ಬುಧವಾರ, ಮಾರ್ಚ್ 27, 2019

ಏನಿದು ಉಪಗ್ರಹ ವಿರೋಧಿ ಅಸ್ತ್ರ?

ಇಜ್ಞಾನ ವಿಶೇಷ


ಕೃತಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹಾರಿಬಿಡುವುದು, ವಿವಿಧ ಉದ್ದೇಶಗಳಿಗಾಗಿ ಅವನ್ನು ಬಳಸಿಕೊಳ್ಳುವುದು ಬಹಳ ಸಾಮಾನ್ಯವಾಗಿರುವ ಸಂಗತಿ. ಈ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿಯಿರುವ ರಾಷ್ಟ್ರಗಳು ಇತರ ರಾಷ್ಟ್ರಗಳೊಡನೆ ಸಂಘರ್ಷಕ್ಕೇನಾದರೂ ಇಳಿದರೆ ಉಪಗ್ರಹಗಳಿಂದ ಬಲಿಷ್ಠ ರಾಷ್ಟ್ರಕ್ಕೆ ಹೆಚ್ಚಿನ ಅನುಕೂಲಗಳಾಗುವುದು ನಿಶ್ಚಿತ. ಹೀಗಾಗಿಯೇ ಯುದ್ಧಸಂಬಂಧಿ ತಂತ್ರಜ್ಞಾನಗಳ ಬೆಳವಣಿಗೆ ಇದೀಗ ಅಂತರಿಕ್ಷಕ್ಕೂ ವಿಸ್ತರಿಸಿದೆ. ಈ ವಿಸ್ತರಣೆಯ ಫಲವಾಗಿ ರೂಪುಗೊಂಡಿರುವುದೇ ಉಪಗ್ರಹ ವಿರೋಧಿ ಅಸ್ತ್ರಗಳ (ಆಂಟಿ-ಸ್ಯಾಟೆಲೈಟ್ ವೆಪನ್, ASAT) ಪರಿಕಲ್ಪನೆ.

ವಿರೋಧಿ ದೇಶದ ಉಪಗ್ರಹವನ್ನು ಹೊಡೆದುರುಳಿಸಲು ಸಾಧ್ಯವಾಗಿಸುವುದು ಈ ಅಸ್ತ್ರಗಳ ವೈಶಿಷ್ಟ್ಯ. ವಿರೋಧಿ ದೇಶದ ಉಪಗ್ರಹಗಳ ಬಳಕೆಯಿಂದ ದೇಶದ ಸುರಕ್ಷತೆಗೆ ಧಕ್ಕೆಯಾಗುತ್ತಿದೆ ಎನಿಸಿದಾಗ ಬಳಸಲು ಬೇಕಾಗುತ್ತದೆ ಎನ್ನುವುದು ಇವುಗಳ ಸೃಷ್ಟಿಯ ಹಿಂದಿರುವ ಆಲೋಚನೆ. ಇವುಗಳ ರಚನೆ-ಬಳಕೆ ಬಲು ಕ್ಲಿಷ್ಟ ಸಂಗತಿಗಳಾದ್ದರಿಂದ ಉಪಗ್ರಹ ವಿರೋಧಿ ಅಸ್ತ್ರಗಳು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ದೇಶದ ಪ್ರಗತಿಯ ಸೂಚಕವೂ ಆಗಿವೆ.

ಈವರೆಗೆ ಈ ಅಸ್ತ್ರ ಹೊಂದಿದ್ದ ರಾಷ್ಟ್ರಗಳ ಪಟ್ಟಿಯಲ್ಲಿದ್ದ ಅಮೆರಿಕಾ, ರಷ್ಯಾ ಹಾಗೂ ಚೀನಾಗಳ ಜೊತೆಗೆ ಇದೀಗ ಭಾರತವೂ ಸೇರಿಕೊಂಡಿದೆ. 'ಮಿಶನ್ ಶಕ್ತಿ'ಯಡಿಯಲ್ಲಿ ಭಾರತ ನಡೆಸಿದ ಪರೀಕ್ಷೆ ಯಶಸ್ವಿಯಾಗಿದೆ ಎಂಬ ಘೋಷಣೆ ಇದೀಗ (ಮಾ.೨೭, ೨೦೧೯) ಹೊರಬಿದ್ದಿದೆ.

ಅಂದಹಾಗೆ ಈ ಅಸ್ತ್ರಗಳು ಈವರೆಗೆ ಯಾವ ಯುದ್ಧದಲ್ಲೂ ಬಳಕೆಯಾಗಿಲ್ಲ. ನಮ್ಮ ದೇಶ ನಡೆಸಿದ ಪರೀಕ್ಷೆಯೂ ಸೇರಿ ಈವರೆಗೆ ನಡೆದಿರುವ ಪರೀಕ್ಷೆಗಳೆಲ್ಲ ತಮ್ಮ ಸ್ವಂತದ (ನಿಷ್ಕ್ರಿಯ) ಉಪಗ್ರಹಗಳನ್ನೇ ತಮ್ಮ ಗುರಿಯಾಗಿಸಿಕೊಂಡಿವೆ. ಮಾರ್ಚ್ ೨೭, ೨೦೧೯ರ ಪರೀಕ್ಷೆಯಲ್ಲಿ ಭೂ ಮೇಲ್ಮೈಯಿಂದ ಸುಮಾರು ೩೦೦ ಕಿಲೋಮೀಟರುಗಳಷ್ಟು ಎತ್ತರದಲ್ಲಿ, ಲೋ ಅರ್ಥ್ ಆರ್ಬಿಟ್ ಎಂದು ಗುರುತಿಸಲಾಗುವ ಕಕ್ಷೆಯಲ್ಲಿದ್ದ ನಮ್ಮದೇ ಉಪಗ್ರಹವನ್ನು ಭಾರತದ ಉಪಗ್ರಹ ವಿರೋಧಿ ಅಸ್ತ್ರ ನಾಶಮಾಡಿತು.

ಈ ಸಾಧನೆಗೆ ಕಾರಣವಾದ ಅಸ್ತ್ರವನ್ನು ಭಾರತದ ಡಿಆರ್‌ಡಿಓ (ಡಿಫೆನ್ಸ್ ರೀಸರ್ಚ್ ಆಂಡ್ ಡೆವೆಲಪ್‌ಮೆಂಟ್ ಆರ್ಗನೈಸೇಶನ್) ನಮ್ಮ ದೇಶದ ಅಂತರಿಕ್ಷ ಸಂಶೋಧನಾ ಸಂಸ್ಥೆ ಇಸ್ರೋ ಸಹಯೋಗದಲ್ಲಿ ರೂಪಿಸಿದೆ. 

(ಆಕರ: ಅಂತರಜಾಲದ ವಿವಿಧ ಮೂಲಗಳು)

ಕಾಮೆಂಟ್‌ಗಳಿಲ್ಲ:

badge