ಶುಕ್ರವಾರ, ಸೆಪ್ಟೆಂಬರ್ 28, 2018

'ಫೋಮೋ'ದಿಂದ 'ಜೋಮೋ'ವರೆಗೆ

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನದ ಹೊಸ ಸವಲತ್ತುಗಳು ಕಾಲಕಾಲಕ್ಕೆ ನಮ್ಮ ಸಂಪರ್ಕಕ್ಕೆ ಬರುವುದು ಸಾಮಾನ್ಯ ಸಂಗತಿ; ಅವು ನಮ್ಮ ಬದುಕಿನ ಮೇಲೆ ಬೇರೆಬೇರೆ ಮಟ್ಟದಲ್ಲಿ ಪರಿಣಾಮ ಬೀರುವುದೂ ಸಾಮಾನ್ಯವೇ. ರೇಡಿಯೋದಿಂದ ಕಂಪ್ಯೂಟರಿನವರೆಗೆ, ತಂತಿ ಸಂದೇಶದಿಂದ ವಾಟ್ಸ್‌ಆಪ್‌ವರೆಗೆ ಇಂತಹ ಅನೇಕ ಉದಾಹರಣೆಗಳನ್ನು ನಾವು ನೋಡಬಹುದು.

ಇಂತಹ ಸವಲತ್ತುಗಳ ಪೈಕಿ ಕೆಲವು, ಬೇರೆ ಸವಲತ್ತುಗಳ ಹೋಲಿಕೆಯಲ್ಲಿ, ನಮ್ಮನ್ನು ಕೊಂಚ ಹೆಚ್ಚಾಗಿಯೇ ಪ್ರಭಾವಿಸುತ್ತವೆ. ಅದರಲ್ಲಿ ಕೆಲವನ್ನಂತೂ ಬಿಟ್ಟಿರುವುದೇ ಕಷ್ಟ ಎನ್ನಿಸುವ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ. ಈಚಿನ ವರ್ಷಗಳಲ್ಲಿ ಇಂತಹ ವಿಶೇಷ ಸ್ಥಾನ ಪಡೆದುಕೊಂಡಿರುವ ಸವಲತ್ತುಗಳ ಪೈಕಿ ಅಗ್ರಸ್ಥಾನ ಸಲ್ಲುವುದು ಸ್ಮಾರ್ಟ್‌ಫೋನ್‌ಗಳಿಗೆ. ಬ್ಲ್ಯಾಕ್‌ಬೆರಿ ಹಾಗೂ ಐಫೋನ್‌‌ನಿಂದ ಶುರುವಾಗಿ ಆಂಡ್ರಾಯ್ಡ್ ಫೋನುಗಳ ಮೂಲಕ ಹೆಚ್ಚಿದ ಅವುಗಳ ಜನಪ್ರಿಯತೆ ಕಳೆದ ಒಂದು ದಶಕದ ಅವಧಿಯಲ್ಲಿ ಅಗಾಧವಾಗಿ ಬೆಳೆದಿದೆ. ಇದರ ಪರಿಣಾಮ, ಇಂದು ನಮ್ಮ ಬದುಕಿನಲ್ಲಿ ಸ್ಮಾರ್ಟ್‌ಫೋನಿಗೆ ಎಲ್ಲಿಲ್ಲದ ಮಹತ್ವ.

ಪ್ರಪಂಚದ ಮೂಲೆಮೂಲೆಗಳ ನಡುವೆ ಸಂವಹನವನ್ನು ಕ್ಷಣಾರ್ಧದಲ್ಲಿ ಸಾಧ್ಯವಾಗಿಸುವ ಈ ಸಾಧನಕ್ಕೆ ಇಷ್ಟು ಗೌರವ ಸಲ್ಲಲೇಬೇಕು, ನಿಜ. ಆದರೆ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಪ್ರತಿಯೊಂದು ಕ್ಷಣದಲ್ಲೂ ಸ್ಮಾರ್ಟ್‌ಫೋನು ನಮ್ಮೊಡನೆ ಇರಬೇಕು ಎನಿಸುವ ಪರಿಸ್ಥಿತಿಯೂ, ಗೊತ್ತಿದ್ದೋ ಗೊತ್ತಿಲ್ಲದೆಯೋ, ಅನೇಕ ಬಳಕೆದಾರರಲ್ಲಿ ನಿರ್ಮಾಣವಾಗಿಬಿಟ್ಟಿದೆ.

ಇಂತಹ ಬಳಕೆದಾರರಲ್ಲಿ ಕಾಣಸಿಗುವ ಮೊಬೈಲ್ ವ್ಯಸನದ ವಿವರ ನಮಗೆ ಅಪರಿಚಿತವೇನೂ ಅಲ್ಲ: ಮೀಟಿಂಗಿನಲ್ಲಿ ಕುಳಿತಾಗ, ಊಟಕ್ಕೆ ಹೋದಾಗ, ಕಡೆಗೆ ಟೀವಿ ನೋಡುವಾಗಲೂ ಸ್ಮಾರ್ಟ್‌ಫೋನು ಇವರ ಜೊತೆಯಲ್ಲಿರುತ್ತದೆ. ಒಂದೊಮ್ಮೆ ಮೊಬೈಲ್ ಬದಿಗಿಟ್ಟರೂ ಥಟ್ಟನೆ ಬರುವ ಯಾವುದೋ ಒಂದು ನೋಟಿಫಿಕೇಶನ್ ಅದನ್ನು ಮತ್ತೆ ಕೈಗೆತ್ತಿಕೊಳ್ಳುವಂತೆ ಮಾಡುತ್ತದೆ. ಕೆಲಸಮಯ ಯಾವುದೇ ನೋಟಿಫಿಕೇಶನ್ ಬಾರದಿದ್ದರೆ ಯಾಕೋ ಏನೂ ಬರಲೇ ಇಲ್ಲವಲ್ಲ ಎಂದು ನೋಡಲಾದರೂ ಇವರು ಮೊಬೈಲನ್ನು ಮತ್ತೆ ಕೈಗೆತ್ತಿಕೊಳ್ಳುತ್ತಾರೆ. ಇನ್ನು ಅದರ ಬ್ಯಾಟರಿ ಮುಗಿದುಹೋಯಿತು ಅಥವಾ ಮೊಬೈಲ್ ಜಾಲದ ಸಂಪರ್ಕ ತಪ್ಪಿಹೋಯಿತು ಎಂದರಂತೂ ಚಡಪಡಿಕೆಯೇ ಶುರುವಾಗಿಬಿಡುತ್ತದೆ. 

ಈ ಪರಿಸ್ಥಿತಿಯನ್ನು ತಜ್ಞರು 'ಫಿಯರ್ ಆಫ್ ಮಿಸ್ಸಿಂಗ್ ಔಟ್ (ಫೋಮೋ)', ಅರ್ಥಾತ್ ಹೊರಗುಳಿಯುವ ಭೀತಿ ಎಂದು ಗುರುತಿಸುತ್ತಾರೆ. ಈ ಭೀತಿಗೆ ಕಾರಣ - ಕೊಂಚಹೊತ್ತು ಮೊಬೈಲು ಕೈಯಲ್ಲಿಲ್ಲದಿದ್ದರೆ, ವಾಟ್ಸ್‌ಆಪ್‌ನಲ್ಲಿ ಇಣುಕದಿದ್ದರೆ, ಸಮಾಜಜಾಲಗಳಲ್ಲಿ ಅಡ್ಡಾಡದಿದ್ದರೆ ಅಲ್ಲಿನ ವಿದ್ಯಮಾನಗಳು ನಮಗೆ ತಿಳಿಯುವುದಿಲ್ಲ ಎನ್ನುವ ಅನಿಸಿಕೆ. ಎಲ್ಲರೊಡನೆಯೂ ಯಾವಾಗಲೂ ಸಂಪರ್ಕದಲ್ಲಿರಬೇಕು, ಆನ್‌ಲೈನ್ ಲೋಕದಲ್ಲಿ ಯಾರು ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕು, ಸಂದೇಶ ಕಳಿಸಿದವರಿಗೆ ಥಟ್ಟನೆ ಉತ್ತರಿಸಬೇಕು ಎನ್ನುವ ಬಯಕೆಯೂ ಇದಕ್ಕೆ ಕಾರಣವಾಗಬಹುದು. ಕೈಗೆ ಸಿಕ್ಕಿದ ಸಂದೇಶಗಳನ್ನು ಅದೇಕ್ಷಣದಲ್ಲಿ ಸಿಕ್ಕವರಿಗೆಲ್ಲ ಕಳಿಸಿಬಿಡುವುದೂ ಈ ಭೀತಿಯದೇ ಇನ್ನೊಂದು ರೂಪ.

ಹೊರಗುಳಿಯುವ ಭೀತಿಯ ಪರಿಣಾಮಗಳು ಹಲವು ಬಗೆಯದಾಗಿರುವುದು ಸಾಧ್ಯ. ಅರಿವಿಗೇ ಬಾರದಂತೆ ಸಮಯ ವ್ಯರ್ಥವಾಗುವುದು ಇಂತಹ ಪರಿಣಾಮಗಳಲ್ಲಿ ಪ್ರಮುಖವಾದದ್ದು:  ಫೇಸ್‌ಬುಕ್‌ನಂತಹ ಆಪ್‌ಗಳನ್ನು ತೆರೆದು ನೋಡುತ್ತ ಹೋದಂತೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಸಮಾಜಜಾಲಗಳಲ್ಲಿ ಕಾಣುವ ಇತರರ ಜೀವನಶೈಲಿಗೆ ನಮ್ಮದನ್ನು ಹೋಲಿಸಿಕೊಂಡು ಕೀಳರಿಮೆ ಅನುಭವಿಸುವುದು, ನಾವು ಹಾಕಿದ ಚಿತ್ರ ಇಲ್ಲವೇ ಸಂದೇಶಕ್ಕೆ ಪ್ರತಿಕ್ರಿಯೆಯೇ ಬರಲಿಲ್ಲವೆಂದು ಕೊರಗುವುದು ಕೂಡ ಇಂಥದ್ದೇ ಇನ್ನಷ್ಟು ಪರಿಣಾಮಗಳು. ಉದ್ಯೋಗಕ್ಕೆ ಸಂಬಂಧಿಸಿದ ಇಮೇಲನ್ನು ವಾರಾಂತ್ಯ ಹಾಗೂ ರಜಾದಿನಗಳಲ್ಲೂ ತೆರೆದು ನೋಡುತ್ತಿರುವುದು ಮಾನಸಿಕ ಒತ್ತಡಕ್ಕೂ ಕಾರಣವಾಗಬಲ್ಲದು.

ಈ ಭೀತಿಯನ್ನು ದೂರಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯೆಂದರೆ ಮೊಬೈಲ್ ಬಳಕೆಯನ್ನು ಕಡಿಮೆಮಾಡುವುದು. ಮೊಬೈಲ್ ಬಳಕೆಯನ್ನೇ ಕಡಿಮೆಮಾಡಿದರೆ ಹೊರಗುಳಿಯುವ ಭೀತಿಯನ್ನು ಸುಲಭವಾಗಿ ದೂರಮಾಡಬಹುದು ಎನ್ನುವುದು ಇದರ ಉದ್ದೇಶ. ಆದರೆ ಮೊಬೈಲ್ ಕೈಗೆತ್ತಿಕೊಂಡ ನಂತರ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ ಎಂಬ ಪರಿಸ್ಥಿತಿ ಇರುವಾಗ ಇದನ್ನು ಸಾಧ್ಯವಾಗಿಸುವುದು ಹೇಳಿದಷ್ಟು ಸುಲಭವಲ್ಲ. ಹೀಗಾಗಿಯೇ ಈ ಕೆಲಸದಲ್ಲೂ ನೆರವಾಗುವ ತಂತ್ರಾಂಶಗಳನ್ನು ಪರಿಚಯಿಸಲಾಗುತ್ತಿದೆ.

ಸ್ಮಾರ್ಟ್‌ಫೋನ್ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆಯೇ ಇಂತಹ ಪ್ರಯತ್ನಗಳ ಮುಂಚೂಣಿಯಲ್ಲಿರುವುದು ವಿಶೇಷ. ಇದೀಗ ಘೋಷಣೆಯಾಗಿರುವ ಆಂಡ್ರಾಯ್ಡ್ ಹೊಸ ಆವೃತ್ತಿಯಲ್ಲಿ (ಆಂಡ್ರಾಯ್ಡ್ ಪೈ) ಮೊಬೈಲ್ ಬಳಕೆ ಕಡಿಮೆಗೊಳಿಸುವ ಕೆಲ ಪ್ರಯತ್ನಗಳನ್ನು ಅಳವಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಆಂಡ್ರಾಯ್ಡ್ ಹೊಸ ಆವೃತ್ತಿಗೆ ಹೂರಣದ ಕಡುಬಿನ ಹೆಸರು!
ಯೂಟ್ಯೂಬ್‌ನಲ್ಲಿ ಪ್ರತಿದಿನ ನಾವು ಎಷ್ಟು ನಿಮಿಷಗಳಷ್ಟು ವೀಡಿಯೋ ನೋಡುತ್ತಿದ್ದೇವೆ, ಇತರ ಆಪ್‌ಗಳಲ್ಲಿ ಎಷ್ಟು ಸಮಯ ಕಳೆಯುತ್ತಿದ್ದೇವೆ ಎಂಬ ಮಾಹಿತಿಯನ್ನೆಲ್ಲ ಗ್ರಾಹಕರಿಗೆ ತೋರಿಸುವುದು ಇಂತಹ ಪ್ರಯತ್ನಗಳಲ್ಲೊಂದು. ಈ ಮಾಹಿತಿಯ ಆಧಾರದ ಮೇಲೆ ನಮ್ಮ ಬಳಕೆಯನ್ನು ನಾವೇ ನಿಯಂತ್ರಿಸಿಕೊಳ್ಳುವ ಸೌಲಭ್ಯವೂ ಗ್ರಾಹಕರಿಗೆ ದೊರಕಲಿದೆ. ನಾವು ನಿರ್ಧರಿಸಿಕೊಂಡ ಅವಧಿಗಿಂತ ಹೆಚ್ಚು ಹೊತ್ತು ವೀಡಿಯೋ ನೋಡುತ್ತಿದ್ದರೆ, ಇತರ ಯಾವುದೋ ಆಪ್ ಬಳಸುತ್ತಿದ್ದರೆ ನಮ್ಮ ಮೊಬೈಲೇ ನಮಗೆ ಎಚ್ಚರಿಕೆಯ ಸಂದೇಶ ತೋರಿಸುತ್ತದೆ!


ಇದೇ ರೀತಿ ವಿವಿಧ ಆಪ್‌ಗಳು ನಮಗೆ ತೋರಿಸುವ ನೋಟಿಫಿಕೇಶನ್‌ಗಳ ಮೇಲೂ ಹೆಚ್ಚಿನ ನಿಯಂತ್ರಣ ಗ್ರಾಹಕರಿಗೆ ದೊರಕಲಿದೆ. ನಿರ್ದಿಷ್ಟ ಅವಧಿಯಲ್ಲಿ ಯಾವುದೇ ನೋಟಿಫಿಕೇಶನ್ ಬಾರದಂತೆ ನೋಡಿಕೊಳ್ಳುವ ಆಯ್ಕೆಯೂ ಇರಲಿದೆ.

ಇಂತಹ ಸೌಲಭ್ಯಗಳನ್ನೆಲ್ಲ ಬಳಸಿಕೊಂಡು ಗ್ರಾಹಕರು ತಮ್ಮ ಮೊಬೈಲ್ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆಮಾಡಿಕೊಳ್ಳಲಿದ್ದಾರೆ ಎನ್ನುವುದು ಈ ಪ್ರಯತ್ನಗಳ ಹಿಂದಿನ ಆಶಯ. ಹೊರಗುಳಿಯುವ ಭೀತಿಯಿಂದ ವರ್ಚುಯಲ್ ಲೋಕದಲ್ಲೇ ಉಳಿದು ಭೌತಿಕ ಜಗತ್ತಿನ ಅನುಭವಗಳನ್ನು ತಪ್ಪಿಸಿಕೊಳ್ಳುವುದು ಬೇಡ, ಅದರ ಬದಲು ಸಾಧ್ಯವಾದಾಗಲೆಲ್ಲ - ಅದು ಎಷ್ಟು ಕಡಿಮೆ ಸಮಯವಾದರೂ ಸರಿ - ವರ್ಚುಯಲ್ ಲೋಕದಿಂದ ಹೊರಗುಳಿಯುವ ಖುಷಿಯನ್ನು (ಜಾಯ್ ಆಫ್ ಮಿಸ್ಸಿಂಗ್ ಔಟ್, ಜೋಮೋ) ಅನುಭವಿಸುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಸೋಶಿಯಲ್ ಮೀಡಿಯಾ ವಾಗ್ವಾದದ ಬದಲು ಮೊಬೈಲ್ ಇಲ್ಲದ ಮುಖಾಮುಖಿ ಚರ್ಚೆಯನ್ನೇ ಮಾಡುವುದು, ತಿಂಡಿ ಚಿತ್ರಕ್ಕೆ ಲೈಕು-ಕಮೆಂಟು ಹಾಕುತ್ತ ಕೂರುವ ಬದಲು ಮೊಬೈಲ್ ಪಕ್ಕಕ್ಕಿಟ್ಟು ಗೆಳೆಯರೊಡನೆ ತಿಂಡಿ ತಿನ್ನಲು ಹೋಗುವುದು, ಸ್ವಲ್ಪಹೊತ್ತು ಮೊಬೈಲಿನಿಂದ ದೂರವಿದ್ದು ಪುಸ್ತಕ ಓದುವುದು ಒಳ್ಳೆಯದು ಎನ್ನುವುದು ಅವರ ಅನಿಸಿಕೆ.

ಇಷ್ಟೆಲ್ಲ ಹೇಳಿದ ಮೇಲೆ, ನಮ್ಮ ಆಯ್ಕೆ ಏನೆಂದು ನಾವೇ ತೀರ್ಮಾನಿಸಿಕೊಳ್ಳಬೇಕು. ಹೊರಗುಳಿಯುವ ಭೀತಿಯೋ, ಹೊರಗುಳಿಯುವ ಖುಷಿಯೋ?

ಸೆಪ್ಟೆಂಬರ್ ೧೯, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ [Photo credit: PlusLexia.com]

ಕಾಮೆಂಟ್‌ಗಳಿಲ್ಲ:

badge