ಮಂಗಳವಾರ, ಸೆಪ್ಟೆಂಬರ್ 4, 2018

ಹುಡುಕಾಟದ ಎರಡು ದಶಕ

ಟಿ. ಜಿ. ಶ್ರೀನಿಧಿ


ಮನುಕುಲದ ಇತಿಹಾಸದ ಪ್ರತಿ ಕಾಲಘಟ್ಟದಲ್ಲೂ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾದ ಘಟನೆಗಳನ್ನು ನಾವು ನೋಡಬಹುದು. ಕಾಲಕ್ರಮದಲ್ಲಿ ಬೇಸಾಯ, ಬೆಂಕಿ, ಚಕ್ರ, ವಿದ್ಯುಚ್ಛಕ್ತಿ ಮೊದಲಾದ ಸಂಗತಿಗಳ ಆವಿಷ್ಕಾರ ಹೇಗೆ ಮಹತ್ವ ಪಡೆದುಕೊಂಡಿತೋ ಕಳೆದ ಶತಮಾನದಲ್ಲಿ ಅಂಥದ್ದೇ ಗೌರವಕ್ಕೆ ಭಾಜನವಾದದ್ದು ಕಂಪ್ಯೂಟರಿನ ಆವಿಷ್ಕಾರ. ಇದಾದ ನಂತರದಲ್ಲಿ ಇಂಥವೇ ಇನ್ನಷ್ಟು ಬೆಳವಣಿಗೆಗಳು ಬಹಳ ಕ್ಷಿಪ್ರಗತಿಯಲ್ಲಿ ಘಟಿಸಿದ್ದು ಈಗ ಇತಿಹಾಸ.

ಅಂತರಜಾಲದ ಹುಟ್ಟು, ಮೊಬೈಲ್ ಫೋನ್ ವಿಕಾಸವೇ ಮೊದಲಾದ ಇಂತಹ ಐತಿಹಾಸಿಕ ಬೆಳವಣಿಗೆಗಳ ಸಾಲಿನಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಘಟನೆ ಗೂಗಲ್ ಸಂಸ್ಥೆಯ ಪ್ರಾರಂಭ. ಈ ಘಟನೆ ಸಂಭವಿಸಿ ಇದೀಗ ಇಪ್ಪತ್ತು ವರ್ಷ. ಬರಿಯ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಒಂದು ವಾಣಿಜ್ಯ ಸಂಸ್ಥೆ ಪ್ರಪಂಚದ ಜನಸಂಖ್ಯೆಯ ಬಹುದೊಡ್ಡ ಭಾಗದ ಮೇಲೆ ಈ ಪರಿಯ ಪ್ರಭಾವ ಬೀರಿರುವ ಇನ್ನೊಂದು ಉದಾಹರಣೆ ಹುಡುಕಲು ಸಾಕಷ್ಟು ಕಷ್ಟಪಡಬೇಕಾಗುತ್ತದೋ ಏನೋ!

ಒಂದರ ಮುಂದೆ ಒಂದುನೂರು ಸೊನ್ನೆ!
ಅಂಕಿ ಒಂದನ್ನು ಬರೆದು ಅದರ ಮುಂದೆ ಸೊನ್ನೆಗಳನ್ನು ಸೇರಿಸುತ್ತಾ ಹೋದಂತೆ ಹತ್ತು, ನೂರು, ಸಾವಿರಗಳೆಲ್ಲ ರೂಪುಗೊಳ್ಳುವುದು ನಮಗೆ ಗೊತ್ತಿದೆ. ಒಂದರ ಮುಂದೆ ಹೀಗೆ ನೂರು ಸೊನ್ನೆಗಳನ್ನು ಸೇರಿಸಿದರೆ ಸಿಗುವ ಸಂಖ್ಯೆಗೆ 'googol' ಎಂಬ ಹೆಸರಿದೆ. ಅಂತರಜಾಲ ದೈತ್ಯ ಗೂಗಲ್‌‌ನ ಹೆಸರಿಗೆ ಸ್ಫೂರ್ತಿಯಾಗಿದ್ದು ಇದೇ ಸಂಖ್ಯೆ. ಹೆಸರಿಡುವಾಗ ಗೊತ್ತಿತ್ತೋ ಇಲ್ಲವೋ, ಆದರೆ ಈ ಸಂಖ್ಯೆಯನ್ನೇ ಮುಟ್ಟಿಬಿಡುವ ತವಕದಿಂದ ಗೂಗಲ್ ಬೆಳೆಯುತ್ತಿರುವುದಂತೂ ಸತ್ಯ.

ಈ ಬೆಳವಣಿಗೆ ಶುರುವಾದದ್ದು ಅಮೆರಿಕಾದ ಸ್ಟಾನ್‌ಫರ್ಡ್ ವಿವಿಯ ವಿದ್ಯಾರ್ಥಿ ನಿಲಯದಲ್ಲಿ. ಅಲ್ಲಿ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಹಾಗೂ ಸೆರ್ಗಿ ಬ್ರಿನ್, ಅಂದಿನ ವಿಶ್ವವ್ಯಾಪಿ ಜಾಲದಲ್ಲಿ ನಮಗೆ ಬೇಕಾದ ಮಾಹಿತಿ ಹುಡುಕಿಕೊಳ್ಳಲು ನೆರವಾಗುವ ತಂತ್ರಾಂಶವನ್ನು ರೂಪಿಸಲು ಹೊರಟಿದ್ದರು. ಅವರು ರೂಪಿಸಿದ 'ಬ್ಯಾಕ್‌ರಬ್' ಎಂಬ ಹೆಸರಿನ ಈ ತಂತ್ರಾಂಶ ಕೊಂಡಿಗಳನ್ನು (ಲಿಂಕ್) ವಿಶ್ಲೇಷಿಸುವ ಮೂಲಕ ವಿಶ್ವವ್ಯಾಪಿ ಜಾಲದ ಪುಟಗಳನ್ನು ವರ್ಗೀಕರಿಸುತ್ತಿತ್ತು. ಮುಂದೆ ಗೂಗಲ್ ಸರ್ಚ್ ಇಂಜನ್ ಎಂದು ವಿಶ್ವಖ್ಯಾತಿ ಗಳಿಸಿದ್ದು ಇದೇ ತಂತ್ರಾಂಶ. ಕಾಲೇಜು ಹಾಸ್ಟೆಲಿನಲ್ಲಿ ಹುಟ್ಟಿ ಗೆಳೆಯರೊಬ್ಬರ ಮನೆಯ ಗ್ಯಾರೇಜಿನಲ್ಲಿ ಬೆಳೆದ ಗೂಗಲ್ ಸಂಸ್ಥೆ ಇದೀಗ ವಿಶ್ವದ ಅತಿದೊಡ್ಡ ಹಾಗೂ ಅತ್ಯಂತ ಶ್ರೀಮಂತ ಸಂಸ್ಥೆಗಳ ಪೈಕಿ ಒಂದು.

ಹುಡುಕುವ ಕೆಲಸ
ಗೂಗಲ್ ಮೊದಲಿಗೆ ಒಂದು ವಾಣಿಜ್ಯ ಸಂಸ್ಥೆಯ ರೂಪ ಪಡೆದುಕೊಂಡದ್ದು ೧೯೯೮ರ ಸೆಪ್ಟೆಂಬರ್ ೪ರಂದು. ಸರ್ಚ್ ಇಂಜನ್ ಸೇವೆ ಒದಗಿಸುವ ಉದ್ದೇಶದಿಂದ ಪ್ರಾರಂಭವಾದ ಈ ಸಂಸ್ಥೆ ಈಗ ಸಂದೇಶ ಕಳುಹಿಸುವುದರಿಂದ ಪ್ರಾರಂಭಿಸಿ ಸ್ವಯಂಚಾಲಿತ ಕಾರುಗಳನ್ನು ತಯಾರಿಸುವವರೆಗೆ ಹಲವು ಕೆಲಸಗಳಲ್ಲಿ ತೊಡಗಿಕೊಂಡಿದೆ. ಜಿಮೇಲ್, ಯೂಟ್ಯೂಬ್, ಗೂಗಲ್ ಮ್ಯಾಪ್ಸ್, ಗೂಗಲ್ ಹೋಮ್ ಸರಣಿಯ ಸ್ಮಾರ್ಟ್ ಸಹಾಯಕರು, ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆ, ಪಿಕ್ಸೆಲ್ ಮೊಬೈಲ್ ಫೋನುಗಳು ಎಲ್ಲವೂ ಗೂಗಲ್ ಸಂಸ್ಥೆಯ ಒಡೆತನದಲ್ಲೇ ಇವೆ. ತನ್ನ ಜಾಲತಾಣಗಳಲ್ಲೆಲ್ಲ ಜಾಹೀರಾತುಗಳನ್ನು ಪ್ರದರ್ಶಿಸುವ ಗೂಗಲ್ ಅದರಿಂದಲೇ ಅಗಾಧ ಪ್ರಮಾಣದ ಹಣವನ್ನು ಸಂಪಾದಿಸುತ್ತದೆ. ಆಡಳಿತಾತ್ಮಕವಾಗಿ 'ಆಲ್ಫಾಬೆಟ್' ಎಂಬ ಮಾತೃಸಂಸ್ಥೆಯ ಕೆಳಗೆ ಕೆಲಸಮಾಡುವ ಗೂಗಲ್ ಶೇರುಗಳ ಒಟ್ಟು ಮೌಲ್ಯ (ಮಾರ್ಕೆಟ್ ಕ್ಯಾಪಿಟಲೈಸೇಶನ್) ೮೦೦ ಬಿಲಿಯನ್ ಡಾಲರುಗಳಿಗಿಂತ ಹೆಚ್ಚು!


ಇಂದು ಗೂಗಲ್ ಎನ್ನುವುದು ಅಂತರಜಾಲ ಬಳಕೆದಾರರಲ್ಲದವರಿಗೂ ಪರಿಚಿತವಾದ ಹೆಸರು. ಜಾಲಲೋಕದಲ್ಲಿ ಏನೇ ಮಾಹಿತಿ ಬೇಕೆಂದರೂ ಗೂಗಲ್ ಮೊರೆಹೋಗುವುದು ನಮಗೆಲ್ಲ ಅಭ್ಯಾಸವಾಗಿಬಿಟ್ಟಿದೆ. ಈ ಅಭ್ಯಾಸ ಅದೆಷ್ಟು ವ್ಯಾಪಕವಾಗಿದೆಯೆಂದರೆ ಮಾಹಿತಿಗಾಗಿ ಹುಡುಕುವ ಕೆಲಸಕ್ಕೆ 'ಗೂಗ್ಲಿಂಗ್' (ಗೂಗಲ್ ಮಾಡು, ಗೂಗಲಿಸು) ಎಂಬ ಹೆಸರೇ ಹುಟ್ಟಿಕೊಂಡುಬಿಟ್ಟಿದೆ. ಗೂಗಲ್ ಸಂಸ್ಥೆ ಸರ್ಚ್ ಜೊತೆಯಲ್ಲಿ ಬೇರೆ ಅದೆಷ್ಟೋ  ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೂ ಬಳಕೆದಾರರ ಪಾಲಿಗೆ ಮಾತ್ರ ಇಂದಿಗೂ ಸರ್ಚ್ ಎಂದರೆ ಗೂಗಲ್, ಗೂಗಲ್ ಎಂದರೆ ಸರ್ಚ್!

ತಂತ್ರಜ್ಞಾನ ಜಗತ್ತಿನ ಮಾಂತ್ರಿಕ
ಬೇಕಾದ ಮಾಹಿತಿಯನ್ನು ಥಟ್ಟನೆ ಹುಡುಕಿಕೊಡಲು ಹುಟ್ಟಿಕೊಂಡ ಗೂಗಲ್ ಸಂಸ್ಥೆ ತಂತ್ರಜ್ಞಾನ ಜಗತ್ತಿನಲ್ಲಿ ಹಲವು ಅದ್ಭುತ ಸಾಧನೆಗಳನ್ನು ಮಾಡಿದೆ. ನಮ್ಮ ಪ್ರಶ್ನೆಯನ್ನು ಇಂತಿಷ್ಟೇ ಪದ ಬಳಸಿ ಇಂಥದ್ದೇ ರೂಪದಲ್ಲಿ ಕೇಳಬೇಕು ಎನ್ನುವಂತಹ ನಿಬಂಧನೆಗಳನ್ನೆಲ್ಲ ಹೋಗಲಾಡಿಸಿದ್ದು ಇದಕ್ಕೊಂದು ಉದಾಹರಣೆ. ಯಂತ್ರಗಳು ನಮ್ಮ ಪ್ರಶ್ನೆಯನ್ನು ಅರ್ಥಮಾಡಿಕೊಂಡು ಅದಕ್ಕೆ ಉತ್ತರಿಸುವ ಸಾಮರ್ಥ್ಯ ಬೆಳೆಸಿಕೊಂಡಿದ್ದರ (ನ್ಯಾಚುರಲ್ ಲ್ಯಾಂಗ್ವೆಜ್ ಪ್ರಾಸೆಸಿಂಗ್) ಹಿನ್ನೆಲೆಯಲ್ಲಿ ಗೂಗಲ್ ಕೊಡುಗೆಯೂ ಸಾಕಷ್ಟು ಪ್ರಮಾಣದಲ್ಲಿದೆ. ಮೇಲ್ನೋಟಕ್ಕೆ ನಮ್ಮ ಗಮನಕ್ಕೆ ಬರುವ ಇಂತಹ ಉದಾಹರಣೆಗಳಲ್ಲದೆ ಮಾಹಿತಿಯ ಶೇಖರಣೆ, ಸಂಸ್ಕರಣೆ ಹಾಗೂ ವಿತರಣೆಯಂತಹ ಕೆಲಸಗಳಲ್ಲೂ ಗೂಗಲ್ ಸಾಕಷ್ಟು ಕೆಲಸ ಮಾಡಿದೆ. ಛಾಯಾವಾಸ್ತವ (ವರ್ಚುಯಲ್ ರಿಯಾಲಿಟಿ), ಅತಿರಿಕ್ತ ವಾಸ್ತವಗಳಂತಹ (ಆಗ್ಮೆಂಟೆಡ್ ರಿಯಾಲಿಟಿ) ಹೊಸ ಕ್ಷೇತ್ರಗಳಲ್ಲೂ ಗೂಗಲ್ ಸಂಸ್ಥೆ ಸಕ್ರಿಯವಾಗಿದೆ.

ಮಾಹಿತಿ ತಂತ್ರಜ್ಞಾನವೆಂದರೆ ಇಂಗ್ಲಿಷ್ ಮಾತ್ರ ಎನ್ನುವ ತಪ್ಪು ಅಭಿಪ್ರಾಯವನ್ನು ದೂರಮಾಡುವಲ್ಲೂ ಗೂಗಲ್ ಕೊಡುಗೆ ಸಾಕಷ್ಟಿದೆ. ಇಂಗ್ಲಿಷ್ ಭಾಷೆಯಲ್ಲಿ ಬಹಳ ಹಿಂದಿನಿಂದಲೇ ಲಭ್ಯವಿರುವ ಧ್ವನಿ ಗುರುತಿಸುವ (ಸ್ಪೀಚ್ ರೆಕಗ್ನಿಶನ್), ಚಿತ್ರದಲ್ಲಿರುವ ಪಠ್ಯವನ್ನು ಬೇರ್ಪಡಿಸಿ ಗುರುತಿಸುವ (ಓಸಿಆರ್), ಇತರ ಭಾಷೆಗೆ ಅನುವಾದಿಸುವ (ಟ್ರಾನ್ಸ್‌ಲೇಶನ್), ಹಸ್ತಾಕ್ಷರವನ್ನು ಅರ್ಥಮಾಡಿಕೊಳ್ಳುವಂತಹ (ಹ್ಯಾಂಡ್‌ರೈಟಿಂಗ್ ರೆಕಗ್ನಿಶನ್) ಸೌಲಭ್ಯಗಳನ್ನೆಲ್ಲ ಕನ್ನಡವೂ ಸೇರಿದಂತೆ ಜಗತ್ತಿನ ಹಲವು ಭಾಷೆಗಳಲ್ಲಿ ಗೂಗಲ್ ಸಂಸ್ಥೆ ಪರಿಚಯಿಸಿದೆ. ವಿವಿಧ ಭಾಷೆಗಳ ಪಠ್ಯವನ್ನು ಸುಲಭಕ್ಕೆ ದಾಖಲಿಸುವಂತೆ ಕೀಬೋರ್ಡ್ ತಂತ್ರಾಂಶಗಳನ್ನು ರೂಪಿಸಿದ್ದೂ ಕಡಿಮೆ ಸಾಧನೆಯೇನಲ್ಲ.

ಕಲಿಯುಗದ ಸರ್ವಾಂತರ್ಯಾಮಿ 
ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯಲ್ಲಿ ನಮಗೆ ಬೇಕಾದ್ದನ್ನು ಹುಡುಕಿಕೊಡುವುದು ಎಂದರೆ ಅದು ಕೇಳಲು ಬಹಳ ಸರಳವೆಂದು ತೋರುತ್ತದೆ. ಕೇಳಲು ಸುಲಭ ಎನಿಸಿದರೂ ಇದು ಭಾರೀ ದೊಡ್ಡ ಪ್ರಮಾಣದಲ್ಲಿ ನಡೆಯುವ ಕೆಲಸ. ಇದರಿಂದಾಗಿ ಇಂದು ಗೂಗಲ್ ಬಳಿ ಕೋಟಿಗಟ್ಟಲೆ ಜಾಲತಾಣಗಳ, ವೆಬ್ ಪುಟಗಳ ಬಗೆಗಿನ ಮಾಹಿತಿ ಲಭ್ಯವಿದೆ. ಇಷ್ಟೆಲ್ಲ ಅಗಾಧ ಪ್ರಮಾಣದ ಮಾಹಿತಿ ಇರುವುದರಿಂದಲೇ ಇಂದು ಆ ಸಂಸ್ಥೆಗೆ ಎಲ್ಲಿಲ್ಲದ ಮಹತ್ವ. ಒಂದು ಖಾಸಗಿ ಸಂಸ್ಥೆಯ ನಿಯಂತ್ರಣದಲ್ಲಿ ಇಷ್ಟೆಲ್ಲ ಮಾಹಿತಿ ಇದೆ ಎನ್ನುವುದು ಖಾಸಗಿತನದ ಬಗ್ಗೆ ಕಾಳಜಿವಹಿಸುವವರ ಚಿಂತೆಗೂ ಕಾರಣವಾಗಿರುವ ಅಂಶ. ಯಾವುದೇ ವಿಷಯದ ಬಗ್ಗೆ ಹುಡುಕಲು ಹೊರಟಾಗ ನಮಗೆ ಯಾವ ಮಾಹಿತಿ ಕಾಣುತ್ತದೆ ಎನ್ನುವುದನ್ನು ಗೂಗಲ್‌ನ ಕ್ರಮವಿಧಿಗಳು ತೀರ್ಮಾನಿಸುತ್ತವೆ ಎನ್ನುವುದು ಈ ಚಿಂತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಅಷ್ಟೇ ಅಲ್ಲ, ವಿಶ್ವವ್ಯಾಪಿ ಜಾಲದ ಅಗಾಧ ಪ್ರಪಂಚದಲ್ಲಿ ಸರಾಗವಾಗಿ ಓಡಾಡಲು ಬಹಳಷ್ಟು ಬಳಕೆದಾರರು ಗೂಗಲ್‌ ಅನ್ನೇ ನಾವಿಕನೆಂದು ಪರಿಗಣಿಸುತ್ತಾರೆ. ಹೀಗಾಗಿ ಗೂಗಲ್ ಮೂಲಕ ಸಿಗುವ ಮಾಹಿತಿ, ಅದು ಸತ್ಯವೋ ಸುಳ್ಳೋ, ಜನರ ಮೇಲೆ ಬಲುಬೇಗ ಪ್ರಭಾವ ಬೀರಿಬಿಡುತ್ತದೆ. ಗೂಗಲ್ ಮ್ಯಾಪ್ಸ್‌ನಲ್ಲಿ ತಪ್ಪಾಗಿ ದಾಖಲಾದ ಒಂದೇ ಕಾರಣದಿಂದ ಡೆಟ್ರಾಯಿಟ್ ನಗರದ ಬಡಾವಣೆಯೊಂದರ ಹೆಸರು ಜನಬಳಕೆಯಲ್ಲೂ ಬದಲಾಗಿಹೋದ ಉದಾಹರಣೆಯೊಂದು ಈಚೆಗೆ ಈ ಸಾಧ್ಯತೆಯ ಗಂಭೀರತೆಯನ್ನು ತೋರಿಸಿಕೊಟ್ಟಿತ್ತು. ಇನ್ನು ನೆಂಟರ ಫೋನ್ ನಂಬರಿನಿಂದ ಪ್ರಾರಂಭಿಸಿ ನಾಲ್ಕು + ನಾಲ್ಕು ಎಷ್ಟು ಎನ್ನುವ ಲೆಕ್ಕದವರೆಗೆ ಪ್ರತಿಯೊಂದು ಮಾಹಿತಿಯೂ ಒಂದಲ್ಲ ಒಂದು ಗೂಗಲ್ ಉತ್ಪನ್ನದ ಮೂಲಕ ಸಿಗುವಂತಾಗಿದೆಯಲ್ಲ, ಇದರಿಂದ ನಮ್ಮ ಮಾನಸಿಕ ಹಾಗೂ ಬೌದ್ಧಿಕ ಸಾಮರ್ಥ್ಯಗಳ ಮೇಲೆ ಸಾಕಷ್ಟು ಋಣಾತ್ಮಕ ಪರಿಣಾಮವಾಗಿದೆ ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ.

'ಚಿಂತನಶೀಲ ಸಮಾಜಮುಖಿ' ಪತ್ರಿಕೆ ೨೦೧೮ರ ಸೆಪ್ಟೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge