ಗುರುವಾರ, ಏಪ್ರಿಲ್ 18, 2019

ಚುನಾವಣೆ ವಿಶೇಷ: ಅಳಿಸಲಾಗದ ಇಂಕ್ ಬಗ್ಗೆ ನಿಮಗೆಷ್ಟು ಗೊತ್ತು?

ಇಜ್ಞಾನ ವಿಶೇಷ


೨೦೧೯ರ ಚುನಾವಣೆಯ ಅಂಗವಾಗಿ ಕರ್ನಾಟಕದ ಹಲವೆಡೆ ಇಂದು (ಏ. ೧೯) ಮತದಾನ ನಡೆಯುತ್ತಿದೆ. ಇಂಕು ಹಚ್ಚಿದ ಬೆರಳಿನ ಚಿತ್ರಗಳು ಸಮಾಜಜಾಲಗಳಲ್ಲೆಲ್ಲ ಹರಿದಾಡುತ್ತಿವೆ. ಈ ಹೊತ್ತಿನಲ್ಲಿ ಆ ಇಂಕಿನ ಕುರಿತು ಕೆಲವು ಕುತೂಹಲಕರ ಅಂಶಗಳು ಇಲ್ಲಿವೆ. ಇದು ಇಜ್ಞಾನದ ಇಂದಿನ ವಿಶೇಷ!
  • ಇಂಡೆಲಿಬಲ್ ಇಂಕ್ ಅಥವಾ ಅಳಿಸಲಾಗದ ಶಾಯಿಯನ್ನು ಚುನಾವಣಾ ಇಂಕ್ ಎಂದೂ ಕರೆಯಲಾಗುತ್ತದೆ. ಇದನ್ನು ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಬಳಸಲಾಗುತ್ತದೆ. ಅನೇಕ ಕಡೆಗಳಿಗೆ ಈ ಶಾಯಿ ನಮ್ಮ ದೇಶದಿಂದಲೇ ರಫ್ತಾಗುತ್ತದೆ ಎನ್ನುವುದು ವಿಶೇಷ.
  • ನಮ್ಮ ದೇಶದಲ್ಲಿ ಬಳಕೆಯಾಗುವ ಚುನಾವಣಾ ಇಂಕಿನಲ್ಲಿರುವುದು ಸಿಲ್ವರ್ ನೈಟ್ರೇಟ್ ಎಂಬ ರಾಸಾಯನಿಕ. ಬೆಳಕಿನಲ್ಲಿ ನಮ್ಮ ಚರ್ಮದೊಡನೆ ವರ್ತಿಸುವ ಈ ರಾಸಾಯನಿಕ ತಕ್ಷಣಕ್ಕೆ ಅಳಿಸಲಾಗದ ಬಣ್ಣವನ್ನು ಹಚ್ಚುತ್ತದೆ. ಉಗುರು ಬೆಳೆದಂತೆ, ಚರ್ಮದ ಬದಲಿ ಕೋಶಗಳು ಸೃಷ್ಟಿಯಾದಂತೆ ಈ ಬಣ್ಣ ಕೆಲವು ವಾರಗಳಲ್ಲಿ ಅಳಿಸಿಹೋಗುತ್ತದೆ.  
  • ಭಾರತದಲ್ಲಿ ಇಂಡೆಲಿಬಲ್ (ಅಳಿಸಲಾಗದ) ಇಂಕ್ ತಯಾರಿಸುವ ಪ್ರಯತ್ನ ಸ್ವಾತಂತ್ರ್ಯಪೂರ್ವದಲ್ಲೇ ಪ್ರಾರಂಭವಾಗಿತ್ತು. ಈ ಪ್ರಯತ್ನದ ಮುಂಚೂಣಿಯಲ್ಲಿದ್ದವರು ನಮ್ಮ ದೇಶದ ಖ್ಯಾತ ವಿಜ್ಞಾನಿ ಡಾ. ಶಾಂತಿಸ್ವರೂಪ್ ಭಟ್ನಾಗರ್. ಅವರ ಆಲೋಚನೆಗೆ ತಕ್ಕಂತೆ ಇಂಕನ್ನು ರೂಪಿಸಿಕೊಟ್ಟ ಡಾ. ಸಲೀಮ್ ಉಜ಼್ಜ಼ಮನ್ ಸಿದ್ದಿಕಿ ಸ್ವಾತಂತ್ರ್ಯಾನಂತರ ಪಾಕಿಸ್ತಾನದಲ್ಲಿ ಸೇವೆಸಲ್ಲಿಸಿದರು.
ಇಜ್ಞಾನ ಡಾಟ್ ಕಾಮ್ ಫೇಸ್‌ಬುಕ್ ಪುಟ ಲೈಕ್ ಮಾಡಿದ್ದೀರಾ? facebook.com/ejnana
  • ಅಳಿಸಲಾಗದ ಇಂಕು ನಮ್ಮ ದೇಶದಲ್ಲಿ ಮೊದಲ ಬಾರಿಗೆ ಬಳಕೆಯಾಗಿದ್ದು ೧೯೪೬ರ ಪ್ರಾಂತೀಯ ಚುನಾವಣೆಗಳಲ್ಲಿ. ಆಗ ಅದನ್ನು ಮತದಾರರ ಹೆಬ್ಬೆರಳಿಗೆ ಹಚ್ಚಲಾಗಿತ್ತಂತೆ. ೧೯೫೧-೫೨ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಇದನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಯಿತು.
  • ಈ ಶಾಯಿಯನ್ನು ಮೊದಲಿಗೆ ತಯಾರಿಸಿದ್ದು ನವದೆಹಲಿಯ ನ್ಯಾಶನಲ್ ಫಿಸಿಕಲ್ ಲ್ಯಾಬೊರೇಟರಿ. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿದ ಮೈಸೂರಿನ ಅರಗು ಕಾರ್ಖಾನೆಗೆ (ಇಂದಿನ ಮೈಸೂರು ಪೈಂಟ್ಸ್) ಇಂಕ್ ತಯಾರಿಕೆಯ ಜವಾಬ್ದಾರಿಯನ್ನು ಆನಂತರದಲ್ಲಿ ವಹಿಸಿಕೊಡಲಾಯಿತು. ೧೯೬೨ರ ಚುನಾವಣೆಯಿಂದ ಪ್ರಾರಂಭಿಸಿ ಇಂದಿನವರೆಗೂ ಈ ಪ್ರಕ್ರಿಯೆ ನಮ್ಮಲ್ಲೇ ನಡೆಯುತ್ತಿದೆ.
  • ಭಾರತದಲ್ಲಿ ತಯಾರಾಗುವ ಇಂಡೆಲಿಬಲ್ ಇಂಕಿನ ಪೇಟೆಂಟ್ ಇರುವುದು ಕೇಂದ್ರ ಸರಕಾರದ ನ್ಯಾಶನಲ್ ರೀಸರ್ಚ್ ಡೆವೆಲಪ್‌ಮೆಂಟ್ ಕಾರ್ಪೊರೇಶನ್ (ಎನ್‌ಆರ್‍‌ಡಿಸಿ) ಬಳಿ. ದೇಶವಿದೇಶಗಳಲ್ಲಿ ಇಂಕ್ ಮಾರಾಟದಿಂದ ಪ್ರತಿವರ್ಷವೂ ದೊರಕುವ ಆದಾಯದ ಒಂದು ಪಾಲು ಈ ಸಂಸ್ಥೆಗೆ ಸೇರುತ್ತದೆ. 
  • ನಮ್ಮ ಚುನಾವಣೆಗಳಲ್ಲಿ ಗಾಢ ನೀಲಿ / ಕಪ್ಪು ಬಣ್ಣದ ಶಾಯಿ ಬಳಕೆಯಾಗುತ್ತದೆ, ನಿಜ. ಆದರೆ ಅಳಿಸದ ಇಂಕು ಬೇರೆ ಬಣ್ಣಗಳಲ್ಲಿರುವುದೂ ಸಾಧ್ಯ. ಇಂಕ್ ಬಳಸುವ ವಿಧಾನವೂ ಅಷ್ಟೇ - ಪೆನ್ ಹಾಗೂ ಬ್ರಶ್ ಮೂಲಕ ಬಣ್ಣ ಹಚ್ಚುವ ಅಭ್ಯಾಸ ಸಾಮಾನ್ಯವಾದರೂ ಕೆಲ ರಾಷ್ಟ್ರಗಳಲ್ಲಿ ಮತದಾರರು ಇಂಕಿನ ಬಟ್ಟಲಿನೊಳಗೇ ಬೆರಳನ್ನು ಅದ್ದುತ್ತಾರೆ! 
(ಮಾಹಿತಿ: 'ಇಂಡಿಯನ್ ಸೈನ್ಸ್', ಇಂಡಿಯನ್ ನ್ಯಾಶನಲ್ ಸೈನ್ಸ್ ಅಕಾಡೆಮಿ ಪ್ರಕಟಣೆ; ಸಂಗ್ರಹ ಮತ್ತು ನಿರೂಪಣೆ: ejnana.com)

ಕಾಮೆಂಟ್‌ಗಳಿಲ್ಲ:

badge