ಶುಕ್ರವಾರ, ಮಾರ್ಚ್ 2, 2018

ವಿಜ್ಞಾನದ ಹಾದಿಯಲ್ಲಿ ಭಾರತ: ೨: ಮೂಲಸೌಕರ್ಯ ಹಾಗೂ ರಕ್ಷಣಾ ಕ್ಷೇತ್ರ

ಉದಯ ಶಂಕರ ಪುರಾಣಿಕ
ಟಿ. ಜಿ. ಶ್ರೀನಿಧಿ


ಸ್ವಾತಂತ್ರ್ಯಾನಂತರದ ಏಳು ದಶಕಗಳ ಅವಧಿಯಲ್ಲಿ ನಮ್ಮ ದೇಶ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಬಹುಮುಖಿಯಾದದ್ದು. ಕೃಷಿ, ಆರೋಗ್ಯ, ರಕ್ಷಣೆ, ದೂರಸಂಪರ್ಕ, ಐಟಿ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯ ಪ್ರಾತಿನಿಧಿಕ ಪರಿಚಯ ನೀಡುವ ಲೇಖನಸರಣಿಯನ್ನು ಇಜ್ಞಾನ ಡಾಟ್ ಕಾಮ್ ಪ್ರಕಟಿಸುತ್ತಿದೆ. ಈ ಸರಣಿಯ ಎರಡನೆಯ ಲೇಖನ ಇಲ್ಲಿದೆ.

ಹಿಂದಿನ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ

ಮೂಲಸೌಕರ್ಯದ ಅಭಿವೃದ್ಧಿ
ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್, ಸಾರಿಗೆ ಮೊದಲಾದ ಕ್ಷೇತ್ರಗಳಲ್ಲಿ ಭಾರತ ಗಣನೀಯ ಸಾಧನೆ ಮಾಡಿದೆ. ೧೯೫೦ರಲ್ಲಿ ದೇಶದಲ್ಲಿ ಸುಮಾರು ೪೦,೦೦೦ ಕಿಲೋಮೀಟರ್ ರಸ್ತೆ ಮತ್ತು ೪೫,೦೦೦ ಕಿಲೋಮೀಟರ್ ರೈಲು ಮಾರ್ಗ ಇದ್ದರೆ, ೨೦೧೬ರ ವೇಳೆಗೆ ಈ ಪ್ರಮಾಣ ೫೨ ಲಕ್ಷ ೩೦ ಸಾವಿರ ಕಿಲೋಮೀಟರ್ ರಸ್ತೆ ಮತ್ತು ೧ ಲಕ್ಷ ೧೫ ಸಾವಿರ ಕಿಲೋಮೀಟರ್ ರೈಲು ಮಾರ್ಗ ಸೃಷ್ಟಿಯಾಗಿತ್ತು.

ರಸ್ತೆ, ರೈಲು ಮಾರ್ಗಗಳ ಅಭಿವೃದ್ಧಿ ಹಾಗೂ ನಿರ್ವಹಣೆಯಲ್ಲಿ ವಿವಿಧ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಬ್ರಾಡ್‌ಗೇಜ್, ಮೀಟರ್‌ಗೇಜ್ ಮತ್ತು ನ್ಯಾರೋಗೇಜ್ ಎಂಬ ಬೇರೆಬೇರೆ ಮಾನಕಗಳನ್ನು ಬಳಸುತ್ತಿದ್ದ ರೈಲು ಮಾರ್ಗಗಳನ್ನು ದೇಶಾದಂತ್ಯ ಏಕರೂಪಕ್ಕೆ (ಬ್ರಾಡ್‌ಗೇಜ್) ಪರಿವರ್ತಿಸಲು ಭಾರತೀಯ ರೈಲ್ವೇ ೧೯೯೦-೯೧ ರಲ್ಲಿ ಪ್ರಾರಂಭಿಸಿದ ಯೋಜನೆಯಲ್ಲಿ ರೈಲು ಮಾರ್ಗ ಉನ್ನತೀಕರಣ ಮಾತ್ರವಲ್ಲದೆ ಹಲವೆಡೆ ಹೊಸ ಸೇತುವೆಗಳು, ಸುರಂಗಗಳು ಮತ್ತು ಫ್ಲಾಟ್‌ಫಾರಂಗಳನ್ನೂ ನಿರ್ಮಿಸಲಾಯಿತು. ೨೦೦೦ ಸೇತುವೆಗಳು, ೯೧ ಸುರಂಗ ಮಾರ್ಗಗಳನ್ನು ಹೊಂದಿರುವ ಕೊಂಕಣ ರೈಲು ಯೋಜನೆ, ಭಾರತದ ತಂತ್ರಜ್ಞರ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ. ದೇಶದಲ್ಲಿ ಸರಕು ಸಾಗಾಣಿಕೆಗೆಂದು ಪ್ರತ್ಯೇಕ ರೈಲು ಕಾರಿಡಾರ್ ಅಭಿವೃದ್ಧಿ ಪಡಿಸುವ ಯೋಜನೆ ಜಾರಿಯಲ್ಲಿದೆ. ಅಂತರಜಾಲ ಮತ್ತು ಮೊಬೈಲ್ ಫೋನ್ ಮೂಲಕ ರೈಲು ಟಿಕೆಟ್ ಕಾಯ್ದಿರುಸುವ ವ್ಯವಸ್ಥೆ ಮೊದಲಾದ ಸೌಲಭ್ಯಗಳನ್ನು ನೀಡುತ್ತಿರುವ ಭಾರತೀಯ ರೈಲ್ವೇ ಅಂತರಜಾಲ ಪೋರ್ಟಲ್ ಜನಪ್ರಿಯವಾಗುತ್ತಿದ್ದು, ಪ್ರತಿದಿನ ಸರಾಸರಿ ೧೩ ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಈ ಪೋರ್ಟಲ್ ಮೂಲಕ ಕಾಯ್ದಿರಿಸಲಾಗುತ್ತಿದೆ.

ಕೊಲ್ಕತ್ತಾ, ದೆಹಲಿ ಮೆಟ್ರೋ ರೈಲು ಯೋಜನೆಗಳ ಯಶಸ್ಸಿನ ನಂತರ ಬೆಂಗಳೂರು, ಹೈದರಾಬಾದ್, ಕೊಚ್ಚಿ ಮುಂತಾದ ಇನ್ನಿತರ ಪ್ರಮುಖ ನಗರಗಳಲ್ಲೂ ಮೆಟ್ರೋ ರೈಲನ್ನು ಪರಿಚಯಿಸಲಾಗಿದೆ. ಭಾರತದಲ್ಲಿ ಮೆಟ್ರೋ ಯೋಜನೆಗೆ ಬೇಕಾಗುವ ಮೆಟ್ರೋ ರೈಲು ಬೋಗಿಗಳನ್ನು ಭಾರತದಲ್ಲೇ ತಯಾರಿಸುವ ಪ್ರಕ್ರಿಯೆಯನ್ನು ಸರ್ಕಾರಿ ಸ್ವಾಮ್ಯದ ಬಿ.ಎಂ.ಇ.ಎಲ್ ಬೆಂಗಳೂರಿನಲ್ಲಿ ಪ್ರಾರಂಭಿಸಿದೆ.

ಸ್ವಾತಂತ್ರ್ಯ ಬಂದಾಗ ಹೆಚ್ಚಾಗಿ ಜಲವಿದ್ಯುತ್ ಉತ್ಪಾದನೆಯನ್ನು ಅವಲಂಬಿಸಿದ್ದ ಭಾರತದಲ್ಲಿ ಒಟ್ಟು ೧೩೬೨ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿತ್ತು. ಮಾರ್ಚ್ ೨೦೧೭ರ ವೇಳೆಗಾಗಲೇ ಈ ಸಾಮರ್ಥ್ಯ ೩ ಲಕ್ಷ ೧೪ ಸಾವಿರ ೬೪೨ ಮೆಗಾವ್ಯಾಟ್ ಆಗಿತ್ತು. ೧೯೫೬ರಿಂದ ಪರಮಾಣು ವಿದ್ಯುತ್, ೧೯೬೬ರಿಂದ ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್, ೧೯೯೭ರಿಂದ ಸೋಲಾರ್, ಪವನ ಶಕ್ತಿ ಮೊದಲಾದ ಮೂಲಗಳನ್ನು ಆಧಾರಿತ ವಿದ್ಯುತ್ ಉತ್ಪಾದನೆ ಭಾರತದಲ್ಲಿ ಪ್ರಾರಂಭವಾಗಿರುವುದನ್ನು ಸಾಧನೆಯ ಈ ಹಾದಿಯ ಮೈಲಿಗಲ್ಲುಗಳೆಂದು ಗುರುತಿಸಬಹುದು. ವಿದ್ಯುತ್ ಉತ್ಪಾದನೆ ಕೇಂದ್ರಗಳ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆಯಲ್ಲೂ ಭಾರತದ ತಂತ್ರಜ್ಞರು ಮಾಡಿರುವ ಸಾಧನೆ ಗಮನಾರ್ಹವಾಗಿದೆ. ವಿದ್ಯುತ್ ವಿತರಣೆಯಲ್ಲಿ ಸೋರಿಕೆ ಪ್ರಮಾಣ ತಗ್ಗಿಸಲು, ವಿದ್ಯುತ್ ಕಳವು ಪತ್ತೆ ಮಾಡಲು, ಗ್ರಾಹಕರಿಗೆ ವಿದ್ಯುತ್ ಬಿಲ್ ನೀಡಲು ಹೀಗೆ ವಿವಿಧ ಕಡೆ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

ರಸ್ತೆಗಳು ಮತ್ತು ಹೆದ್ದಾರಿಗಳು ಅಭಿವೃದ್ಧಿಯಾದಂತೆ ಅಧಿಕ ಸಾಮರ್ಥ್ಯದ ಸಾರಿಗೆ ವಾಹನಗಳು ಮತ್ತು ಅತ್ಯಾಧುನಿಕ ಸೌಲಭ್ಯಗಳಿರುವ ಪ್ರಯಾಣಿಕ ಸಾರಿಗೆ ವಾಹನಗಳು ಭಾರತದಲ್ಲಿ ಜನಪ್ರಿಯವಾಗುತ್ತಿವೆ. ಇಂತಹ ವಾಹನಗಳ ಉತ್ಪಾದನೆ ಮತ್ತು ನಿರ್ವಹಣೆಯಲ್ಲೂ ಭಾರತೀಯ ಸಂಸ್ಥೆಗಳು ಹಲವು ಸಾಧನೆಗಳನ್ನು ಮಾಡಿವೆ. ಹಲವು ವಿಮಾನಯಾನ ಸಂಸ್ಥೆಗಳು ದೇಶಾದ್ಯಂತ - ಮಹಾನಗರಗಳಿಂದ ಸಣ್ಣ ಊರುಗಳವರೆಗೂ - ವಿಮಾನಯಾನ ಸೇವೆ ನೀಡುವಲ್ಲಿ ಮಹತ್ವದ ಕೊಡುಗೆ ನೀಡುತ್ತಿವೆ. ವಿಶ್ವದ ಪ್ರಮುಖ ಮತ್ತು ಅತ್ಯಾಧುನಿಕ ವಿಮಾನ ನಿಲ್ದಾಣಗಳ ಸಾಲಿನಲ್ಲಿ ಭಾರತದ ಹಲವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳೂ ಇರುವುದು ಇಲ್ಲಿ ಗಮನಾರ್ಹವಾಗಿದೆ.

ರಕ್ಷಣಾಕ್ಷೇತ್ರದ ಸಾಧನೆಗಳು
ಯುದ್ಧ ವಿಮಾನ, ಯುದ್ಧ ನೌಕೆ, ಜಲಾಂರ್ತಗಾಮಿ, ಕ್ಷಿಪಣಿಗಳು, ಫಿರಂಗಿಗಳು, ಟ್ಯಾಂಕು, ಹೆಲಿಕಾಪ್ಟರ್, ಡ್ರೋನ್, ಕ್ಷಿಪಣಿ ನಿರೋಧಕ ವ್ಯವಸ್ಥೆ, ಸೇನಾ ವಾಹನಗಳು - ಹೀಗೆ ಹಲವಾರು ಉತ್ಪನ್ನಗಳ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ನಮ್ಮ ದೇಶದ ಡಿಆರ್‌ಡಿಓ ಮೊದಲಾದ ಸಂಸ್ಥೆಗಳ ವಿಜ್ಞಾನಿಗಳ - ತಂತ್ರಜ್ಞರ ಸಾಧನೆ ಗಮನಾರ್ಹವಾಗಿದೆ. ಅಗ್ನಿ, ಪೃಥ್ವಿ, ಬ್ರಾಹ್ಮೋಸ್, ಆಕಾಶ್ ಮೊದಲಾದ ಕ್ಷಿಪಣಿಗಳು, ಯುದ್ಧ ವಿಮಾನ ತೇಜಸ್, ಲಘು ಯುದ್ಧ ಹೆಲಿಕಾಪ್ಟರ್, ರೇಡಾರ್‌ಗಳು, ಧನುಷ್ ಫಿರಂಗಿ - ಹೀಗೆ ಇವರ ಯಶಸ್ಸಿನ ಪಟ್ಟಿ ಸಾಕಷ್ಟು ದೀರ್ಘವಾದದ್ದು.

ಗಡಿ ಭಾಗದಲ್ಲಿ ಪ್ರತಿಕೂಲ ಹವಾಮಾನದಲ್ಲಿ ಕೆಲಸ ಮಾಡುವ ಸೈನಿಕರಿಗೆ ವಿಶೇಷ ಆಹಾರ ಮತ್ತು ಪಾನೀಯಗಳನ್ನು ಸಿದ್ಧಪಡಿಸಲು ಅಗತ್ಯವಾದ ತಂತ್ರಜ್ಞಾನವನ್ನು ಸಿ.ಎಫ್.ಟಿ.ಆರ್.ಐ, ಡಿ.ಎಫ್.ಆರ್.ಎಲ್ ಮೊದಲಾದ ಸಂಸ್ಥೆಗಳು ಅಭಿವೃದ್ಧಿಪಡಿಸುತ್ತಿವೆ. ಇದೇ ರೀತಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲು, ಅರೋಗ್ಯ ತಪಾಸಣೆಗೆ ಕೈಗೊಳ್ಳಲು ಬಳಕೆಯಾಗುವ ಮೆಡಿಕಲ್ ಕಿಟ್‌ಗಳನ್ನೂ ವಿವಿಧ ಭಾರತೀಯ ಸಂಸ್ಥೆಗಳು ಅಭಿವೃದ್ಧಿಪಡಿಸುತ್ತಿವೆ. ಭಾರತದ ರಕ್ಷಣಾ ಪಡಗಳಿಗೆ ಉಪಗ್ರಹ ತಂತ್ರಜ್ಞಾನ ಮತ್ತು ಸೇವೆಯ ನೆರವನ್ನು ಇಸ್ರೋ ಮತ್ತದರ ಅಂಗ ಸಂಸ್ಥೆಗಳು ನೀಡುತ್ತಿವೆ. ರಕ್ಷಣಾ ಪಡೆಗಳಿಗೆಂದು ಪ್ರತ್ಯೇಕ ಸಂವಹನೆ ವ್ಯವಸ್ಥೆ, ಗಡಿಭಾಗದಲ್ಲಿರುವ ಸೈನಿಕರಿಗೆ ದೂರವಾಣಿ ಸೌಲಭ್ಯ, ಹೀಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಸೈನಿಕರು ಬಳಸುವ ಗುಂಡು ನಿರೋಧಕ ಜಾಕೆಟ್, ಗುಂಡು ನಿರೋಧ ಹೆಲ್ಮೆಟ್, ನೆಲಬಾಂಬು ನಿರೋಧಕ ವಾಹನಗಳು - ಹೀಗೆ ವಿವಿಧ ರೀತಿಯ ಉತ್ಪನ್ನಗಳನ್ನು ಭಾರತದಲ್ಲಿ ಉತ್ಪಾದಿಸಲು ಸರ್ಕಾರ ಉತ್ತೇಜನ ನೀಡುತ್ತಿದೆ. ವಿವಿಧ ದೇಶಗಳಿಂದ ಅಮದು ಮಾಡಿಕೊಂಡಿರುವ ಟ್ಯಾಂಕು ಮೊದಲಾದ ಯುದ್ಧೋಪಕರಣಗಳನ್ನು ಸಾಧ್ಯವಾದಷ್ಟು ಸ್ವದೇಶಿ ಬಿಡಿಭಾಗಗಳಿಂದ ತಯಾರಿಸಬೇಕು ಎನ್ನುವ ಸರ್ಕಾರದ ಯೋಜನೆಗೆ ವಿಜ್ಞಾನಿಗಳು ಮತ್ತು ತಂತ್ರಜ್ಞರು ಕೈಜೋಡಿಸಿದ್ದಾರೆ. ಗಡಿ ಭಾಗದಲ್ಲಿ ರಸ್ತೆ, ಸೇತುವೆ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಅಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಗಡಿ ರಾಜ್ಯಗಳಲ್ಲಿ ರೈಲು ವ್ಯವಸ್ಥೆ ಅಭಿವೃದ್ಧಿಪಡಿಸಲು ಭಾರತೀಯ ರೈಲ್ವೇ ಮುಂದಾಗಿದೆ. ಕಾಶ್ಮೀರದಲ್ಲಿ ವಿಶ್ವದ ಅತ್ಯಂತ ಎತ್ತರದ ರೈಲು ಸೇತುವೆಯನ್ನು ನಿರ್ಮಿಸಲಾಗುತ್ತಿರುವುದು ಇಲ್ಲಿ ಗಮನಾರ್ಹವಾಗಿದೆ. ಈಗ ಖಾಸಗಿ ಕ್ಷೇತ್ರದ ಪ್ರಮುಖ ಉದ್ಯಮಗಳು ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದರಿಂದ ಭವಿಷ್ಯದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸಬಹುದಾಗಿದೆ.

೨೦೧೭ರ ವಿಜಯವಾಣಿ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನದ ಸಂಗ್ರಹರೂಪ; ಮುಂದಿನ ಕಂತಿನಲ್ಲಿ: ಬಾಹ್ಯಾಕಾಶ ಹಾಗೂ ದೂರಸಂಪರ್ಕ ತಂತ್ರಜ್ಞಾನ
badge