ಮಂಗಳವಾರ, ಜುಲೈ 17, 2018

ವಿಶ್ವ ಎಮೋಜಿ ದಿನ ವಿಶೇಷ: ಇಂದು ಸ್ಮೈಲಿ ದಿನ!

ಟಿ. ಜಿ. ಶ್ರೀನಿಧಿ


ಪಠ್ಯ ಸಂದೇಶ, ಅಂದರೆ ಟೆಕ್ಸ್ಟ್ ಮೆಸೇಜುಗಳ ವಿನಿಮಯಕ್ಕಾಗಿ ವಾಟ್ಸ್ಆಪ್‍ ಹಾಗೂ ಫೇಸ್‍ಬುಕ್‍ನಂತಹ ಮಾಧ್ಯಮಗಳನ್ನು ಬಳಸುವುದು ಈಚಿನ ವರ್ಷಗಳಲ್ಲಿ ವ್ಯಾಪಕವಾಗಿರುವ ಅಭ್ಯಾಸ. ಇಂತಹ ಸಂದೇಶಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ನೆರವಾಗುವ ಚಿತ್ರರೂಪದ ಸಂಕೇತಗಳ ಬಳಕೆಯೂ ಗಮನಾರ್ಹವಾಗಿ ಹೆಚ್ಚಿದೆ. ಇದು ಯಾವ ಮಟ್ಟ ತಲುಪಿದೆಯೆಂದರೆ ನಮ್ಮ ಅದೆಷ್ಟೋ ಸಂದೇಶಗಳಲ್ಲಿ ಇಂತಹ ಸಂಕೇತಗಳು ಮಾತ್ರವೇ ಇರುತ್ತವೆ!

ಪಠ್ಯಸಂದೇಶಗಳ ಜಗತ್ತಿನಲ್ಲಿ ಇಷ್ಟು ದೊಡ್ಡ ಬದಲಾವಣೆ ತಂದ ಶ್ರೇಯ ಈ ಸಂಕೇತಗಳದ್ದು. ಸಾಮಾನ್ಯ ಬಳಕೆಯಲ್ಲಿ ಸ್ಮೈಲಿಗಳೆಂದೂ ಅಧಿಕೃತವಾಗಿ 'ಎಮೋಜಿ'ಗಳೆಂದೂ ಗುರುತಿಸುವುದು ಇವನ್ನೇ.

'ಎಮೋಜಿ' ಎನ್ನುವ ಹೆಸರು ಬಂದಿರುವುದು ಜಪಾನೀ ಭಾಷೆಯಿಂದ. ಚಿತ್ರ ಹಾಗೂ ಅಕ್ಷರ ಎನ್ನುವುದನ್ನು ಪ್ರತಿನಿಧಿಸುವ ಆ ಭಾಷೆಯ ಪದಗಳನ್ನು ಜೋಡಿಸಿ ಈ ಹೆಸರನ್ನು ರೂಪಿಸಲಾಗಿದೆಯಂತೆ. ಸರಿಸುಮಾರು ಅಕ್ಷರಗಳ ಗಾತ್ರದಲ್ಲೇ ಇರುವ ಈ ಚಿತ್ರಾಕ್ಷರಗಳು ಸಂತೋಷ, ಬೇಸರ, ಅಚ್ಚರಿ, ಮೆಚ್ಚುಗೆ ಮುಂತಾದ ಅನೇಕ ಭಾವಗಳನ್ನು ಥಟ್ಟನೆ ವ್ಯಕ್ತಪಡಿಸಲು ನೆರವಾಗುತ್ತವೆ.

ಅಕ್ಷರ ಹಾಗೂ ಲೇಖನ ಚಿಹ್ನೆಗಳ ಜೋಡಣೆಯಿಂದ ಭಾವನೆಗಳನ್ನು (ಎಮೋಶನ್) ವ್ಯಕ್ತಪಡಿಸಲು ನೆರವಾಗುವ ಸಂಕೇತಗಳನ್ನು (ಐಕನ್) ರೂಪಿಸಬಹುದು ಎಂದು ಅಮೆರಿಕಾದ ಸ್ಕಾಟ್ ಫಾಲ್‌ಮನ್ ಎಂಬ ತಂತ್ರಜ್ಞ ೧೯೮೦ರ ದಶಕದಲ್ಲಿ ತೋರಿಸಿಕೊಟ್ಟರು. :-) ಎಂಬ ನಗುಮುಖವೂ :-( ಎಂಬ ಅಳುಮುಖವೂ ಮೊದಲಬಾರಿಗೆ ಕಾಣಿಸಿಕೊಂಡದ್ದು ಅದೇ ಸಂದರ್ಭದಲ್ಲಿ. ಎಮೋಶನ್ ಹಾಗೂ ಐಕನ್ ಎಂಬ ಎರಡು ಪದಗಳನ್ನು ಸೇರಿಸಿ ಇವನ್ನು 'ಎಮೋಟೈಕನ್'ಗಳೆಂದು ಗುರುತಿಸಲಾಯಿತು.

ಈ ಎಮೋಟೈಕನ್‍ಗಳನ್ನು ಇಂದಿನ ಎಮೋಜಿಗಳ ಪೂರ್ವಜರೆಂದು ಕರೆಯಬಹುದು. ಚಿಹ್ನೆಗಳ ಜೋಡಣೆಯಿಂದ ರೂಪುಗೊಂಡ, ಅರ್ಥಮಾಡಿಕೊಳ್ಳಲು ಅಷ್ಟೇನೂ ಸುಲಭವಲ್ಲದ ಈ ಸಂಕೇತಗಳ ಬದಲು ಪುಟಾಣಿ ಚಿತ್ರಗಳನ್ನೇ ಬಳಸುವ ಪ್ರಯೋಗ ಮಾಡಿತೋರಿಸಿದ್ದು ಜಪಾನಿನ ಎನ್‌ಟಿಟಿ ಡೋಕೋಮೋ ಸಂಸ್ಥೆ, ೧೯೯೦ರ ಆಸುಪಾಸಿನಲ್ಲಿ. ಸ್ಮಾರ್ಟ್‌ಫೋನುಗಳ ಬಳಕೆ ಹೆಚ್ಚಿದಂತೆ ಇವು ವಿವಿಧ ತಂತ್ರಾಂಶಗಳಲ್ಲಿ ಸ್ಥಾನಪಡೆದುಕೊಂಡವು. ಭಾವನೆಗಳನ್ನು ವ್ಯಕ್ತಪಡಿಸುವ ಮುಖಗಳ ಜೊತೆಗೆ ತಿಂಡಿತಿನಿಸು, ವಾಹನ, ಕಟ್ಟಡಗಳು, ಪ್ರಾಣಿಪಕ್ಷಿ, ಬಾವುಟ, ಯಂತ್ರೋಪಕರಣ ಮುಂತಾದ ಸಂಗತಿಗಳೂ ಎಮೋಜಿಗಳ ರೂಪತಳೆದವು.     

ಆಪಲ್‌ನ ಐಓಎಸ್ ಕಾರ್ಯಾಚರಣ ವ್ಯವಸ್ಥೆಗೆ (ಆನಂತರ ಆಂಡ್ರಾಯ್ಡ್‌ಗೂ) ಹೀಗೆ ಸೇರಿಕೊಂಡ ಎಮೋಜಿಗಳ ಪೈಕಿ ಕ್ಯಾಲೆಂಡರ್ ಕೂಡ ಒಂದು. ಈ ಎಮೋಜಿಯಲ್ಲಿರುವ ಕ್ಯಾಲೆಂಡರ್ ಚಿತ್ರದಲ್ಲಿ ನಮಗೆ ಕಾಣಿಸುವ ಜುಲೈ ಹದಿನೇಳನೇ ದಿನಾಂಕವನ್ನು 'ವಿಶ್ವ ಎಮೋಜಿ ದಿನ'ವೆಂದು ಆಚರಿಸಲಾಗುತ್ತದೆ. ಎಮೋಜಿಪೀಡಿಯ ಜಾಲತಾಣದ ಸ್ಥಾಪಕ ಜೆರೆಮಿ ಬರ್ಜ್ ಎಂಬಾತ ೨೦೧೪ರಲ್ಲಿ ಈ ದಿನಾಚರಣೆಯನ್ನು ಪ್ರಾರಂಭಿಸಿದನಂತೆ.

ವಿಶ್ವದ ವಿವಿಧೆಡೆ ಬೇರೆಬೇರೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ದಿನವನ್ನು ಆಚರಿಸುವ ಅಭ್ಯಾಸವಿದೆ. ಹಲವು ವಾಣಿಜ್ಯ ಸಂಸ್ಥೆಗಳು ಈ ಸಂದರ್ಭವನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಂಡಿರುವುದೂ ಉಂಟು. ಈ ವರ್ಷವಂತೂ ಅತ್ಯಂತ ಹೆಚ್ಚು ಜನಕ್ಕೆ ಎಮೋಜಿಗಳಂತೆ ವೇಷ ಹಾಕಿ ಗಿನ್ನಿಸ್ ದಾಖಲೆ ನಿರ್ಮಿಸುವ ಪ್ರಯತ್ನ ದುಬೈಯಲ್ಲಿ ನಡೆಯಲಿದೆಯಂತೆ! ಇದೆಲ್ಲ ಬೇಡ, ನಮ್ಮ ಮೊಬೈಲು-ಕಂಪ್ಯೂಟರುಗಳನ್ನು ಬಿಟ್ಟು ನಾವೆಲ್ಲೂ ಹೋಗುವುದಿಲ್ಲ ಎನ್ನುವವರು #WorldEmojiDay ಎಂಬ ಹ್ಯಾಶ್‌ಟ್ಯಾಗ್ ಸೇರಿಸಿ ಸಮಾಜಜಾಲಗಳಲ್ಲೇ ಎಮೋಜಿ ದಿನ ಆಚರಿಸುವುದೂ ಸಾಧ್ಯವಿದೆ.

ಎಮೋಜಿ ದಿನದ ಬಗ್ಗೆ ಕೇಳಿದ್ದರೂ ಕೇಳಿಲ್ಲದಿದ್ದರೂ ನಾವೆಲ್ಲರೂ ಎಮೋಜಿಗಳನ್ನು ಬಳಸುವ ಪ್ರಮಾಣ ಮಾತ್ರ ಹೆಚ್ಚುತ್ತಲೇ ಇದೆ. ಸಂದೇಶ ಕಳಿಸಲು ಬಳಕೆಯಾಗುವ ಮೊಬೈಲ್ ಆಪ್‍ಗಳ ಜೊತೆಗೆ ಹಲವು ಜಾಲತಾಣ ಹಾಗೂ ಇಮೇಲ್ ಸೇವೆಗಳಲ್ಲೂ ಎಮೋಜಿಗಳು ಬಳಕೆಯಾಗುತ್ತಿವೆ. ಎಮೋಜಿಗಳನ್ನು ಪಟ್ಟಿಯಿಂದ ಆಯ್ದುಕೊಳ್ಳುವುದಷ್ಟೇ ಅಲ್ಲ, ಎಮೋಟೈಕನ್‌ ಟೈಪ್ ಮಾಡುತ್ತಿದ್ದಂತೆ ಅದು ತನ್ನಷ್ಟಕ್ಕೆ ತಾನೇ ಎಮೋಜಿಯಾಗಿ ಬದಲಾಗುವ ವ್ಯವಸ್ಥೆ ಕೂಡ ಅನೇಕ ಕಡೆ ಇದೆ. ಅಷ್ಟೇ ಏಕೆ, ಯುನಿಕೋಡ್ ಶಿಷ್ಟತೆಯಲ್ಲೂ  ಈ ಚಿತ್ರಗಳಿಗೆ ಸ್ಥಾನ ದೊರೆತಿದೆ. ಎಮೋಜಿಗಳಲ್ಲಿ ವಿಶ್ವದ ಎಲ್ಲೆಡೆಯ ಸಂಸ್ಕೃತಿ-ಸಮುದಾಯಗಳಿಗೆ ಸ್ಥಾನ ದೊರಕಿಸಿಕೊಡುವ ಪ್ರಯತ್ನಗಳೂ ನಡೆದಿವೆ. ಎಮೋಜಿ ಎನ್ನುವ ಹೆಸರು ೨೦೧೩ರಲ್ಲೇ ಆಕ್ಸ್ ಫರ್ಡ್ ನಿಘಂಟಿನಲ್ಲೂ ಜಾಗಪಡೆದುಕೊಂಡಿದೆ.

ಈ ಸಂಕೇತಗಳ ಜನಪ್ರಿಯತೆ ಯಾವ ಮಟ್ಟ ತಲುಪಿದೆಯೆಂದರೆ ಡಿಜಿಟಲ್ ಲೋಕದಿಂದ ಆಚೆಗೆ ಪೆನ್ನು-ಕಾಗದದ ಬರವಣಿಗೆಯಲ್ಲೂ ಎಮೋಜಿಗಳು ಕಾಣಿಸಿಕೊಳ್ಳುತ್ತಿವೆ. ಯುವಜನತೆಯ ಮೊಬೈಲು-ಕಂಪ್ಯೂಟರುಗಳಲ್ಲೂ ಅದರಿಂದಾಚೆಗಿನ ಬದುಕು-ಬರಹದಲ್ಲೂ ಎಮೋಜಿಗಳು ತಮ್ಮದೇ ಆದ ಸ್ಥಾನ ಪಡೆದುಕೊಂಡಿವೆ.

ನಮ್ಮನ್ನು ಇಷ್ಟೆಲ್ಲ ಪ್ರಭಾವಿಸಿರುವ ಈ ಚಿತ್ರಗಳನ್ನು ಮೆಚ್ಚಿಕೊಳ್ಳಲೇಬೇಕು ಬಿಡಿ. ಅದಕ್ಕೇನು ನಾಲ್ಕಾರು ಸಾಲಿನ ಸಂದೇಶ ಬರೆಯಬೇಕೇ? ಉಳಿದ ಬೆರಳುಗಳನ್ನೆಲ್ಲ ಮಡಚಿ ಹೆಬ್ಬೆರಳೊಂದನ್ನು ಮೇಲೆತ್ತಿದ :thumbsup ಚಿತ್ರವನ್ನು ಫೇಸ್‌ಬುಕ್‌ನಲ್ಲೋ ವಾಟ್ಸ್‌ಆಪ್‌ನಲ್ಲೋ ಅಂಟಿಸಿದರಾಯಿತು!

ಜುಲೈ ೧೬, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
badge