ಬುಧವಾರ, ಡಿಸೆಂಬರ್ 19, 2018

ಕಂಪ್ಯೂಟರ್ ಮೌಸ್‌ಗೆ ಐವತ್ತು ವರ್ಷ!

ಟಿ. ಜಿ. ಶ್ರೀನಿಧಿ


ಮಾಹಿತಿ ತಂತ್ರಜ್ಞಾನ ಲೋಕದಲ್ಲಿ ಬದಲಾವಣೆಯದ್ದೇ ಭರಾಟೆ. ಇಲ್ಲಿ ಹೊಸ ಆವಿಷ್ಕಾರಗಳು ದಿನಕ್ಕೊಂದರಂತೆ ಸುದ್ದಿಯಾಗುತ್ತಿರುತ್ತವೆ, ಹಳೆಯವು ಸದ್ದಿಲ್ಲದೆ ಮೂಲೆಗುಂಪಾಗುತ್ತಿರುತ್ತವೆ. ಈ ಭರಾಟೆಯ ನಡುವೆ ಎಲ್ಲೋ ಕೆಲವು ಆವಿಷ್ಕಾರಗಳು ಮಾತ್ರ ಸುದೀರ್ಘಕಾಲ ಉಳಿದುಕೊಳ್ಳುತ್ತವೆ, ನಮ್ಮ ಬದುಕಿನ ಮೇಲೆ ಪ್ರಭಾವ ಬೀರುವುದನ್ನು ಮುಂದುವರೆಸುತ್ತವೆ.

ಇಂತಹ ಆವಿಷ್ಕಾರಗಳಲ್ಲಿ ಕಂಪ್ಯೂಟರ್ ಮೌಸ್ ಕೂಡ ಒಂದು. ಕಂಪ್ಯೂಟರುಗಳ ಜೊತೆಯಲ್ಲೇ ಬೆಳೆದು-ಉಳಿದು ಬಂದಿರುವ ಈ ಸಾಧನದ ಮೊದಲ ಸಾರ್ವಜನಿಕ ಪ್ರದರ್ಶನ ನಡೆದು ಇದೀಗ ಐವತ್ತು ವರ್ಷ ಪೂರ್ತಿಯಾಗಿದೆ.

ಕಂಪ್ಯೂಟರ್ ಬಳಕೆ ಎಂದಾಕ್ಷಣ ನಮಗೆಲ್ಲ ಪರದೆಯ ಮೇಲಿನ ಚಿತ್ರಗಳೂ ಅದರ ಮೇಲೆ ನಾವು ಮಾಡುವ ಕ್ಲಿಕ್ಕುಗಳೂ ನೆನಪಿಗೆ ಬರುತ್ತವೆ. ಆದರೆ ಹಿಂದಿನ ಕಂಪ್ಯೂಟರುಗಳು ಹೀಗಿರಲಿಲ್ಲ. ಅವಕ್ಕೆ ಏನು ಆದೇಶ ಕೊಡಬೇಕಾದರೂ ಅದನ್ನೆಲ್ಲ ಟೈಪಿಸಲೇಬೇಕಾಗಿತ್ತು. ಇಂತಹ ಹತ್ತಾರು ಆದೇಶಗಳನ್ನು ನೆನಪಿನಲ್ಲೂ ಇಟ್ಟುಕೊಂಡಿರಬೇಕಾದ್ದು ಆಗ ಅನಿವಾರ್ಯವಾಗಿತ್ತು.

ಈ ಪರಿಸ್ಥಿತಿಯನ್ನು ಬದಲಿಸಿದ್ದು, ನಮ್ಮ ಕೆಲಸವನ್ನು ಸುಲಭಗೊಳಿಸಿದ್ದು ಮೌಸಿನ ಹೆಚ್ಚುಗಾರಿಕೆ. ಅಕ್ಷರಗಳನ್ನು ಟೈಪಿಸುವ ಬದಲು ಪರದೆಯ ಮೇಲೆ ಕ್ಲಿಕ್ ಮಾಡಿ ಕಂಪ್ಯೂಟರಿಗೆ ಆದೇಶ ನೀಡುವುದನ್ನು ಅದು ಸಾಧ್ಯವಾಗಿಸಿತು (ಇಂತಹ ವ್ಯವಸ್ಥೆಗಳನ್ನು ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ ಅಥವಾ ಜಿಯುಐ ಎಂದು ಗುರುತಿಸಲಾಗುತ್ತದೆ).

ಮೌಸ್ ವಿನ್ಯಾಸ ಹಾಗೂ ಅದರ ಕಾರ್ಯಾಚರಣೆ ಎರಡೂ ಬಹಳ ಸರಳ ಎನ್ನುವುದು ಕಂಪ್ಯೂಟರ್ ಬಳಕೆದಾರರೆಲ್ಲರ ಗಮನಕ್ಕೂ ಬಂದಿರುತ್ತದೆ. ಹಾಗೆ ನೋಡಿದರೆ ಇಷ್ಟೆಲ್ಲ ಜನಪ್ರಿಯತೆಗೆ ಕಾರಣವಾದದ್ದೂ ಅದರ ಸರಳತೆಯೇ. ಈ ಸರಳ ಸಾಧನದ ವಿನ್ಯಾಸವನ್ನು ಮೊತ್ತಮೊದಲ ಬಾರಿಗೆ ರೂಪಿಸಿದ್ದು ಡಗ್ಲಸ್ ಎಂಗೆಲ್‌ಬರ್ಟ್ ಎಂಬ ತಂತ್ರಜ್ಞ.

ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಸಂದರ್ಭದಲ್ಲಿ ಅದರ ಪ್ರಾತ್ಯಕ್ಷಿಕೆಯನ್ನು (ಡೆಮಾನ್‌ಸ್ಟ್ರೇಶನ್ ಅಥವಾ ಡೆಮೋ) ಏರ್ಪಡಿಸುವುದು ಸಾಮಾನ್ಯ ಅಭ್ಯಾಸ ತಾನೇ? ಇಂದಿಗೆ ಐವತ್ತು ವರ್ಷಗಳ ಹಿಂದೆ, ೧೯೬೮ರ ಡಿಸೆಂಬರ್ ೯ರಂದು ಏರ್ಪಡಿಸಲಾಗಿದ್ದ ಇಂಥದ್ದೇ ಒಂದು ಪ್ರಾತ್ಯಕ್ಷಿಕೆಯಲ್ಲಿ ಡಗ್ಲಸ್ ಎಂಗೆಲ್‌ಬರ್ಟ್ ಕಂಪ್ಯೂಟರ್ ಮೌಸನ್ನು ಮೊತ್ತಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರದರ್ಶಿಸಿದರು.

ಕಂಪ್ಯೂಟರ್ ಮೌಸ್ ಒಂದೇ ಅಲ್ಲ, ಇಂದು ಮಾಹಿತಿ ತಂತ್ರಜ್ಞಾನ ಲೋಕದಲ್ಲಿ ಸಾಮಾನ್ಯವಾಗಿರುವ ಜಿಯುಐ, ಹೈಪರ್‌ಲಿಂಕ್, ವರ್ಡ್ ಪ್ರಾಸೆಸಿಂಗ್, ವೀಡಿಯೋ ಕಾನ್ಫರೆನ್ಸಿಂಗ್ ಮುಂತಾದ ಅನೇಕ ಪರಿಕಲ್ಪನೆಗಳನ್ನು ಅಂದು ಅವರು ಪ್ರಸ್ತುತಪಡಿಸಿದರು. ಹೀಗಾಗಿಯೇ ಅರವತ್ತೆಂಟರ ಆ ಪ್ರದರ್ಶನವನ್ನು, ಇಂದಿಗೂ, ಮದರ್ ಆಫ್ ಆಲ್ ಡೆಮೋಸ್ ಎಂದು ಗುರುತಿಸಲಾಗುತ್ತದೆ.

ಅಂದಹಾಗೆ ಮೌಸನ್ನು ಮೊದಲಿಗೆ 'ಎಕ್ಸ್-ವೈ ಪೊಸಿಶನ್ ಇಂಡಿಕೇಟರ್ ಫಾರ್ ಎ ಡಿಸ್‌ಪ್ಲೇ ಸಿಸ್ಟಮ್' ಎಂದು ಕರೆಯಲಾಗಿತ್ತು. ೧೯೬೮ಕ್ಕೆ ಮೊದಲು, ವಿನ್ಯಾಸದ ಪ್ರಕ್ರಿಯೆ ಜಾರಿಯಲ್ಲಿದ್ದ ಸಂದರ್ಭದಲ್ಲಿ, ಎಂಗೆಲ್‌ಬರ್ಟ್‌ರ ಸಹೋದ್ಯೋಗಿ ಬಿಲ್ ಇಂಗ್ಲಿಷ್ - ಬಹುಶಃ ಆಕಾರದಿಂದ ಪ್ರೇರಿತರಾಗಿಯೋ ಏನೋ - ತಮ್ಮ ಪ್ರಬಂಧವೊಂದರಲ್ಲಿ ಈ ಸಾಧನವನ್ನು ಮೌಸ್ ಎಂದು ಕರೆದರು. ಅಧಿಕೃತವಾಗಿ ನಾಮಕರಣವಾಗದಿದ್ದರೂ ಮುಂದೆ ಇದೇ ಹೆಸರು ಜನಪ್ರಿಯವಾಗಿ ಇಂದಿನವರೆಗೂ ಉಳಿದುಕೊಂಡು ಬಂದಿದೆ.

ಎಂ‌ಗೆಲ್‌ಬರ್ಟ್ ತಮ್ಮ ಪ್ರಾತ್ಯಕ್ಷಿಕೆಯಲ್ಲಿ ತೋರಿಸಿದರಲ್ಲ, ಮೌಸ್‌ನ ಆ ಮಾದರಿಯನ್ನು ಮರ ಹಾಗೂ ಲೋಹ ಬಳಸಿ ತಯಾರಿಸಿದ್ದು ಇದೇ ಬಿಲ್ ಇಂಗ್ಲಿಷ್. ತನ್ನ ಮೂಲ ಹೆಸರಿಗೆ ಅನುಗುಣವಾಗಿ ಪರದೆಯ ಯಾವ ಭಾಗವನ್ನು ಬೇಕಾದರೂ ತಲುಪಬಲ್ಲದಾಗಿದ್ದ ಈ ಸಾಧನದ ಕೆಳಬದಿಯಲ್ಲಿ ಲೋಹದ ಎರಡು ಚಕ್ರಗಳಿದ್ದವು. ಈ ಪೈಕಿ ಒಂದು ಚಕ್ರ ಮುಂದಕ್ಕೂ ಹಿಂದಕ್ಕೂ ಓಡಾಡಲು ಸಹಾಯಮಾಡಿದರೆ ಎರಡನೇ ಚಕ್ರ ಎಡಕ್ಕೂ ಬಲಕ್ಕೂ ಚಲಿಸಲು ಸಹಾಯ ಮಾಡುತ್ತಿತ್ತು. ಅಪೇಕ್ಷಿತ ಜಾಗ ತಲುಪಿದ ಮೇಲೆ ಕ್ಲಿಕ್ ಮಾಡಬೇಕಲ್ಲ, ಮೇಲುಗಡೆ ಅದಕ್ಕಾಗಿ ಒಂದು ಗುಂಡಿಯೂ ಇತ್ತು.


ಅಂದಿನಿಂದ ಇಂದಿನವರೆಗೆ ಐದು ದಶಕಗಳ ಅವಧಿಯಲ್ಲಿ ಮೌಸ್ ಕಾರ್ಯಾಚರಿಸುವ ರೀತಿ ಹಾಗೆಯೇ ಉಳಿದಿಕೊಂಡಿದೆಯಾದರೂ ಅದರ ವಿನ್ಯಾಸ ಅಷ್ಟಿಷ್ಟು ಬದಲಾವಣೆ ಕಂಡಿದೆ. ಮರದ ಬದಲು ಪ್ಲಾಸ್ಟಿಕ್ ಬಂದಹಾಗೆಯೇ ಲೋಹದ ಚಕ್ರಗಳ ಜಾಗಕ್ಕೆ ಮೊದಲು ಬಂದಿದ್ದು ಗೋಳಾಕಾರದ ಪುಟಾಣಿ ಚೆಂಡು. ಇದರಿಂದಾಗಿ ಮೌಸನ್ನು ಯಾವ ದಿಕ್ಕಿಗೆ ಬೇಕಾದರೂ ಓಡಿಸುವುದು ಸರಾಗವಾಯಿತು. ಚೆಂಡಿನ ಓಡಾಟವನ್ನು ಸರಾಗವಾಗಿಸಲು ಸಪಾಟು ಮೇಲ್ಮೈ ಇರುವ ಮೌಸ್ ಪ್ಯಾಡ್ ಬಳಕೆಯೂ ಶುರುವಾಯಿತು.

ಮೌಸ್ ಒಳಗಿನ ಚೆಂಡು ಮೇಜಿನ ಮೇಲೆ ಅತ್ತಿತ್ತ ಓಡಾಡಿದಾಗ ಅಲ್ಲಿದ್ದ ಧೂಳು-ಕಸವೆಲ್ಲ ಮೌಸಿನೊಳಗೂ ಸೇರಿಕೊಂಡು ಫಜೀತಿಯಾಗುತ್ತಿದ್ದದ್ದು ಹದಿನೈದು-ಇಪ್ಪತ್ತು ವರ್ಷಗಳ ಹಿಂದೆ ಕಂಪ್ಯೂಟರ್ ಬಳಸುತ್ತಿದ್ದವರಿಗೆ ನೆನಪಿರಬಹುದು. ಈ ಅನನುಕೂಲವನ್ನು ತಪ್ಪಿಸಲು ಚೆಂಡಿನ ಜಾಗದಲ್ಲಿ ಎಲ್‍ಇಡಿ ಬೆಳಕನ್ನು ಬಳಸಿ ಆಪ್ಟಿಕಲ್ ಮೌಸನ್ನು ರೂಪಿಸಲಾಯಿತು. ಎಡಕ್ಕೆ-ಬಲಕ್ಕೆ ಕ್ಲಿಕ್ ಮಾಡಬಲ್ಲ ಗುಂಡಿಗಳು ಹೇಗೂ ಇದ್ದವಲ್ಲ, ದೊಡ್ಡ ಕಡತಗಳಲ್ಲಿ ಮೇಲೂ ಕೆಳಗೂ ಓಡಾಡಲು ನೆರವಾಗುವ ಸ್ಕ್ರಾಲಿಂಗ್ ಗಾಲಿಯೂ ಅವುಗಳೊಡನೆ ಸೇರಿಕೊಂಡಿತು. ಮೌಸ್ ಜೊತೆಗಿರುತ್ತಿದ್ದ ಬಾಲದಂತಹ ತಂತಿ ಮಾಯವಾಗಿ ನಿಸ್ತಂತು (ವೈರ್‌ಲೆಸ್) ಮೌಸ್‌ಗಳೂ ಬಂದವು.

ಇಷ್ಟೆಲ್ಲ ಬದಲಾವಣೆಗಳ ಜೊತೆಗೆ ಮೌಸ್ ಜನಪ್ರಿಯತೆಯೂ ಹೆಚ್ಚುತ್ತಲೇ ಹೋಯಿತು. ಮೌಸ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಲಾಜಿಟೆಕ್ ಸಂಸ್ಥೆಯೊಂದೇ ೨೦೦೮ರ ವೇಳೆಗೆ ಒಟ್ಟು ನೂರು ಕೋಟಿ ಮೌಸ್‌ಗಳನ್ನು ಉತ್ಪಾದಿಸಿತ್ತು ಎಂದರೆ ಈ ಜನಪ್ರಿಯತೆಯ ಪ್ರಮಾಣವನ್ನು ನಾವು ಅಂದಾಜಿಸಬಹುದು.

ಮೌಸ್ ಇಷ್ಟೆಲ್ಲ ಜನಪ್ರಿಯತೆ ಗಳಿಸಿಕೊಂಡಿದೆ, ಐದು ದಶಕಗಳಾದರೂ ಇನ್ನೂ ಚಾಲ್ತಿಯಲ್ಲಿದೆ ನಿಜ. ಆದರೆ ಅದನ್ನು ರೂಪಿಸಿದ ತಂತ್ರಜ್ಞರಿಗೆ ತಮ್ಮ ಆವಿಷ್ಕಾರದಿಂದ ಯಾವುದೇ ಹಣಕಾಸಿನ ಲಾಭ ಆಗಲಿಲ್ಲ. ಎಂಗೆಲ್‌ಬರ್ಟ್‌ರ ಸಂಶೋಧನೆಗೆ ಸಿಕ್ಕ ಪೇಟೆಂಟಿನ ಮಾಲೀಕತ್ವ ಅವರು ಕೆಲಸಮಾಡುತ್ತಿದ್ದ ಸಂಸ್ಥೆಯದಾಗಿತ್ತು. ಆ ಪೇಟೆಂಟ್ ಚಾಲ್ತಿಯಲ್ಲಿದ್ದ ಅವಧಿಯಲ್ಲಿ ಮೌಸ್ ಜನಪ್ರಿಯತೆ ಅಷ್ಟೇನೂ ಹೆಚ್ಚಿರಲಿಲ್ಲವಾದ್ದರಿಂದ ಆ ಸಂಸ್ಥೆಗೆ ಸಿಕ್ಕ ಲಾಭವೂ ಅಷ್ಟರಲ್ಲೇ ಇತ್ತು.

ಅಂದಹಾಗೆ ಮೌಸ್ ಜೊತೆಗೆ ಮಾರುಕಟ್ಟೆಗೆ ಬಂದ ಮೊದಲ ಕಂಪ್ಯೂಟರ್ ಎಂಬ ಹೆಗ್ಗಳಿಕೆ ಜೆರಾಕ್ಸ್ ಸಂಸ್ಥೆಯ 'ಜೆರಾಕ್ಸ್ ಸ್ಟಾರ್' ಎಂಬ ಕಂಪ್ಯೂಟರಿಗೆ ಸಲ್ಲುತ್ತದೆ. ಈ ಮಾದರಿಯ ಪರಿಚಯವಾದದ್ದು ೧೯೮೧ರಲ್ಲಿ. ನಂತರದ ಒಂದೆರಡು ವರ್ಷಗಳಲ್ಲಿ ಇನ್ನೂ ಕೆಲ ಮಾದರಿಯ ಕಂಪ್ಯೂಟರುಗಳು ಮೌಸ್ ಬಳಸಲು ಪ್ರಾರಂಭಿಸಿದವಾದರೂ ಅವು ಯಾವುದಕ್ಕೂ ಹೆಚ್ಚು ಜನಪ್ರಿಯತೆ ದೊರಕಲಿಲ್ಲ. ಈ ಪರಿಸ್ಥಿತಿ ಬದಲಾಗಿ ಮೌಸ್ ಜನಪ್ರಿಯತೆ ಏರಲು ಶುರುವಾದದ್ದು ೧೯೮೪ರಲ್ಲಿ ಮಾರುಕಟ್ಟೆಗೆ ಬಂದ ಆಪಲ್ ಸಂಸ್ಥೆಯ ಮ್ಯಾಕಿಂಟೋಶ್ ಕಂಪ್ಯೂಟರಿನ ಜೊತೆಗೆ. ಸರಿಸುಮಾರು ಅದೇ ಸಮಯಕ್ಕೆ ಜಿಯುಐ ಬಳಸುವ ಕಾರ್ಯಾಚರಣ ವ್ಯವಸ್ಥೆ ಹಾಗೂ ತಂತ್ರಾಂಶಗಳ ಬಳಕೆಯೂ ಪ್ರಾರಂಭವಾಗಿ ಮೌಸ್ ಜನಪ್ರಿಯತೆ ಇನ್ನಷ್ಟು ಹೆಚ್ಚಲು ಕಾರಣವಾಯಿತು.

ಡೆಸ್ಕ್‌ಟಾಪ್ ಕಂಪ್ಯೂಟರುಗಳಲ್ಲಿ ಮೌಸ್ ಬಳಕೆ ಅನಿವಾರ್ಯವಾಗಿತ್ತು ಸರಿ. ಆದರೆ ಲ್ಯಾಪ್‌ಟಾಪ್‌ಗಳಲ್ಲಿ ಸ್ಪರ್ಶಸಂವೇದಿ ಟಚ್‌ಪ್ಯಾಡ್ ಬಂದಮೇಲೆ ಮೌಸನ್ನೇ ಬಳಸಬೇಕಾದ ಅನಿವಾರ್ಯತೆ ಹೋಯಿತು. ಹೀಗಾಗಿ ಮೌಸ್ ಜನಪ್ರಿಯತೆ ಇನ್ನುಮುಂದೆ ಕಡಿಮೆಯಾಗಬಹುದು ಎಂಬ ಅಭಿಪ್ರಾಯವೂ ಅಲ್ಲಲ್ಲಿ ಕೇಳಿಬಂದದ್ದುಂಟು. ಅಂತಿಂಥವರೆಲ್ಲ ಏಕೆ, ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಮೌಸ್ ಬಳಕೆ ನಿಂತೇಹೋಗಲಿದೆ ಎಂದು ಪ್ರತಿಷ್ಠಿತ ಗಾರ್ಟ್‌ನರ್ ಸಂಸ್ಥೆಯೇ ಹೇಳಿತ್ತು.

ಅದು ಹಾಗೆ ಹೇಳಿ ಹತ್ತು ವರ್ಷಗಳೇ ಆಗಿದ್ದರೂ ಕಂಪ್ಯೂಟರ್ ಮೌಸ್ ಬಳಕೆ ಮಾತ್ರ ನಿಲ್ಲುವಂತೇನೂ ಕಾಣುತ್ತಿಲ್ಲ. ಚಹಾದ ಜೋಡಿ ಚೂಡಾ ಇದ್ದಹಾಗೆ ಕಂಪ್ಯೂಟರಿಗೆ ಮೌಸ್ ಇನ್ನೂ ಉತ್ತಮ ಜೋಡಿಯಾಗಿಯೇ ಮುಂದುವರೆದಿದೆ. ಮಿಕಿಮೌಸ್‌ನಂತೆ ಮಾತನಾಡಲು ಬಂದಿದ್ದರೆ, ಕಂಪ್ಯೂಟರನ್ನು ಬಿಟ್ಟು ನಾನೆಲ್ಲೂ ಹೋಗುವುದಿಲ್ಲ ಎಂದು ಈ ಇಲಿಯೂ ಹೇಳುತ್ತಿತ್ತೋ ಏನೋ!

ಡಿಸೆಂಬರ್ ೯, ೨೦೧೮ರ ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge