ಸೋಮವಾರ, ಮೇ 14, 2018

ಮಳೆ ಬಂತು, ಮಣ್ಣಿನ ಘಮ ತಂತು!

ಕ್ಷಮಾ ವಿ. ಭಾನುಪ್ರಕಾಶ್


ಮೊದಲ ಮಳೆ ಹೊತ್ತು ತರುವ ನೆನಪು ಮತ್ತು ಪರಿಮಳ ಸಾಟಿ ಇಲ್ಲದ್ದು. ಮೊದಲ ಮಳೆ ಇಳೆಯನ್ನು ಸ್ಪರ್ಶಿಸಿದಾಗ ಹೊರಹೊಮ್ಮುವ ಘಮಕ್ಕೆ ಮುಖ್ಯ ಕಾರಣ ಮಣ್ಣಿನಲ್ಲಿರುವ ಒಂದು ಬಗೆಯ ಬ್ಯಾಕ್ಟೀರಿಯ ಎಂದರೆ ನಂಬುವುದೇ ಕಷ್ಟ.

ಮಳೆಯ ಜೊತೆ ಬರುವ ಈ ಪರಿಮಳಕ್ಕೆ ಕಾರಣವಾಗುವ ಬ್ಯಾಕ್ಟೀರಿಯಗಳ ಗುಂಪಿನ ಹೆಸರು 'ಆಕ್ಟಿನೋಮೈಸೀಟ್ಸ್'. ಇವು ಬರಿಯ ಕಣ್ಣಿಗೆ ಕಾಣದ ಬಹು ಉಪಯುಕ್ತ ಸೂಕ್ಷ್ಮ ಜೀವಿಗಳು. ಈ ಬಗೆಯ ಬ್ಯಾಕ್ಟೀರಿಯಗಳ ರಚನೆ ಉದ್ದುದ್ದ ತಂತುಗಳಂತೆ ಇರುತ್ತದೆ. ಮನುಷ್ಯರಲ್ಲಿ, ಪ್ರಾಣಿಗಳಲ್ಲಿ ಹಲವಾರು ಖಾಯಿಲೆಗಳಿಗೆ ಕಾರಣವಾಗುವ ಇವು ಹಲವಾರು ಆಂಟೀಬಯೋಟಿಕ್, ಅಂದರೆ ಪ್ರತಿಜೀವಕಗಳನ್ನೂ ಉತ್ಪಾದಿಸುತ್ತವೆ.

ಆಕ್ಟಿನೋಮೈಸೀಟ್ಸ್ ಹೆಚ್ಚಾಗಿ ವಾಸಿಸುವುದು ಮಣ್ಣಿನಲ್ಲಿ. ಅವುಗಳ ಹುಟ್ಟು, ಬೆಳವಣಿಗೆ, ಸಂತಾನೋತ್ಪತ್ತಿ ಮತ್ತು ಮರಣ ಎಲ್ಲವೂ ಮಣ್ಣಿನಲ್ಲೇ. ಸಂತಾನೋತ್ಪತ್ತಿಯ ಸಮಯದಲ್ಲಿ ಇವು ಸ್ಪೋರ್, ಅಂದರೆ ಬೀಜಕಗಳನ್ನು ಉತ್ಪಾದಿಸುತ್ತವೆ. ಬಹಳ ಸಣ್ಣದಾಗಿರುವ ಈ ಸ್ಪೋರ್‌ಗಳನ್ನು ಬರಿಯ ಕಣ್ಣಲ್ಲಿ ನೋಡಲು ಸಾಧ್ಯವೇ ಇಲ್ಲ.

ಮಣ್ಣಿನಲ್ಲಿ ಹುದುಗಿರುವ ಈ ಸೂಕ್ಷ್ಮಕಣಗಳು ಮಳೆಯ ಹನಿ ನೆಲಕ್ಕೆ ಬಿದ್ದ ತಕ್ಷಣ ನೀರಿನ ಹನಿ ಬಿದ್ದ ರಭಸಕ್ಕೆ ಪುಟಿದೇಳುತ್ತವೆ. ಮಳೆಯ ಹನಿ ಪುಟಿದೇಳುವ ಸ್ಪೋರ್‌ಗಳನ್ನು ತನ್ನತ್ತ ಸೆಳೆದುಕೊಳ್ಳುತ್ತದೆ; ಅವೆರಡೂ ಒಟ್ಟಿಗೆ ಸೇರಿ ಏರೋಸಾಲ್‌ನ ರೂಪ ಪಡೆಯುತ್ತವೆ. ನಾವು ಪ್ರತಿ ದಿನ ಉಪಯೋಗಿಸುವ ದ್ರವರೂಪದ ಪರ್‌ಫ್ಯೂಮ್, ಡಿಯೋ ಸ್ಪ್ರೇ ಇತ್ಯಾದಿಗಳಲ್ಲಿನ ಪರಿಮಳದ ಅಂಶ, ಸಣ್ಣ ಸಣ್ಣ ಕಣ್ಣಿಗೆ ಕಾಣದ ಹನಿಗಳಾಗಿ ಮಾರ್ಪಾಡಾಗುವುದು ಈ ಏರೋಸಾಲ್‌ನ ರೂಪದಲ್ಲೇ.

ಏರೋಸಾಲ್‌ ರೂಪದಲ್ಲಿರುವ ಮಳೆ ಹನಿ ಮತ್ತು ಸ್ಪೋರ್‌ಗಳ ಮಿಶ್ರಣ ಗಾಳಿಯಲ್ಲಿ ಪಸರಿಸುತ್ತದೆ; ಈ ಗಾಳಿಯನ್ನು ಉಸಿರಾಡಿದ ನಮಗೆ ಮಧುರವಾದ ಪರಿಮಳದ ಅನುಭವ ಆಗುತ್ತೆ. ನಾವು ಆ ಪರಿಮಳಕ್ಕೆ ಮಣ್ಣು ಮತ್ತು ಮಳೆ ಕಾರಣ ಎಂದುಕೊಳ್ಳುತ್ತೇವೆ, ಆದರೆ ಆ ಸಿಹಿಯಾದ ಪರಿಮಳ ಸ್ಪೋರ್‌ಗಳದ್ದು.

ಕೆಲವೊಮ್ಮೆ, ಮಳೆಯಾದಾಗ ಪರಿಮಳ ಬಂದರೂ ಅದು ಈ ಮೇಲೆ ಹೇಳಿರೋ ಪರಿಮಳದಂತಿರದೆ ಬೇರೆಯೇ ಆಗಿರುತ್ತದೆ. ಆದಕ್ಕೆ ಹಲವಾರು ಕಾರಣಗಳಿರಬಹುದು. ಮುಖ್ಯವಾಗಿ ಕೆಲವು ಮರ ಗಿಡಗಳು ಉತ್ಪಾದಿಸುವ ಸುಗಂಧಿತ ಸಂಯುಕ್ತ ಪದಾರ್ಥಗಳು ಕೆಳಗಿರುವ ಕಲ್ಲು ಮಣ್ಣುಗಳ ಮೇಲೆ ಬಿದ್ದಿರುತ್ತವೆ. ಅವು ಮಳೆ ನೀರಿನಲ್ಲಿ ಕರಗಿದಾಗ ಮುದನೀಡುವ ಪರಿಮಳ ಗಾಳಿಯಲ್ಲಿ ಹರಡುವುದು ಸಾಧ್ಯ.

ಇನ್ನು ಕೆಲಬಾರಿ ಮಳೆಯಾದಾಗ ಬೇರೆಬೇರೆ ರೀತಿಯ ವಾಸನೆ ಬರುವುದೂ ಇದೆ. ಪರಿಸರ ಮಾಲಿನ್ಯ ಹೆಚ್ಚಿರುವ ಜಾಗದಲ್ಲಿ ಬರುವ ಮಳೆಗೆ ಆಮ್ಲಗಳ ವಾಸನೆ ಇರುತ್ತದೆ. ಇದಕ್ಕೆ ಕಾರಣ - ಮಲಿನವಾದ ವಾತಾವರಣದಲ್ಲಿರುವ ಸಲ್ಫ಼ರ್ ಅಥವಾ ನೈಟ್ರೋಜನ್‌ನ ಸಂಯುಕ್ತ ಆಕ್ಸೈಡ್‌ಗಳು. ಈ ಆಕ್ಸೈಡ್‌ಗಳು ಮಳೆಯ ನೀರಿನೊಂದಿಗೆ ಬೆರೆತು ಸಲ್ಫ್ಯೂರಿಕ್ ಆಸಿಡ್ ಮತ್ತು ನೈಟ್ರಿಕ್ ಆಸಿಡ್‌ಗಳಾಗುತ್ತವೆ. ಈ ಆಮ್ಲಗಳು ಕಡಿಮೆ ಪ್ರಮಾಣದಲ್ಲಿದ್ದರೆ ಮಳೆಗೆ ಕೇವಲ ಆಮ್ಲದ ವಾಸನೆ ಇರುತ್ತೆ. ಈ ಆಸಿಡ್‌‍ಗಳೇನಾದರೂ ಹೆಚ್ಚಿಗೆ ಪ್ರಮಾಣದಲ್ಲಿದ್ದರೆ ಮಳೆಯೇ ಆಮ್ಲ ಮಳೆ ಅಥವಾ ಆಸಿಡ್ ರೈನ್ ಆಗಿ ಮಾರಕವಾಗಿ ಪರಿಣಮಿಸುತ್ತದೆ.

ಇನ್ನು ಕೆಲವು ಬಾರಿ ಮಣ್ಣಿನಲ್ಲಿರುವ ಖನಿಜಾಂಶಗಳು ಮಳೆಯ ನೀರು ಮತ್ತು ಸುತ್ತಲಿರುವ ಇತರೆ ರಾಸಾಯನಿಕದೊಂದಿಗೆ ಬೆರೆತು ಕೆಲವೊಮ್ಮೆ ಹಿತವಾದ, ಕೆಲವೊಮ್ಮೆ ಅಸಹ್ಯವೆನಿಸುವ ವಾಸನೆಯನ್ನ ಉತ್ಪಾದಿಸುತ್ತವೆ. ಯಾವ ಖನಿಜಾಂಶ ಯಾವ ಇತರೆ ರಾಸಾಯನಿಕಗಳ ಜೊತೆ ಸೇರುತ್ತವೆ ಅನ್ನುವುದರ ಮೇಲೆ ಯಾವ ಬಗೆಯ ಪರಿಮಳ ಹೊರಬರಬಹುದು ಎನ್ನುವುದನ್ನು ಊಹಿಸಬಹುದು.

ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ (ಆಗಸ್ಟ್ ೨೦೧೨)

ಕಾಮೆಂಟ್‌ಗಳಿಲ್ಲ:

badge