ನೀವು ನಿಮ್ಮ ಪ್ರವಾಸಕ್ಕಾಗಿ ವಿಮಾನದ ಟಿಕೆಟ್, ಹೋಟೆಲ್ ಇತ್ಯಾದಿ ಕಾಯ್ದಿರಿಸುವಾಗ ಕಾಣದ ಕೈ ಒಂದು ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ
ನೀವು ನಿಮ್ಮ ಪ್ರವಾಸಕ್ಕಾಗಿ ವಿಮಾನದ ಟಿಕೆಟ್, ಹೋಟೆಲ್ ಇತ್ಯಾದಿ ಕಾಯ್ದಿರಿಸುವಾಗ ಕಾಣದ ಕೈ ಒಂದು ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆImage by Bilal EL-Daou from Pixabay

ವಿಮಾನ ಟಿಕೆಟ್ ಮಾರಾಟ ಹೇಗೆ ನಡೆಯುತ್ತೆ ಗೊತ್ತಾ?

ಬಸ್ಸು ರೈಲು ವಿಮಾನಗಳ ಟಿಕೆಟನ್ನು ಆನ್‌ಲೈನ್ ತಾಣಗಳಲ್ಲಿ ಕೊಳ್ಳುವುದು ನಮಗೆ ಗೊತ್ತು. ಆದರೆ ದೇಶವಿದೇಶಗಳ ನೂರಾರು ವಿಮಾನಯಾನ ಸಂಸ್ಥೆಗಳ ಟಿಕೆಟ್ ಒಂದೇ ಕಡೆ ಸಿಗುವುದು ಹೇಗೆ? ಪ್ರವಾಸ ಪರಿಣತ ಶ್ರೀನಿಧಿ ಹಂದೆ ಬರೆದ ಈ ಲೇಖನ ಓದಿ!

ನೀವು ನಿಮ್ಮ ಪ್ರವಾಸಕ್ಕಾಗಿ ವಿಮಾನದ ಟಿಕೆಟ್, ಹೋಟೆಲ್ ಇತ್ಯಾದಿ ಕಾಯ್ದಿರಿಸುವಾಗ ಟ್ರಾವೆಲ್ ಏಜೆಂಟ್ ಅಥವಾ ಯಾವುದಾದರೂ ಜಾಲತಾಣವನ್ನು ಬಳಸುತ್ತೀರಿ. ನಿಮ್ಮ ಈ ಕಾಯ್ದಿರಿಸುವಿಕೆಯನ್ನು ನಿಭಾಯಿಸಲು ಕಾಣದ ಕೈ ಒಂದು ತೆರೆ ಮರೆಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ಅದರ ಹೆಸರೇ ಜಿಡಿಎಸ್, ಅಂದರೆ ಗ್ಲೋಬಲ್ ಡಿಸ್ಟ್ರಿಬ್ಯೂಶನ್ ಸಿಸ್ಟಮ್.

ಒಂದು ವಿಮಾನಯಾನ ಸಂಸ್ಥೆ ತನ್ನ ಪ್ರತಿ ಪ್ರಯಾಣದಲ್ಲಿ ಲಭ್ಯವಿರುವ ಸೀಟುಗಳನ್ನು ತನ್ನ ಜಾಲತಾಣವಲ್ಲದೆ ನೂರಾರು ಇತರ ವೆಬ್ ಸೈಟ್ ಗಳು, ಟ್ರಾವೆಲ್ ಏಜೆಂಟುಗಳ ಮೂಲಕ ಮಾರಲು ಯತ್ನಿಸುತ್ತದೆ. ಯಾವ ಫ್ಲೈಟಿನಲ್ಲಿ ಎಷ್ಟು ಸೀಟುಗಳಿವೆ ಎಂದು ತಿಳಿಸುವುದು, ಅವುಗಳನ್ನು ಗೊಂದಲವಿಲ್ಲದೆ ಹಂಚುವುದು (ಅಂದರೆ, ಒಂದೇ ಸೀಟನ್ನು ಇಬ್ಬರಿಗೆ ಮಾರದಿರುವುದು), ವಿಮಾನಯಾನ ಮತ್ತು ಹೋಟೆಲ್ ಬುಕಿಂಗ್ ಸೇರಿಸಿ ಪ್ಯಾಕೇಜ್ ಸಿದ್ಧ ಪಡಿಸುವುದು, ಲಭ್ಯತೆ ಬಗ್ಗೆ ಕ್ಷಣ ಕ್ಷಣದ ಮಾಹಿತಿ ನೀಡುವುದು - ಇವೆಲ್ಲ ಜಿಡಿಎಸ್‌ನ ಕೆಲಸಗಳು.

ಯಾವುದೇ ಟ್ರಾವೆಲ್ ಏಜೆಂಟ್ ನೂರಾರು ವಿಮಾನಯಾನ ಸಂಸ್ಥೆಗಳೊಡನೆ ಬೇರೆ ಬೇರೆಯಾಗಿ ಸಂಪರ್ಕ ಸಾಧಿಸುವ ಬದಲು ಎಲ್ಲಾ ಸಂಸ್ಥೆಗಳ ವಿಮಾನ ಟಿಕೆಟ್‌ಗಳನ್ನು, ಪ್ರಪಂಚದೆಲ್ಲೆಡೆಯ ಹೋಟೆಲ್ ರೂಮುಗಳನ್ನು ಮಾರಾಟ ಮಾಡಲು ಈ ವ್ಯವಸ್ಥೆ ನೆರವಾಗುತ್ತದೆ. ಇದು ವಿವಿಧ ಸಂಸ್ಥೆಗಳ ಸೇವೆಯನ್ನು ಒಂದಕ್ಕೊಂದು ಜೋಡಿಸಿ ಪ್ಯಾಕೇಜ್ ರೂಪದಲ್ಲೂ ಕಟ್ಟಿಕೊಡಬಲ್ಲದು. ಹೋಗುವಾಗ ಒಂದು ಸಂಸ್ಥೆಯ ವಿಮಾನ, ಗಮ್ಯದಲ್ಲಿ ಹೋಟೆಲ್, ಬಾಡಿಗೆ ಕಾರು, ಸ್ಥಳೀಯ ಪ್ರವಾಸ, ವಾಪಾಸು ಬರಲು ಇನ್ನೊಂದು ಸಂಸ್ಥೆಯ ವಿಮಾನ - ಇವನ್ನೆಲ್ಲ ಒಟ್ಟಿಗೆ ಬುಕ್ ಮಾಡುವುದು ಜಿಡಿಎಸ್‌ನಿಂದಾಗಿ ಸಾಧ್ಯವಾಗುತ್ತದೆ.

ಅಮೆಡಿಯುಸ್ (Amadeus), ಸೆಬರ್ (Sabre) ಹಾಗೂ ಟ್ರಾವೆಲ್ ಪೋರ್ಟ್ (Travel Port) ಜಗತ್ತಿನ ಪ್ರಮುಖ ಜಿಡಿಎಸ್ ಸಂಸ್ಥೆಗಳು.

ಅಂದಹಾಗೆ ಈ ವ್ಯವಸ್ಥೆ ಲಭ್ಯವಿರುವ ಸೀಟು, ಹೋಟೆಲ್ ರೂಮುಗಳ ವಿವರಗಳನ್ನು (inventory) ನಿರ್ವಹಿಸುವುದಿಲ್ಲ. ಈ ಕೆಲಸವನ್ನು ಆಯಾ ವಿಮಾನಯಾನ ಸಂಸ್ಥೆ ಅಥವಾ ಹೋಟೆಲ್‌ನ ತಂತ್ರಾಂಶ ನಿರ್ವಹಿಸುತ್ತದೆ. ನಿರಂತರವಾಗಿ ಗ್ರಾಹಕರಿಂದ ಬರುವ ಬೇಡಿಕೆ ಅನುಸರಿಸಿ ಲಭ್ಯವಿರುವ ಸೀಟು, ಬೆಲೆ ಮಾಹಿತಿಯನ್ನು ಸೇವೆ ನೀಡುವ ಸಂಸ್ಥೆಯಿಂದ ಪಡೆದು ಗ್ರಾಹಕರಿಗೆ ತಲುಪಿಸುವುದು, ಬುಕಿಂಗ್ ಆದ ತಕ್ಷಣ ಸೇವೆ ನೀಡುವ ಸಂಸ್ಥೆಗೆ ಮಾಹಿತಿ ನೀಡಿ ಒಂದೇ ಸೀಟು ಅಥವಾ ಹೋಟೆಲ್ ರೂಮು ಇಬ್ಬಿಬ್ಬರಿಗೆ ಮಾರಾಟವಾಗದಂತೆ ತಡೆಯುವ ಕೆಲಸ ಮಾತ್ರ ಜಿಡಿಎಸ್‌ನದು. ಇದರ ಸಹಾಯ ಪಡೆದು ಪ್ರವಾಸಿ ಸೇವೆ ಒದಗಿಸುವ ಜಾಲತಾಣಗಳು ಒಂದೇ ಪುಟದಲ್ಲಿ ಹತ್ತಾರು ಸಂಸ್ಥೆಗಳ ಸೇವೆ, ಅವುಗಳ ಬೆಲೆ ಇನ್ನಿತರ ಆಯ್ಕೆಯನ್ನು ತಮ್ಮ ಗ್ರಾಹಕರಿಗೆ ನೀಡಬಹುದು.

ಇಂದು ಜಗತ್ತಿನ ಬಹುತೇಕ ಎಲ್ಲ ವಿಮಾನಯಾನ ಸಂಸ್ಥೆಗಳು, ಹೋಟೆಲ್‌ಗಳು ಸಾಧ್ಯವಾದಷ್ಟೂ ಹೆಚ್ಚು ಹೆಚ್ಚು ಗ್ರಾಹಕರನ್ನು ತಲುಪಲು ಒಂದಲ್ಲ ಒಂದು ಜಿಡಿಎಸ್ ಸೇವೆಯನ್ನು ನೆಚ್ಚಿಕೊಂಡಿವೆ.

- ಶ್ರೀನಿಧಿ ಹಂದೆ, THE AIRLINE BLOG

Related Stories

No stories found.
logo
ಇಜ್ಞಾನ Ejnana
www.ejnana.com