ಬುಧವಾರ, ಡಿಸೆಂಬರ್ 12, 2018

ಎಲ್ಲ ಸಹಾಯಕ್ಕೂ ಒಂದೇ ಸಂಖ್ಯೆ - ೧೧೨

ಇಜ್ಞಾನ ವಿಶೇಷ 

ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿಗೆ ಥಟ್ಟನೆ ಕರೆಮಾಡುವ ಸೌಲಭ್ಯ ಬಹುತೇಕ ಮೊಬೈಲ್ ಫೋನುಗಳಲ್ಲಿರುತ್ತದೆ. ಫೋನು ಲಾಕ್ ಆಗಿದ್ದಾಗ, ಕರೆನ್ಸಿ ಇಲ್ಲದಿದ್ದಾಗ, ಕಡೆಗೆ ಸಿಮ್ ಇಲ್ಲದಿದ್ದಾಗಲೂ ಇಂತಹ ಕರೆಗಳನ್ನು ಮಾಡಬಹುದು ಎನ್ನುವುದು ವಿಶೇಷ. ಈ ಸೌಲಭ್ಯವಿರುವ ಬಹುತೇಕ ಫೋನುಗಳು ಕರೆಮಾಡುವ ಸಂಖ್ಯೆಯೇ ೧೧೨. ಮೊಬೈಲ್ ಜಾಲಗಳನ್ನು ನಿರ್ದೇಶಿಸುವ ಜಿಎಸ್‌ಎಂ ಮಾನಕ ಈ ಸಂಖ್ಯೆಯನ್ನು ಆಪತ್ಕಾಲೀನ ದೂರವಾಣಿ ಸಂಖ್ಯೆಯೆಂದು ಗುರುತಿಸುತ್ತದೆ.

ಪೋಲೀಸರನ್ನು, ಅಗ್ನಿಶಾಮಕ ದಳವನ್ನು, ಆಂಬುಲೆನ್ಸ್ ಸೇವೆಯನ್ನು ಸಂಪರ್ಕಿಸಲು ಸದ್ಯ ನಮ್ಮ ದೇಶದಲ್ಲಿ ಬೇರೆಬೇರೆ ಸಂಖ್ಯೆಗಳನ್ನು ಬಳಸುತ್ತಿದ್ದೇವೆ. ಈ ಎಲ್ಲ ಸಂಖ್ಯೆಗಳಿಗೆ ಒಂದೇ ಪರ್ಯಾಯವಾಗಿ ನಮ್ಮಲ್ಲೂ ೧೧೨ ಬಳಸುವ ಪ್ರಕ್ರಿಯೆ ಇದೀಗ ಪ್ರಾರಂಭವಾಗಿದೆ. ಮೊಬೈಲ್ ಫೋನ್ ಮೂಲಕ ಮಾತ್ರವೇ ಅಲ್ಲದೆ ಸ್ಥಿರ ದೂರವಾಣಿ, ಎಸ್ಸೆಮ್ಮೆಸ್, ಇಮೇಲ್ ಹಾಗೂ ಮೊಬೈಲ್ ಆಪ್ ಮೂಲಕವೂ ದೇಶದ ಎಲ್ಲೆಡೆ ಈ ಸಂಖ್ಯೆಯನ್ನು ಸಂಪರ್ಕಿಸುವುದು, ಸಹಾಯ ಪಡೆಯುವುದು ಮುಂದಿನ ದಿನಗಳಲ್ಲಿ ಸಾಧ್ಯವಾಗುವ ನಿರೀಕ್ಷೆಯಿದೆ.

ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ (ಇಆರ್‌ಎಸ್‌ಎಸ್) ಎಂಬ ಹೆಸರಿನ ಈ ವ್ಯವಸ್ಥೆಯನ್ನು ಹಿಮಾಚಲ ಪ್ರದೇಶ ಹಾಗೂ ನಾಗಾಲ್ಯಾಂಡ್‌ ರಾಜ್ಯಗಳಲ್ಲಿ ಈಗಾಗಲೇ ಪ್ರಾರಂಭಿಸಲಾಗಿದೆ ಎನ್ನುವುದು ವಿಶೇಷ. ಈ ವ್ಯವಸ್ಥೆಯ ಅಂಗವಾಗಿ ರೂಪಿಸಲಾಗಿರುವ ಮೊಬೈಲ್ ಆಪ್‌ಗೆ '೧೧೨ ಇಂಡಿಯಾ' ಎಂದು ಹೆಸರಿಡಲಾಗಿದ್ದು ಪೋಲೀಸ್, ಅಗ್ನಿಶಾಮಕ ದಳ ಹಾಗೂ ಆಂಬುಲೆನ್ಸ್ ಮಾತ್ರವಲ್ಲದೆ ಸ್ಥಳೀಯವಾಗಿ ನೋಂದಾಯಿಸಿಕೊಂಡಿರುವ ಸ್ವಯಂಸೇವಕರಿಂದಲೂ ನೆರವು ಪಡೆದುಕೊಳ್ಳುವ ಸೌಲಭ್ಯ ಈ ಆಪ್ ಮೂಲಕ ದೊರಕಲಿದೆ.

ನವದೆಹಲಿಯಲ್ಲಿ ನಡೆದ ನಿರ್ಭಯಾ ಘಟನೆಯ ನಂತರದಲ್ಲಿ ಸ್ಥಾಪಿಸಲಾದ ನಿರ್ಭಯಾ ನಿಧಿಯ ಹಣವನ್ನು ಈ ಯೋಜನೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕವೆನ್ನುವಂತೆ ಮಹಿಳಾ ಬಳಕೆದಾರರಿಗಾಗಿ ಈ ಆಪ್‌ನಲ್ಲಿ 'ಶೌಟ್' ಎಂಬ ಪ್ರತ್ಯೇಕ ಸೌಲಭ್ಯವನ್ನು ನೀಡಲಾಗಿದೆ. ಯಾವುದೇ ರೀತಿಯ ಅಪಾಯ ಎದುರಾದ ಸಂದರ್ಭದಲ್ಲಿ ಈ ಸೌಲಭ್ಯ ಬಳಸಿದರೆ ಬಳಕೆದಾರರು ಇರುವ ಸ್ಥಳದ ಬಗ್ಗೆ ತುರ್ತು ಸೇವೆಗಳಿಗೂ ನೋಂದಾಯಿತ ಸ್ವಯಂಸೇವಕರಿಗೂ ಮಾಹಿತಿ ನೀಡಲಾಗುವುದೆಂದು ಕೇಂದ್ರ ಸರಕಾರದ ಪ್ರಕಟಣೆ ತಿಳಿಸಿದೆ.

ವಾಹನಗಳಲ್ಲಿ ಅಳವಡಿಸಲಾದ ಪ್ಯಾನಿಕ್ ಬಟನ್ ಹಾಗೂ ವಸ್ತುಗಳ ಅಂತರಜಾಲದ (ಐಓಟಿ) ಅಂಗವಾದ ಇತರ ಸಾಧನಗಳ ಮೂಲಕವೂ ೧೧೨ ಸಂಖ್ಯೆಯನ್ನು ಸಂಪರ್ಕಿಸುವುದು ಸಾಧ್ಯವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಜಾಲತಾಣ ಹೇಳುತ್ತದೆ. ಆಂಧ್ರ ಪ್ರದೇಶ, ಕೇರಳ, ಮಿಜೋರಾಮ್‌ಗಳಲ್ಲೂ ಇಆರ್‌ಎಸ್‌ಎಸ್ ವ್ಯವಸ್ಥೆ ಮುಂದಿನ ದಿನಗಳಲ್ಲಿ ಪ್ರಾರಂಭವಾಗಲಿದೆ ಎನ್ನುವುದು ಅಲ್ಲಿರುವ ಮಾಹಿತಿ. ಈ ವ್ಯವಸ್ಥೆ ಇಲ್ಲದ ರಾಜ್ಯಗಳಲ್ಲಿ ೧೧೨ ಸಂಖ್ಯೆಗೆ ಕರೆಮಾಡಿದರೆ ಅದು ೧೦೦ಗೆ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆಯಂತೆ.


ನೂರಾ ಹನ್ನೆರಡರ ವೈಶಿಷ್ಟ್ಯ

ಹಿಂದೆ ಚಾಲ್ತಿಯಲ್ಲಿದ್ದ ಡಯಲ್ ಫೋನುಗಳ ಕಾಲದಿಂದಲೇ ೧೧೨ ಆಪತ್ಕಾಲೀನ ದೂರವಾಣಿ ಸಂಖ್ಯೆಯಾಗಿ ಬಳಕೆಯಲ್ಲಿದೆ. ಅಂತಹ ಫೋನುಗಳಲ್ಲೂ ಬಹಳ ಬೇಗನೆ ತಿರುಗಿಸುವುದು ಸಾಧ್ಯವಾಗುವಂತೆ ಈ ಸಂಖ್ಯೆಯನ್ನು ಆರಿಸಿಕೊಳ್ಳಲಾಯಿತಂತೆ. ಮೂರನೆಯ ಅಂಕಿ ಬೇರೆ ಇರುವುದರಿಂದ ಆಕಸ್ಮಿಕವಾಗಿ ಈ ಸಂಖ್ಯೆಗೆ ಕರೆಮಾಡುವ ಸಾಧ್ಯತೆಯೂ ಕಡಿಮೆ. ಅಂದಹಾಗೆ ಈ ಸಂಖ್ಯೆಯ ಗೌರವಾರ್ಥ ಯುರೋಪಿಯನ್ ಒಕ್ಕೂಟದಲ್ಲಿ ಪ್ರತಿವರ್ಷ ಫೆಬ್ರುವರಿ ೧೧ರಂದು 'ಯುರೋಪಿಯನ್ ೧೧೨ ದಿನ' ಆಚರಿಸಲಾಗುತ್ತದೆ. 

ಅಗತ್ಯವಿದ್ದಾಗ ಮಾತ್ರ ಬಳಸಿ!

ಪರೀಕ್ಷಾರ್ಥವಾಗಿ ಅಥವಾ ತಮಾಷೆಗೆಂದು ೧೧೨ ಸಂಖ್ಯೆಗೆ ಕರೆಮಾಡುವುದು ತುರ್ತುಸೇವೆಗಳ ಮೇಲೆ ಅನಗತ್ಯ ಒತ್ತಡಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ನಾವು ಗಮನದಲ್ಲಿಟ್ಟುಕೊಂಡಿರಬೇಕು. ಹೀಗೆ ಮಾಡುವುದರಿಂದ ನಿಜಕ್ಕೂ ತೊಂದರೆಯಲ್ಲಿರುವವರಿಗೆ ಸಹಾಯ ದೊರಕದೆಯೂ ಹೋಗಬಹುದು. ಅಷ್ಟೇ ಅಲ್ಲ, ಅನೇಕ ದೇಶಗಳಲ್ಲಿ ಈ ಈ ದೂರವಾಣಿ ಸಂಖ್ಯೆಯ ದುರುದ್ದೇಶಪೂರಿತ ಬಳಕೆ ಶಿಕ್ಷಾರ್ಹ ಅಪರಾಧವೂ ಹೌದು.

ಡಿಸೆಂಬರ್ ೯, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge