ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ: 'ಟೆಕ್ಸ್ಟ್‌ಬುಕ್ ಅಲ್ಲ, ಇದು ಟೆಕ್ ಬುಕ್!'

ಪರಿಚಯ

ಏನಿದು ಇಜ್ಞಾನ?
ವಿಜ್ಞಾನ - ತಂತ್ರಜ್ಞಾನ ವಿಷಯಗಳ ಸಂವಹನಕ್ಕಾಗಿ ಮೀಸಲಾಗಿರುವ ಕನ್ನಡ ಜಾಲತಾಣವೇ 'ಇಜ್ಞಾನ ಡಾಟ್ ಕಾಮ್' (www.ejnana.com). ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಲೇಖನ, ಅಂಕಣ, ಸಂದರ್ಶನ, ಪುಸ್ತಕ ಪರಿಚಯ, ಸುದ್ದಿವಿಶ್ಲೇಷಣೆ ಮುಂತಾದ ಬರಹಗಳು ಇಜ್ಞಾನದಲ್ಲಿ ನಿಯಮಿತವಾಗಿ ಪ್ರಕಟವಾಗುತ್ತವೆ.

ಇಜ್ಞಾನದ ಉದ್ದೇಶವೇನು?
ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಆಗುಹೋಗುಗಳು ಎಲ್ಲರ ಮೇಲೂ ತಮ್ಮ ಪ್ರಭಾವ ಬೀರುತ್ತವೆ. ಈ ಕ್ಷೇತ್ರದ ಕುರಿತು ಸರಳ ಭಾಷೆಯಲ್ಲಿ ಮಾಹಿತಿ ನೀಡುವ ಮೂಲಕ ಜನಸಾಮಾನ್ಯರಿಗೆ ನೆರವಾಗುವುದು ಇಜ್ಞಾನದ ಉದ್ದೇಶ.

ಇಜ್ಞಾನ ದಿನ ಯಾಕೆ?
೨೦೦೭ರ ಏಪ್ರಿಲ್ ೨೬ರಂದು ಪ್ರಾರಂಭವಾದ ಇಜ್ಞಾನ ಡಾಟ್ ಕಾಮ್ ಇದೀಗ ಒಂಬತ್ತು ವರ್ಷಗಳನ್ನು ಪೂರೈಸಿ ಹತ್ತನೆಯ ವರ್ಷಕ್ಕೆ ಕಾಲಿಟ್ಟಿದೆ. ಹತ್ತನೆಯ ವರ್ಷದ ಸಂಭ್ರಮವನ್ನು ವಿವಿಧ ಕಾರ್ಯಕ್ರಮಗಳೊಡನೆ ಆಚರಿಸುವ ಉದ್ದೇಶ ಇಜ್ಞಾನದ್ದು. ಈ ನಿಟ್ಟಿನಲ್ಲಿ ಮೇ ೮, ೨೦೧೬ರ 'ಇಜ್ಞಾನ ದಿನ' ಮೊದಲ ಹೆಜ್ಜೆ. ಅಂದು ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ.

ಇಜ್ಞಾನದ ಹಿಂದೆ ಯಾರಿದ್ದಾರೆ?
ಇಜ್ಞಾನದ ರೂವಾರಿ ಟಿ. ಜಿ. ಶ್ರೀನಿಧಿ. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಲೇಖಕರಾಗಿ ಗುರುತಿಸಿಕೊಂಡಿರುವ ಶ್ರೀನಿಧಿ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸಮಾಡುತ್ತಿದ್ದಾರೆ. ಅವರ ಏಳುನೂರಕ್ಕೂ ಹೆಚ್ಚು ಲೇಖನಗಳು, ಹನ್ನೆರಡು ಪುಸ್ತಕಗಳು ಈವರೆಗೆ ಪ್ರಕಟವಾಗಿದೆ. ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಲೇಖಕ' ಪುರಸ್ಕಾರವೂ ಅವರಿಗೆ ಲಭಿಸಿದೆ.

ಕಳೆದ ಒಂಬತ್ತು ವರ್ಷಗಳ ಪಯಣದಲ್ಲಿ ಇಜ್ಞಾನ ಡಾಟ್ ಕಾಮ್ ಜೊತೆಯಲ್ಲಿ ನಿಂತವರು ಅನೇಕ ಮಂದಿ. ಈ ಅವಧಿಯಲ್ಲಿ ಡಾ. ಪಿ. ಎಸ್. ಶಂಕರ್, ಶ್ರೀ ನಾಗೇಶ ಹೆಗಡೆ, ಶ್ರೀ ಟಿ. ಆರ್. ಅನಂತರಾಮು, ಡಾ. ಯು. ಬಿ. ಪವನಜ, ಶ್ರೀ ಶ್ರೀವತ್ಸ ಜೋಶಿ, ಶ್ರೀ ಬೇಳೂರು ಸುದರ್ಶನ, ಶ್ರೀ ಕೊಳ್ಳೇಗಾಲ ಶರ್ಮ, ಶ್ರೀ ಟಿ. ಎಸ್. ಗೋಪಾಲ್ ಸೇರಿದಂತೆ ಅನೇಕ ಮಹನೀಯರ ಲೇಖನಗಳನ್ನು ಪ್ರಕಟಿಸುವ ಅವಕಾಶ ಇಜ್ಞಾನಕ್ಕೆ ಒದಗಿಬಂತು. ಅಷ್ಟೇ ಅಲ್ಲ, ಇ-ಪತ್ರಿಕೆಯಂತಹ ಹಲವು ಯೋಜನೆಗಳಲ್ಲಿ ಹಿರಿಯ ಬರಹಗಾರರ, ತಜ್ಞರ ಮಾರ್ಗದರ್ಶನವೂ ದೊರಕಿತು. ವಿಜ್ಞಾನ ಪುಸ್ತಕಗಳನ್ನು ಓದುಗರಿಗೆ ಪರಿಚಯಿಸುವ ನಮ್ಮ ಪ್ರಯತ್ನವನ್ನು ಹಲವು ಲೇಖಕರು ಪುಸ್ತಕಗಳನ್ನು ಕಳುಹಿಸುವ ಮೂಲಕ ಪ್ರೋತ್ಸಾಹಿಸಿದ್ದಾರೆ.

ಇಜ್ಞಾನದ ಪ್ರಯೋಗಗಳಿಗೆ ಓದುಗರ - ಪತ್ರಿಕೆಗಳ - ಕನ್ನಡ ಜಾಲತಾಣಗಳ ಬೆಂಬಲವೂ ದೊಡ್ಡ ಪ್ರಮಾಣದಲ್ಲಿ ಲಭಿಸಿದೆ. ವಿಜಯವಾಣಿ, ವಿಜಯ ಕರ್ನಾಟಕ, ಪ್ರಜಾವಾಣಿ, ಕನ್ನಡಪ್ರಭ, ಜನಮಿತ್ರ ಮೊದಲಾದ ಪತ್ರಿಕೆಗಳಷ್ಟೇ ಅಲ್ಲದೆ ಒನ್ಇಂಡಿಯಾ ಕನ್ನಡ ಹಾಗೂ ಅವಧಿಯಂತಹ ಜಾಲತಾಣಗಳೂ ಇಜ್ಞಾನದ ಬಗ್ಗೆ ಬರೆದು ಪ್ರೋತ್ಸಾಹ ನೀಡಿವೆ.

ಇಜ್ಞಾನ ಏನೆಲ್ಲ ಮಾಡಿದೆ?
ಕಳೆದ ಒಂಬತ್ತು ವರ್ಷಗಳಲ್ಲಿ ಇಜ್ಞಾನ ನಡೆದುಬಂದ ದಾರಿಯ ಕೆಲ ಪ್ರಮುಖ ಮೈಲಿಗಲ್ಲುಗಳು ಹೀಗಿವೆ:
• ಜಾಲತಾಣದ ಪ್ರಾರಂಭ: ೨೦೦೭
• ಇಜ್ಞಾನ 'ಡಾಟ್ ಕಾಮ್' ಆದದ್ದು: ೨೦೧೧
• ವಿದ್ಯುನ್ಮಾನ ಪತ್ರಿಕೆ ಪ್ರಾಯೋಗಿಕ ಸಂಚಿಕೆಗಳ ಪ್ರಕಟಣೆ: ೨೦೧೧
• ಆಕೃತಿ ಪುಸ್ತಕ ಸಹಯೋಗದಲ್ಲಿ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಕೃತಿ ಪ್ರಕಾಶನ: ೨೦೧೧
• 'ಅನಿಸಿಕೆ ತಿಳಿಸಿ ಬಹುಮಾನ ಗೆಲ್ಲಿ!' ಸ್ಪರ್ಧೆಯ ಮೂಲಕ ಓದುಗರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಪ್ರಯೋಗ: ೨೦೧೨
• ೫೦,೦೦೦ ದಾಟಿದ ಪುಟವೀಕ್ಷಣೆಗಳು: ೨೦೧೨
• 'ಶಾಪಿಂಗ್ ಸಂಗಾತಿ' ಜಾಲತಾಣ ರೂಪಿಸಿದ್ದು: ೨೦೧೪
• 'ಸಪ್ತವರ್ಣ' ಇ-ಪುಸ್ತಕದ ಪ್ರಕಟಣೆ: ೨೦೧೪
• 'ಶಿಕ್ಷಣ ಮಿತ್ರ' ಜಾಲತಾಣ ರೂಪಿಸಿದ್ದು: ೨೦೧೪
• ೧,೦೦,೦೦೦ ದಾಟಿದ ಪುಟವೀಕ್ಷಣೆಗಳು: ೨೦೧೪
• ವಿಜ್ಞಾನ ಲೇಖಕರ ಸಂದರ್ಶನ ಸರಣಿ 'ಪೆನ್ ಸ್ಟಾಂಡ್' ಪ್ರಕಟಣೆ:  ೨೦೧೪-೧೫
• ಫೇಸ್‌ಬುಕ್ ಪುಟಕ್ಕೆ ೧೦೦೦ ಲೈಕ್‌ಗಳು: ೨೦೧೫
• 'ನೀ ಬರೆವ ದಾರಿಯಲ್ಲಿ', 'ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ', 'ಸ್ಮಾರ್ಟ್‌ಫೋನ್ ಹತ್ತು ಮುಖಗಳು' ಲೇಖನ ಸರಣಿ ಪ್ರಕಟಣೆ: ೨೦೧೫
• ಡೇಲಿಹಂಟ್ ಆಪ್ ಮೂಲಕ ಇಜ್ಞಾನ ಲೇಖನಗಳ ಲಭ್ಯತೆ: ೨೦೧೫
•  ಫೇಸ್‌ಬುಕ್ ಪುಟಕ್ಕೆ ೧೫೦೦ ಲೈಕ್‌ಗಳು: ೨೦೧೬
• ೧,೫೦,೦೦೦ ದಾಟಿದ ಪುಟವೀಕ್ಷಣೆಗಳು: ೨೦೧೬
• ಡೇಲಿಹಂಟ್ ಸಹಯೋಗದಲ್ಲಿ ಐವತ್ತು ಇ-ಪುಸ್ತಕಗಳ ಪ್ರಕಾಶನ: ೨೦೧೬
• ಭಾರತೀ ಪ್ರಕಾಶನ ಸಹಯೋಗದಲ್ಲಿ 'ಟೆಕ್ಸ್ಟ್‌ಬುಕ್ ಅಲ್ಲ, ಇದು ಟೆಕ್ ಬುಕ್!' ಕೃತಿ ಪ್ರಕಾಶನ: ೨೦೧೬

ಅಂಕಿ ಅಂಶಗಳಲ್ಲಿ ಇಜ್ಞಾನ
• ಈವರೆಗೂ ಪ್ರಕಟವಾಗಿರುವ ಲೇಖನಗಳು: ೫೦೦ಕ್ಕೂ ಹೆಚ್ಚು
• ಜಾಲತಾಣದ ಪುಟವೀಕ್ಷಣೆಗಳು: ಒಟ್ಟು ೧.೮ ಲಕ್ಷಕ್ಕೂ ಹೆಚ್ಚು
• ಡೇಲಿಹಂಟ್ ಮೂಲಕ ಇಜ್ಞಾನ ಲೇಖನಗಳ ವೀಕ್ಷಣೆ: ತಿಂಗಳಿಗೆ ಸುಮಾರು ೧ ಲಕ್ಷ ಬಾರಿ
• ಇಜ್ಞಾನ  ಫೇಸ್‌ಬುಕ್ ಪುಟವನ್ನು ಮೆಚ್ಚಿಕೊಂಡವರ ಸಂಖ್ಯೆ: ೧೫೦೦+
• ಇಮೇಲ್ ಮೂಲಕ ಇಜ್ಞಾನ ಲೇಖನಗಳ ಮಾಹಿತಿ ಪಡೆದುಕೊಳ್ಳುವವರು: ೧೦೦+
• ಇಜ್ಞಾನ ಜಾಲತಾಣದಲ್ಲಿ ದಾಖಲಾಗಿರುವ ಕಮೆಂಟುಗಳ ಸಂಖ್ಯೆ: ೩೦೦+

ಮುಂದಿನ ಯೋಜನೆಗಳೇನು?
ಹತ್ತನೆಯ ವರ್ಷಕ್ಕೆ ಕಾಲಿಡುತ್ತಿರುವ ಇಜ್ಞಾನ ಕಂಪ್ಯೂಟರಿನಲ್ಲಷ್ಟೇ ಅಲ್ಲದೆ ಮೊಬೈಲ್ ಮೂಲಕವೂ ಓದುಗರನ್ನು ತಲುಪಲು ಸಜ್ಜಾಗಿದೆ. 'ಡೇಲಿಹಂಟ್' ಮೊಬೈಲ್ ಆಪ್ ಸಹಯೋಗದಲ್ಲಿ ಇಜ್ಞಾನದ ಬರಹಗಳು ಮೊಬೈಲ್ ಓದುಗರನ್ನು ತಲುಪುತ್ತಿವೆ. ಮಾಹಿತಿಯನ್ನು ಉಳಿಸಿಟ್ಟುಕೊಂಡು ಓದಬೇಕೆನ್ನುವವರಿಗಾಗಿ ಕಡಿಮೆ ಬೆಲೆಯ ಮೊಬೈಲ್ ಪುಸ್ತಕಗಳೂ ಸಿದ್ಧವಾಗಿವೆ.

ಮುಂದಿನ ದಿನಗಳಲ್ಲಿ ಹಲವು ಮುದ್ರಿತ ಹಾಗೂ ಇ-ಪುಸ್ತಕಗಳ ಪ್ರಕಟಣೆ ಯೋಜನೆಯನ್ನೂ ಇಜ್ಞಾನ ಹಮ್ಮಿಕೊಂಡಿದೆ. ಇಜ್ಞಾನದ ಚಟುವಟಿಕೆಗಳಿಗೊಂದು ವ್ಯವಸ್ಥಿತ ರೂಪ ನೀಡುವ, ಜಾಲತಾಣದ ವಿನ್ಯಾಸವನ್ನು ಇನ್ನಷ್ಟು ಉತ್ತಮಪಡಿಸುವ, ಮೇ ೮, ೨೦೧೬ರ ಇಜ್ಞಾನ ದಿನದಂತೆ ಇನ್ನೂ ಕೆಲ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯೂ ಇದೆ. ಮುಂದಿನ ದಿನಗಳಲ್ಲಿ ಇಜ್ಞಾನದಲ್ಲಿ ಪ್ರಕಟವಾಗುವ ವಿಜ್ಞಾನ ಬರಹಗಳ ಸಂಖ್ಯೆಯನ್ನು ಹೆಚ್ಚಿಸುವುದು ಇನ್ನೊಂದು ಗುರಿ.

ಕಾಮೆಂಟ್‌ಗಳಿಲ್ಲ:

badge