ಗುರುವಾರ, ನವೆಂಬರ್ 8, 2018

ಮೊಬೈಲ್ ಫೋನ್: ಪರದೆ ಸುತ್ತಲಿನ ಪರದಾಟ

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನುಗಳು ಮಾರುಕಟ್ಟೆಗೆ ಬಂದ ಹೊಸತರಲ್ಲಿ ಅವುಗಳ ಪರದೆ ಬಹಳ ಚಿಕ್ಕದಾಗಿರುತ್ತಿತ್ತು. ಅನೇಕ ಮೊಬೈಲುಗಳ ಪರದೆ ಅವುಗಳಲ್ಲಿದ್ದ ಕೀಲಿಮಣೆಗಿಂತ ಚಿಕ್ಕದಾಗಿರುತ್ತಿದ್ದದ್ದೂ ಉಂಟು.

ಮೊಬೈಲ್ ಫೋನಿನ ಸವಲತ್ತುಗಳು ಹೆಚ್ಚಿದಂತೆ ಅವುಗಳ ಪರದೆಯ ಗಾತ್ರವೂ ಹೆಚ್ಚುತ್ತ ಬಂತು. ಸ್ಪರ್ಶಸಂವೇದಿ ಪರದೆಗಳು (ಟಚ್ ಸ್ಕ್ರೀನ್) ಬಳಕೆಗೆ ಬಂದಮೇಲಂತೂ ಇದು ಇನ್ನಷ್ಟು ಜಾಸ್ತಿಯಾಯಿತು. ಸ್ಮಾರ್ಟ್‌ಫೋನುಗಳು ಜನಪ್ರಿಯವಾದಂತೆ ಮೊಬೈಲಿನ ಬಹುಭಾಗವನ್ನು ಪರದೆಗಳೇ ಆವರಿಸಿರುವುದು ಕೂಡ ಸಾಮಾನ್ಯವಾಯಿತು.

ಯಾವುದೇ ಸ್ಮಾರ್ಟ್‌ಫೋನ್ ನೋಡಿದರೂ ಅದರ ಪರದೆಯ ಸುತ್ತ ಚೌಕಟ್ಟಿನಂತಹ ಅಂಚುಗಳಿರುವುದನ್ನು ನಾವು ನೋಡಬಹುದು. ತಾಂತ್ರಿಕ ಪರಿಭಾಷೆಯಲ್ಲಿ 'ಬೆಜ಼ೆಲ್' ಎಂದು ಕರೆಯುವುದು ಈ ಚೌಕಟ್ಟನ್ನೇ.

ಮೊದಮೊದಲು ಬಂದ ಫೋನುಗಳಲ್ಲಿ ಈ ಚೌಕಟ್ಟು ಸಾಕಷ್ಟು ದೊಡ್ಡದಾಗಿಯೇ ಇರುತ್ತಿತ್ತು. ಆಪ್‍ಗಳ ಬಳಕೆ ಹಾಗೂ ಪರದೆಯ ಮೇಲೆ ಅವು ತೋರಿಸುವ ಮಾಹಿತಿಯ ಪ್ರಮಾಣಗಳೆರಡೂ ಜಾಸ್ತಿಯಾದಂತೆ ಈ ಚೌಕಟ್ಟಿಗಾಗಿ ಜಾಗವನ್ನೇಕೆ ವ್ಯರ್ಥಮಾಡಬೇಕು ಎನ್ನುವ ಪ್ರಶ್ನೆ ಕೇಳಿಬಂತು. ಚೌಕಟ್ಟನ್ನು ಸಾಧ್ಯವಾದಷ್ಟೂ ತೆಳ್ಳಗಾಗಿಸಿ ಪರದೆಯ ಗಾತ್ರವನ್ನು ಸಾಧ್ಯವಿದ್ದಷ್ಟೂ ಹೆಚ್ಚಿಸುವ ಪ್ರಯತ್ನಕ್ಕೆ ಕಾರಣವಾದದ್ದು ಇದೇ ಪ್ರಶ್ನೆ.

ಈ ಪ್ರಯತ್ನದ ಪರಿಣಾಮವಾಗಿ ಇಂದಿನ ಬಹುತೇಕ ಮೊಬೈಲುಗಳಲ್ಲಿ ಬೆಜ಼ೆಲ್‌ನ ಗಾತ್ರ ಗಮನಾರ್ಹವಾಗಿ ಕಡಿಮೆಯಾಗಿದೆ. ಕಂಡೂಕಾಣದಷ್ಟು ತೆಳ್ಳಗಿನ ಬೆಜ಼ೆಲ್ ಇರುವ ಫೋನುಗಳನ್ನು 'ಬೆಜ಼ೆಲ್-ಲೆಸ್' ಫೋನುಗಳೆಂದು ಗುರುತಿಸುವ ಅಭ್ಯಾಸ ಕೂಡ ಬಂದಿದೆ.

ಇಂತಹ ಫೋನುಗಳಲ್ಲಿ ಎಡ-ಬಲದ ಅಂಚುಗಳಿಗಿಂತ ಮೇಲಿನ ಹಾಗೂ ಕೆಳಗಿನ ಅಂಚುಗಳು ಕೊಂಚ ಹೆಚ್ಚೇ ಇರುವುದನ್ನು ನಾವು ನೋಡಬಹುದು. ಮೊಬೈಲ್ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಹಲವಾರು ಭಾಗಗಳನ್ನು ಈ ಜಾಗದಲ್ಲಿ ಅಡಕಗೊಳಿಸಬೇಕಾದ ಅನಿವಾರ್ಯತೆಯೇ ಈ ವಿಚಿತ್ರ ವಿನ್ಯಾಸಕ್ಕೆ ಕಾರಣವಾಗಿದೆ.

ಮೊಬೈಲ್ ಪರದೆ ಮೇಲುತುದಿಯ ವಿಷಯಕ್ಕೆ ಬಂದರೆ ಅಷ್ಟು ಜಾಗದೊಳಗೆ ಸೆಲ್ಫಿ ಕ್ಯಾಮೆರಾ, ಸ್ಪೀಕರ್ (ಇಯರ್-ಪೀಸ್), ಪ್ರಾಕ್ಸಿಮಿಟಿ ಸೆನ್ಸರ್ ಮುಂತಾದ ಹಲವು ಭಾಗಗಳು ಅಡಕವಾಗಿರುತ್ತವೆ. ಅದರ ಕೆಳಗೆ, ಪರದೆಯ ಆರಂಭದಲ್ಲಿ, ಮೊಬೈಲ್ ಜಾಲ, ಬ್ಯಾಟರಿ, ಅಂತರಜಾಲ, ಸಮಯ ಮುಂತಾದ ವಿವರಗಳನ್ನು ಪ್ರದರ್ಶಿಸಲು ಒಂದು ತೆಳ್ಳಗಿನ ಪಟ್ಟಿಯಷ್ಟು ಜಾಗ ಬಳಕೆಯಾಗುತ್ತದೆ. ಒಟ್ಟು ಪರಿಣಾಮ, ಮೊಬೈಲ್ ಮೇಲ್ಮೈಯ ಸಾಕಷ್ಟು ಜಾಗ ಆಪ್‌ಗಳ ಬಳಕೆಗೆ ಸಿಗುವುದಿಲ್ಲ!

ಮೊಬೈಲ್ ಸಂಪರ್ಕದ ವಿವರಗಳು ಪ್ರದರ್ಶಿತವಾಗುವುದು ಪರದೆಯ ಎಡ ಹಾಗೂ ಬಲತುದಿಗಳಲ್ಲಿ ಮಾತ್ರವೇ. ಅವೆರಡೂ ತುದಿಗಳ ನಡುವೆ ಕೊಂಚ ಭಾಗ ಹೇಗೂ ಉಪಯೋಗವಾಗುವುದಿಲ್ಲ. ಆ ಭಾಗದ ಪರದೆಯನ್ನು ಕತ್ತರಿಸಿಹಾಕಿ ಅಲ್ಲಿ ಸೆಲ್ಫಿ ಕ್ಯಾಮೆರಾವನ್ನೂ ಸ್ಪೀಕರ್-ಪ್ರಾಕ್ಸಿಮಿಟಿ ಸೆನ್ಸರುಗಳನ್ನೂ ಕೂರಿಸಿದರೆ ಹೇಗೆ?

ಈಚೆಗೆ ಮಾರುಕಟ್ಟೆಗೆ ಬಂದಿರುವ ಹಲವು ಮಾದರಿಯ ಸ್ಮಾರ್ಟ್‌ಫೋನುಗಳಲ್ಲಿ ಕಾಣಸಿಗುವ ಪರದೆಯ ವಿನ್ಯಾಸಕ್ಕೆ ಸ್ಫೂರ್ತಿಯಾಗಿರುವುದು ಇದೇ ಪ್ರಶ್ನೆ. ಪರದೆಯ ಮೇಲುತುದಿಯ ನಡುವೆ ಒಂದಷ್ಟು ಭಾಗವನ್ನು ಕತ್ತರಿಸಿರುವ ಈ ವಿನ್ಯಾಸವನ್ನು 'ನಾಚ್' ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಹಾಗೆಂದರೆ 'ಅಂಚಿನಲ್ಲಿ ಮಾಡಿದ ಕಚ್ಚು' ಎಂದು ಅರ್ಥ.

ಈ ವಿನ್ಯಾಸ ಮೊದಲಿಗೆ ಗಮನಸೆಳೆದದ್ದು 'ಐಫೋನ್ X'ನಲ್ಲಿ. ಆನಂತರ ಹಲವಾರು ಮೊಬೈಲ್ ನಿರ್ಮಾತೃಗಳು ಈ ವಿನ್ಯಾಸವನ್ನು ತಮ್ಮ ಉತ್ಪನ್ನಗಳಲ್ಲಿ ಬಳಸಿದ್ದಾರೆ. ಮೇಲೆ ಹೇಳಿದಂತಹ ಅಗಲವಾದ ನಾಚ್ ಮಾತ್ರವೇ ಅಲ್ಲದೆ ಪರದೆಯ ಮೇಲ್ತುದಿಯ ನಡುವೆ ಸಣ್ಣದಾದ ಒಂದು ಕಚ್ಚನ್ನಷ್ಟೇ ಮಾಡುವ, ಗಾಜಿನ ಮೇಲಿನ ಮಳೆಹನಿಯಂತೆ ಕಾಣುವ 'ರೈನ್‌ಡ್ರಾಪ್ ನಾಚ್' ಎಂಬ ಇನ್ನೊಂದು ವಿನ್ಯಾಸವೂ ಇದೀಗ ಪ್ರಚಲಿತಕ್ಕೆ ಬರುತ್ತಿದೆ.

ಮೊಬೈಲ್ ಪರದೆಯ ಮೇಲೆ ಸ್ಥಳಾವಕಾಶ ವ್ಯರ್ಥವಾಗುವುದನ್ನು ತಡೆಯುವುದು ನಾಚ್ ವಿನ್ಯಾಸದ ಮೂಲ ಉದ್ದೇಶ. ಆದರೆ ಈ ಮೂಲಕ ಮೊಬೈಲ್ ಮೇಲ್ಮೈಯನ್ನು ಪೂರ್ತಿಯಾಗಿ ಆವರಿಸಿರುವ ಪರದೆಯನ್ನು ರೂಪಿಸುವುದು ಸಾಧ್ಯವಾಗುವುದಿಲ್ಲ. ಹೀಗೆ ಪರದೆಯಲ್ಲೊಂದು ಕಚ್ಚುಮಾಡಿ ಅಗತ್ಯ ಭಾಗಗಳನ್ನೆಲ್ಲ ಅಲ್ಲಿ ಅಡಕಗೊಳಿಸುವ ಬದಲು, ಆ ಭಾಗಗಳನ್ನೆಲ್ಲ ಹೇಗಾದರೂ ಮಾಡಿ ಪರದೆಯ ಹಿಂದಕ್ಕೆ ಕಳಿಸಿಬಿಟ್ಟರೆ?

ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನಗಳೂ ನಡೆದಿವೆ. ಸ್ಪೀಕರ್, ಫಿಂಗರ್‌ಪ್ರಿಂಟ್ ಸೆನ್ಸರ್ ಇತ್ಯಾದಿಗಳನ್ನೆಲ್ಲ ಪ್ರತ್ಯೇಕವಾಗಿ ಇರಿಸುವ ಬದಲು ಅವನ್ನೆಲ್ಲ ಪರದೆಯ ಭಾಗಗಳಾಗಿಯೇ ರೂಪಿಸುವ ಪ್ರಯತ್ನ ಈಗಾಗಲೇ ಕಾರ್ಯರೂಪಕ್ಕೂ ಬಂದಿದೆ. ಇದೇರೀತಿ ಕೆಲವು ನಿರ್ಮಾತೃಗಳು ಬಳಸುವಾಗ ಮಾತ್ರ ಹೊರಬರುವ ಸೆಲ್ಫಿ ಕ್ಯಾಮೆರಾ ವಿನ್ಯಾಸವನ್ನೂ ರೂಪಿಸಿದ್ದಾರೆ.

ಈ ಪ್ರಯತ್ನಗಳೆಲ್ಲ ಬಳಕೆದಾರರ ಮೆಚ್ಚುಗೆ ಪಡೆದುಕೊಂಡರೆ ಬೆಜ಼ೆಲ್ ಎಂಬ ಪರಿಕಲ್ಪನೆಯೇ ಸಂಪೂರ್ಣವಾಗಿ ಮಾಯವಾಗಬಹುದು, ಮೇಲ್ಮೈ ಪೂರ್ತಿ ವಿಸ್ತೀರ್ಣವನ್ನು ಪರದೆಯೇ ಆವರಿಸಿಕೊಂಡಿರುವಂತಹ ಮೊಬೈಲುಗಳು ಸಾಮಾನ್ಯವಾಗಬಹುದು ಎನ್ನುವುದು ಸದ್ಯದ ನಿರೀಕ್ಷೆ.

ಅಕ್ಟೋಬರ್ ೧೭, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge