ಬುಧವಾರ, ಮೇ 22, 2019

ಡಿಜಿಟಲ್ ಬೀಗದ ಎರಡನೇ ಕೀಲಿ

ಟಿ. ಜಿ. ಶ್ರೀನಿಧಿ


ಸ್ಮಾರ್ಟ್‌ಫೋನ್ ಹಾಗೂ ಕಂಪ್ಯೂಟರಿನ ಮೂಲಕ ನಾವು ಮಾಹಿತಿ ತಂತ್ರಜ್ಞಾನದ ಹಲವು ಸವಲತ್ತುಗಳನ್ನು (ತಂತ್ರಾಂಶ, ಜಾಲತಾಣ ಇತ್ಯಾದಿ) ಬಳಸುತ್ತೇವೆ. ಮನರಂಜನೆಯಿಂದ ಪ್ರಾರಂಭಿಸಿ ನಮ್ಮ ಖಾಸಗಿ ಮಾಹಿತಿಯನ್ನು ನಿಭಾಯಿಸುವವರೆಗೆ, ನಮ್ಮ ಪರವಾಗಿ ಹಣಕಾಸಿನ ವ್ಯವಹಾರಗಳನ್ನು ನಿಭಾಯಿಸುವವರೆಗೆ ಈ ಸವಲತ್ತುಗಳು ಅನೇಕ ಕೆಲಸಗಳನ್ನು ಮಾಡುತ್ತವೆ.

ಆಯಾ ಸನ್ನಿವೇಶಕ್ಕೆ ತಕ್ಕಂತೆ ಇಂತಹ ಸವಲತ್ತುಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿರುತ್ತದೆ. ಅವುಗಳಲ್ಲಿ ಶೇಖರಿಸಿಟ್ಟ ಮಾಹಿತಿಯನ್ನು ಯಾರೂ ಹಾಳುಮಾಡದಂತೆ, ಕದಿಯದಂತೆ, ದುರುಪಯೋಗಪಡಿಸಿಕೊಳ್ಳದಂತೆ ಈ ಸುರಕ್ಷತಾ ಕ್ರಮಗಳು ನೋಡಿಕೊಳ್ಳುತ್ತವೆ. ಇಂತಹ ಬಹುತೇಕ ಸುರಕ್ಷತಾ ಕ್ರಮಗಳ ಜವಾಬ್ದಾರಿ ಆಯಾ ತಂತ್ರಾಂಶ ಅಥವಾ ಜಾಲತಾಣವನ್ನು ನಡೆಸುವವರದ್ದು.

ಈ ಸುರಕ್ಷತೆಯ ಒಂದು ಭಾಗದ ಜವಾಬ್ದಾರಿ ಗ್ರಾಹಕರಾದ ನಮ್ಮದೂ ಆಗಿರುತ್ತದೆ. ಆ ಭಾಗದ ಹೆಸರೇ ಪಾಸ್‌ವರ್ಡ್. ಡಿಜಿಟಲ್ ಜಗತ್ತಿನಲ್ಲಿ ನಮ್ಮ ಮಾಹಿತಿಯಿರುವ ಕೋಣೆಗೆ ಒಂದು ಬೀಗ ಇದೆ ಎಂದುಕೊಂಡರೆ, ಪಾಸ್‌ವರ್ಡು ಆ ಬೀಗದ ಕೀಲಿಕೈ. ನಮ್ಮ ಮಾಹಿತಿ ಬೇರೆಯವರಿಗೆ ಸಿಗದಂತೆ, ದುರ್ಬಳಕೆ ಆಗದಂತೆ ಇದು ಕಾಪಾಡುತ್ತದೆ.

ತಂತ್ರಾಂಶವನ್ನೋ ಜಾಲತಾಣವನ್ನೋ ಬಳಸುವಾಗ ಅದನ್ನು ನಿಜಕ್ಕೂ ನಾವೇ ಉಪಯೋಗಿಸುತ್ತಿದ್ದೇವೆ ಎಂದು ಖಾತರಿಪಡಿಸಲು ಪಾಸ್‌ವರ್ಡನ್ನು ಬಳಸಲಾಗುತ್ತದೆ. ನಮ್ಮ ಖಾತೆಯ ಪಾಸ್‌ವರ್ಡ್ ನಮ್ಮನ್ನು ಬಿಟ್ಟು ಬೇರೆಯವರಿಗೆ ಗೊತ್ತಿರುವುದಿಲ್ಲ, ಹಾಗಾಗಿ ನಮ್ಮ ಗುರುತನ್ನು ದೃಢೀಕರಿಸಲು ಇದು ಸೂಕ್ತ ಎನ್ನುವುದು ಈ ರಹಸ್ಯಪದ ಬಳಸುವುದರ ಉದ್ದೇಶ.

ಹಿಂದಿನ ಕಾಲದಲ್ಲಿ ಇದು ಸಾಕಾಗಿತ್ತೋ ಏನೋ. ಆದರೆ ಈಗ ಖಾಸಗಿ ಮಾಹಿತಿಗೆ ಕಳ್ಳರ ಕಾಟ ಬಹಳ ಜಾಸ್ತಿಯಾಗಿದೆ. ನೆಟ್‌ಬ್ಯಾಂಕಿಂಗ್, ಸಮಾಜಜಾಲ, ಇಮೇಲ್ ಸೇರಿದಂತೆ ನಮ್ಮ ಆನ್‌ಲೈನ್ ಖಾತೆಗಳ ಪಾಸ್‌ವರ್ಡ್ ತಿಳಿದುಕೊಳ್ಳಲು ಅವರು ದಿನಕ್ಕೊಂದು ಹೊಸ ವಿಧಾನವನ್ನು ಪ್ರಯತ್ನಿಸುತ್ತಿದ್ದಾರೆ. ಅವರು ತೋಡಿದ ಹಳ್ಳಕ್ಕೆ ಬಿದ್ದ ಗ್ರಾಹಕರ ಪಾಸ್‌ವರ್ಡುಗಳು ಕ್ಷಣಾರ್ಧದಲ್ಲಿ ದುರುಪಯೋಗವಾಗುತ್ತಿವೆ.

ನಮ್ಮ ಮಾಹಿತಿ ಕಾಪಾಡಿಕೊಳ್ಳಲು ಪಾಸ್‌ವರ್ಡ್ ಒಂದೇ ಸಾಕಾಗುವುದಿಲ್ಲ ಎಂಬ ಅಭಿಪ್ರಾಯ ಮೂಡಲು ಕಾರಣವಾಗಿರುವುದು ಇದೇ ಅಂಶ. ಹೀಗಾಗಿಯೇ ಪಾಸ್‌ವರ್ಡ್ ಜೊತೆಗೆ ಇನ್ನೊಂದು ಹೆಚ್ಚುವರಿ ಅಂಶವನ್ನೂ ಬಳಸುವ ಅಭ್ಯಾಸ ಈಚೆಗೆ ಬೆಳೆಯುತ್ತಿದೆ. ಗ್ರಾಹಕರ ಗುರುತನ್ನು ದೃಢೀಕರಿಸಲು ಎರಡು ಬೇರೆಬೇರೆ ಅಂಶಗಳನ್ನು ಬಳಸುವ ಈ ಅಭ್ಯಾಸಕ್ಕೆ '೨-ಫ್ಯಾಕ್ಟರ್ ಅಥೆಂಟಿಕೇಶನ್' ಎಂದು ಹೆಸರಿಡಲಾಗಿದೆ.

ಆನ್‌ಲೈನ್ ಹಣ ಪಾವತಿ ಮಾಡುವಾಗ ನಮ್ಮ ಬ್ಯಾಂಕ್ ಖಾತೆಯ ಪಾಸ್‌ವರ್ಡ್ ಜೊತೆ ಮೊಬೈಲಿಗೆ ಬರುವ ಓಟಿಪಿಯನ್ನೂ ದಾಖಲಿಸುವಂತೆ ಕೇಳುತ್ತಾರಲ್ಲ, ಅದು ೨-ಫ್ಯಾಕ್ಟರ್ ಅಥೆಂಟಿಕೇಶನ್‌ಗೆ ಒಂದು ಉದಾಹರಣೆ. ನಮ್ಮ ಪಾಸ್‌ವರ್ಡನ್ನು ಬೇರೆ ಯಾರೋ ತಿಳಿದುಕೊಂಡಿದ್ದಾರೆ ಎಂದುಕೊಂಡರೂ, ಬರಿಯ ಅದೊಂದು ಅಂಶವನ್ನೇ ಬಳಸಿ ಅವರು ನಮ್ಮ ಖಾತೆ ಪ್ರವೇಶಿಸದಂತೆ ಈ ವ್ಯವಸ್ಥೆ ತಡೆಯುತ್ತದೆ.

ಇಂತಹ ವ್ಯವಸ್ಥೆಗಳು ಸದ್ಯ ಹಣಕಾಸು ವ್ಯವಹಾರಗಳಿಗೇ ಹೆಚ್ಚು ಬಳಕೆಯಾಗುತ್ತಿವೆ, ನಿಜ. ಆದರೆ ದೃಢೀಕರಣದ ಮಾರ್ಗವಾಗಿ ಪಾಸ್‌ವರ್ಡ್ ಮಾತ್ರವೇ ಬಳಕೆಯಾಗುತ್ತಿರುವ ಇನ್ನೂ ಅನೇಕ ಉದಾಹರಣೆಗಳು ಆನ್‌ಲೈನ್ ಲೋಕದಲ್ಲಿವೆ.

ಇಮೇಲ್ ಹಾಗೂ ಸಮಾಜಜಾಲದ (ಸೋಶಿಯಲ್ ನೆಟ್‌ವರ್ಕ್) ಖಾತೆಗಳು ಈ ಪೈಕಿ ಪ್ರಮುಖವಾದವು. ಇತರೆಲ್ಲ ಖಾತೆಗಳ ವಿವರಗಳನ್ನು ಪಡೆದುಕೊಳ್ಳುವ ಮಾಧ್ಯಮವಾದ ಇಮೇಲ್‌ಗೆ, ನಮ್ಮ ಖಾಸಗಿ ಬದುಕಿನ ಅದೆಷ್ಟೋ ವಿವರಗಳನ್ನು ತಿಳಿದ ಸಮಾಜಜಾಲಕ್ಕೆ ಹೆಚ್ಚುವರಿ ಸುರಕ್ಷತೆ ಬೇಡವೇ? ೨-ಫ್ಯಾಕ್ಟರ್ ಅಥೆಂಟಿಕೇಶನ್‌ ಪರಿಕಲ್ಪನೆಯನ್ನು ಹಣಕಾಸು ವ್ಯವಹಾರಗಳಿಂದಾಚೆಗೂ ವಿಸ್ತರಿಸಲು ಕಾರಣವಾಗಿರುವುದು ಇದೇ ಅಂಶ.

ಜಿಮೇಲ್, ಫೇಸ್‌ಬುಕ್ ಸೇರಿದಂತೆ ಹಲವು ಜನಪ್ರಿಯ ತಾಣಗಳಲ್ಲಿ ಈ ಸೌಲಭ್ಯವನ್ನು ನೀಡಲಾಗುತ್ತಿದೆ. ಈ ಸೌಲಭ್ಯ ಬಳಸಿಕೊಳ್ಳುವ ಗ್ರಾಹಕರು ತಮ್ಮ ಖಾತೆಯನ್ನು ಜೋಪಾನವಾಗಿಡಲು ಸಾಮಾನ್ಯ ಪಾಸ್‌ವರ್ಡ್ ಜೊತೆಗೆ ಹೆಚ್ಚುವರಿಯಾದ ಇನ್ನೂ ಒಂದು ಅಂಶವನ್ನು ಬಳಸಬಹುದು. ಎಸ್ಸೆಮ್ಮೆಸ್ ಮೂಲಕ ಬರುವ ಓಟಿಪಿ ಬಳಸುವುದಷ್ಟೇ ಅಲ್ಲ, ಸ್ಮಾರ್ಟ್‌ಫೋನಿನಲ್ಲಿ ಕಾಣಿಸಿಕೊಳ್ಳುವ ದೃಢೀಕರಣ ಸಂದೇಶವನ್ನು ಓಕೆ ಮಾಡುವ ಮೂಲಕ - ಮೊದಲೇ ನೀಡಲಾದ ಹೆಚ್ಚುವರಿ ರಹಸ್ಯಸಂಖ್ಯೆಗಳನ್ನು ಬಳಸುವ ಮೂಲಕವೂ ತಮ್ಮ ಖಾತೆಗೆ ಹೆಚ್ಚುವರಿ ಸುರಕ್ಷತೆ ಒದಗಿಸುವುದು ಸಾಧ್ಯ.

ಇನ್ನೂ ಹೆಚ್ಚಿನ ಸುರಕ್ಷತೆ ಬೇಕು ಎನ್ನುವವರು ಭೌತಿಕ ಕೀಲಿಗಳನ್ನೂ ಬಳಸಬಹುದು. ಸುರಕ್ಷತಾ ಕೀಲಿ ಅಥವಾ 'ಸೆಕ್ಯೂರಿಟಿ ಕೀ' ಎಂದು ಕರೆಸಿಕೊಳ್ಳುವ ಈ ಸಾಧನಗಳು ನೋಡಲು ಪೆನ್‌ಡ್ರೈವ್‌ನಂತೆಯೇ ಇರುತ್ತದೆ. ಅವನ್ನು ಕೊಂಡು ನಮ್ಮ ಖಾತೆಯ ಜೊತೆ ಜೋಡಿಸಿಕೊಂಡರೆ ಸಾಕು, ಆ ಕೀಲಿಯನ್ನು ಯುಎಸ್‌ಬಿ ಮೂಲಕ ಕಂಪ್ಯೂಟರಿಗೆ (ಅಥವಾ ಮೊಬೈಲಿಗೆ) ಜೋಡಿಸದ ಹೊರತು ನಮ್ಮ ಖಾತೆಯನ್ನು ತೆರೆಯುವುದೇ ಸಾಧ್ಯವಾಗುವುದಿಲ್ಲ. 

ತಂತ್ರಜ್ಞಾನ ಲೋಕ ಬೆಳೆದಂತೆ, ಅದರ ಸವಲತ್ತುಗಳ ವ್ಯಾಪ್ತಿ ವಿಸ್ತರಿಸಿದಂತೆ, ಅದನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನಗಳೂ ಹೆಚ್ಚುತ್ತಿವೆ. ಇಂತಹ ಪ್ರಯತ್ನಗಳನ್ನು ಸೋಲಿಸುವುದಕ್ಕೂ ಅದೇ ತಂತ್ರಜ್ಞಾನ ನೆರವಾಗುತ್ತದೆ ಎನ್ನುವುದು ವಿಶೇಷ. ಆ ನೆರವನ್ನು ಪಡೆದುಕೊಳ್ಳುವುದು, ನಮ್ಮ ಮಾಹಿತಿಯನ್ನು ಸಾಧ್ಯವಾದಷ್ಟೂ ಜೋಪಾನವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ. ಸದ್ಯದ ಪರಿಸ್ಥಿತಿಯಲ್ಲಿ ಈ ಜವಾಬ್ದಾರಿಯನ್ನು ನಿಭಾಯಿಸಲು ೨-ಫ್ಯಾಕ್ಟರ್ ಅಥೆಂಟಿಕೇಶನ್‌ ಒಂದು ಉತ್ತಮ ಆಯ್ಕೆ ಎಂದೇ ಹೇಳಬೇಕು.

(ಗೂಗಲ್‌ನಲ್ಲಿ ೨-ಫ್ಯಾಕ್ಟರ್ ಅಥೆಂಟಿಕೇಶನ್‌ ಬಗ್ಗೆ ಹೆಚ್ಚಿನ ಮಾಹಿತಿಗೆ google.com/landing/2step ತಾಣಕ್ಕೆ ಭೇಟಿಕೊಡಬಹುದು. ಫೇಸ್‌ಬುಕ್‌ನಲ್ಲಿ ಇದನ್ನು ಸಾಧ್ಯವಾಗಿಸಲು ಭೇಟಿನೀಡಬೇಕಾದ ಕೊಂಡಿ facebook.com/settings?tab=security)

ಏಪ್ರಿಲ್ ೧೦, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge