ಬುಧವಾರ, ಏಪ್ರಿಲ್ 11, 2018

ಹಳಿಯಿಲ್ಲದ ರೈಲಲ್ಲ, ಇದು ಚಾಲಕನಿಲ್ಲದ ಬಂಡಿ!

ಟಿ. ಜಿ. ಶ್ರೀನಿಧಿ


ಕೆಲ ದಶಕಗಳ ಹಿಂದೆ ಕಲ್ಪಿಸಿಕೊಳ್ಳಲೂ ಕಷ್ಟವೆನಿಸುತ್ತಿದ್ದ ಅನೇಕ ಸಂಗತಿಗಳು ಇದೀಗ ತಂತ್ರಜ್ಞಾನದ ನೆರವಿನಿಂದ ಸಾಧ್ಯವಾಗುತ್ತಿರುವುದು ನಮಗೆಲ್ಲ ಗೊತ್ತೇ ಇದೆ. ಬೇರೆ ಕಡೆಗಳಲ್ಲೆಲ್ಲ ಆಗಿರುವಂತೆ ಸಾರಿಗೆ ಕ್ಷೇತ್ರದಲ್ಲೂ ತಂತ್ರಜ್ಞಾನ ಅನೇಕ ಬದಲಾವಣೆಗಳನ್ನು ತಂದಿದೆ. ಉತ್ತಮ ರಸ್ತೆಗಳಿರಲಿ, ಉನ್ನತ ಕಾರ್ಯಕ್ಷಮತೆಯ ವಾಹನಗಳಿರಲಿ, ಪ್ರಯಾಣದ ಅನುಭವವನ್ನು ಆರಾಮದಾಯಕವಾಗಿಸುವ ಸೌಲಭ್ಯಗಳೇ ಇರಲಿ - ಪ್ರತಿಯೊಂದರ ಹಿಂದೆಯೂ ನಾವು ತಂತ್ರಜ್ಞಾನದ ಕೈವಾಡವನ್ನು ಕಾಣಬಹುದು.

ಇಷ್ಟೆಲ್ಲದರ ನಡುವೆ ಬದಲಾಗದೆ ಉಳಿದಿರುವ ಏಕೈಕ ಅಂಶವೆಂದರೆ ಅದು ವಾಹನ ಚಲಾಯಿಸುವ ವ್ಯಕ್ತಿ ಮಾತ್ರವೇ ಇರಬೇಕು.

ಹೌದು, ವಾಹನ ಚಲಾಯಿಸಲು - ಅದಕ್ಕಾಗಿ ಲಭ್ಯವಿರುವ ತಂತ್ರಜ್ಞಾನದ ಸವಲತ್ತುಗಳನ್ನೆಲ್ಲ ಬಳಸಿಕೊಳ್ಳಲು ನಾವು ಇಂದಿಗೂ ಚಾಲಕರ ಮೇಲೆಯೇ ಅವಲಂಬಿತರಾಗಿದ್ದೇವೆ.

ತಮಾಷೆಯ ವಿಷಯವೆಂದರೆ ಸಾರಿಗೆ ಕ್ಷೇತ್ರವನ್ನು ಕಾಡುತ್ತಿರುವ ಬಹುತೇಕ ಸಮಸ್ಯೆಗಳಿಗೆ - ಟ್ರಾಫಿಕ್ ಜಾಮ್‌ನಿಂದ ಪ್ರಾರಂಭಿಸಿ ಮಾರಕ ಅಪಘಾತಗಳವರೆಗೆ - ಕಾರಣರಾಗುವುದು ಇದೇ ಚಾಲಕರು. ಒಬ್ಬನೇ ಚಾಲಕನ ಆತುರ, ಅಶಿಸ್ತು ಅಥವಾ ಆಯಾಸ ಬಹಳ ಸುಲಭವಾಗಿ ಬೇರೆಯ ಅದೆಷ್ಟೋ ಪ್ರಯಾಣಿಕರಿಗೆ ತೊಂದರೆಕೊಡುವ ಸಮಸ್ಯೆಯಾಗಿ ಥಟ್ಟನೆ ಬದಲಾಗಬಲ್ಲ ಸಾಧ್ಯತೆ ಈ ಕ್ಷೇತ್ರದ ಅತಿದೊಡ್ಡ ಅಪಾಯವೂ ಹೌದು.

ಪೆಟ್ರೋಲ್ ಎಷ್ಟಿದೆಯೆಂದು ಅಳೆಯುವುದನ್ನೂ ಯಾವ ಊರಿಗೆ ಯಾವ ದಾರಿಯೆಂದು ತಿಳಿಸುವುದನ್ನೂ ತಂತ್ರಜ್ಞಾನ ಬಹಳ ಸುಲಭವಾಗಿ ಮಾಡುತ್ತದಲ್ಲ, ವಾಹನ ಚಾಲನೆಯನ್ನೂ ಅದೇ ಮಾಡಿಬಿಟ್ಟರೆ ಮೇಲೆ ಹೇಳಿದ ಸಮಸ್ಯೆಗಳಲ್ಲಿ ಬಹುಪಾಲು ನಿವಾರಣೆಯಾಗಿಬಿಡುತ್ತವೆ ಅಲ್ಲವೇ?

ಚಾಲಕರಹಿತ ವಾಹನಗಳನ್ನು ಸೃಷ್ಟಿಸಲು ನಡೆಯುತ್ತಿರುವ ಪ್ರಯತ್ನಗಳ ಹಿಂದಿರುವುದು ಇದೇ ಆಲೋಚನೆ. ತನ್ನ ಸುತ್ತಮುತ್ತಲ ಪರಿಸರವನ್ನು ಗಮನಿಸಿಕೊಂಡು ಅಲ್ಲಿ ಆಗುವ ಬದಲಾವಣೆಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ವಾಹನಗಳಿಗೇ ಬಂದರೆ ಅಪಘಾತಗಳು ಕಡಿಮೆಯಾಗುತ್ತವೆ, ಪ್ರಯಾಣ ಆರಾಮದಾಯಕವಾಗಿರುತ್ತದೆ ಎನ್ನುವುದು ಈ ಪ್ರಯತ್ನಗಳ ಉದ್ದೇಶ.

ಇಂತಹ ಪ್ರಯತ್ನಗಳಲ್ಲಿ ನಿರ್ದಿಷ್ಟ ವಾಹನದ ಚಲನೆಯನ್ನೂ ಅದರ ಸುತ್ತಮುತ್ತಲ ಪರಿಸರವನ್ನೂ ಗಮನಿಸಿಕೊಳ್ಳಲು ಅನೇಕ ಸೆನ್ಸರುಗಳು ಬಳಕೆಯಾಗುತ್ತವೆ. ಮುಂದಿನ ಕಾರಿನ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದನ್ನು, ಪಕ್ಕದ ಆಟೋ ಅನಿರೀಕ್ಷಿತವಾಗಿ ನಮ್ಮ ಹಾದಿಗೆ ಅಡ್ಡಬಂದದ್ದನ್ನೆಲ್ಲ ಇವು ಥಟ್ಟನೆ ಗುರುತಿಸಬಲ್ಲವು. ಮಾನವ ಚಾಲಕರು ಚಲಾಯಿಸುವ ಇಂದಿನ ವಾಹನಗಳಲ್ಲಿ ಇಂತಹ ಹಲವಾರು ಸೌಲಭ್ಯಗಳು (ಎಬಿಎಸ್, ಕ್ರೂಸ್ ಕಂಟ್ರೋಲ್, ಪಾರ್ಕಿಂಗ್ ನೆರವು ಇತ್ಯಾದಿ) ಈಗಾಗಲೇ ಇವೆಯಾದರೂ ಅವುಗಳ ಪರಿಣಾಮಕಾರಿ ಬಳಕೆ ಹೆಚ್ಚೂಕಡಿಮೆ ನಮ್ಮ ನಿಯಂತ್ರಣದಲ್ಲೇ ಇರುತ್ತದೆ. ಈ ಪರಿಸ್ಥಿತಿ ಬದಲಿಸಿ ಆಯಾ ಸನ್ನಿವೇಶಕ್ಕೆ ತಕ್ಕ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಚಾಲಕರಹಿತ ವಾಹನಗಳಲ್ಲಿ ಯಂತ್ರಕ್ಕೇ ನೀಡಲಾಗುತ್ತದೆ.

ಗೂಗಲ್ ಸಂಸ್ಥೆ ರೂಪಿಸಿರುವ ಚಾಲಕರಹಿತ ಕಾರಿನ ಉದಾಹರಣೆಯನ್ನೇ ನೋಡುವುದಾದರೆ ಅದು ಲೇಸರ್ ಕಿರಣಗಳ ಸಹಾಯದಿಂದ ತನ್ನ ಸುತ್ತಮುತ್ತಲ ವಿದ್ಯಮಾನಗಳನ್ನು ಗಮನಿಸಿಕೊಳ್ಳುತ್ತದೆ. ಹೆಚ್ಚೂಕಡಿಮೆ ರೇಡಾರ್‌ನಂತೆಯೇ ಕೆಲಸಮಾಡುವ ಈ ವ್ಯವಸ್ಥೆಯ ಹಿಂದಿರುವುದು ಲಿಡಾರ್‍ (ಲೈಟ್ ಡಿಟೆಕ್ಷನ್ ಆಂಡ್ ರೇಂಜಿಂಗ್) ಎಂಬ ತಂತ್ರಜ್ಞಾನ. ಹೀಗೆ ದೊರೆತ ಮಾಹಿತಿಯನ್ನು ಅರ್ಥೈಸಿಕೊಳ್ಳಲು, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ಇಂತಹ ಕಾರುಗಳು ಗೂಗಲ್ ಮ್ಯಾಪ್ಸ್‌ನಂತಹ ತಂತ್ರಾಂಶಗಳನ್ನು, ಅಂತರಜಾಲ ಸಂಪರ್ಕ - ಜಿಪಿಎಸ್ ಸೌಲಭ್ಯ ಇತ್ಯಾದಿಗಳನ್ನು ವ್ಯಾಪಕವಾಗಿ ಬಳಸುತ್ತವೆ.

ಗೂಗಲ್, ಉಬರ್ ಸೇರಿದಂತೆ ಪ್ರಪಂಚದ ಹಲವು ಖ್ಯಾತನಾಮ ಸಂಸ್ಥೆಗಳು ಚಾಲಕರಹಿತ ಕಾರುಗಳ ಸುತ್ತ ಪ್ರಯೋಗಗಳನ್ನು ನಡೆಸುತ್ತಿವೆ. ಟೆಸ್ಲಾ, ವಾಲ್ವೋ ಮುಂತಾದ ಹಲವು ಅಂತಾರಾಷ್ಟ್ರೀಯ ಕಾರು ತಯಾರಕರೂ ಈ ಪ್ರಯತ್ನಗಳಲ್ಲಿ ಕೈಜೋಡಿಸಿದ್ದಾರೆ. ಈ ಕುರಿತ ಸುದ್ದಿಗಳೂ ಮಾಧ್ಯಮಗಳಲ್ಲಿ ಆಗಿಂದಾಗ್ಗೆ ಪ್ರಕಟವಾಗುವುದನ್ನು ನಾವು ನೋಡಿದ್ದೇವೆ.

ಅಂದಹಾಗೆ ಚಾಲಕರಹಿತ ವಾಹನಗಳ ಸಾಲಿನಲ್ಲಿರುವುದು ಕಾರುಗಳಷ್ಟೇ ಅಲ್ಲ. ರೈಲಿನಿಂದ ವಿಮಾನದವರೆಗೆ, ಬಸ್ಸು-ಲಾರಿಗಳಿಂದ ದೋಣಿ-ಹಡಗುಗಳವರೆಗೆ ಇನ್ನೂ ಅನೇಕ ಬಗೆಯ ವಾಹನಗಳನ್ನು ಚಾಲಕರಿಲ್ಲದೆ ಚಲಿಸುವಂತೆ ಮಾಡುವ ಹಲವಾರು ಪ್ರಯತ್ನಗಳು ಈಗಾಗಲೇ ನಡೆದಿವೆ. ಸಣ್ಣಗಾತ್ರದ ಚಾಲಕರಹಿತ ವಿಮಾನಗಳು (ಡ್ರೋನ್) ವ್ಯಾಪಕ ಬಳಕೆಯಲ್ಲಿರುವುದಂತೂ ನಮಗೆಲ್ಲ ಗೊತ್ತೂ ಇದೆ. ದೊಡ್ಡ ವಿಮಾನಗಳಲ್ಲಿ ಮಾನವ ಪೈಲಟ್‌ಗಳಿಗೆ ನೆರವಾಗುವ 'ಆಟೋಪೈಲಟ್' ತಂತ್ರಜ್ಞಾನ ಕೂಡ ಚಾಲಕರಹಿತ ಚಾಲನೆಯ ಒಂದು ರೂಪವೇ.

ಅಷ್ಟೇ ಏಕೆ, ಸಾವಿರಾರು ಪ್ರಯಾಣಿಕರು ಬಳಸುವ ಮೆಟ್ರೋ ರೈಲುಗಳು ದುಬೈ - ವ್ಯಾಂಕೂವರ್ ಮುಂತಾದ ನಗರಗಳಲ್ಲಿ ಹಲವು ವರ್ಷಗಳಿಂದಲೇ ಚಾಲಕರಹಿತವಾಗಿ ಸಂಚರಿಸುತ್ತಿವೆ. ಈಚೆಗೆ ದೆಹಲಿ ಕೂಡ ಇಂತಹ ನಗರಗಳ ಸಾಲಿಗೆ ಸೇರಿಕೊಂಡಿದೆ. ಸಿಂಗಾಪುರ - ಹೆಲ್ಸಿಂಕಿ ಮುಂತಾದ ನಗರಗಳಲ್ಲಿ ಚಾಲಕರಹಿತ ಬಸ್ಸುಗಳನ್ನೂ ಓಡಿಸುವ ಪ್ರಯೋಗ ಕೂಡ ನಡೆದಿದೆ. ಚಾಲಕರಹಿತ ಹಡಗುಗಳು ಹಾಗೂ ಪ್ರಯಾಣಿಕರನ್ನೂ ಕೊಂಡೊಯ್ಯಬಲ್ಲ ಡ್ರೋನ್‌ಗಳನ್ನು ನಿರ್ಮಿಸುವ ನಿಟ್ಟಿನಲ್ಲೂ ಸಾಕಷ್ಟು ಪ್ರಯತ್ನಗಳಾಗಿವೆ.

ಮೆಟ್ರೋ ಜಾಲದಂತಹ ಉದಾಹರಣೆಗಳಿಗೆ ತಮ್ಮದೇ ಆದ ಪ್ರತ್ಯೇಕ ಪಥ ಇರುವುದರಿಂದ ಅಲ್ಲಿ ಸಾಗುವ ಚಾಲಕರಹಿತ ರೈಲುಗಳಿಗೆ ಬಾಹ್ಯ ಅಡಚಣೆಗಳು ಎದುರಾಗುವ ಸಾಧ್ಯತೆ ಕೊಂಚ ಕಡಿಮೆಯಿರುತ್ತದೆ. ಆದರೆ ಚಾಲಕರಹಿತ ವಾಹನಗಳು ರಸ್ತೆಗಳಲ್ಲಿ ಸಾಗುವಾಗ ಮಾನವ ಚಾಲಕರ ಜೊತೆಗೆ ತಮ್ಮ ಹಾದಿಯನ್ನು ಹಂಚಿಕೊಳ್ಳಬೇಕಾಗುತ್ತದೆ, ಪಾದಚಾರಿಗಳ ಕಡೆಗೂ ಗಮನ ನೀಡಬೇಕಾಗುತ್ತದೆ. ಇದರಿಂದಾಗಿ ಅವುಗಳ ಕಾರ್ಯಾಚರಣೆಗೆ ಎದುರಾಗುವ ಹೆಚ್ಚುವರಿ ಸವಾಲನ್ನು ನಿಭಾಯಿಸುವತ್ತಲೂ ತಂತ್ರಜ್ಞಾನ ನಿರ್ಮಾಪಕರು ಗಮನಹರಿಸುತ್ತಿದ್ದಾರೆ.

ತಂತ್ರಜ್ಞಾನದ ಜೊತೆಗೆ ಕಾನೂನಾತ್ಮಕ ಹಾಗೂ ನೈತಿಕ ಪ್ರಶ್ನೆಗಳ ಬಗೆಗೂ ಚರ್ಚೆ ನಡೆದಿದೆ. ಚಾಲಕರಹಿತ ವಾಹನಗಳು ಅಪಘಾತಕ್ಕೆ ಕಾರಣವಾದರೆ ಅದಕ್ಕೆ ಯಾರು ಜವಾಬ್ದಾರಿ, ಇಂತಹ ವಾಹನವೊಂದರ ಪ್ರಯಾಣಿಕ ಹಾಗೂ ಇತರರ ನಡುವೆ ಒಬ್ಬರ ಸುರಕ್ಷತೆಯನ್ನು ಆಯ್ದುಕೊಳ್ಳುವ ಸಂದಿಗ್ಧ ಪರಿಸ್ಥಿತಿ ಬಂದರೆ ಚಾಲಕರಹಿತ ವಾಹನಗಳ ಪ್ರತಿಕ್ರಿಯೆ ಏನಿರಬೇಕು ಎನ್ನುವುದೆಲ್ಲ ಇಂತಹ ಪ್ರಶ್ನೆಗಳಿಗೆ ಕೆಲ ಉದಾಹರಣೆಗಳು. ಚಾಲಕರಹಿತ ವಾಹನಗಳ ಬಳಕೆ ಹೆಚ್ಚಿದರೆ ಅದು ನಿರುದ್ಯೋಗ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದೆಂಬ ಆತಂಕವೂ ಅಲ್ಲಲ್ಲಿ ವ್ಯಕ್ತವಾಗಿದೆ.

ಫೆಬ್ರುವರಿ ೭, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge