ಗುರುವಾರ, ಡಿಸೆಂಬರ್ 27, 2018

ನಿಮ್ಮ ಫೋನಿನಲ್ಲಿ ಈ ಆಪ್‌ ಇದೆಯೇ?

ಇಜ್ಞಾನ ವಿಶೇಷ


ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಆಪ್‌ಗಳಿಗೆ ವಿಶೇಷ ಸ್ಥಾನ. ನಮ್ಮ ಗಮನಸೆಳೆಯಲು ಸ್ಪರ್ಧಿಸುವ ಅಸಂಖ್ಯ ಆಪ್‌ಗಳ ಪೈಕಿ ಕೆಲವೊಂದನ್ನು ಆಗೊಮ್ಮೆ ಈಗೊಮ್ಮೆ ಪರಿಚಯಿಸುವುದು ಇಜ್ಞಾನದ ಪ್ರಯತ್ನ. ನಮ್ಮ ಪ್ರಯತ್ನ ನಿಮಗೆ ಇಷ್ಟವಾಯಿತೇ? ಕಮೆಂಟ್ ಮಾಡಿ ತಿಳಿಸಿ.

ಮೊಬೈಲಿನಲ್ಲೂ ಕೈಬರಹ: ಸಂದೇಶ ಕಳಿಸಲು ಮೊಬೈಲ್ ಫೋನಿಗೆ ಮಾಹಿತಿಯನ್ನು ಊಡಿಸಬೇಕೆಂದರೆ ಪಠ್ಯವನ್ನು ಟೈಪ್ ಮಾಡುವುದೊಂದೇ ಮಾರ್ಗವಲ್ಲ. ನಮ್ಮ ಹಸ್ತಾಕ್ಷರವನ್ನೂ ಅವುಗಳಿಗೆ ಅರ್ಥಮಾಡಿಸುವುದು ಸಾಧ್ಯ. ಈ ಕೆಲಸಕ್ಕೆ ಬಳಕೆಯಾಗುವುದು 'ಹ್ಯಾಂಡ್‌ರೈಟಿಂಗ್ ರೆಕಗ್ನಿಶನ್', ಅರ್ಥಾತ್ ಕೈಬರಹವನ್ನು ಗುರುತಿಸುವ ತಂತ್ರಜ್ಞಾನ. ಸ್ಮಾರ್ಟ್‌ಫೋನಿನ ಟಚ್‌ಸ್ಕ್ರೀನ್ ಪರದೆಯನ್ನೇ ಸ್ಲೇಟಿನಂತೆ ಬಳಸಿ ಬೆರಳಿನಿಂದ ನಮ್ಮ ಸಂದೇಶ ಬರೆದರೆ, ಆ ಅಕ್ಷರಗಳನ್ನೆಲ್ಲ ಗ್ರಹಿಸಿ ಡಿಜಿಟಲ್ ರೂಪಕ್ಕೆ ತರಲು ಈ ತಂತ್ರಜ್ಞಾನ ನೆರವಾಗುತ್ತದೆ. ಆಂಡ್ರಾಯ್ಡ್ ಫೋನುಗಳಲ್ಲಿ ಇದನ್ನು ಸಾಧ್ಯವಾಗಿಸಲು ಬಳಸಬಹುದಾದ ಆಪ್ ಹೆಸರೇ 'ಗೂಗಲ್ ಹ್ಯಾಂಡ್‌ರೈಟಿಂಗ್ ಇನ್‌ಪುಟ್'. ಇದು ಕನ್ನಡದ ಅಕ್ಷರಗಳನ್ನೂ ಗುರುತಿಸುತ್ತದೆ.

ಗೂಗಲ್ ಪ್ಲೇಸ್ಟೋರ್ ಕೊಂಡಿ: tinyurl.com/kaibaraha

ಮೆಸ್ ಇಲ್ಲದ ಎಸ್ಸೆಮ್ಮೆಸ್: ಆಪ್ತರೊಡನೆ ಸಂವಹನಕ್ಕಾಗಿ ಎಸ್ಸೆಮ್ಮೆಸ್ ಬಳಕೆಯನ್ನು ನಾವೆಲ್ಲ ಕಡಿಮೆಮಾಡಿದ್ದೇವೆ, ನಿಜ. ಆದರೆ ಬ್ಯಾಂಕು, ಆನ್‌ಲೈನ್ ಅಂಗಡಿ, ಮೊಬೈಲ್ ಸೇವೆಗಳೆಲ್ಲ ನಮಗೆ ಈಗಲೂ ಸಾಕಷ್ಟು ಎಸ್ಸೆಮ್ಮೆಸ್‌ಗಳನ್ನು ಕಳಿಸುತ್ತವೆ. ಬಹಳಷ್ಟು ವಹಿವಾಟುಗಳಿಗೆ ಬೇಕಾದ ಓಟಿಪಿ ಬರುವುದೂ ಎಸ್ಸೆಮ್ಮೆಸ್ ಮೂಲಕವೇ. ಇಷ್ಟೆಲ್ಲ ಎಸ್ಸೆಮ್ಮೆಸ್‌ಗಳನ್ನು ಸುಲಭವಾಗಿ ನಿರ್ವಹಿಸಲು ನೆರವಾಗುವುದು ಆಂಡ್ರಾಯ್ಡ್ ಫೋನುಗಳಿಗೆ ಮೈಕ್ರೋಸಾಫ್ಟ್ ಸಂಸ್ಥೆ ರೂಪಿಸಿರುವ 'ಎಸ್ಸೆಮ್ಮೆಸ್ ಆರ್ಗನೈಸರ್' ಎಂಬ ಆಪ್‌‌ನ ವೈಶಿಷ್ಟ್ಯ. ಬರುವ ಸಂದೇಶಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಪ್ರದರ್ಶಿಸುವ ಈ ಆಪ್ ಅವನ್ನು ವಹಿವಾಟಿಗೆ ಸಂಬಂಧಿಸಿದವು, ಜಾಹೀರಾತುಗಳು ಎಂದೆಲ್ಲ ವಿಂಗಡಿಸಿಕೊಡುತ್ತದೆ. ಓಟಿಪಿ ಸಂದೇಶಗಳಿಂದ ಸಂಖ್ಯೆಯನ್ನಷ್ಟೇ ತೆಗೆದು ಪ್ರತ್ಯೇಕವಾಗಿ ಪ್ರದರ್ಶಿಸುವ, ಬಿಲ್ಲುಗಳನ್ನು ಸಕಾಲಕ್ಕೆ ಪಾವತಿಸಲು ನೆನಪಿಸುವ ಸೌಲಭ್ಯಗಳೂ ಇದರಲ್ಲಿವೆ.

ಗೂಗಲ್ ಪ್ಲೇಸ್ಟೋರ್ ಕೊಂಡಿ: tinyurl.com/SMSOrganizer

ಕಡತ ನಿರ್ವಹಣೆಗೆ ಆಪ್ ನೆರವು: ಮೊಬೈಲ್ ಫೋನುಗಳಲ್ಲಿ ಕಡತಗಳನ್ನು ಉಳಿಸಿಡಲು ಸ್ಥಳಾವಕಾಶ ಎಷ್ಟಿದ್ದರೂ ಸಾಲುವುದಿಲ್ಲ. ಹೊಸ ಕಡತಗಳು, ಆಪ್‌ಗಳು ನಮ್ಮ ಫೋನಿನಲ್ಲಿ ಸೇರುತ್ತಾ ಹೋದಂತೆ ಅವನ್ನೆಲ್ಲ ಸರಿಯಾಗಿ ನಿಭಾಯಿಸುವುದು, ಬೇಡದ್ದನ್ನು ಆಗಿಂದಾಗ್ಗೆ ಅಳಿಸಿಹಾಕುವುದು ತಲೆನೋವಾಗಿ ಪರಿಣಮಿಸುತ್ತದೆ. ಈ ಸಮಸ್ಯೆಗೆ ಸುಲಭ ಪರಿಹಾರ ನೀಡುವುದು ಗೂಗಲ್‌ನ 'ಫೈಲ್ಸ್' ಆಪ್. ದೊಡ್ಡ ಕಡತಗಳನ್ನು, ಬಳಸದ ಆಪ್‌ಗಳನ್ನು, ನಿಷ್ಪ್ರಯೋಜಕ ಮಾಹಿತಿಯನ್ನು ಗುರುತಿಸಿ ಅಳಿಸಲು ಇದು ನೆರವಾಗುತ್ತದೆ. ಒಂದೇ ಕಡತದ ಒಂದಕ್ಕಿಂತ ಹೆಚ್ಚು ಪ್ರತಿಗಳು ನಮ್ಮ ಫೋನಿನಲ್ಲಿದ್ದರೆ (ಉದಾ: ಒಂದೇ ವಾಟ್ಸ್‌ಆಪ್ ಫಾರ್‌ವರ್ಡ್ ಬೇರೆಬೇರೆಯವರಿಂದ ಬಂದಿದ್ದು) ಈ ಆಪ್ ಸಹಾಯದಿಂದ ಅದನ್ನೂ ಗುರುತಿಸಿ ಅಳಿಸುವುದು ಸಾಧ್ಯ. ಕಡತಗಳನ್ನು ಇತರರೊಡನೆ ಕ್ಷಿಪ್ರವಾಗಿ ಹಂಚಿಕೊಳ್ಳುವ ಸೌಲಭ್ಯವೂ ಇದರಲ್ಲಿದೆ. 

ಗೂಗಲ್ ಪ್ಲೇಸ್ಟೋರ್ ಕೊಂಡಿ: tinyurl.com/filesbygoogle

1 ಕಾಮೆಂಟ್‌:

ravish sharma ಹೇಳಿದರು...

ಸರ್ ಉಪಯುಕ್ತ ಮಾಹಿತಿ.ಧನ್ಯವಾದಗಳು

badge