ಗುರುವಾರ, ಮೇ 16, 2019

ಬೆಳಕಿನ ದಿನ ವಿಶೇಷ: ಟೆಕ್ ಲೋಕದ ಬೆಳಕು

ಟಿ. ಜಿ. ಶ್ರೀನಿಧಿ


ನಮ್ಮ ಬದುಕಿನಲ್ಲಿ ಬೆಳಕಿನ ಪಾತ್ರ ಬಹಳ ಮಹತ್ವದ್ದು. ಸಸ್ಯಗಳಲ್ಲಿ ಆಹಾರ ತಯಾರಿಕೆಯಿರಲಿ, ಸೋಲಾರ್ ಹೀಟರಿನಲ್ಲಿ ಸ್ನಾನಕ್ಕೆ ನೀರು ಬಿಸಿಮಾಡುವುದೇ ಇರಲಿ - ನೂರೆಂಟು ಕೆಲಸಗಳಿಗೆ ಬೆಳಕು ಬೇಕೇಬೇಕು.

ಹೀಗೆ ಬೆಳಕಿನ ಸಹಾಯದಿಂದ ನಡೆಯುವ ಕೆಲಸಗಳನ್ನು ನಾವು ಹಲವು ಕ್ಷೇತ್ರಗಳಲ್ಲಿ ನೋಡಬಹುದು. ಅಂತಹ ಕ್ಷೇತ್ರಗಳ ಪೈಕಿ ಮಾಹಿತಿ ತಂತ್ರಜ್ಞಾನ ಕೂಡ ಒಂದು. ಇಲ್ಲಿ ನಡೆಯುವ ಹಲವಾರು ಮಹತ್ವದ ವಿದ್ಯಮಾನಗಳಲ್ಲಿ ಬೆಳಕು ಪ್ರಮುಖ ಪಾತ್ರ ವಹಿಸುತ್ತದೆ.

ಮೊಬೈಲಿನಲ್ಲೋ ಕಂಪ್ಯೂಟರಿನಲ್ಲೋ ಬ್ರೌಸರ್ ತಂತ್ರಾಂಶ ಬಳಸಿ ಜಾಲತಾಣಗಳನ್ನು ತೆರೆಯುವುದು ನಮಗೆಲ್ಲ ಚೆನ್ನಾಗಿ ಗೊತ್ತು. ಜಾಲತಾಣದ ವಿಳಾಸವನ್ನು ಟೈಪ್ ಮಾಡಿದ ಕೆಲವೇ ಕ್ಷಣಗಳಲ್ಲಿ ಬೇಕಾದ ಮಾಹಿತಿ ನಮ್ಮ ಕಣ್ಣೆದುರು ಪ್ರತ್ಯಕ್ಷವಾಗಿಬಿಡುತ್ತದೆ. ಈ ಪ್ರಕ್ರಿಯೆ ಅತ್ಯಂತ ವೇಗವಾಗಿ ಮುಗಿದುಹೋಗುತ್ತದೆ, ನಿಜ. ಆದರೆ ಆ ಮಾಹಿತಿಯೆಲ್ಲ ನಮ್ಮನ್ನು ತಲುಪಲು ಸಾಕಷ್ಟು ದೂರ - ಕೆಲವೊಮ್ಮೆ ಪ್ರಪಂಚದ ಬೇರೆಯದೇ ಮೂಲೆಯಿಂದ - ಪ್ರಯಾಣಿಸಿ ಬಂದಿರುತ್ತದೆ. ಈ ಪ್ರಯಾಣದ ಬಹುಭಾಗ ಸಾಗುವುದು ಸಮುದ್ರದಾಳದಲ್ಲಿ ಅಥವಾ ನೆಲದಾಳದಲ್ಲಿ ಹುದುಗಿರುವ ಆಪ್ಟಿಕಲ್ ಫೈಬರ್ ಕೇಬಲ್ಲುಗಳ (ಓಎಫ್‌ಸಿ) ಮೂಲಕ. ಈ ಕೇಬಲ್ಲುಗಳೊಳಗೆ ಆಪ್ಟಿಕಲ್ ಫೈಬರ್‌ಗಳೆಂಬ, ಗಾಜು ಅಥವಾ ಪ್ಲಾಸ್ಟಿಕ್ಕಿನಿಂದ ಮಾಡಿದ, ತೆಳುವಾದ ಎಳೆಗಳಿರುತ್ತವೆ. ಈ ಎಳೆಗಳೊಳಗೆ ನಮ್ಮ ಮಾಹಿತಿ ಸಾಗುವುದು ಬೆಳಕಿನ ಕಿರಣಗಳ ರೂಪದಲ್ಲಿ!

ಕೇಬಲ್ಲುಗಳ ಸಹಾಯದಿಂದ ನಮ್ಮ ಮನೆ ತಲುಪುವ ಅಂತರಜಾಲ ಸಂಪರ್ಕ ಮೋಡೆಮ್‌ನಿಂದ ಮುಂದಕ್ಕೆ ನಮ್ಮ ಮೊಬೈಲು-ಕಂಪ್ಯೂಟರುಗಳನ್ನು ತಲುಪುವ ಕೊನೆಯ ಹಂತದಲ್ಲಿ ನಿಸ್ತಂತು ತಂತ್ರಜ್ಞಾನವನ್ನು (ವೈರ್‌ಲೆಸ್ ಫಿಡೆಲಿಟಿ ಅಥವಾ ವೈ-ಫೈ) ಬಳಸುವುದು ಸಾಮಾನ್ಯ. ಈಗ ಪ್ರಚಲಿತದಲ್ಲಿರುವ ವೈ-ಫೈ ವ್ಯವಸ್ಥೆಗಳು ಈ ಸಂವಹನಕ್ಕೆ ರೇಡಿಯೋ ಅಲೆಗಳನ್ನು ಬಳಸುತ್ತವೆ. ಈ ಉದ್ದೇಶಕ್ಕಾಗಿ ರೇಡಿಯೋ ಅಲೆಗಳ ಬದಲು ಬೆಳಕನ್ನು ಬಳಸುವುದೂ ಸಾಧ್ಯ ಎಂದು ತಂತ್ರಜ್ಞರು ತೋರಿಸಿದ್ದಾರೆ.

ಮನೆಯಲ್ಲಿ ವೈ-ಫೈ ಸೌಲಭ್ಯ ಬಳಸುವವರಾದರೆ ನೀವು ಮೋಡೆಮ್ ಸಾಧನವನ್ನೂ ಅದರ ಆಂಟೆನಾವನ್ನೂ ನೋಡಿಯೇ ಇರುತ್ತೀರಿ. ಬಹಳಷ್ಟು ಆಧುನಿಕ ಮೋಡೆಮ್‌ಗಳಲ್ಲಿ ಅಡಕವಾಗಿರುವ ರೂಟರ್ ಎಂಬ ಸಾಧನ ಅಂತರಜಾಲದ ಮೂಲಕ ಹರಿದುಬರುವ ಸಂಕೇತಗಳನ್ನು ರೇಡಿಯೋ ಅಲೆಗಳಾಗಿ ಪರಿವರ್ತಿಸಿ ನಮ್ಮ ಮೊಬೈಲು-ಕಂಪ್ಯೂಟರುಗಳಿಗೆ ಒದಗಿಸಿಕೊಡುತ್ತದೆ. ಈ ಸಾಧನದ ಕೆಲಸವನ್ನು ಎಲ್‌ಇಡಿ ಬಲ್ಬುಗಳೇ ಮಾಡಬಹುದು ಎನ್ನುವುದು ತಂತ್ರಜ್ಞರ ಅಭಿಪ್ರಾಯ. ರೇಡಿಯೋ ಅಲೆಗಳ ಬದಲು ಬೆಳಕಿನ ಮೂಲಕ ಮಾಹಿತಿ ಸಂವಹನ ಸಾಧ್ಯವಾಗಿಸುವ ಈ ತಂತ್ರಜ್ಞಾನಕ್ಕೆ ಲೈಟ್ ಫಿಡೆಲಿಟಿ ಅಥವಾ ಲೈ-ಫೈ ಎಂದು ಹೆಸರಿಡಲಾಗಿದೆ.

ಬೆಳಕಿನ ಮೂಲಕ ಮಾಹಿತಿ ಪ್ರಸರಣ ಕೇವಲ ಲೈ-ಫೈ ತಂತ್ರಜ್ಞಾನಕ್ಕೆ ಮಾತ್ರವೇ ಸೀಮಿತವೇನಲ್ಲ. ಹಿಂದಿನ ಕಾಲದಲ್ಲಿ ಬೆಂಕಿಯ ಮೂಲಕ ಮೂಲಕ ಸಂಕೇತಗಳನ್ನು ನೀಡುತ್ತಿದ್ದಂತೆ (ಸಿಗ್ನಲ್ ಫೈರ್) ಈಗಲೂ ಬೆಳಕಿನ ಮೂಲಕ ಮಾಹಿತಿ ಪ್ರಸಾರ ಮಾಡುವ 'ವಿಸಿಬಲ್ ಲೈಟ್ ಕಮ್ಯೂನಿಕೇಶನ್' ಎಂಬ ಸಂವಹನ ವಿಧಾನವೇ ಇದೆ. ನಮ್ಮ ಮನೆಗಳಲ್ಲಿರುತ್ತದಲ್ಲ, ಅಂತಹವೇ ವಿದ್ಯುತ್ ದೀಪಗಳನ್ನು ಬಳಸಿ ಈ ಸಂವಹನವಿಧಾನ ಕೆಲಸಮಾಡುತ್ತದೆ. ಮಾನವರ ಗ್ರಹಿಕೆಗೆ ಬಾರದಷ್ಟು ವೇಗವಾಗಿ ದೀಪಗಳನ್ನು ಹೊತ್ತಿಸಿ ಆರಿಸುವ ಮೂಲಕ ಈ ವಿಧಾನದಲ್ಲಿ ಮಾಹಿತಿಯನ್ನು ರವಾನಿಸುವುದು ಸಾಧ್ಯವಂತೆ.

ಇಷ್ಟೇ ಅಲ್ಲ, ಬೆಳಕಿನ ಬಳಕೆ ಹಾಗೂ ಅದರ ಉಪಯೋಗಗಳ ಸುತ್ತ ಫೋಟಾನಿಕ್ಸ್ (Photonics) ಎಂಬ ವಿಜ್ಞಾನದ ಶಾಖೆಯೇ ಬೆಳೆದಿದೆ. ಬೆಳಕಿನ ಸೂಕ್ಷ್ಮ ಕಣಗಳಾದ ಫೋಟಾನುಗಳ ಉತ್ಪಾದನೆ, ನಿಯಂತ್ರಣ ಹಾಗೂ ಗುರುತಿಸುವಿಕೆಗೆ ಬೇಕಾದ ವಿಜ್ಞಾನ ಹಾಗೂ ತಂತ್ರಜ್ಞಾನಗಳ ಸಮ್ಮಿಲನವೇ ಇದು. ಸ್ಮಾರ್ಟ್‌ಫೋನುಗಳಿಂದ ಲ್ಯಾಪ್‌ಟಾಪ್‌ಗಳವರೆಗೆ, ಕೃತಕ ಬೆಳಕಿನ ಮೂಲಗಳಿಂದ ವೈದ್ಯಕೀಯ ಸಾಧನಗಳವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಫೋಟಾನಿಕ್ಸ್ ಇಂದು ಪ್ರಮುಖ ಪಾತ್ರ ವಹಿಸುತ್ತಿದೆ. ಕಳೆದ ಶತಮಾನದಲ್ಲಿ ವಿದ್ಯುನ್ಮಾನ ವಿಜ್ಞಾನ (ಇಲೆಕ್ಟ್ರಾನಿಕ್ಸ್) ವಹಿಸಿದಂತಹುದೇ ಪಾತ್ರವನ್ನು ಈ ಶತಮಾನದಲ್ಲಿ ಬೆಳಕಿನ ವಿಜ್ಞಾನ (ಫೋಟಾನಿಕ್ಸ್) ವಹಿಸಲಿದೆ ಎನ್ನುವುದು ವಿಜ್ಞಾನಿಗಳ ನಿರೀಕ್ಷೆ.
ಬೆಳಕಿಗೂ ಒಂದು ದಿನ!ಬೆಳಕನ್ನು ಬಳಸುವ ಹಲವು ಅನ್ವಯಗಳು ನಮ್ಮ ಬದುಕಿನ ಮೇಲೆ ಗಮನಾರ್ಹ ಪ್ರಭಾವ ಬೀರಿವೆ. ಇಂತಹ ಅನ್ವಯಗಳಿಗೆ ಲೇಸರ್ ಒಂದು ಉತ್ತಮ ಉದಾಹರಣೆ. ಕಡತಗಳನ್ನು ಉತ್ತಮ ಗುಣಮಟ್ಟದಲ್ಲಿ ಮುದ್ರಿಸುವುದರಿಂದ (ಲೇಸರ್ ಪ್ರಿಂಟಿಂಗ್) ಪ್ರಾರಂಭಿಸಿ ಕಣ್ಣಿನ ಶಸ್ತ್ರಚಿಕಿತ್ಸೆಯಂತಹ ಕ್ಲಿಷ್ಟ ಕೆಲಸಗಳವರೆಗೆ ಲೇಸರ್ ಕಿರಣಗಳು ಅನೇಕ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ೧೯೬೦ನೇ ಇಸವಿಯಲ್ಲಿ ಲೇಸರ್ ಆವಿಷ್ಕಾರವಾದ ಮೇ ೧೬ನೇ ದಿನಾಂಕವನ್ನು ಇದೀಗ ಅಂತಾರಾಷ್ಟ್ರೀಯ ಬೆಳಕಿನ ದಿನವೆಂದು (ಇಂಟರ್‌ನ್ಯಾಶನಲ್ ಡೇ ಆಫ್ ಲೈಟ್) ಆಚರಿಸಲಾಗುತ್ತಿದೆ.
ಮೇ ೨೦೧೯ರ ತುಷಾರದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge