ಸೋಮವಾರ, ಮಾರ್ಚ್ 5, 2018

ವಿಜ್ಞಾನದ ಹಾದಿಯಲ್ಲಿ ಭಾರತ: ೩: ಬಾಹ್ಯಾಕಾಶ ಹಾಗೂ ದೂರಸಂಪರ್ಕ ತಂತ್ರಜ್ಞಾನ

ಉದಯ ಶಂಕರ ಪುರಾಣಿಕ
ಟಿ. ಜಿ. ಶ್ರೀನಿಧಿ


ಸ್ವಾತಂತ್ರ್ಯಾನಂತರದ ಏಳು ದಶಕಗಳ ಅವಧಿಯಲ್ಲಿ ನಮ್ಮ ದೇಶ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಬಹುಮುಖಿಯಾದದ್ದು. ಕೃಷಿ, ಆರೋಗ್ಯ, ರಕ್ಷಣೆ, ದೂರಸಂಪರ್ಕ, ಐಟಿ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯ ಪ್ರಾತಿನಿಧಿಕ ಪರಿಚಯ ನೀಡುವ ಲೇಖನಸರಣಿಯನ್ನು ಇಜ್ಞಾನ ಡಾಟ್ ಕಾಮ್ ಪ್ರಕಟಿಸುತ್ತಿದೆ. ಈ ಸರಣಿಯ ಮೂರನೆಯ ಲೇಖನ ಇಲ್ಲಿದೆ.

ಹಿಂದಿನ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ

ಭೂಮಿಯಿಂದಾಚೆಗೆ ಹನುಮಂತ ನೆಗೆತ
ವಿಶ್ವವಿಖ್ಯಾತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಕಾರ್ಯಕ್ರಮಗಳ ಮೂಲಕ ಬಾಹ್ಯಾಕಾಶ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಅನೇಕ ವಿಕ್ರಮಗಳನ್ನು ಸಾಧಿಸುವುದು ನಮ್ಮ ದೇಶಕ್ಕೆ ಸಾಧ್ಯವಾಗಿದೆ. ಕಳೆದ ಹಲವು ದಶಕಗಳಿಂದ ಇಸ್ರೋ ಉಡಾಯಿಸುತ್ತ ಬಂದಿರುವ ಕೃತಕ ಉಪಗ್ರಹಗಳು ಇಂತಹ ಹಲವು ವಿಕ್ರಮಗಳಿಗೆ ಕಾರಣವಾಗಿವೆ. ಹವಾಮಾನ ಹಾಗೂ ವಾಯುಗುಣ ಪರಿವೀಕ್ಷಣೆ, ಕೃಷಿಭೂಮಿ - ಅರಣ್ಯ ಮುಂತಾದವುಗಳ ಸಮೀಕ್ಷೆ, ಪ್ರಕೃತಿವಿಕೋಪಗಳ ಸಂದರ್ಭದಲ್ಲಿ ಪರಿಹಾರ ಕಾರ್ಯ, ಸುರಕ್ಷತಾ ಕಣ್ಗಾವಲು ಸೇರಿದಂತೆ ಅದೆಷ್ಟೋ ಕ್ಷೇತ್ರಗಳಲ್ಲಿ ಭಾರತ ಇಂದು ಕೃತಕ ಉಪಗ್ರಹಗಳ ನೆರವು ಪಡೆದುಕೊಳ್ಳುತ್ತಿದೆ.

ಟೀವಿ ಪ್ರಸಾರ ಹಾಗೂ ದೂರಸಂಪರ್ಕ ಕ್ಷೇತ್ರಗಳಲ್ಲೂ ಕೃತಕ ಉಪಗ್ರಹಗಳಿಂದಾಗಿ ಕ್ರಾಂತಿಕಾರಕ ಬದಲಾವಣೆಗಳನ್ನು ಕಾಣುವುದು ಸಾಧ್ಯವಾಗಿದೆ. ಟೀವಿ ಚಾನೆಲ್ಲುಗಳ ಸ್ಟೂಡಿಯೋದಿಂದ ಹೊರಟ ಸಂಕೇತಗಳು ಡಿಶ್ ಆಂಟೆನಾ ಹಾಗೂ ಸೆಟ್ ಟಾಪ್ ಬಾಕ್ಸ್ ಮೂಲಕ ನಮ್ಮ ಟೀವಿಯನ್ನು ತಲುಪುವುದು (ಡೈರೆಕ್ಟ್ ಟು ಹೋಮ್) ಉಪಗ್ರಹಗಳ ಮೂಲಕವೇ! ಬಹುತೇಕ ಮೊಬೈಲ್ ಗ್ರಾಹಕರು ತಮ್ಮ ಫೋನಿನಲ್ಲಿರುವ ಜಿಪಿಎಸ್ ಸೇವೆಯನ್ನು ವ್ಯಾಪಕವಾಗಿ ಬಳಸುತ್ತಾರಲ್ಲ, ಆ ತಂತ್ರಜ್ಞಾನಕ್ಕಾಗಿ ಅಮೆರಿಕಾದ ಉಪಗ್ರಹಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ತಪ್ಪಿಸಲು ಇಸ್ರೋ ನಮ್ಮದೇ ಆದ ಪರ್ಯಾಯವೊಂದನ್ನು ರೂಪಿಸುತ್ತಿದೆ. ಜಿಪಿಎಸ್ ರೀತಿಯಲ್ಲೇ ಸೇವೆ ನೀಡಲಿರುವ ಏಳು ಉಪಗ್ರಹಗಳ ಈ ವ್ಯವಸ್ಥೆಗೆ 'ನಾವಿಕ್' (ನ್ಯಾವಿಗೇಶನ್ ವಿಥ್ ಇಂಡಿಯನ್ ಕಾನ್ಸ್‌ಟೆಲೇಶನ್) ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ: ಕೃತಕ ಉಪಗ್ರಹಗಳ ಕುರಿತು ನಿಮಗೆಷ್ಟು ಗೊತ್ತು?

ಅಂದಹಾಗೆ ಕೃತಕ ಉಪಗ್ರಹಗಳ ಕಾರ್ಯವ್ಯಾಪ್ತಿ ನಮ್ಮ ಭೂಮಿಯ ಸುತ್ತಲೇ ಇರಬೇಕು ಎಂದೇನೂ ಇಲ್ಲ. ಸೌರವ್ಯೂಹದ ಇತರ ಗ್ರಹಗಳನ್ನು ಸುತ್ತುಹಾಕುತ್ತ ಅವುಗಳ ಕುರಿತು ಮಾಹಿತಿ ಸಂಗ್ರಹಿಸುವ ಉಪಗ್ರಹಗಳೂ ಇವೆ. ಇತರ ಆಕಾಶಕಾಯಗಳ ಕುರಿತು ನಮ್ಮ ಅರಿವನ್ನು ವಿಸ್ತರಿಸುವಲ್ಲಿ ಇವು ನೆರವಾಗುತ್ತವೆ. ಇಸ್ರೋ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿದ 'ಮಂಗಳಯಾನ' ಇಂತಹ ಉಪಗ್ರಹಗಳಿಗೊಂದು ಉದಾಹರಣೆ. ಇಂಥದ್ದೊಂದು ಪ್ರಯೋಗವನ್ನು ತನ್ನ ಮೊತ್ತಮೊದಲ ಪ್ರಯತ್ನದಲ್ಲೇ, ಅದೂ ಅತ್ಯಂತ ಕಡಿಮೆ ವೆಚ್ಚದಲ್ಲಿ, ಸಫಲಗೊಳಿಸಿದ್ದು ಇಸ್ರೋ ಹೆಗ್ಗಳಿಕೆ. ಇದೇ ರೀತಿ ಭೂಮಿಯ ಉಪಗ್ರಹ ಚಂದ್ರನ ಸುತ್ತ ಸುತ್ತುವ 'ಚಂದ್ರಯಾನ'ವೂ ಒಂದು ಉಪಗ್ರಹವೇ ಆಗಿದೆ. ಈ ಬ್ರಹ್ಮಾಂಡದಲ್ಲಿ ನಮ್ಮ ಭೂಮಿಯಿಂದ ಹೊರಗೆ ಏನೆಲ್ಲ ಇದೆ ಎನ್ನುವುದರ ಕುರಿತು ಹೆಚ್ಚಿಗೆ ತಿಳಿದುಕೊಳ್ಳಲು ಇಂತಹ ಉಪಗ್ರಹಗಳು ನೆರವಾಗಲಿವೆ.

ಎಲ್ಲರನ್ನೂ ಹತ್ತಿರತಂದ ದೂರಸಂಪರ್ಕ ತಂತ್ರಜ್ಞಾನ
ಒಂದು ಕಾಲದಲ್ಲಿ ಇಡೀ ಊರಿನಲ್ಲಿ ಬೆರೆಳೆಣಿಕೆಯಷ್ಟು ದೂರವಾಣಿ ಸಂಪರ್ಕಗಳಿರುತ್ತಿದ್ದವು. ನಗರಗಳಲ್ಲೂ ರಸ್ತೆಗೆ ಒಂದೋ ಎರಡೋ ದೂರವಾಣಿ ಇದ್ದರೆ ಅದೇ ಹೆಚ್ಚು. ಹೊಸ ಸಂಪರ್ಕಗಳಿಗೆ ತಿಂಗಳು-ವರ್ಷಗಟ್ಟಲೆ ಕಾಯುವುದೂ ಸಾಮಾನ್ಯ ಸಂಗತಿಯಾಗಿತ್ತು. ಈ ಪರಿಸ್ಥಿತಿಯನ್ನು ಬದಲಿಸಿ ದೂರವಾಣಿ ಜಾಲವನ್ನು ದೇಶದಾದ್ಯಂತ ವಿಸ್ತರಿಸಿದ್ದು ಸ್ವತಂತ್ರ ಭಾರತದ ಮಹತ್ವದ ಸಾಧನೆಗಳಲ್ಲೊಂದು. ಕೆಲವರ್ಷಗಳ ಹಿಂದೆ ರಸ್ತೆರಸ್ತೆಗಳಲ್ಲೂ ಕಾಣಿಸುತ್ತಿದ್ದ ಕಾಯಿನ್ ಬಾಕ್ಸ್‌ಗಳು, ಇಂದು ಎಲ್ಲರ ಕೈಯಲ್ಲೂ ಕಾಣುವ ಮೊಬೈಲ್ ದೂರವಾಣಿಗಳೆಲ್ಲ ಈ ಸಾಧನೆಯ ಪಥದ ಮೈಲಿಗಲ್ಲುಗಳೇ.

ದೂರವಾಣಿ ಸಂಪರ್ಕ ಒದಗಿಸುವ ಜೊತೆಗೆ ಅದರ ಮೂಲಕ ಸಾಧ್ಯವಾಗುವ ಇನ್ನಿತರ ಸೇವೆಗಳ ಅನುಷ್ಠಾನವೂ ನಮ್ಮ ದೇಶದಲ್ಲಿ ಪರಿಣಾಮಕಾರಿಯಾಗಿ ನಡೆದಿದೆ. ಹಳ್ಳಿಹಳ್ಳಿಗಳಿಗೂ ಬ್ರಾಡ್‌ಬ್ಯಾಂಡ್ ಸಂಪರ್ಕ ತಲುಪಿದ್ದರೆ ಮೊಬೈಲ್ ಅಂತರಜಾಲ ಬಳಕೆಯ ಪ್ರಮಾಣದಲ್ಲಿ ನಾವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದ್ದೇವೆ. ಅಂತರಜಾಲದ ಮೂಲಕ ವಿವಿಧ ವಿಷಯಗಳನ್ನು ಕುರಿತ ಜ್ಞಾನವೂ ನಿತ್ಯದ ಬದುಕನ್ನು ಸುಲಭವಾಗಿಸುವ ಹಲವು ಸೌಕರ್ಯಗಳೂ ನಮಗಿಂದು ದೊರಕುತ್ತಿವೆ. ಶೇರು ಮಾರುಕಟ್ಟೆಯಿಂದ ದಿನನಿತ್ಯದ ಹಣಕಾಸು ವಹಿವಾಟಿನವರೆಗೆ ಹಲವು ಕೆಲಸಗಳು ಸರಳವಾಗಿರುವುದರ ಹಿನ್ನೆಲೆಯಲ್ಲೂ ಅಂತರಜಾಲವೇ ಇದೆ. ತಂತ್ರಜ್ಞಾನದ ಮೂಲಸೌಕರ್ಯ ನಿರ್ಮಾಣದ ಜೊತೆಗೆ ಅದರ ಸವಲತ್ತುಗಳನ್ನು ಬಳಕೆದಾರರ ಭಾಷೆಯಲ್ಲೇ ತಲುಪಿಸುವ ನಿಟ್ಟಿನಲ್ಲೂ ಹಲವು ಪ್ರಯತ್ನಗಳು ನಡೆದಿರುವುದು, ನಡೆಯುತ್ತಿರುವುದು ಗಮನಾರ್ಹ.

ದೂರಸಂಪರ್ಕ ಕ್ರಾಂತಿಯಿಂದ ಪ್ರಭಾವಿತವಾಗಿರುವುದು ಸಾಮಾನ್ಯ ಬಳಕೆದಾರರ ಜೀವನ ಮಾತ್ರವೇ ಅಲ್ಲ. ಆಡಳಿತ ವ್ಯವಸ್ಥೆಯಲ್ಲೂ ಅನೇಕ ಮಹತ್ವದ ಬದಲಾವಣೆಗಳಾಗಿರುವುದನ್ನು ನಾವು ಗಮನಿಸಬಹುದು. ಸರಕಾರದ ಸೇವೆಗಳನ್ನು ಜನತೆಗೆ ತಲುಪಿಸಲು, ಪಾರದರ್ಶಕವಾಗಿ ನಿರ್ವಹಿಸಲು ಹಲವು ಇಲಾಖೆಗಳಲ್ಲಿ ಇ-ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ತಂತ್ರಜ್ಞಾನದ ಸಮರ್ಥ ಬಳಕೆಯಿಂದ ಚುನಾವಣೆಯಂತಹ ಸಂಕೀರ್ಣ ಪ್ರಕ್ರಿಯೆಗಳನ್ನೂ ಸರಾಗವಾಗಿ ನಡೆಸುವುದು ಇದೀಗ ಸಾಧ್ಯವಾಗಿದೆ. ಮಾಹಿತಿ ತಂತ್ರಜ್ಞಾನದ ಸಹಾಯ ಪಡೆದು ತೆರಿಗೆ ಸಂಗ್ರಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ, ವಂಚಕರನ್ನು ಸುಲಭವಾಗಿ ಗುರುತಿಸುವ ನಿಟ್ಟಿನಲ್ಲೂ ಕೆಲಸ ಸಾಗಿರುವುದು ಗಮನಾರ್ಹ.

೨೦೧೭ರ ವಿಜಯವಾಣಿ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನದ ಸಂಗ್ರಹರೂಪ; ಮುಂದಿನ ಕಂತಿನಲ್ಲಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹಾಗೂ ಮುಂದಿನ ಹಾದಿ

ಕಾಮೆಂಟ್‌ಗಳಿಲ್ಲ:

badge