ದೇಹದ ಉಷ್ಣತೆಯನ್ನು ಅಳೆಯಲು ತಾಪಮಾಪಕವನ್ನು ಬಳಸುವುದು ನಮಗೆ ಗೊತ್ತು. ಈ ಥರ್ಮಲ್ ಸ್ಕ್ಯಾನರ್ ಕೂಡ ಥರ್ಮಾಮೀಟರಿನದೇ ಒಂದು ವಿಧ.
ದೇಹದ ಉಷ್ಣತೆಯನ್ನು ಅಳೆಯಲು ತಾಪಮಾಪಕವನ್ನು ಬಳಸುವುದು ನಮಗೆ ಗೊತ್ತು. ಈ ಥರ್ಮಲ್ ಸ್ಕ್ಯಾನರ್ ಕೂಡ ಥರ್ಮಾಮೀಟರಿನದೇ ಒಂದು ವಿಧ.
ಕೊರೊನಾಲಜಿ

ಥರ್ಮಲ್ ಸ್ಕ್ಯಾನರ್ ಕೆಲಸವೇನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ಟಿ. ಜಿ. ಶ್ರೀನಿಧಿ

ಬಸ್ ನಿಲ್ದಾಣದಲ್ಲಿ ಜನರ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು ಎನ್ನುವಂತಹ ಸುದ್ದಿಗಳನ್ನು ನೀವು ಕೇಳಿರಬಹುದು. ವೈದ್ಯಕೀಯ ಸಿಬ್ಬಂದಿ ತಮ್ಮ ಕೈಯಲ್ಲೊಂದು ಯಂತ್ರ ಹಿಡಿದಿದ್ದ ಚಿತ್ರವನ್ನೂ ನೋಡಿರಬಹುದು. ಆ ಯಂತ್ರವೇ ಥರ್ಮಲ್ ಸ್ಕ್ಯಾನರ್.

ದೇಹದ ಉಷ್ಣತೆಯನ್ನು ಅಳೆಯಲು ತಾಪಮಾಪಕವನ್ನು (ಥರ್ಮಾಮೀಟರ್) ಬಳಸುವುದು ನಮಗೆ ಗೊತ್ತು. ಈ ಥರ್ಮಲ್ ಸ್ಕ್ಯಾನರ್ ಕೂಡ ಥರ್ಮಾಮೀಟರಿನದೇ ಒಂದು ವಿಧ. ನೋಡಲು ಪಿಸ್ತೂಲಿನಂತಿರುವ ಈ ಯಂತ್ರಕ್ಕೆ ಥರ್ಮಾಮೀಟರ್ ಗನ್ ಎಂಬ ಹೆಸರೂ ಇದೆ.

ವ್ಯಕ್ತಿಯ ದೇಹದಿಂದ ಅವಕೆಂಪು (ಇನ್‌ಫ್ರಾ‌ರೆಡ್) ಕಿರಣಗಳ ರೂಪದಲ್ಲಿ ಹೊರಹೊಮ್ಮುವ ಶಾಖವನ್ನು ದೂರದಿಂದಲೇ ಅಳೆಯುವ ಮೂಲಕ ಆತನ ದೇಹದ ಉಷ್ಣತೆಯನ್ನು ಪತ್ತೆಮಾಡುವುದು ಇವುಗಳ ವೈಶಿಷ್ಟ್ಯ. ಬಾಯಿಯಲ್ಲೋ ಕಂಕುಳಿನಲ್ಲೋ ಥರ್ಮಾಮೀಟರ್ ಇಟ್ಟು ಅಳೆಯುವುದು ಪ್ರಾಯೋಗಿಕವಲ್ಲ ಎನ್ನುವಂತಹ ಸನ್ನಿವೇಶಗಳಲ್ಲಿ ದೇಹದ ಉಷ್ಣತೆಯನ್ನು ಬೇಗನೆ ಅಳೆಯಲು ಇವು ಬಹಳ ಉಪಯುಕ್ತ. ವ್ಯಕ್ತಿಯ ದೇಹದ ನೇರ ಸಂಪರ್ಕಕ್ಕೆ ಬಾರದಂತೆಯೇ ಕೆಲಸಮಾಡುವುದರಿಂದ ಇವುಗಳ ಬಳಕೆ ಸುರಕ್ಷಿತವೂ ಹೌದು.

ಕೋವಿಡ್-೧೯ ಶಂಕಿತರನ್ನು ಗುರುತಿಸಲು ಥರ್ಮಲ್ ಸ್ಕ್ಯಾನರುಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆಯಾದರೂ ಇದರಿಂದ ಗೊತ್ತಾಗುವುದು ವ್ಯಕ್ತಿಗಳ ದೇಹದ ಉಷ್ಣತೆ ಮಾತ್ರ. ಕೋವಿಡ್-೧೯ರ ರೋಗಲಕ್ಷಣಗಳ ಸಾಲಿನಲ್ಲಿ ಜ್ವರ ಕೂಡ ಒಂದು. ಯಾರದ್ದಾದರೂ ದೇಹದ ಉಷ್ಣತೆ ಹೆಚ್ಚಿದ್ದರೆ ಅವರಿಗೆ ಜ್ವರ ಇರಬಹುದು, ಮತ್ತು ಆ ಜ್ವರದ ಕಾರಣ ಕೋವಿಡ್-೧೯ ಇದ್ದರೂ ಇರಬಹುದು ಎಂದಷ್ಟೇ ಇವು ಸೂಚಿಸಬಲ್ಲವು. ಸೋಂಕು ತಗುಲಿದ್ದರೂ ಜ್ವರ ಕಾಣಿಸಿಕೊಂಡಿರದ ರೋಗಿಗಳನ್ನು ಇವು ಪತ್ತೆಮಾಡಲಾರವು.

ಇಂತಹ ಸ್ಕ್ಯಾನರುಗಳು ತೋರಿಸುವ ಉಷ್ಣತೆ ಎಷ್ಟು ನಿಖರವಾಗಿರುತ್ತದೆ ಎನ್ನುವುದು ಬಳಕೆಯ ವಿಧಾನ, ಬಳಕೆಯಾಗುತ್ತಿರುವ ಪರಿಸರ ಅಥವಾ ಬಳಸಲಾಗುತ್ತಿರುವ ಸ್ಕ್ಯಾನರಿನ ಗುಣಮಟ್ಟವೂ ಸೇರಿದಂತೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ.

ಸೌಜನ್ಯ: ವಿಜಯ ಕರ್ನಾಟಕ