ಕರೋನಾವೈರಸ್ 1960 ರ ದಶಕದಲ್ಲೇ ಪತ್ತೆಯಾಗಿತ್ತು. ಅಷ್ಟು ಹಳೆಯ ವೈರಾಣುವಿಗೆ ಈಗೇಕೆ ಇಷ್ಟೊಂದು ಮಹತ್ವ?
ಕರೋನಾವೈರಸ್ 1960 ರ ದಶಕದಲ್ಲೇ ಪತ್ತೆಯಾಗಿತ್ತು. ಅಷ್ಟು ಹಳೆಯ ವೈರಾಣುವಿಗೆ ಈಗೇಕೆ ಇಷ್ಟೊಂದು ಮಹತ್ವ?Image by Gerd Altmann from Pixabay

COVID-19: ವೈರಸ್ ಅಂದರೇನು? ಹೊಸ ಕರೋನಾವೈರಸ್ ಬಗ್ಗೆ ಆತಂಕ ಏಕೆ?

COVID-19 ಎಷ್ಟೇ ಬಲಶಾಲಿಯಾದರೂ, ನಮ್ಮ ರಕ್ಷಕ ವ್ಯವಸ್ಥೆಯೇ ಹೆಚ್ಚು ಬಲಶಾಲಿ!

ಈ ವರ್ಷಾರಂಭದಲ್ಲಿ ಹೆಚ್ಚಿನವರಿಗೆ ತಿಳಿಯದ, ಇಂದು ಜಗತ್ತಿನ ಸರಿಸುಮಾರು ಎಲ್ಲರ ಚರ್ಚೆಗೂ ಕಾರಣವಾಗಿರುವುದು “ಕರೋನಾವೈರಸ್”. ಅತ್ಯಂತ ಹೆಚ್ಚಿನ ಮಿಥ್ಯೆಗಳು, ಆತಂಕಗಳು ಹಬ್ಬಿರುವುದೂ ಇದರ ಸುತ್ತಲೇ. ಇದ್ಯಾವುದೋ ಹೊಸದೊಂದು ವೈರಾಣು ಎಂದು ಅನೇಕರು ಭಾವಿಸಿದ್ದಾರೆ. ವಾಸ್ತವ ಅದಲ್ಲ; ಕರೋನಾವೈರಸ್ 1960 ರ ದಶಕದಲ್ಲೇ ಪತ್ತೆಯಾಗಿತ್ತು. 1989 ರಲ್ಲೇ ನೆಗಡಿಯ ಕುರಿತಾದ ಒಂದು ಲೇಖನದಲ್ಲಿ ಕರೋನಾವೈರಸ್ ಪ್ರಸ್ತಾಪವಿದೆ. 2003 ರಲ್ಲಿ ಇದರ ಬಗ್ಗೆ ಸರಣಿ ಲೇಖನ ಬಂದಿದೆ. ಕೆಲವು ನಿಶಿತ ಓದುಗರ ನೆನಪಿನಿಂದ ಹಳೆಯ ಲೇಖನಗಳೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಬರುತ್ತಿವೆ. ಅಷ್ಟು ಹಳೆಯ ವೈರಾಣುವಿಗೆ ಈಗೇಕೆ ಆಕಸ್ಮಿಕವಾಗಿ ಅಷ್ಟೊಂದು ಮಹತ್ವ?

ಈ ಗೊಂದಲಗಳನ್ನು ನಿವಾರಿಸಬೇಕೆಂದರೆ ವೈರಸ್ ಗಳ ಬಗ್ಗೆ ಸ್ವಲ್ಪ ಪ್ರಾಥಮಿಕ ಮಾಹಿತಿ ಇರಬೇಕು. ಜೀವವಿಕಾಸದ ಅತ್ಯಂತ ಪ್ರಾಚೀನ ಪ್ರಭೇದಗಳಲ್ಲಿ ವೈರಸ್ ಒಂದು; ಬ್ಯಾಕ್ಟೀರಿಯಾಗಳಿಗಿಂತಲೂ ಹಳೆಯವು. ಪ್ರಯಾನ್ ಎಂಬ ಪ್ರಭೇದ ಮಾತ್ರ ಪ್ರಾಯಶಃ ವೈರಸ್ ಗಳಿಗಿಂತ ಪ್ರಾಚೀನ. ನಾವು ಏಕಾಣುಜೀವಿ ಎಂದು ಗುರುತಿಸುವ ಬ್ಯಾಕ್ಟೀರಿಯಾದಂತಹ ಜೀವಿಗಳಲ್ಲಿ ನಿಶ್ಚಿತ ಜೀವಕೋಶವಿದೆ. ಇದರಲ್ಲಿ ಕೋಶಕೇಂದ್ರ (nucleus) ಇಡೀ ಜೀವಕೋಶದ ಕೆಲಸವನ್ನು ನಿಯಂತ್ರಿಸುತ್ತದೆ. ಕೋಶಕೇಂದ್ರದಲ್ಲಿನ ಡಿ.ಎನ್.ಎ ಮತ್ತು ಆರ್.ಎನ್.ಎ ಎಂಬ ಜೀವಧಾತುಗಳು ನಿರ್ದೇಶಿಸಿದ ಕೆಲಸವನ್ನು ಮಾಡಲು ಕೆಲವು ಘಟಕಗಳು ಜೀವಕೋಶದ ಒಳಗಿವೆ. ಅಗತ್ಯವಾದ ಪೋಷಕಾಂಶಗಳು ದೊರೆತರೆ ಸ್ವತಂತ್ರವಾಗಿ ಬದುಕಬಲ್ಲ ರಚನೆ ಏಕಾಣುಜೀವಿಗಳಲ್ಲಿ ಇರುತ್ತದೆ.

ಆದರೆ, ವೈರಸ್ ಗಳಲ್ಲಿ ಇಂತಹ ಯಾವುದೇ ಕೋಶಕೇಂದ್ರವಾಗಲೀ, ಸಹಾಯಕ ಘಟಕಗಳಾಗಲೀ ಇರುವುದಿಲ್ಲ. ವೈರಸ್ ರಚನೆ ಬಹಳ ಸರಳ. ಹೊರಗೆ ಒಂದು ಪ್ರೊಟೀನ್ ಹೊದಿಕೆ; ಅದರೊಳಗೆ ಡಿ.ಎನ್.ಎ ಅಥವಾ ಆರ್.ಎನ್.ಎ ಎಂಬ ಎರಡರಲ್ಲಿ ಒಂದು ಜೀವಧಾತು ಅಷ್ಟೇ. ಕೋಶಕೇಂದ್ರವೂ ಇಲ್ಲ; ಕೆಲಸದ ಘಟಕಗಳೂ ಇಲ್ಲ. ಹೀಗಾಗಿ ವೈರಸ್ ಗಳಿಗೆ ಸ್ವತಂತ್ರವಾಗಿ ಬದುಕುವ ಶಕ್ತಿಯಿಲ್ಲ. ಅವು ಬದುಕಲು ಯಾವುದಾದರೂ ಜೀವಂತಕೋಶವನ್ನು ಅವಲಂಬಿಸಲೇಬೇಕು.

ಜೀವಕೋಶವನ್ನು ಹೊಕ್ಕ ವೈರಸ್ ಆಯಾ ಜೀವಕೋಶದ ಘಟಕಗಳನ್ನೇ ಬಳಸಿಕೊಂಡು ತನ್ನ ಸಂಖ್ಯೆಯನ್ನು ಬೆಳೆಸುತ್ತದೆ. ವೈರಸ್ ಪ್ರೊಟೀನ್ ಹೊದಿಕೆ ಕೂಡ ಅದರ ಒಳಗಿನ ಜೀವಧಾತು ನಿರ್ದೇಶಿಸಿದಂತೆಯೇ ಇರುತ್ತದೆ. ಹೀಗಾಗಿ, ಕೇವಲ ಪೋಷಕಾಂಶಗಳನ್ನು ಮಾತ್ರ ಒದಗಿಸಿದರೆ ವೈರಸ್ ಬದುಕುವುದಿಲ್ಲ. ಅವು ಬದುಕಿ ಉಳಿಯಬೇಕೆಂದರೆ ಮತ್ತೊಂದು ಜೀವಂತಕೋಶ ಅವಶ್ಯಕ.

ವೈರಸ್ ಸಂಖ್ಯಾವೃದ್ಧಿ ಹೇಗಾಗುತ್ತದೆ? ಎ.ಎನ್.ಮೂರ್ತಿರಾಯರ ಆಷಾಡಭೂತಿ ನಾಟಕದಲ್ಲಿ ವಂಚಕನೊಬ್ಬ ಸಭ್ಯನ ಸೋಗು ಹಾಕಿ, ಮಾಲೀಕನನ್ನು ನಂಬಿಸಿ, ಆತನ ಮನೆಯೊಳಗೆ ಸ್ಥಾನ ಪಡೆದು, ಚಾಲಾಕಾಗಿ ಮನೆಯನ್ನೇ ತನ್ನ ಹೆಸರಿಗೆ ಬರೆಸಿಕೊಂಡು, ಮನೆಯವರನ್ನೇ ನಿರ್ಗತಿಕರನ್ನಾಗಿಸುವ ಹುನ್ನಾರದ ಕತೆಯಿದೆ. ಅಂತೆಯೇ, ವೈರಸ್ ತನಗೆ ಸೂಕ್ತವಾದ ನಿರ್ದಿಷ್ಟ ಜೀವಕೋಶವನ್ನು ಆಯ್ದುಕೊಳ್ಳುತ್ತದೆ. ಅದು ಮನುಷ್ಯರ ಜೀವಕೋಶವೋ, ಪ್ರಾಣಿಗಳದ್ದೋ, ಇಲ್ಲವೇ ಏಕಾಣುಜೀವಿಯೋ ಆಗಿರಬಹುದು. ಬ್ಯಾಕ್ಟೀರಿಯಾಗಳನ್ನು ಕೂಡ ಬಳಸಿಕೊಳ್ಳಬಲ್ಲ ವೈರಸ್ ಇವೆ! ಇಂತಹ ಜೀವಕೋಶದ ಮೇಲೆ ಸವಾರಿ ಮಾಡುವ ವೈರಸ್, ತನ್ನ ಪ್ರೊಟೀನ್ ಕವಚದಲ್ಲಿನ ಕಿಣ್ವಗಳ ನೆರವಿನಿಂದ ಜೀವಕೋಶದ ಹೊರಪದರವನ್ನು ಸೀಳಿ, ಆ ರಂಧ್ರದ ಮೂಲಕ ತನ್ನ ಒಡಲಿನಲ್ಲಿ ಇರುವ ಡಿ.ಎನ್.ಎ ಅಥವಾ ಆರ್.ಎನ್.ಎ ಜೀವಧಾತುವನ್ನು ಜೀವಕೋಶದ ಒಳಗೆ ತಳ್ಳುತ್ತದೆ. ತನ್ನ ಜೀವಧಾತುವನ್ನು ಕಳೆದುಕೊಂಡ ಮೂಲ ವೈರಸ್ ಕತೆ ಮುಗಿದಂತೆಯೇ. ಆದರೆ, ಒಳಗೆ ಸೇರಿದ ವೈರಸ್ ಜೀವಧಾತು ಸೀದಾ ಜೀವಕೋಶದ ಕೋಶಕೇಂದ್ರವನ್ನು ಆಕ್ರಮಿಸಿ, ಅದನ್ನು ತನ್ನ ವಶಕ್ಕೆ ಪಡೆಯುತ್ತದೆ. ಈಗ ಆ ಜೀವಕೋಶ ವೈರಸ್ ಅಧೀನ. ಜೀವಕೋಶದ ಘಟಕಗಳನ್ನು ಬಳಸಿಕೊಂಡು ತನ್ನ ಅಭಿವೃದ್ಧಿಗೆ ಅಗತ್ಯವಾದ ಪ್ರೊಟೀನ್ ಕವಚಗಳನ್ನು ಹಾಗೂ ತನ್ನದೇ ಜೀವಧಾತುವಿನ ಮತ್ತಷ್ಟು ಪ್ರತಿಗಳನ್ನು ನಿರ್ಮಿಸಿಕೊಳ್ಳುತ್ತದೆ. ಅವೆಲ್ಲವೂ ಕೂಡಿಕೊಂಡು ಇಡೀ ಜೀವಕೋಶದ ತುಂಬಾ ನೂರಾರು ಹೊಸ ವೈರಸ್ ಬೆಳೆಯುತ್ತವೆ. ಎಲ್ಲಾ ಪೋಷಕಾಂಶಗಳೂ ಖಾಲಿಯಾದಾಗ ಜೀವಕೋಶ ನಿತ್ರಾಣವಾಗಿ ಒಡೆದುಹೋಗುತ್ತದೆ. ಅಂತಹ ಜೀವಕೋಶದಿಂದ ಹೊರಗೆ ಹಾರಿದ ಪ್ರತಿಯೊಂದೂ ವೈರಸ್ ಮತ್ತೊಂದು ಜೀವಕೋಶವನ್ನು ಆಕ್ರಮಿಸಿ ಇದೇ ಪ್ರಕ್ರಿಯೆ ಮುಂದುವರೆಸುತ್ತದೆ. ಹೀಗೆ ಅನತಿಕಾಲದಲ್ಲಿ ಒಂದೇ ಒಂದು ವೈರಸ್ ಕೋಟ್ಯಾಂತರ ವೈರಸ್ ಗಳಾಗಿ ಮಾರ್ಪಡುತ್ತದೆ. ಹೀಗೆ ಲಕ್ಷಾಂತರ ಜೀವಕೋಶಗಳನ್ನು ಕಳೆದುಕೊಂಡ ಅಂಗಗಳು ಸಾಮರ್ಥ್ಯಹೀನವಾಗುತ್ತವೆ. ಉದಾಹರಣೆಗೆ, ಈಗ ಚಾಲ್ತಿಯಲ್ಲಿರುವ ಹೊಸ ಕರೋನಾವೈರಸ್ ಮನುಷ್ಯರ ಶ್ವಾಸಕೋಶಗಳ ಜೀವಕೋಶಗಳನ್ನು ಆಕ್ರಮಿಸಿ ಬೆಳೆಯುತ್ತಿವೆ. ಇವುಗಳು ಅನಿಯಮಿತವಾಗಿ ಬೆಳೆಯುತ್ತಲೇ ಹೋದರೆ ಶ್ವಾಸಕೋಶಗಳ ಸಾಮರ್ಥ್ಯ ಕಡಿಮೆಯಾಗುತ್ತಾ ಅವು ಒಂದು ಹಂತದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಚಿಕಿತ್ಸೆ ದೊರೆಯದೇ ಹೋದರೆ ಮರಣ ಸಂಭವಿಸುತ್ತದೆ.

ಇಷ್ಟು ದೊಡ್ಡ ಶರೀರ ಒಂದು ಯಃಕಶ್ಚಿತ್ ವೈರಸ್ ಗೆ ಬಲಿಯಾಗುತ್ತದೆಯೇ? ಸಾಧಾರಣವಾಗಿ ಹಾಗಾಗುವುದಿಲ್ಲ. ವೈರಸ್ ಶರೀರದ ಒಳಗೆ ಪ್ರವೇಶಿಸಿ ತನ್ನ ಗಮ್ಯಸ್ಥಾನವನ್ನು ತಲುಪುವ ಮೊದಲೇ ಶರೀರದ ರಕ್ಷಣೆಯ ವ್ಯವಸ್ಥೆ ಜಾಗೃತವಾಗುತ್ತದೆ. ವೈರಸ್ ಗಳಿಗೆ ಪ್ರೊಟೀನ್ ಕವಚ ಇರುತ್ತದಷ್ಟೇ? ಈ ಪ್ರೊಟೀನ್ ಗಳ ವಿರುದ್ಧ ರಕ್ತದಲ್ಲಿನ ರಕ್ಷಕ ಕೋಶಗಳು ಸಮರ ಸಾರುತ್ತವೆ. ಮೊದಲ ಬಾರಿಗೆ ವೈರಸ್ ಶರೀರದ ಒಳಗೆ ಪ್ರವೇಶ ಮಾಡಿದಾಗ ಅದನ್ನು ಹತ್ತಿಕ್ಕಲು ಶರೀರಕ್ಕೆ ಸಮಯ ಹಿಡಿಯುತ್ತದೆ. ವೈರಸ್ ರಚನೆಯನ್ನು ಅರಿತ ಕೆಲವು ರಕ್ಷಕ ಕೋಶಗಳು ನೆನಪಿನ ಕೋಶಗಳಾಗಿ ಮಾರ್ಪಾಡಾಗುತ್ತವೆ. ಮುಂದೆ ಇದೇ ಪ್ರಭೇದದ ವೈರಸ್ ಮತ್ತೊಮ್ಮೆ ಶರೀರವನ್ನು ಸೇರಿದರೆ, ಯಾವುದೇ ಸಮಯ ಕಳೆಯದೆ ನೆನಪಿನ ಕೋಶಗಳು ಅದರ ವಿರುದ್ಧ ಆಕ್ರಮಣ ಆರಂಭಿಸುತ್ತವೆ. ಗಮ್ಯವನ್ನು ತಲುಪುವ ಮೊದಲೇ ಬಹುತೇಕ ವೈರಸ್ ನಿರ್ನಾಮವಾಗುತ್ತವೆ. ಶರೀರಕ್ಕೆ ದೊಡ್ಡ ಅಪಾಯವಾಗದಂತೆ ಕಾಪಾಡುತ್ತವೆ.

ಶರೀರದಲ್ಲಿ ಇಷ್ಟೆಲ್ಲಾ ರಕ್ಷಣೆಯ ವ್ಯವಸ್ಥೆ ಇರುವಾಗ ಕರೋನಾವೈರಸ್ ಬಗ್ಗೆ ಅಂಜಿಕೆಯೇಕೆ? ಅದು ಹಳೆಯ ವೈರಸ್ ಅಲ್ಲವೇ? ಎಷ್ಟೋ ಶತಮಾನಗಳಿಂದ ಇದ್ದೀತು. 1960 ರ ದಶಕದಲ್ಲೇ ಅದನ್ನು ಪತ್ತೆ ಮಾಡಿದ್ದೆವಷ್ಟೇ? ನಮ್ಮ ಶರೀರ ಅದರ ಬಗ್ಗೆ ಈಗಾಗಲೇ ಸಾಕಷ್ಟು ರಕ್ಷಣೆ ಬೆಳೆಸಿಕೊಂಡಿರಬಹುದು. ಮತ್ತೆ ಈ ಜಾಗತಿಕ ಆತಂಕವೇಕೆ?

ನಮ್ಮ ಪುರಾಣಗಳಲ್ಲಿ ದೇವರನ್ನು ತಪಸ್ಸು ಮಾಡುವ ರಾಕ್ಷಸರ ಕತೆಗಳು ಬರುತ್ತವೆ. ಅವರುಗಳು ಮೊದಲು ಸಾಮಾನ್ಯ ಶಕ್ತಿಯ ರಾಕ್ಷಸರೇ ಆಗಿರುತ್ತಾರೆ. ಆದರೆ, ದೇವರ ವರಗಳಿಂದ ಅವರಿಗೆ ಕೆಲವು ವಿಶೇಷ ಶಕ್ತಿಗಳು ಲಭಿಸುತ್ತವೆ. ಈ ಹೆಚ್ಚಿನ ಶಕ್ತಿಗಳಿಂದ ಅವರು ಲೋಕದಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸುತ್ತಾರೆ. ಕಡೆಗೆ, ಅವರ ವಿಶೇಷ ಶಕ್ತಿಗಳನ್ನು ಹತ್ತಿಕ್ಕಬಲ್ಲ ಮಾರ್ಗ ಪತ್ತೆಯಾಗಿ ಅವರಿಂದ ಲೋಕಕ್ಕೆ ಮುಕ್ತಿ ದೊರೆಯುತ್ತದೆ. ವೈರಸ್ ಕತೆಯೂ ಇಂತಹುದೇ! ಕೆಲವೊಮ್ಮೆ ಪ್ರಕೃತಿ ಕೆಲವು ಪ್ರಭೇದದ ವೈರಸ್ ಗಳ ಡಿ.ಎನ್.ಎ ಅಥವಾ ಆರ್.ಎನ್.ಎ ಜೀವಧಾತುವನ್ನೇ ಗಣನೀಯವಾಗಿ ಬದಲಾಯಿಸುತ್ತದೆ. ಇದರಿಂದ ಆ ವೈರಸ್ ಗಳ ಹೊರಕವಚದ ಪ್ರೊಟೀನ್ ಗಳು ಆಮೂಲಾಗ್ರವಾಗಿ ಬದಲಾಗುತ್ತವೆ. ಅಂದರೆ, ಶಸ್ತ್ರಾಸ್ತ್ರಗಳಿಗೆ ದುರ್ಭೇಧ್ಯವಾದ ಉಕ್ಕಿನ ಮೈ ಪಡೆದ ರಾಕ್ಷಸನ ಹಾಗೆ ಆ ವೈರಸ್ ಹೊರಕವಚ ಹೊಸದಾಗುತ್ತದೆ. ಇಂತಹ ಮಾರ್ಪಾಡು ಹೊಂದಿದ ವೈರಸ್ ಶರೀರವನ್ನು ಪ್ರವೇಶಿಸಿದಾಗ ನೆನಪಿನ ಕೋಶಗಳ ಪಾಲಿಗೆ ಅವು ಹೊಸತು. ಗುರುತು ಸಿಗದ ಕಾರಣ ಅವುಗಳ ವಿರುದ್ಧ ಹೋರಾಟ ಆರಂಭಿಸಲು ರಕ್ಷಕ ವ್ಯವಸ್ಥೆಗೆ ಹೆಚ್ಚುಕಾಲ ಹಿಡಿಯುತ್ತದೆ. ಅಷ್ಟರೊಳಗೆ ವೈರಸ್ ತನ್ನ ಗಮ್ಯಸ್ಥಾನವನ್ನು ತಲುಪಿದರೆ ಶರೀರಕ್ಕೆ ಘಾಸಿಯಾಗುವ ಸಾಧ್ಯತೆಗಳಿವೆ. ರಕ್ಷಕ ವ್ಯವಸ್ಥೆಯ ಕೈಮೇಲಾದರೆ ವೈರಸ್ ನಿಯಂತ್ರಣ ಸಾಧ್ಯ. ಇಲ್ಲವಾದರೆ ವೈರಸ್ ಸೋಂಕು ಗೆಲ್ಲುತ್ತದೆ. ಈಗ ಹೊಸ ಕರೋನಾವೈರಸ್ ವಿಷಯದಲ್ಲಿ ಕೂಡ ಆಗಿರುವುದು ಇದೇ. ಕರೋನಾವೈರಸ್ ಸಾಕಷ್ಟು ಹಳೆಯದೇ ಆಗಿದ್ದರೂ, ನಿಸರ್ಗದ ಆಟದಿಂದ COVID-19 ಎನ್ನುವ ಹೊಸ ರೂಪ ಪಡೆದುಕೊಂಡು ಜಗತ್ತನ್ನು ಕಾಡುತ್ತಿದೆ.

COVID-19 ಧಾಳಿಗೆ ಸಿಲುಕಿದವರಿಗೆಲ್ಲಾ ಸಾವೇ ಗತಿಯೇ? ಖಂಡಿತಾ ಹಾಗಿಲ್ಲ. COVID-19 ಎಷ್ಟೇ ಬಲಶಾಲಿಯಾದರೂ, ನಮ್ಮ ರಕ್ಷಕ ವ್ಯವಸ್ಥೆಯೇ ಹೆಚ್ಚು ಬಲಶಾಲಿ. ಆದರೆ, ರಕ್ಷಕ ವ್ಯವಸ್ಥೆ ಕುಂಠಿತವಾಗಿರುವ ಕೆಲವರಲ್ಲಿ COVID-19 ಸೋಂಕು ಪ್ರಾಣಾಂತಕವಾಗಬಹುದು. ವೃದ್ಧರಲ್ಲಿ, ಸಣ್ಣ ಮಕ್ಕಳಲ್ಲಿ, ಮಧುಮೇಹಿಗಳಲ್ಲಿ, ಸ್ಟೀರಾಯ್ಡ್ ಔಷಧ ಬಳಸುವವರಲ್ಲಿ, ರಕ್ಷಕ ವ್ಯವಸ್ಥೆ ಕುಂಠಿತವಾಗಿರುವವರಲ್ಲಿ – ಹೀಗೆ ಕೆಲವು ವಿಶೇಷ ಗುಂಪುಗಳನ್ನು ಬಿಟ್ಟರೆ, ಉಳಿದವರಲ್ಲಿ ಈ ಕಾಯಿಲೆ ಬಹುತೇಕ ಅಪಾಯಕಾರಿಯಲ್ಲ. ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ಕೆಲವು ನಿರ್ದೇಶನಗಳನ್ನು ಪಾಲಿಸುವುದು ಸೂಕ್ತ. ಮೇಲೆ ಹೇಳಿದ ವಿಶೇಷ ಗುಂಪುಗಳ ವ್ಯಕ್ತಿಗಳು ತಮ್ಮ ವೈದ್ಯರನ್ನು ಸಂಪರ್ಕಿಸಿ ಜಾಗರೂಕತೆಯ ಸೂಚನೆಗಳನ್ನು ಪಡೆದು ಕಟ್ಟುನಿಟ್ಟಾಗಿ ಪಾಲಿಸಬೇಕು.

ಇಂತಹ ಎಷ್ಟೋ ಜಾಗತಿಕ ಸೋಂಕುಗಳು ಹಿಂದೆಯೂ ಆಗಿಹೋಗಿವೆ; ಮುಂದೆಯೂ ಖಚಿತವಾಗಿ ಬರುತ್ತವೆ. ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರತಿಯೊಂದು ಶಿಸ್ತನ್ನೂ ತಪ್ಪದೇ ಪಾಲಿಸಬೇಕು. ವದಂತಿಗಳನ್ನು ನಂಬಬಾರದು. ವೈದ್ಯರು ನಮ್ಮ ಶ್ರೇಯೋಭಿಲಾಷಿಗಳು ಎಂಬುದನ್ನು ಮರೆಯಬಾರದು. ಗಾಳಿಸುದ್ಧಿಗಳಿಗೆ ಬೆಲೆ ಕೊಡಬಾರದು. ಎಲ್ಲಕ್ಕಿಂತ ಮುಖ್ಯವಾಗಿ, ಹಿಂದಿನ ಆಪತ್ತುಗಳನ್ನು ಸಫಲವಾಗಿ ಗೆದ್ದಂತೆ, COVID-19 ವಿಕೋಪವನ್ನೂ ಖಚಿತವಾಗಿ ಗೆಲ್ಲುತ್ತೇವೆ ಎಂಬ ಭರವಸೆ ಇರಬೇಕು. ಇದು ಸಾಧ್ಯವೂ ಹೌದು; ಸತ್ಯವೂ ಹೌದು.

ಮಾರ್ಚ್ ೧೯, ೨೦೨೦ರ ಹೊಸದಿಗಂತದಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com