ಬುಧವಾರ, ಏಪ್ರಿಲ್ 18, 2018

ಸಿಮ್ ಜೋಪಾನ!

ಟಿ. ಜಿ. ಶ್ರೀನಿಧಿ


ನಿಮ್ಮ ಮೊಬೈಲ್ ಫೋನ್ ಎಷ್ಟೇ ಅತ್ಯಾಧುನಿಕವಾಗಿರಲಿ, ಅದರಲ್ಲಿ ಏನೆಲ್ಲ ವೈಶಿಷ್ಟ್ಯಗಳಿರಲಿ, ಪರಿಣಾಮಕಾರಿ ಬಳಕೆ ಸಾಧ್ಯವಾಗಬೇಕೆಂದರೆ ಅದರಲ್ಲೊಂದು ಸಿಮ್ ಇರಲೇಬೇಕು.

'ಸಿಮ್' ಎಂಬ ಹೆಸರು 'ಸಬ್‌ಸ್ಕ್ರೈಬರ್  ಐಡೆಂಟಿಫಿಕೇಶನ್ ಮಾಡ್ಯೂಲ್' (ಚಂದಾದಾರರನ್ನು ಗುರುತಿಸುವ ಘಟಕ) ಎನ್ನುವುದರ ಹ್ರಸ್ವರೂಪ. ಚಂದಾದಾರರ ಗುರುತನ್ನು ದೃಢೀಕರಿಸಿ ಮೊಬೈಲ್ ಜಾಲದೊಡನೆ ಅವರ ಸಂಪರ್ಕ ಏರ್ಪಡಿಸುವಲ್ಲಿ ಸಿಮ್ ಪಾತ್ರ ಮಹತ್ವದ್ದು.

ಚಂದಾದಾರರಿಗೆ ಸಂಪರ್ಕ ನೀಡುವುದೇನೋ ಸರಿ, ಅದಕ್ಕೆ ಮೊದಲು ಯಾವ ಚಂದಾದಾರರು ಯಾವ ಸಿಮ್ ಬಳಸುತ್ತಿದ್ದಾರೆ ಎನ್ನುವುದು ಮೊಬೈಲ್ ಸಂಸ್ಥೆಗೆ ಗೊತ್ತಾಗಬೇಕಲ್ಲ! ಇದಕ್ಕಾಗಿ ಇಂಟಿಗ್ರೇಟೆಡ್ ಸರ್ಕ್ಯೂಟ್ ಕಾರ್ಡ್ ಐಡೆಂಟಿಫೈಯರ್ (ಐಸಿಸಿಐಡಿ) ಎಂಬ ಸಂಖ್ಯೆ ಬಳಕೆಯಾಗುತ್ತದೆ. ಕ್ರೆಡಿಟ್ ಕಾರ್ಡ್ ಸಂಖ್ಯೆ, ಪ್ಯಾನ್, ಆಧಾರ್ ಎಲ್ಲ ಇದ್ದಹಾಗೆಯೇ ಇದು ನಮ್ಮ ಸಿಮ್ ಅನ್ನು ನಿರ್ದಿಷ್ಟವಾಗಿ ಗುರುತಿಸಬಲ್ಲ ಸಂಖ್ಯೆ.

ಪ್ರಪಂಚದ ಪ್ರತಿಯೊಂದು ಸಿಮ್‌ಗೂ ಪ್ರತ್ಯೇಕ ಐಸಿಸಿಐಡಿ ಇರಬೇಕು ಎನ್ನುವುದು ನಿಯಮ. ನಮ್ಮ ಖಾತೆಯ ವಿವರಗಳನ್ನು ನಿರ್ದಿಷ್ಟ ಸಿಮ್‌ಗೆ ಹೊಂದಿಸಲು, ನಮಗೆ ಬರುವ ಕರೆಗಳನ್ನು - ಸಂದೇಶಗಳನ್ನು ಎಲ್ಲಿಗೆ ಕಳಿಸಬೇಕು ಎನ್ನುವುದನ್ನು ತಿಳಿಯಲು ಮೊಬೈಲ್ ಸಂಸ್ಥೆಗಳು ಈ ಸಂಖ್ಯೆಯನ್ನು ಬಳಸುತ್ತವೆ. ಬ್ಯಾಂಕಿನಿಂದ ಬರುವ ಓಟಿಪಿಯಿರಲಿ, ಕಚೇರಿಯಿಂದ ಬರುವ ದೂರವಾಣಿ ಕರೆಯೇ ಇರಲಿ - ನಮ್ಮನ್ನು ತಲುಪಬೇಕೆಂದರೆ ಮೊಬೈಲ್ ಸಂಸ್ಥೆಯಲ್ಲಿ ನಮ್ಮ ಸಿಮ್ ಸಂಖ್ಯೆ (ಐಸಿಸಿಐಡಿ) ಸರಿಯಾಗಿ ದಾಖಲಾಗಿರಬೇಕು.

ಮೊದಲ ಬಾರಿಗೆ ಸಿಮ್ ಪಡೆದುಕೊಂಡಾಗ, ನಮ್ಮ ಖಾತೆ ಆಕ್ಟಿವೇಟ್ ಆಗುವಾಗ ಈ ಸಂಖ್ಯೆಯನ್ನು ಮೊಬೈಲ್ ಸಂಸ್ಥೆಯ ಸಿಬ್ಬಂದಿ ನಮ್ಮ ಖಾತೆಯೊಡನೆ ಜೋಡಿಸಿರುತ್ತಾರೆ. ಯಾವುದೇ ಕಾರಣದಿಂದ ನಾವು ಸಿಮ್ ಬದಲಿಸಿದರೆ ಮಾತ್ರ ಹೊಸ ಸಂಖ್ಯೆಯನ್ನು ಮೊಬೈಲ್ ಸಂಸ್ಥೆಯೊಡನೆ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಹೊಸ ಸಿಮ್ ನೀಡಿದ ಸಂದರ್ಭಗಳಲ್ಲಿ ಸಿಮ್ ಸಂಖ್ಯೆಯನ್ನು ನಿರ್ದಿಷ್ಟ ಸಂಖ್ಯೆಗೆ ಎಸ್ಸೆಮ್ಮೆಸ್ ಮೂಲಕ ಕಳಿಸುವಂತೆ ಹೇಳುತ್ತಾರಲ್ಲ, ಅದರ ಉದ್ದೇಶ ಇದೇ.

ಬ್ಯಾಂಕ್ ಖಾತೆ, ಮೊಬೈಲ್ ವ್ಯಾಲೆಟ್ ಸೇರಿದಂತೆ ಸಕಲವೂ ನಮ್ಮ ಫೋನಿನ ಮೂಲಕವೇ ಕೆಲಸಮಾಡುವ ಈ ದಿನಗಳಲ್ಲಿ ಮೇಲೆ ಹೇಳಿದ ಪ್ರಕ್ರಿಯೆಯ ಬಗ್ಗೆ ಸಾಕಷ್ಟು ಎಚ್ಚರವಾಗಿರಬೇಕಾದ್ದು ಅನಿವಾರ್ಯ. ಗ್ರಾಹಕರಿಗೆ ವಂಚಿಸಿ ಅವರ ಖಾತೆಯನ್ನು ತಮ್ಮಲ್ಲಿರುವ ಸಿಮ್‌ಗೆ ಜೋಡಿಸಲು ಪ್ರಯತ್ನಿಸುವ 'ಸಿಮ್ ಸ್ವಾಪ್' ಹಗರಣದ ಕುರಿತು ಜಾಗೃತರಾಗಿರಬೇಕಾದ್ದು ಈ ಎಚ್ಚರಿಕೆಯ ಒಂದು ಭಾಗ. ಮೊಬೈಲ್ ಸಂಸ್ಥೆಯಿಂದ ಕರೆಮಾಡುತ್ತಿದ್ದೇವೆ, ಇಪ್ಪತ್ತು ಅಂಕಿಯ ಸಂಖ್ಯೆಯೊಂದನ್ನು ಎಸ್ಸೆಮ್ಮೆಸ್ ಮಾಡದಿದ್ದರೆ ನಿಮ್ಮ ಖಾತೆ ನಿಷ್ಕ್ರಿಯವಾಗುತ್ತದೆ ಎಂದೆಲ್ಲ ಹೆದರಿಸುತ್ತಾರಲ್ಲ, ಅವರನ್ನು ಸಾರಾಸಗಟಾಗಿ ಉಪೇಕ್ಷಿಸುವುದು ಒಳ್ಳೆಯದು. ಅವರು ಹೇಳುತ್ತಿರುವುದರ ಬಗ್ಗೆ ಪ್ರಶ್ನೆಗಳಿದ್ದರೆ ಮೊಬೈಲ್ ಸಂಸ್ಥೆಯ ಗ್ರಾಹಕ ಸೇವಾ ವಿಭಾಗಕ್ಕೆ ಕರೆಮಾಡಿ ವಿಚಾರಿಸಿಕೊಳ್ಳುವುದು ಒಳ್ಳೆಯದು. ಅದರ ಬದಲು ಅವರು ಹೇಳಿದಂತೆ ಮೆಸೇಜ್ ಮಾಡಿದರೆ ನಮ್ಮ ಸಿಮ್ ನಿಷ್ಕ್ರಿಯವಾಗುವುದಷ್ಟೇ ಅಲ್ಲ, ಹೊಸ ಸಿಮ್ ಮೂಲಕ ನಮ್ಮ ಬ್ಯಾಂಕ್ ಖಾತೆಯ ನಿಯಂತ್ರಣ ಖದೀಮರ ಕೈಸೇರುವ ಸಾಧ್ಯತೆಯೂ ಇರುತ್ತದೆ (ಇಂತಹ ಪ್ರಕರಣಗಳು ನಮ್ಮ ದೇಶದಲ್ಲೂ ಹೆಚ್ಚುತ್ತಿರುವ ಬಗ್ಗೆ ಈಚೆಗೆ ಅನೇಕ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಕುರಿತು ಎಚ್ಚರಿಸುವ ಸಂದೇಶಗಳನ್ನು ಮೊಬೈಲ್ ಸಂಸ್ಥೆಗಳೂ ಗ್ರಾಹಕರಿಗೆ ಕಳಿಸುತ್ತಿವೆ).

ಕ್ರೆಡಿಟ್ ಕಾರ್ಡ್ - ಡೆಬಿಟ್ ಕಾರ್ಡುಗಳನ್ನು ಜೋಪಾನವಾಗಿ ಇಟ್ಟುಕೊಳ್ಳುತ್ತೇವಲ್ಲ, ನಾವು ಬಳಸುವ ಸಿಮ್ ಬಗೆಗೂ ಅಷ್ಟೇ ಎಚ್ಚರಿಕೆ ವಹಿಸುವುದು ಒಳ್ಳೆಯದು. ಸಿಮ್ ಅನ್ನು ಮೊಬೈಲಿನಿಂದ ಹೊರತೆಗೆದಾಗ ಸುರಕ್ಷಿತ ಸ್ಥಳದಲ್ಲಿ ಇಟ್ಟಿರುವುದು, ಮೊಬೈಲ್ ಫೋನನ್ನು ರಿಪೇರಿಗೆಂದು ಕೊಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಸಿಮ್ ತೆಗೆದಿಟ್ಟುಕೊಳ್ಳುವುದು ಅಪೇಕ್ಷಣೀಯ. ನಮ್ಮ ಸಿಮ್ ಮಾಹಿತಿಯನ್ನು ಬೇರೊಬ್ಬರು ನಕಲಿಸಿ ದುರ್ಬಳಕೆ ಮಾಡಿಕೊಳ್ಳುವುದನ್ನು ಈ ಮೂಲಕ ತಡೆಯಬಹುದು. ಸಿಮ್ ಮಾಹಿತಿಯನ್ನು ನಕಲಿಸಿಕೊಂಡು ಬಳಸುವ ಈ ಹಗರಣಕ್ಕೆ ಸಿಮ್ ಕ್ಲೋನಿಂಗ್ ಎಂದು ಹೆಸರು. ನಮ್ಮ ಮೊಬೈಲ್ ಖಾತೆಯ ಚಟುವಟಿಕೆಯ ಬಗ್ಗೆ, ಬಿಲ್‌ನಲ್ಲಿರುವ ವಿವರಗಳ ಬಗ್ಗೆ ನಿಗಾವಹಿಸುವ ಮೂಲಕ ಇಂತಹ ಹಗರಣದಿಂದ ಪಾರಾಗುವುದು ಸಾಧ್ಯ. ಯಾವುದೇ ಸಂದರ್ಭದಲ್ಲಿ ನಮ್ಮ ಸಂಪರ್ಕ ಸ್ಥಗಿತವಾದರೆ, ಬಿಲ್‌ನಲ್ಲಿ ಅಪರಿಚಿತ ಚಟುವಟಿಕೆಗಳು ಕಾಣಿಸಿಕೊಂಡರೆ ತಕ್ಷಣವೇ ಮೊಬೈಲ್ ಸಂಸ್ಥೆಯ ಗ್ರಾಹಕ ಸೇವಾ ವಿಭಾಗವನ್ನು ಸಂಪರ್ಕಿಸುವುದು ಒಳ್ಳೆಯದು.
ಯಾವುದೇ ಮೊಬೈಲ್ ಸಂಸ್ಥೆಯ ಸಿಮ್ ಬಳಸುತ್ತಿರುವವರು ಆ ಸಂಸ್ಥೆಯ ಚಂದಾದಾರರೋ ಅಲ್ಲವೋ ಎಂದು ಪರೀಕ್ಷಿಸಿದ ನಂತರವೇ ಅವರಿಗೆ ಜಾಲದ ಸಂಪರ್ಕ ಒದಗಿಸಿಕೊಡಲಾಗುತ್ತದೆ. ಈ ಉದ್ದೇಶಕ್ಕಾಗಿ ಇಂಟರ್‌ನ್ಯಾಶನಲ್ ಮೊಬೈಲ್ ಸಬ್‌ಸ್ಕ್ರೈಬರ್ ಐಡೆಂಟಿಟಿ (ಐಎಂಎಸ್‌ಐ) ಎಂಬ ವಿಶಿಷ್ಟ ಸಂಖ್ಯೆ ಬಳಕೆಯಾಗುತ್ತದೆ. ಮೊಬೈಲ್ ಚಂದಾದಾರರನ್ನು ಗುರುತಿಸಲು, ಅವರಿಗೆ ಜಾಲದ ಸಂಪರ್ಕ ಒದಗಿಸಿಕೊಡಲು ಬಳಕೆಯಾಗುವ ಈ ಸಂಖ್ಯೆ ಸಿಮ್‌ನಲ್ಲಿ ಶೇಖರವಾಗಿರುತ್ತದೆ. ಫೋನ್ ವಿಷಯ ಐಎಂಇಐ ಎಂಬ ಇನ್ನೊಂದು ಸಂಖ್ಯೆಯ ಪ್ರಸ್ತಾಪ ಬರುತ್ತದಲ್ಲ, ಅದು 'ಇಂಟರ್‌ನ್ಯಾಶನಲ್ ಮೊಬೈಲ್ ಇಕ್ವಿಪ್ಮೆಂಟ್ ಐಡೆಂಟಿಟಿ' ಎಂಬ ಹೆಸರಿನ ಹ್ರಸ್ವರೂಪ. ಪ್ರಪಂಚದಲ್ಲಿರುವ ಪ್ರತಿಯೊಂದು ಮೊಬೈಲ್ ದೂರವಾಣಿಯನ್ನೂ ಪ್ರತ್ಯೇಕವಾಗಿ ಗುರುತಿಸಲು ಅದು ಬಳಕೆಯಾಗುತ್ತದೆ. ಐಎಂಎಸ್‌ಐ ಹಾಗೂ ಐಎಂಇಐ ಪರಸ್ಪರ ಬೇರೆಯವೇ ಆದ ಸಂಖ್ಯೆಗಳು.
ಏಪ್ರಿಲ್ ೧೧, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

suprith suppy ಹೇಳಿದರು...

ನಮಸ್ತೆ ಸರ್....

ನಮ್ಮ ಮೊಬೈಲ್ ನಂಬರ್ ನ ಕಾಲ್ ಅಥವಾ ಮಸೆಜ್ ಬಗ್ಗೆ ಮಾಹಿತಿಯನ್ನು ಬೇರೆ ಯಾರಾದರೂ ಪಡೆಯಲು ಸಾದ್ಯವೇ ಅಥವಾ ಹಾಗೇನಾದರೂ ಪಡೆಯಬೇಕಿದ್ದಲ್ಲಿ ಯಾವ ವಿಧಾನ ಅನುಸರಿಬೇಕು ಎಂಬುದರ ಬಗ್ಗೆ ದಯವಿಟ್ಟು ತಿಳಿಸಿ....

ವಂದನೆಳೊಂದಿಗೆ

badge