಶದ ಪ್ರಮಾಣ ಕಡಿಮೆ.Image by Joshua Miranda from Pixabay

ಮನೆಯಿಂದ ಕೆಲಸಮಾಡುವಾಗ ಸಹೋದ್ಯೋಗಿಗಳಿಗೆ ಸಂದೇಶಗಳನ್ನು (ಇಮೇಲ್, ಚಾಟ್ ಇತ್ಯಾದಿ) ಕಳುಹಿಸುವ ಜೊತೆಗೆ ಸಂಸ್ಥೆಯ ಸರ್ವರುಗಳನ್ನು ಸಂಪರ್ಕಿಸುವುದು ಹಾಗೂ ಆ ಸರ್ವರುಗಳನ್ನು ಇಲ್ಲಿಂದಲೇ ಬಳಸಿ ಕೆಲಸಮಾಡುವುದೂ ಅಗತ್ಯವಾಗಿರುತ್ತದೆ. ಬಹಳಷ್ಟು ಸಾರಿ ಇಂತಹ ಕೆಲಸಗಳಲ್ಲಿ ದೊಡ್ಡ ಪ್ರಮಾಣದ ದತ್ತಾಂಶದ ವರ್ಗಾವಣೆ ಕೂಡ ಆಗಬೇಕಿರುತ್ತದೆ. ಇನ್ನು ಮನೆಯಲ್ಲೇ ಕುಳಿತು ಮೀಟಿಂಗುಗಳಲ್ಲಿ ಭಾಗವಹಿಸುವಾಗಲಂತೂ ದೇಶವಿದೇಶಗಳಲ್ಲಿರುವ ಸಹೋದ್ಯೋಗಿಗಳೊಡನೆ ನಮ್ಮ ಧ್ವನಿ, ವೀಡಿಯೋ ಹಾಗೂ ಪ್ರೆಸೆಂಟೇಶನ್‌ಗಳನ್ನು ಹಂಚಿಕೊಳ್ಳಬೇಕಾಗುತ್ತದೆ.

ಇದಕ್ಕೆಲ್ಲ, ಸಹಜವಾಗಿಯೇ, ನಮ್ಮ ಅಂತರಜಾಲ ಸಂಪರ್ಕದ ಬ್ಯಾಂಡ್‌ವಿಡ್ತ್ ಸಾಮಾನ್ಯಕ್ಕಿಂತ ಹೆಚ್ಚಿರಬೇಕಾಗುತ್ತದೆ. ಸಂಪರ್ಕದ ಬ್ಯಾಂಡ್‌ವಿಡ್ತ್ ಹೆಚ್ಚಿದ್ದರೆ ಅದನ್ನು ಬಳಸಿ ಹೆಚ್ಚಿನ ಪ್ರಮಾಣದ ದತ್ತಾಂಶವನ್ನು ಹೆಚ್ಚು ವೇಗವಾಗಿ ಒಂದುಕಡೆಯಿಂದ ಇನ್ನೊಂದೆಡೆಗೆ ವರ್ಗಾಯಿಸುವುದು ಸಾಧ್ಯ. ನೀರು ತರುವ ಕೊಳವೆಯ ವ್ಯಾಸ ದೊಡ್ಡದಾದಷ್ಟೂ ಅದರಲ್ಲಿ ಹೆಚ್ಚು ಪ್ರಮಾಣದ ನೀರು ಹರಿಸುವುದು ಸಾಧ್ಯವಾಗುತ್ತದಲ್ಲ, ಇದೂ ಹಾಗೆಯೇ.

ಆಫೀಸುಗಳಲ್ಲಿ ಹೆಚ್ಚಿನ ಬ್ಯಾಂಡ್‌ವಿಡ್ತ್ ಇರುವ ಅಂತರಜಾಲ ಸಂಪರ್ಕಗಳು ಬಳಕೆಯಾಗುತ್ತವೆ. ಕಾವೇರಿ ನದಿಯಿಂದ ಬೆಂಗಳೂರಿಗೆ ನೀರು ತರುವ ಕೊಳವೆಗಳ ಹಾಗೆ, ಇಂತಹ ಸಂಪರ್ಕಗಳ ಮೂಲಕ ಹೆಚ್ಚು ಪ್ರಮಾಣದ ದತ್ತಾಂಶವನ್ನು ಸುಲಭವಾಗಿ ರವಾನಿಸಬಹುದು. ಆದರೆ ಮನೆಯ ಅಂತರಜಾಲ ಸಂಪರ್ಕಗಳು ಹಾಗಲ್ಲ, ಬೆಂಗಳೂರಿನ ವಾಟರ್ ಟ್ಯಾಂಕ್ ತಲುಪಿ ಅಲ್ಲಿಂದ ನಮ್ಮ ಮನೆಗೆ ಬರುವ ಸಣ್ಣ ಕೊಳವೆ ಇರುತ್ತದಲ್ಲ, ಅದರಲ್ಲಿ ಬರುವ ನೀರಿನ ಪ್ರಮಾಣದಂತೆ ಈ ಸಂಪರ್ಕಗಳು ನಿಭಾಯಿಸಲು ಸಾಧ್ಯವಿರುವ ದತ್ತಾಂಶದ ಪ್ರಮಾಣವೂ ಕಡಿಮೆ.

ಎಲ್ಲರೂ ವರ್ಕ್ ಫ್ರಮ್ ಹೋಮ್ ಮಾಡಲು ಶುರುಮಾಡುತ್ತಿದ್ದಂತೆ ಸಮಸ್ಯೆ ಉಂಟಾಗಿರುವುದು ಇಲ್ಲಿಯೇ. ಸಾಮಾನ್ಯ ಸಂದರ್ಭದಲ್ಲಿ ಮನೆಯಲ್ಲಿ ಅಂತರಜಾಲ ಬಳಸುತ್ತಿದ್ದ ಕೆಲಸಗಳ ಜೊತೆಗೆ ಈಗ ಆಫೀಸಿನ ಕೆಲಸಗಳೂ ಸ್ಪರ್ಧಿಸಲು ಪ್ರಾರಂಭಿಸಿವೆ. ಅಷ್ಟೇ ಅಲ್ಲ, ಬಹಳಷ್ಟು ಕುಟುಂಬಗಳಲ್ಲಿ ಪತಿ-ಪತ್ನಿ ಇಬ್ಬರೂ ಮನೆಯಿಂದಲೇ ಕೆಲಸ ಮಾಡಬೇಕಾಗಿ ಬಂದಿದೆ. ಮಕ್ಕಳಿಗೂ ರಜೆ ಇರುವುದರಿಂದ ಅವರೂ ಮನೆಯಲ್ಲೇ ಕುಳಿತು ವೀಡಿಯೋ ವೀಕ್ಷಣೆಗೆ - ಆನ್‌ಲೈನ್ ಆಟಗಳಿಗೆ ಅಂತರಜಾಲದ ಮೊರೆಹೋಗುತ್ತಿದ್ದಾರೆ. ಇರುವ ಸಂಪರ್ಕದ ಒಟ್ಟಾರೆ ಬ್ಯಾಂಡ್‌ವಿಡ್ತ್‌ಗಾಗಿ ಇವರೆಲ್ಲರ ಕಂಪ್ಯೂಟರ್ ಹಾಗೂ ಮೊಬೈಲುಗಳೂ ಸ್ಪರ್ಧೆಗಿಳಿದಾಗ, ಲಭ್ಯವಿರುವ ಬ್ಯಾಂಡ್‌ವಿಡ್ತ್ ಇಷ್ಟೆಲ್ಲ ಸಾಧನಗಳ ನಡುವೆ ಹಂಚಿಹೋಗುವುದರಿಂದ, ಎಲ್ಲರ ಕೆಲಸವೂ ನಿಧಾನವಾಗುತ್ತಿದೆ. ಅಂತರಜಾಲ ಸಂಪರ್ಕ ಅಸಮರ್ಪಕವಾಗಿದೆ ಎಂಬ ದೂರಿಗೆ ಕಾರಣವಾಗಿರುವುದು ಇದೇ.

ನಮ್ಮ ಮನೆಗಳಲ್ಲಿ ಅಂತರಜಾಲ ಸಂಪರ್ಕದ ವೇಗ ಸಮರ್ಪಕವಾಗಿಲ್ಲ ಎಂದರೆ ಅದರ ಅರ್ಥ ಇಡೀ ಅಂತರಜಾಲದ ಮೂಲಸೌಕರ್ಯವೇ ಒತ್ತಡದಲ್ಲಿದೆ ಎಂದಲ್ಲ. ಅಂತರಜಾಲದ ಬೆನ್ನೆಲುಬು, ಅಂದರೆ backboneಗೆ (ವಿಶ್ವದೆಲ್ಲೆಡೆಯ ವಿವಿಧ ಸ್ಥಳಗಳ ನಡುವೆ ಮಾಹಿತಿ ವಿನಿಮಯ ಸಾಧ್ಯವಾಗಿಸುವ ಫೈಬರ್ ಆಪ್ಟಿಕ್ ಕೇಬಲ್ಲುಗಳ ಬೃಹತ್ ಜಾಲ) ಇಂತಹ ಒತ್ತಡಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಇದೆ. ಸಮಸ್ಯೆಯಾಗುತ್ತಿರುವುದು ಅದನ್ನು ನಮ್ಮ ಮನೆಗಳಿಗೆ ಸಂಪರ್ಕಿಸುತ್ತಿರುವ ಕೊನೆಯ ಮೈಲಿಯ (last mile) ವ್ಯವಸ್ಥೆಯಲ್ಲಿ. ಈ ವ್ಯವಸ್ಥೆ ಇನ್ನೂ ಪೂರ್ಣಪ್ರಮಾಣದಲ್ಲಿ ಫೈಬರ್ ಆಪ್ಟಿಕ್ ಕೇಬಲ್ಲುಗಳನ್ನು ಬಳಸುತ್ತಿಲ್ಲ. ಮೇಲಾಗಿ ಇಂದಿನ ಸಂದರ್ಭದ ಬಳಕೆಯ ಪ್ರಮಾಣವೂ ಈ ವ್ಯವಸ್ಥೆಯ ಸಾಮರ್ಥ್ಯವನ್ನೇ ಪರೀಕ್ಷಿಸುವ ಮಟ್ಟದಲ್ಲಿದೆ. ಹೀಗಾಗಿ ಮನೆಗಳ ಅಂತರಜಾಲ ಸಂಪರ್ಕದಲ್ಲಿ ಇದೀಗ ತೊಂದರೆ ಕಾಣಿಸಿಕೊಂಡಿದೆ. ಸ್ಥಿರ ಬ್ರಾಡ್‌ಬ್ಯಾಂಡ್ ಸಂಪರ್ಕದ ಹೋಲಿಕೆಯಲ್ಲಿ ಬಹಳಷ್ಟು ಜನ ಮೊಬೈಲ್ ಜಾಲಗಳ ಮೂಲಕ ಅಂತರಜಾಲ ಬಳಸುತ್ತಿರುವುದು ಕೂಡ ಈ ಸಮಸ್ಯೆಯನ್ನು ಇನ್ನಷ್ಟು ಕ್ಲಿಷ್ಟವಾಗಿಸಿದೆ. ಒಂದೇ ಪ್ರದೇಶದಲ್ಲಿ ಹೆಚ್ಚು ಜನ ಮೊಬೈಲ್ ಬಳಸುವಾಗ ಆಗುತ್ತಿದ್ದ ಎಲ್ಲ ತೊಂದರೆಗಳೂ ಇದೀಗ ಮನೆಗಳಲ್ಲೇ ಆಗುತ್ತಿವೆ.

ಇದಕ್ಕೆ ಪರಿಹಾರ ಏನು? ಹೆಚ್ಚಿನ ಶುಲ್ಕ ಪಾವತಿಸುತ್ತೇವೆ, ನಮ್ಮ ಸಂಪರ್ಕದ ಬ್ಯಾಂಡ್‌ವಿಡ್ತ್ ಜಾಸ್ತಿ ಮಾಡಿ ಎಂದು ಸಂಪರ್ಕ ನೀಡುವ ಸಂಸ್ಥೆಗಳಿಗೆ ಹೇಳಬಹುದೇ? ಅದು ಒಂದು ಹಂತದವರೆಗೆ - ಅವರ ವ್ಯವಸ್ಥೆಯಲ್ಲಿ ಹೆಚ್ಚುವರಿ ಸಾಮರ್ಥ್ಯ ಇರುವವರೆಗೆ - ಮಾತ್ರವೇ ಸಾಧ್ಯವಾಗುತ್ತದೆ. ಆನಂತರವೂ ನಮಗೆ ಹೆಚ್ಚಿನ ಬ್ಯಾಂಡ್‌ವಿಡ್ತ್ ಬೇಕೆಂದರೆ ಆ ಸಂಸ್ಥೆಗಳು ತಮ್ಮ ವ್ಯವಸ್ಥೆಯನ್ನು ಉನ್ನತೀಕರಿಸಿಕೊಳ್ಳಬೇಕಾಗುತ್ತದೆ. ಕೆಲವು ಕಡೆ ಈ ಪರಿಸ್ಥಿತಿ ಈಗಾಗಲೇ ಬಂದಿದೆ ಎಂದು ತಜ್ಞರು ಹೇಳುತ್ತಾರೆ. ಸದ್ಯದ ಸನ್ನಿವೇಶದಲ್ಲಿ ಅಂತಹ ಉನ್ನತೀಕರಣ ಎಷ್ಟು ಬೇಗ ಸಾಧ್ಯವಾಗಬಹುದು ಎನ್ನುವುದೂ ಪ್ರಶ್ನಾರ್ಹವೇ. ಹೆಚ್ಚುವರಿ ಬೇಡಿಕೆ ಎಷ್ಟು ಸಮಯದವರೆಗೆ ಮುಂದುವರೆಯಬಹುದು ಎನ್ನುವುದರ ಬಗ್ಗೆ ಖಚಿತವಾಗಿ ಗೊತ್ತಿಲ್ಲದಿರುವುದರಿಂದ ಹೊಸದಾಗಿ ಹೂಡಿಕೆ ಮಾಡಬೇಕೇ ಬೇಡವೇ ಎನ್ನುವ ಗೊಂದಲ ಸಂಸ್ಥೆಗಳನ್ನೂ ಕಾಡುತ್ತಿದೆ. ಈ ಗೊಂದಲದ ನಡುವೆ ಮೊಬೈಲ್ ಜಾಲಗಳ ಮೇಲಿನ ಒತ್ತಡವನ್ನು ಕಡಿಮೆಮಾಡುವ ಕೆಲ ಪ್ರಯತ್ನಗಳು (ಉದಾ: ಮೊಬೈಲಿನಲ್ಲಿ ಎಚ್‌ಡಿ ಬದಲು ಎಸ್‌ಡಿ ವೀಡಿಯೊಗಳನ್ನು ಮಾತ್ರ ಪ್ರದರ್ಶಿಸುವುದು) ಕೂಡ ನಡೆದಿವೆ.

ಒಟ್ಟಾರೆಯಾಗಿ, ಕರೋನಾವೈರಸ್ ಭೀತಿಯಿಂದಾಗಿ ಬಂದಿರುವ ಈ ಅನಿರೀಕ್ಷಿತ ಸನ್ನಿವೇಶ ಮಾಹಿತಿ ತಂತ್ರಜ್ಞಾನದ ಲೋಕಕ್ಕೂ ಹೊಸ ಸವಾಲುಗಳನ್ನು ಒಡ್ಡುತ್ತಿದೆ. ಮನೆಯಿಂದ ಕೆಲಸಮಾಡುವುದನ್ನು ಒಂದು ಹೆಚ್ಚುವರಿ ಸೌಲಭ್ಯ ಎಂದಷ್ಟೇ ನೋಡುತ್ತಿದ್ದ ಬಹಳಷ್ಟು ಸಂಸ್ಥೆಗಳು ಹಾಗೂ ಉದ್ಯೋಗಿಗಳಿಗೆ ಈಗ ಇದೊಂದೇ ಆಯ್ಕೆ ಎನ್ನುವಂತಹ ಪರಿಸ್ಥಿತಿ ಬಂದಿದೆ. ಮುಂಬರುವ ದಿನಗಳಲ್ಲಿ ಕರೋನಾ ಭೀತಿ ಕಡಿಮೆಯಾದಾಗ ಈ ಪರಿಸ್ಥಿತಿ ಮತ್ತೆ ಮೊದಲಿನಂತೆಯೇ ಆಗುತ್ತದೋ, ಅಥವಾ ವರ್ಕ್ ಫ್ರಮ್ ಹೋಮ್ ಸಾಧ್ಯತೆಗಳನ್ನು ಕಂಡುಕೊಂಡಿರುವ ಸಂಸ್ಥೆಗಳು ಅದನ್ನು ಇನ್ನಷ್ಟು ವ್ಯಾಪಕವಾಗಿ ಜಾರಿ ಮಾಡುತ್ತವೋ ಎನ್ನುವುದನ್ನು ಮಾತ್ರ ನಾವೆಲ್ಲ ಕಾದುನೋಡಬೇಕಿದೆ.

ಕಚೇರಿಗಳಿಗೆ ಹೋಲಿಸಿದಾಗ ನಾವು ಮನೆಗಳಲ್ಲಿ ಸೈಬರ್ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಕಡಿಮೆ. ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ದುಷ್ಕರ್ಮಿಗಳು ಕೋವಿಡ್-೧೯ ನೆಪದಲ್ಲಿ ಕುತಂತ್ರಾಂಶಗಳನ್ನು ಹರಡುತ್ತಿದ್ದಾರೆ ಎಂದು ಸುರಕ್ಷತಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಈ ಅಪಾಯದಿಂದ ಪಾರಾಗುವುದು ಕೂಡ ನಮ್ಮದೇ ಜವಾಬ್ದಾರಿ. ಕೋವಿಡ್-೧೯ ಅಥವಾ ಕರೋನಾವೈರಸ್ ಹೆಸರಿನಲ್ಲಿ ಅವರು ಕಳುಹಿಸಬಹುದಾದ ಸ್ಪಾಮ್ ಸಂದೇಶಗಳನ್ನು - ಅಲ್ಲಿರುವ ಕೊಂಡಿಗಳನ್ನು ತೆರೆಯದಿರುವುದು, ಅಂತಹ ಸಂದೇಶಗಳಲ್ಲಿ ಹೇಳಿರುವ ತಾಣಗಳಲ್ಲಿ ನಮ್ಮ ಮಾಹಿತಿ ಹಂಚಿಕೊಳ್ಳದಿರುವುದು, ಅಲ್ಲಿಂದ ಏನನ್ನೂ ಡೌನ್‌ಲೋಡ್ ಮಾಡದಿರುವುದು ನಮ್ಮ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ.

Related Stories

No stories found.
ಇಜ್ಞಾನ Ejnana
www.ejnana.com