ಶುಕ್ರವಾರ, ಅಕ್ಟೋಬರ್ 12, 2018

ಸಿಮ್ ಕಾರ್ಡಿನ ಇ-ಅವತಾರ

ಟಿ. ಜಿ. ಶ್ರೀನಿಧಿ


ಬೇಕಾದವರೊಡನೆ ಬೇಕೆಂದಾಗ ಸಂಪರ್ಕದಲ್ಲಿರಲು ನಮಗೆ ಮೊಬೈಲ್ ಫೋನ್ ಬೇಕು. ಅದು ನಮಗೆ ಬೇಕಾದಾಗ ಕೆಲಸಮಾಡಬೇಕೆಂದರೆ ಏನು ಬೇಕು?

ಈ ಪ್ರಶ್ನೆಗೆ ಬ್ಯಾಟರಿ, ಕರೆನ್ಸಿ ಮುಂತಾದ ಹಲವು ಉತ್ತರಗಳು ಬರಬಹುದಾದರೂ ಅವೆಲ್ಲವಕ್ಕಿಂತ ಹೆಚ್ಚು ಸೂಕ್ತವಾದ ಉತ್ತರವೆಂದರೆ ಸಬ್ಸ್‌ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್, ಅರ್ಥಾತ್ ಸಿಮ್.

ಹೌದು. ನಮ್ಮ ಮೊಬೈಲು ಎಷ್ಟೇ ಆಧುನಿಕವಾಗಿದ್ದರೂ ಅದು ಸರಿಯಾಗಿ ಕೆಲಸಮಾಡಲು, ನಮಗೆ ಬೇಕಾದವರೊಡನೆ ಸಂಪರ್ಕ ಕಲ್ಪಿಸಿಕೊಡಲು ಅದರಲ್ಲಿ ಸಿಮ್ ಇರಬೇಕಾದ್ದು ಅತ್ಯಗತ್ಯ. ಮೊಬೈಲ್ ಜಾಲ ನಮ್ಮ ಫೋನನ್ನು ಗುರುತಿಸುವುದು, ನಮ್ಮ ಫೋನು ಮೊಬೈಲ್ ಜಾಲದ ಸಂಪರ್ಕ ಪಡೆದುಕೊಳ್ಳಲು ಸಾಧ್ಯವಾಗುವುದು ಈ ಪುಟ್ಟ ಬಿಲ್ಲೆಯ ಮೂಲಕವೇ.

ಇಂದಿನ ಮೊಬೈಲುಗಳಲ್ಲಿ ಅದೆಷ್ಟೋ ಕೆಲಸಗಳು ತಂತ್ರಾಂಶದ ಮೂಲಕವೇ ನಡೆಯುತ್ತವೆ. ಹೀಗಿರುವಾಗ ಜಾಲದ ಸಂಪರ್ಕ ಕಲ್ಪಿಸಲು ಈ ಬಿಲ್ಲೆಯೇ ಬೇಕೆನ್ನುವ ಬದಲು ತಂತ್ರಾಂಶವೇ ಅದರ ಕೆಲಸ ಮಾಡಬಹುದಲ್ಲ?

ಖಂಡಿತಾ ಮಾಡಬಹುದು. ಇದನ್ನು ಸಾಧ್ಯವಾಗಿಸಿರುವ ಪರಿಕಲ್ಪನೆಯೇ ಎಂಬೆಡೆಡ್ ಸಿಮ್, ಅರ್ಥಾತ್ 'ಇ-ಸಿಮ್'. ಮೊಬೈಲಿಗೆ ಅತ್ಯಗತ್ಯವಾಗಿ ಬೇಕಾದ ಸಿಮ್ ಅನ್ನು ಕಾರ್ಡಿನ ರೂಪದಿಂದ ಬದಲಿಸಿ ಮೊಬೈಲಿನೊಳಗೇ ಇರುವ ತಂತ್ರಾಂಶದ ರೂಪಕ್ಕೆ ತಂದಿಡುವುದು ಈ ಪರಿಕಲ್ಪನೆಯ ವೈಶಿಷ್ಟ್ಯ.

ಈಚಿನ ವರ್ಷಗಳಲ್ಲಿ ಮೊಬೈಲಿನ ರಚನೆ ಎಷ್ಟೆಲ್ಲ ಬದಲಾಗಿದ್ದರೂ ಸಿಮ್ ಸ್ಥಾನಮಾನ ಮಾತ್ರ ಹೆಚ್ಚೂಕಡಿಮೆ ಹಾಗೆಯೇ ಉಳಿದುಕೊಂಡಿದೆ. ಎರಡು ಸಿಮ್ ಬಳಸಲು, ಬೇಕೆಂದಾಗ ಸರಾಗವಾಗಿ ಬದಲಿಸಲು ವ್ಯವಸ್ಥೆ ಮಾಡುವುದು ಮೊಬೈಲ್ ರಚನೆಯ ದೃಷ್ಟಿಯಿಂದಲೂ ಸವಾಲಾಗೇ ಮುಂದುವರೆದಿದೆ. ಅತಿಸಣ್ಣ ಸ್ಥಳಾವಕಾಶದಲ್ಲಿ ಅತ್ಯಂತ ಸಂಕೀರ್ಣ ವಿನ್ಯಾಸವನ್ನು ಅಡಕವಾಗಿ ಅಳವಡಿಸಬೇಕಾದ ಸನ್ನಿವೇಶದಲ್ಲಿ ಇದರಿಂದ ಸಾಕಷ್ಟು ಸ್ಥಳವೂ ವ್ಯರ್ಥವಾಗುತ್ತಿದೆ.

ಇ-ಸಿಮ್ ಪರಿಕಲ್ಪನೆಯ ಹುಟ್ಟಿಗೆ ಕಾರಣವಾದದ್ದು ಇದೇ ಅಂಶ. ಕಳೆದ ಹಲವು ವರ್ಷಗಳಿಂದ ವಿನ್ಯಾಸದ ಹಂತದಲ್ಲಿದ್ದ ಈ ಪರಿಕಲ್ಪನೆ ಇತ್ತೀಚೆಗಷ್ಟೇ ಪರಿಚಯಿಸಲಾದ ಹೊಸ ಐಫೋನ್ ಮಾದರಿಗಳ ಮೂಲಕ ಮಾರುಕಟ್ಟೆ ಮುಖ್ಯವಾಹಿನಿಗೆ ಬಂದು ನಿಂತಿದೆ. ಐಫೋನ್‌ನ ಹೊಸ ಮಾದರಿಗಳಾದ ಐಫೋನ್ XS ಹಾಗೂ ಐಫೋನ್ XS ಮ್ಯಾಕ್ಸ್ ಎರಡರಲ್ಲೂ ಸಾಮಾನ್ಯ ಸಿಮ್ ಜೊತೆಗೆ ಒಂದೊಂದು ಇ-ಸಿಮ್ ಬಳಸುವ ಅವಕಾಶ ಇದೆ. ಸದ್ಯದಲ್ಲೇ ಮಾರುಕಟ್ಟೆಗೆ ಬರಲಿರುವ ಇನ್ನೂ ಕೆಲ ಫೋನುಗಳಲ್ಲೂ ಇ-ಸಿಮ್ ಇರಲಿದೆಯಂತೆ.

ಇಂದಿನ ಮೊಬೈಲುಗಳಲ್ಲಿ ಬೇರೆಬೇರೆ ಕೆಲಸಕ್ಕೆ ಬೇಕಾದ ಹತ್ತಾರು ಚಿಪ್‌ಗಳಿರುತ್ತವಲ್ಲ, ಅಂಥದ್ದೇ ಇನ್ನೊಂದು ಚಿಪ್‌ಗೆ ಸಿಮ್ ಕೆಲಸಗಳನ್ನು ವಹಿಸಿಕೊಡುವುದು ಇ-ಸಿಮ್‌ನ ಆಶಯ. ಈ ಹೆಸರಿನಲ್ಲಿರುವ ಇ, ಅರ್ಥಾತ್ 'ಎಂಬೆಡೆಡ್' ಎನ್ನುವ ಪದ ಸೂಚಿಸುವುದೂ ಇದನ್ನೇ ('ಎಂಬೆಡೆಡ್' ಎಂದರೆ 'ಅಡಕಗೊಳಿಸಿರುವ' ಎಂದರ್ಥ). ಮೊಬೈಲಿನೊಳಗೇ ಅಡಕವಾಗಿರುವ ಇಂಥದ್ದೊಂದು ಚಿಪ್‌ಗೆ ನಮಗೆ ಬೇಕಾದ ಮೊಬೈಲ್ ಸಂಸ್ಥೆಯ ಸಂಪರ್ಕ ವಿವರಗಳನ್ನು ಊಡಿಸುವ ಮೂಲಕ ಅದು ನಮ್ಮ ಸಿಮ್‌ನಂತೆ ಕೆಲಸಮಾಡುವುದು ಸಾಧ್ಯವಾಗುತ್ತದೆ.

"ನಮಗೆ ಬೇಕಾದ" ಮೊಬೈಲ್ ಸಂಸ್ಥೆಯ ಸಂಪರ್ಕ ವಿವರಗಳನ್ನು ಊಡಿಸುವ ಕೆಲಸವನ್ನು ಆ ಮೊಬೈಲ್ ಸಂಸ್ಥೆಯೇ ಮಾಡಬೇಕು. ಆಪ್‌ಗಳನ್ನು ಪ್ಲೇಸ್ಟೋರಿನಿಂದ ಡೌನ್‌ಲೋಡ್ ಮಾಡಿಕೊಳ್ಳುತ್ತೇವಲ್ಲ, ಹಾಗೆಯೇ ಮೊಬೈಲ್ ಸಂಸ್ಥೆಯ ಜಾಲತಾಣದಿಂದ ಈ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವುದಷ್ಟೇ ನಮ್ಮ ಕೆಲಸ. ಮೊಬೈಲ್ ಸಂಸ್ಥೆಯಿಂದ ಪಡೆದ ಸಂಪರ್ಕ ಮಾಹಿತಿ ನಮ್ಮ ಮೊಬೈಲಿನಲ್ಲಿರುವ ಚಿಪ್‌‍ನೊಳಕ್ಕೆ ಸೇರುತ್ತಿದ್ದಂತೆಯೇ ಅದು ಸಿಮ್‌ನಂತೆ ಕೆಲಸಮಾಡಲು ಪ್ರಾರಂಭಿಸುತ್ತದೆ. ಗ್ರಾಹಕರಿಗೆ ಇಂತಹ ವ್ಯವಸ್ಥೆ ಮಾಡಿಕೊಡಲು ತಾನು ಈಗಾಗಲೇ ಸಜ್ಜಾಗಿರುವುದಾಗಿ ಜಿಯೋ ಘೋಷಿಸಿದ್ದು ಇನ್ನುಳಿದ ಸಂಸ್ಥೆಗಳೂ ಇ-ಸಿಮ್ ಬೆಂಬಲವನ್ನು ಇಷ್ಟರಲ್ಲೇ ನೀಡುವ ನಿರೀಕ್ಷೆಯಿದೆ.

ಸದ್ಯ ಬಹುತೇಕ ಮೊಬೈಲುಗಳಲ್ಲಿ ಎರಡು ಸಂಸ್ಥೆಗಳ ಸಿಮ್ ಬಳಸುವುದು ಮಾತ್ರ ಸಾಧ್ಯ. ಮೂರನೆಯ ಸಂಸ್ಥೆಯೊಂದರ ಸಿಮ್ ಬಳಸಬೇಕೆಂದರೆ ಈ ಎರಡು ಸಿಮ್‌ಗಳ ಪೈಕಿ ಒಂದನ್ನು ತೆಗೆದಿಡಬೇಕಾದ್ದು ಅನಿವಾರ್ಯ. ಇ-ಸಿಮ್ ಪರಿಕಲ್ಪನೆಯಲ್ಲಿ ಈ ಕೆಲಸವೂ ಬಲು ಸರಳ: ಅಲ್ಲಿ ನಾವು ತಂತ್ರಾಂಶ ರೂಪದ ಎಷ್ಟು ಸಿಮ್‌ಗಳನ್ನು ಬೇಕಾದರೂ ಇಟ್ಟುಕೊಂಡಿರಬಹುದು. ಏಕಕಾಲದಲ್ಲಿ ಒಂದು ಚಿಪ್‌ನಲ್ಲಿ ಒಂದು ಸಿಮ್‌ನ ಮಾಹಿತಿ ಮಾತ್ರ ಬಳಸಬಹುದು ಎಂಬ ನಿಬಂಧನೆಗೊಳಪಟ್ಟು ಇಲ್ಲಿ ಯಾವಾಗ ಯಾವ ಸಂಸ್ಥೆಯ ಸಂಪರ್ಕವನ್ನಾದರೂ ಬಳಸುವುದು ಸಾಧ್ಯ (ಮೊಬೈಲಿನಲ್ಲಿ ಎರಡು ಇ-ಸಿಮ್ ಇದ್ದರೆ ಸಾಮಾನ್ಯ ಸಿಮ್‌ಗಳಲ್ಲಿ ಮಾಡುವಂತೆ ಅವೆರಡನ್ನೂ ಒಟ್ಟಿಗೆ ಬಳಸಬಹುದು). ತೆಗೆದ ಸಿಮ್‌ಗೆ ಭೌತಿಕ ಹಾನಿಯಾಗುವುದು, ಅದನ್ನು ಎಲ್ಲೋ ಇಟ್ಟು ಮರೆಯುವುದು, ಕಳೆದುಕೊಳ್ಳುವುದು ಮುಂತಾದ ಪೇಚಿನ ಸನ್ನಿವೇಶಗಳನ್ನು ಈ ಮೂಲಕ ಸುಲಭವಾಗಿ ನಿವಾರಿಸಿಕೊಳ್ಳಬಹುದು. ಒಂದು ಮೊಬೈಲಿಗೆ ಮೈಕ್ರೋ ಸಿಮ್, ಇನ್ನೊಂದಕ್ಕೆ ನ್ಯಾನೋ ಸಿಮ್ ಎನ್ನುವಂತಹ ಭೇದವೂ ಈ ಮೂಲಕ ಮಾಯವಾಗುತ್ತದೆ.

ಸಿಮ್ ಕಾರ್ಡ್ ತಾಪತ್ರಯ ಬರಿಯ ಮೊಬೈಲ್ ಫೋನಿಗಷ್ಟೇ ಸೀಮಿತವಲ್ಲ. ಸದ್ಯ ಧೂಳು-ನೀರು ಒಳಹೋಗುವ ಭಯದಿಂದ ಸ್ಮಾರ್ಟ್‌ವಾಚ್‌‌ನಂತಹ ಸಾಧನಗಳಲ್ಲಿ ಸಿಮ್ ಹಾಕುವ ಅವಕಾಶವನ್ನೇ ನೀಡಲಾಗುತ್ತಿಲ್ಲ. ಹಾಗಾಗಿ ಅವು ಸಂಪರ್ಕಕ್ಕಾಗಿ ಸದಾಕಾಲ ಮೊಬೈಲ್ ಫೋನನ್ನೇ ಅವಲಂಬಿಸಬೇಕಾದ್ದು, ಮೊಬೈಲ್ ಫೋನಿನ ಆಸುಪಾಸಿನಲ್ಲೇ ಇರಬೇಕಾದ್ದು ಅನಿವಾರ್ಯವಾಗಿದೆ. ಇ-ಸಿಮ್ ಪರಿಕಲ್ಪನೆ ಈ ಪರಿಸ್ಥಿತಿಯನ್ನು ಬದಲಿಸಲಿದ್ದು ಸ್ಮಾರ್ಟ್‌ವಾಚ್‌ನಂತಹ ಸಾಧನಗಳಲ್ಲೂ ಸಿಮ್ ಬಳಕೆಯನ್ನು ಸರಾಗವಾಗಿಸಲಿದೆ. ಮೊಬೈಲ್ ಫೋನಿನ ಗೊಡವೆಯಿಲ್ಲದೆ ಸ್ಮಾರ್ಟ್‌ವಾಚ್ ಬಳಸುವುದೂ ಇದರಿಂದಾಗಿ ಸಾಧ್ಯವಾಗುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಸಾಧನಗಳಲ್ಲಿ ಇಂತಹ ಸಿಮ್ ಸೇರಿಸಲಾಗುವ ನಿರೀಕ್ಷೆಯಿದ್ದು ಅದು ಇಂಟರ್‌ನೆಟ್ ಆಫ್ ಥಿಂಗ್ಸ್‌ನ ಬೆಳವಣಿಗೆಯನ್ನು ಇನ್ನಷ್ಟು ಪ್ರೋತ್ಸಾಹಿಸಲಿದೆ ಎಂದು ತಜ್ಞರು ಹೇಳುತ್ತಾರೆ.

ಸೆಪ್ಟೆಂಬರ್ ೨೬, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge