ಗುರುವಾರ, ಫೆಬ್ರವರಿ 28, 2019

ಈ ವಾರಾಂತ್ಯ, ಮೊಬೈಲ್ ಬಿಟ್ಟಿರಲು ಸಿದ್ಧರಿದ್ದೀರಾ?

ಟಿ. ಜಿ. ಶ್ರೀನಿಧಿ

ಹಲವು ದಶಕಗಳ ಹಿಂದೆ ಫೋನುಗಳೇ ಅಪರೂಪವಾಗಿದ್ದವು. ಆಮೇಲೆ, ಮೊಬೈಲ್ ಬಂದ ಹೊಸತರಲ್ಲೂ ಅಷ್ಟೇ. ಅಪರೂಪದ ಜೊತೆಗೆ ದುಬಾರಿಯೂ ಆಗಿದ್ದ ಅವನ್ನು ನಾವು ಹೆಚ್ಚಾಗಿ ಬಳಸುತ್ತಿರಲಿಲ್ಲ.

ತಂತ್ರಜ್ಞಾನ ಬೆಳೆದಂತೆ ಮೊಬೈಲುಗಳಲ್ಲಿ ಹೆಚ್ಚಿನ ಸೌಲಭ್ಯಗಳು ಬಂದವು, ಅವುಗಳ ಜನಪ್ರಿಯತೆಯೂ ಹೆಚ್ಚಾಯಿತು. ಅಷ್ಟೇ ಅಲ್ಲದೆ ಅವುಗಳನ್ನು ಬಳಸಲು ಮಾಡಬೇಕಾದ ವೆಚ್ಚ ಕೂಡ ಗಮನಾರ್ಹವಾಗಿ ಕಡಿಮೆಯಾಯಿತು.

ಇದರ ಪರಿಣಾಮ? ದಿನನಿತ್ಯ ನಾವೆಲ್ಲ ಮೊಬೈಲ್ ಬಳಸುವ ಅವಧಿಯಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವತನಕ ನಾವು ಪದೇಪದೇ ನಮ್ಮ ಮೊಬೈಲನ್ನು ನೋಡುತ್ತಿರುತ್ತೇವೆ. ನಿದ್ರೆಯ ನಡುವೆ ಎಚ್ಚರವಾದಾಗ ಕೂಡ ಒಮ್ಮೆ ಮೊಬೈಲಿನ ಪರದೆಯೊಳಗೆ ಇಣುಕಿನೋಡುವ ಜನರೂ ಇದ್ದಾರೆ.

ಮೊಬೈಲಿನ ಬಳಕೆ ಒಂದು ಚಟವಾಗಿ ಪರಿಣಮಿಸಿರುವುದಕ್ಕೆ ಕಾರಣವಾಗಿರುವುದು ಈ ಬೆಳವಣಿಗೆಗಳೇ.
ಮನೆಯಲ್ಲಿ, ಕಚೇರಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಾವು ಇತರರೊಡನೆ ವ್ಯವಹರಿಸುವುದಕ್ಕಿಂತ ಹೆಚ್ಚಾಗಿ ಮೊಬೈಲಿನಲ್ಲೇ ಮುಳುಗಿರುವುದು ಸಾಮಾನ್ಯವಾಗುತ್ತಿದೆ. ಮೊಬೈಲ್ ಫೋನ್ ಇಲ್ಲದ ಸನ್ನಿವೇಶವನ್ನು ಕಲ್ಪಿಸಿಕೊಳ್ಳುವುದು ಹಾಗಿರಲಿ, ಮೊಬೈಲಿನ ಬ್ಯಾಟರಿಯಲ್ಲಿ ಚಾರ್ಜ್ ಇಲ್ಲದಿದ್ದರೂ ಚಡಪಡಿಕೆ ಉಂಟಾಗುವ ಸನ್ನಿವೇಶ ಈಗಾಗಲೇ ಸೃಷ್ಟಿಯಾಗಿದೆ. ಈ ಅಭ್ಯಾಸಗಳೆಲ್ಲ ಸೇರಿ ಮೊಬೈಲ್ ಬಳಕೆದಾರರಲ್ಲಿ ಏಕಾಗ್ರತೆಯ ಕೊರತೆ - ಮಾನಸಿಕ ಒತ್ತಡ ಮುಂತಾದ ಗಂಭೀರ ಸಮಸ್ಯೆಗಳಿಗೂ ಕಾರಣವಾಗುತ್ತಿವೆ.

ಮಿತಿಮೀರಿದ ಮೊಬೈಲ್ ಬಳಕೆಯಿಂದ ನಮ್ಮ ಕೆಲಸದ ಗುಣಮಟ್ಟದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ಇತರ ಚಟುವಟಿಕೆಗಳ ನಡುವೆ ಮೊಬೈಲ್ ಪರದೆಯನ್ನು ಆಗಾಗ್ಗೆ ನೋಡುವುದು, ಅತಿ ಜರೂರಿನ ಕೆಲಸವಿದ್ದಾಗಲೂ ಅದನ್ನು ಬಿಟ್ಟು ಮೊಬೈಲಿನಲ್ಲಿ ಮುಳುಗುವುದೆಲ್ಲ ಇದಕ್ಕೆ ಕಾರಣವಾಗುವ ಅಂಶಗಳು. ಕರೆಯೋ ಸಂದೇಶವೋ ಬಂದಾಗ ಅತ್ತ ನೋಡುವುದು ಹಾಗಿರಲಿ, ಕೆಲಹೊತ್ತು ಮೊಬೈಲ್ ಸುಮ್ಮನಿದ್ದರೆ ಅದು ಸರಿಯಿದೆಯೋ ಇಲ್ಲವೋ ಎಂದು ಪರೀಕ್ಷಿಸಿ ನೋಡುವುದೂ ನಮ್ಮಲ್ಲಿ ಅನೇಕರಿಗೆ ಅಭ್ಯಾಸವಾಗಿಬಿಟ್ಟಿದೆ.

ಮೊಬೈಲ್ ಫೋನಿನ ಪರದೆಯ ಮೇಲೆ ಮೂಡುವ ಮಾಹಿತಿ ನಮಗೆ ಕಾಣುವುದು ಅದರಿಂದ ಹೊರಹೊಮ್ಮುವ ಬೆಳಕಿನ ಮೂಲಕ. ಈ ಬೆಳಕನ್ನು ಹೆಚ್ಚು ಹೊತ್ತು ನೋಡುವುದರಿಂದ ನಮ್ಮ ನಿದ್ದೆಗೆ ಅಡ್ಡಿಯಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ನಿದ್ದೆಮಾಡುವುದನ್ನು ಬಿಟ್ಟು ಮೊಬೈಲ್ ಹಿಡಿದು ಕುಳಿತಾಗ ಮಾತ್ರವೇ ಅಲ್ಲ, ಈ ದುಷ್ಪರಿಣಾಮ ಮೊಬೈಲನ್ನು ಪಕ್ಕಕ್ಕಿಟ್ಟು ಮಲಗಿದ ನಂತರವೂ ಇರುತ್ತದಂತೆ. ಮೊಬೈಲ್ ಪರದೆಯಿಂದ ಹೊರಹೊಮ್ಮುವ ಬೆಳಕು ನಮ್ಮ ದೇಹದಲ್ಲಿ ಉತ್ಪನ್ನವಾಗುವ ಮೆಲಟೋನಿನ್ ಎಂಬ ಹಾರ್ಮೋನಿನ ಪ್ರಮಾಣ ಕಡಿಮೆಯಾಗಲು ಕಾರಣವಾಗುತ್ತದೆ. ಹಾಗಾಗಿಯೇ ರಾತ್ರಿ ಬಹಳ ಹೊತ್ತು ಮೊಬೈಲ್ ನೋಡಿ ಆನಂತರ ಮಲಗಿದರೂ ನಮಗೆ ಸುಲಭವಾಗಿ ನಿದ್ದೆ ಹತ್ತುವುದಿಲ್ಲ ಎನ್ನುವುದು ವಿಜ್ಞಾನಿಗಳ ಅಭಿಮತ.

ಇಷ್ಟೆಲ್ಲ ಗೊತ್ತಿದ್ದ ಮೇಲೆ ಮೊಬೈಲ್ ಬಳಕೆಯನ್ನು ಕಡಿಮೆಮಾಡುವುದು ಹೇಗೆ? ಈ ಬಗ್ಗೆ ಜಾಗೃತಿ ಮೂಡಿಸುವ ಹಲವು ಆಂದೋಲನಗಳು ವಿಶ್ವದ ಹಲವು ಕಡೆಗಳಲ್ಲಿ ರೂಪುಗೊಂಡಿವೆ.

ಇಂಥದ್ದೊಂದು ಪ್ರಯತ್ನವೇ ಅಮೆರಿಕಾದಲ್ಲಿ ಪ್ರಾರಂಭವಾಗಿರುವ 'ಡೇ ಆಫ್ ಅನ್‌ಪ್ಲಗಿಂಗ್'ನ ಆಚರಣೆ. ವರ್ಷಕ್ಕೊಮ್ಮೆ, ಇಪ್ಪತ್ತನಾಲ್ಕು ಗಂಟೆಗಳ ಕಾಲ, ಮೊಬೈಲ್ ಫೋನ್ ಸೇರಿದಂತೆ ತಂತ್ರಜ್ಞಾನದ ಸಾಧನಗಳಿಂದ ದೂರವಿರುವಂತೆ ಬಳಕೆದಾರರನ್ನು ಪ್ರೋತ್ಸಾಹಿಸುವುದು ಈ ದಿನಾಚರಣೆಯ ಉದ್ದೇಶ. "ಮೊಬೈಲನ್ನು ಒಂದಷ್ಟು ಹೊತ್ತು ಪಕ್ಕಕ್ಕಿಟ್ಟು ಮನೆಯವರೊಡನೆ ಹರಟೆಹೊಡೆಯುವುದು, ಮಿತ್ರರೊಡನೆ ಹೊರಗೆ ಹೋಗುವುದು, ಮಕ್ಕಳೊಡನೆ ಆಟವಾಡುವುದೆಲ್ಲ ಬೇರೆಯದೇ ಅನುಭವ ನೀಡುತ್ತದೆ; ಅದನ್ನು ಒಂದು ದಿನವಾದರೂ ಪ್ರಯತ್ನಿಸಿ" ಎಂದು ಇದರ ಆಯೋಜಕರು ಹೇಳುತ್ತಾರೆ. ಮಾರ್ಚ್ ತಿಂಗಳ ಮೊದಲ ವಾರಾಂತ್ಯದಲ್ಲಿ ಆಚರಿಸಲಾಗುವ ಈ ಮೊಬೈಲ್ ರಹಿತ ದಿನಾಚರಣೆ ಇದೇ ಮಾರ್ಚ್ ೧ರ ಸಂಜೆಯಿಂದ ಮಾರ್ಚ್ ೨ರ ಸಂಜೆಯವರೆಗೆ (ಸೂರ್ಯಾಸ್ತದಿಂದ ಸೂರ್ಯಾಸ್ತದವರೆಗೆ) ನಡೆಯುತ್ತಿದೆ.


ಮೊಬೈಲ್ ಫೋನಿನಿಂದ ದೂರವಿರುವುದನ್ನು ಸುಲಭವಾಗಿಸಲು, ಅದನ್ನು ಕಟ್ಟಿಡುವಂತಹ ಬಟ್ಟೆಯ ಚೀಲಗಳನ್ನೂ ಈ ಸಂದರ್ಭದಲ್ಲಿ ವಿತರಿಸಲಾಗುತ್ತದಂತೆ! ಮೊಬೈಲ್ ಫೋನ್ ಸ್ಲೀಪಿಂಗ್ ಬ್ಯಾಗ್ ಎಂಬ ಹೆಸರಿನ ಇಂತಹ ೭೫,೦೦೦ ಚೀಲಗಳನ್ನು ಇದುವರೆಗೆ ವಿತರಿಸಲಾಗಿದೆ ಎಂದು ಡೇ ಆಫ್ ಅನ್‌ಪ್ಲಗಿಂಗ್ ಜಾಲತಾಣ (nationaldayofunplugging.com) ಹೇಳುತ್ತದೆ.

ಪ್ರತಿವರ್ಷವೂ ನೂರೆಂಟು ದಿನಗಳನ್ನು ಆಚರಿಸುವ ನಾವು ಈ ದಿನಾಚರಣೆಯನ್ನೂ ಬೆಂಬಲಿಸಿದರೆ ಹಾಗಾದರೂ ಒಂದಷ್ಟು ಹೊತ್ತು ಮೊಬೈಲಿನಿಂದ ದೂರವಿರಬಹುದು, ಹೊರಗಿನ ಜಗತ್ತನ್ನು ಮತ್ತೊಮ್ಮೆ ಹೊಸದಾಗಿ ನೋಡಬಹುದು. ಪ್ರಯತ್ನಿಸಿ ನೋಡೋಣವೇ?

ಫೆಬ್ರುವರಿ ೨೭, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge