ಬುಧವಾರ, ಫೆಬ್ರವರಿ 28, 2018

ರಾಷ್ಟ್ರೀಯ ವಿಜ್ಞಾನ ದಿನ ವಿಶೇಷ: ವಿಜ್ಞಾನದ ಹಾದಿಯಲ್ಲಿ ಭಾರತದ ಹೆಜ್ಜೆಗುರುತುಗಳು

ಉದಯ ಶಂಕರ ಪುರಾಣಿಕ
ಟಿ. ಜಿ. ಶ್ರೀನಿಧಿ

ವಿಜ್ಞಾನ - ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆಗಳೇನು ಎನ್ನುವುದು ಪದೇಪದೇ ಕೇಳಸಿಗುವ ಪ್ರಶ್ನೆ. ಈ ಪ್ರಶ್ನೆಗೆ ದೊರಕುವ ಉತ್ತರ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. "ಪಾಶ್ಚಿಮಾತ್ಯ ದೇಶಗಳ ಸಾಧನೆಗಳೆಲ್ಲ ಸಾಧ್ಯವಾಗಿರುವುದು ಭಾರತದಿಂದಾಗಿಯೇ" ಎನ್ನುವಂತಹ ವಾದಗಳಿಂದ ಪ್ರಾರಂಭಿಸಿ "ವಿಜ್ಞಾನ-ತಂತ್ರಜ್ಞಾನದ ಸಾಧನೆಗಳಷ್ಟೂ ಹೊರದೇಶಗಳಲ್ಲೇ ಆಗಿರುವುದು" ಎನ್ನುವುದರವರೆಗೆ ಈ ಉತ್ತರ ಹಲವು ಬಗೆಯದಾಗಿರುವುದು ಸಾಧ್ಯ.

ಈ ಕ್ಷೇತ್ರದಲ್ಲಿ ಭಾರತದ - ಭಾರತೀಯರ ಸಾಧನೆಗಳಿಗೆ ಉದಾಹರಣೆ ಕೊಡಿ ಎಂದು ಕೇಳಿದರೆ ಉದಾಹರಣೆಗಳ ಪಟ್ಟಿ ಚರಕ - ಸುಶ್ರುತ, ಆರ್ಯಭಟ - ಭಾಸ್ಕರರಿಂದ ಪ್ರಾರಂಭವಾಗಿ ಜಗದೀಶಚಂದ್ರ ಬೋಸ್ - ಸಿ ವಿ ರಾಮನ್‌ರ ಹೆಸರುಗಳೊಡನೆ ನಿಂತುಹೋಗುವುದೂ ಉಂಟು.

ಹೀಗೆಲ್ಲ ಇದೆ ಎಂದಮಾತ್ರಕ್ಕೆ ವಿಜ್ಞಾನ - ತಂತ್ರಜ್ಞಾನಗಳಲ್ಲಿ ಭಾರತದ ಸಾಧನೆ ಕಡಿಮೆಯೆಂದಾಗಲೀ ಕಳಪೆಯೆಂದಾಗಲೀ ಖಂಡಿತಾ ಅರ್ಥವಲ್ಲ. ಯಾರು ಏನೆನ್ನುತ್ತಾರೆ ಎನ್ನುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ನಮ್ಮ ದೇಶ ಈ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಲೇ ಇದೆ. ಈ ಕೆಲಸದ ಪರಿಣಾಮವಾಗಿಯೇ ಅನೇಕ ಸಾಧನೆಗಳನ್ನು ಮಾಡಿದೆ, ತಲೆಕೆಡಿಸಿಕೊಳ್ಳದ ಕಾರಣದಿಂದ ಇನ್ನಷ್ಟು ಸಾಧನೆಗಳನ್ನು ಮಾಡದೆಯೂ ಉಳಿದಿದೆ.

ಇವೆಲ್ಲದರ ನಡುವೆ ವಿಜ್ಞಾನ - ತಂತ್ರಜ್ಞಾನಗಳು ನಮ್ಮಂತಹ ಸಾಮಾನ್ಯರ ಬದುಕನ್ನು ವ್ಯಾಪಕವಾಗಿ ಪ್ರಭಾವಿಸಿರುವುದು, ಜೀವನಮಟ್ಟವನ್ನು ಗಮನಾರ್ಹವಾಗಿ ಸುಧಾರಿಸಿರುವುದೂ ಸತ್ಯವೇ.

ಅಂದಹಾಗೆ ಈ ಬದಲಾವಣೆಯ ಹಿಂದಿರುವುದು ಪ್ರಯೋಗಶಾಲೆಗಳಲ್ಲಿ ಬಿಳಿಕೋಟು ಧರಿಸಿ ಕೆಲಸಮಾಡುವ ವಿಜ್ಞಾನಿಗಳಷ್ಟೇ ಅಲ್ಲ. ಜನರಿಗೆ ಅನುಕೂಲವಾಗುವಂತಹ ನಿರ್ಧಾರಗಳನ್ನು ಕೈಗೊಳ್ಳುವ ಆಡಳಿತಗಾರರು, ವಿದ್ಯಾರ್ಥಿಗಳು ಹೊಸ ರೀತಿಯಲ್ಲಿ ಆಲೋಚಿಸಲು ಪ್ರಚೋದಿಸುವ ಶಿಕ್ಷಕರು, ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಉದ್ಯಮಿಗಳೆಲ್ಲರೂ ವಿಜ್ಞಾನದ ಹಾದಿಯಲ್ಲಿ ಭಾರತ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಲು ನೆರವಾಗಿದ್ದಾರೆ.

ಸ್ವಾತಂತ್ರ್ಯಾನಂತರದ ಏಳು ದಶಕಗಳ ಅವಧಿಯಲ್ಲಿ ನಮ್ಮ ದೇಶ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಬಹುಮುಖಿಯಾದದ್ದು. ಕೃಷಿ, ಆರೋಗ್ಯ, ರಕ್ಷಣೆ, ದೂರಸಂಪರ್ಕ, ಐಟಿ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯ ಪ್ರಾತಿನಿಧಿಕ ಪರಿಚಯ ನೀಡುವ ಲೇಖನಸರಣಿಯನ್ನು ರಾಷ್ಟ್ರೀಯ ವಿಜ್ಞಾನ ದಿನ ಸಂದರ್ಭದಲ್ಲಿ ಇಜ್ಞಾನ ಡಾಟ್ ಕಾಮ್ ಪ್ರಾರಂಭಿಸುತ್ತಿದೆ. ಈ ಸರಣಿಯ ಮೊದಲ ಲೇಖನ ಇದು.
ಇದನ್ನೂ ಓದಿ: ರಾಷ್ಟ್ರೀಯ ವಿಜ್ಞಾನ ದಿನ
ಕೃಷಿ ಹಾಗೂ ಜೈವಿಕ ತಂತ್ರಜ್ಞಾನ
ಕೃಷಿ ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ವಿಜ್ಞಾನಿಗಳು ಮಾಡುತ್ತಿರುವ ನಿರಂತರ ಕೆಲಸದಿಂದಾಗಿ ಭಾರತವು ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿದೆ. ಹಸಿರು ಕ್ರಾಂತಿ ಮತ್ತು ಕ್ಷೀರ ಕ್ರಾಂತಿಯ ಯಶಸ್ಸಿನ ಹಾದಿಯಲ್ಲೇ ಜೈವಿಕ ವಿಜ್ಞಾನ ಕ್ಷೇತ್ರದಲ್ಲೂ ಭಾರತ ಹಲವಾರು ಸಾಧನೆಗಳನ್ನು ಮಾಡುತ್ತಿದೆ. ಹಾಲು, ಅಕ್ಕಿ, ಗೋಧಿ, ಕಾಫಿ, ಸಕ್ಕರೆ, ಹತ್ತಿ ಮೊದಲಾದವುಗಳನ್ನು ಹೆಚ್ಚು ಉತ್ಪಾದನೆ ಮಾಡುತ್ತಿರುವ ವಿಶ್ವದ ಅಗ್ರಗಣ್ಯ ದೇಶಗಳಲ್ಲಿ ಭಾರತವೂ ಒಂದು.

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಕುಕ್ಕುಟೋದ್ಯಮದಲ್ಲಿ ಹೊಸ ತಂತ್ರಜ್ಞಾನ ಬಳಕೆಯಾಗುತ್ತಿದ್ದು, ದೇಶಿ ತಳಿಗಳ ಪೋಷಣೆ ಮತ್ತು ಮಾರಾಟಕ್ಕೆ ರೈತರಿಗೆ ಅನುಕೂಲವಾಗಲು 'ಇ-ಪಶುಧನ್ ಹಾಥ್' ಹೆಸರಿನ ಅಂತರಜಾಲ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ದೇಶಿಯ ತಳಿಗಳ ಅಭಿವೃದ್ಧಿ ಮತ್ತು ಹೈನುಗಾರಿಕೆಗೆ ಅನುಕೂಲವಾಗಲು ರಾಷ್ಟ್ರೀಯ ಗೋವು ಜೆನೋಮ್ ಕೇಂದ್ರದ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿರುವ ೮ ಕೋಟಿ ೫೦ ಲಕ್ಷ ಗೋವುಗಳ ಆರೋಗ್ಯ ಮಾಹಿತಿಯನ್ನು ಡೇಟಾಬೇಸ್‌ನಲ್ಲಿ ಸಂಗ್ರಹಿಸಡಲಾಗುತ್ತಿದೆ. ಸಾಂಕ್ರಾಮಿಕ ರೋಗಗಳಿಂದ ಗೋವುಗಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಲು ಈ ಮಾಹಿತಿ ಉಪಯುಕ್ತವಾಗುತ್ತದೆ.

ರಾಷ್ಟ್ರೀಯ ಕೃಷಿ ಮಾರುಕಟ್ಟೆ ಹೆಸರಿನ ಅಂತರಜಾಲ ಪೋರ್ಟಲ್‌ನಲ್ಲಿ ರೈತರು ಕೃಷಿ ಉತ್ಪನ್ನವನ್ನು ನೇರವಾಗಿ ಮಾರಾಟ ಮಾಡುವ ಸೌಲಭ್ಯ ನೀಡಲಾಗಿದೆ. ಮಣ್ಣು ಪರೀಕ್ಷೆ ಮತ್ತು ಮಾಹಿತಿ ಸಂಗ್ರಹಿಸಿ ರೈತರಿಗೆ ನೀಡಲು ಮಣ್ಣು ಆರೋಗ್ಯ ಕಾರ್ಡ್ ಯೋಜನೆ ಜಾರಿಯಲ್ಲಿದೆ. ಆಧುನಿಕ ತಂತ್ರಜ್ಞಾನ, ಹನಿ ನೀರಾವರಿ ಪದ್ಧತಿ, ರೋಗ ನಿರ್ವಹಣೆ, ಧಾನ್ಯ ಸಂಗ್ರಹಣೆ, ಬೀಜೋಪಚಾರ, ಸ್ಥಳೀಯ ತಳಿಗಳ ಸಂರಕ್ಷಣೆ ಹೀಗೆ ವಿವಿಧ ಮಾಹಿತಿಯನ್ನು ರೈತರಿಗೆ ನೀಡಲು ೧೦೦ ಐಸಿಎಆರ್ ಸಂಸ್ಥೆಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ಜೈವಿಕ ಇಂಧನ ಕ್ಷೇತ್ರದಲ್ಲಿ ಸಂಶೋಧನೆ ಮಾಡಲು ಐದು ಐ.ಐ.ಟಿಗಳ ವಿಜ್ಞಾನಿಗಳು ಜೊತೆಗೂಡಿ ಕೆಲಸ ಮಾಡುತ್ತಿದ್ದಾರೆ. ದೇಶಿಯವಾಗಿ ರೋಟಾ ವೈರಸ್ ವ್ಯಾಕ್ಸಿನ್‌ನಂತಹ ವ್ಯಾಕ್ಸಿನ್‌ಗಳ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಉದ್ಯಮಗಳು ಹೆಸರುಮಾಡಿರುವಂತೆ ಜೈವಿಕ ತಂತ್ರಜ್ಞಾನ ಕ್ಷೇತ್ರದ ಉದ್ಯಮಗಳೂ ಗಮನಾರ್ಹ ಸಾಧನೆ ಮಾಡುತ್ತಿವೆ. ಭವಿಷ್ಯದಲ್ಲಿ ವಿಶ್ವದ ಜೈವಿಕ ತಂತ್ರಜ್ಞಾನ ಕ್ಷೇತ್ರದ ರಾಜಧಾನಿ ಭಾರತವಾಗಲಿದೆ.

ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ
ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಅಧುನಿಕ ತಂತ್ರಜ್ಞಾನ ಮತ್ತು ವಿಧಾನಗಳ ಬಳಕೆಯಿಂದಾಗಿ ಭಾರತ ಹಲವಾರು ಸಾಧನೆಗಳನ್ನು ಮಾಡಿದೆ. ಕುಷ್ಠರೋಗ, ಸಿಡುಬು, ಪೋಲಿಯೋಗಳ ನಿವಾರಣೆಯಲ್ಲೂ ಮಲೇರಿಯಾ, ಕಾಲಾ ಅಜರ್, ಕಾಲರಾ ಮತ್ತು ಟಿ.ಬಿ.ಗಳ ನಿಯಂತ್ರಣದಲ್ಲೂ ನಮ್ಮ ದೇಶ ಯಶಸ್ವಿಯಾಗಿರುವುದನ್ನು ಇಲ್ಲಿ ಉದಾಹರಿಸಬಹುದು. ಸ್ವಾತಂತ್ರ್ಯಾನಂತರದಲ್ಲಿ ನವಜಾತ ಶಿಶು ಮತ್ತು ಬಾಣಂತಿಯರ ಮೃತ್ಯುವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.

ಬಹುಮಾಧ್ಯಮ ಬಳಸಿ ಏಡ್ಸ್‌ನಂತಹ ಮಾರಕ ಕಾಯಿಲೆಗಳ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳೂ ಪ್ರಗತಿಯಲ್ಲಿವೆ.  ಜನಸಾಮಾನ್ಯರಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸಲು, ಸಮೀಪದಲ್ಲಿರುವ ಆಸ್ಪತ್ರೆ, ಆಂಬುಲೆನ್ಸ್, ರಕ್ತ ನಿಧಿ, ಆರೋಗ್ಯ ಸಹಾಯವಾಣಿ ಮೊದಲಾದ ಮಾಹಿತಿಯನ್ನು ರಾಷ್ಟ್ರೀಯ ಆರೋಗ್ಯ ಅಂತರಜಾಲ ಪೋರ್ಟಲ್ ಮೂಲಕ ನೀಡಲಾಗುತ್ತಿದೆ. ದೇಶದ ಪ್ರಜೆಗಳ ಆರೋಗ್ಯ ಮಾಹಿತಿ ಸಂಗ್ರಹಿಸುವ ರಾಷ್ಟ್ರೀಯ ಆರೋಗ್ಯ ಗಣತಿ ನೆಡೆಸಲಾಗುತ್ತಿದ್ದು, ಇದರಿಂದ ದೊರೆತ ಮಾಹಿತಿಯನ್ನು ವಿಶ್ಲೇಷಿಸುವ ವೈದ್ಯರು ಮತ್ತು ತಂತ್ರಜ್ಞರು, ವಿವಿಧ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳಿಗೆ ನೀಡಬೇಕಾದ ಚಿಕಿತ್ಸೆ ಕುರಿತು ನಿರ್ಧರಿಸಲು ವಿವಿಧ ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ. ಮೊಬೈಲ್ ಫೋನ್, ಇ-ಆರೋಗ್ಯ, ಟೆಲಿ ಮೆಡಿಸಿನ್ ಮೊದಲಾದ ತಂತ್ರಜ್ಞಾನಗಳನ್ನು ಬಳಸಿ ಮಹಾನಗರ ಪ್ರದೇಶದಲ್ಲಿರುವ ಆಸ್ಪತ್ರೆಗಳು ಮತ್ತು ತಜ್ಞ ವೈದ್ಯರ ಸೇವೆಯನ್ನು ಗ್ರಾಮೀಣ ಜನರಿಗೂ ತಲುಪಿಸುವ ಕೆಲಸ ನಡೆಯುತ್ತಿದೆ. ತುರ್ತು ಆಂಬುಲೆನ್ಸ್ ಸೇವೆ, ಆರೋಗ್ಯ ಸಹಾಯವಾಣಿ ಮೊದಲಾದ ಸೌಲಭ್ಯಗಳು ಜನಪ್ರಿಯವಾಗುತ್ತಿವೆ.

ಸ್ವಾತಂತ್ರ್ಯ ಬಂದಾಗ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಶೇಕಡಾ ೮ರಷ್ಟು ಇದ್ದ ಖಾಸಗಿ ಆರೋಗ್ಯ ಸೇವೆ ಸಂಸ್ಥೆಗಳು, ಈಗ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಅದೇ ರೀತಿ ಸ್ವಾತಂತ್ರ್ಯ ಬಂದಾಗ ೨೦ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿದ್ದ ಭಾರತದಲ್ಲಿ ಈಗ ೩೫೦ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳಿವೆ. ಈ ಮೊದಲು ಹೃದಯ, ಮೂತ್ರಪಿಂಡ, ಕ್ಯಾನ್ಸರ್ ಮೊದಲಾದವುಗಳ ಚಿಕಿತ್ಸೆಗೆ ಭಾರತೀಯರು ವಿದೇಶಕ್ಕೆ ಹೋಗುತ್ತಿದ್ದರು. ಈಗ ಕಣ್ಣು, ಹೃದಯ, ಮೂತ್ರಪಿಂಡ, ಕ್ಯಾನ್ಸರ್ ಮೊದಲಾದವುಗಳ ಚಿಕಿತ್ಸೆಗಾಗಿ ಭಾರತದಲ್ಲಿ ಲಭ್ಯವಿರುವ ವಿಶ್ವಮಟ್ಟದ ಸೌಲಭ್ಯಗಳನ್ನು ಬಳಸಿಕೊಳ್ಳಲು ವಿದೇಶೀಯರೂ ಭಾರತಕ್ಕೆ ಬರುತ್ತಿದ್ದಾರೆ. ಭಾರತದ ಆರೋಗ್ಯ ವ್ಯವಸ್ಥೆ ಈ ಮಟ್ಟಕ್ಕೆ ಸುಧಾರಣೆಯಾಗುವಲ್ಲಿ ನಮ್ಮ ದೇಶದ ತಂತ್ರಜ್ಞರು, ವೈದ್ಯರು, ವಿಜ್ಞಾನಿಗಳು ಮತ್ತು ತಜ್ಞರ ಪಾತ್ರ ಮಹತ್ವದ್ದು. ಇಂದು ಹಲವಾರು ಔಷಧ, ವ್ಯಾಕ್ಸೀನ್‌ಗಳನ್ನೂ ಭಾರತದಲ್ಲಿ ತಯಾರಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ಭಾರತೀಯರು ಮಾಡುತ್ತಿರುವ ಸಾಧನೆ ಮತ್ತು ಸಂಶೋಧನೆಗೆ ವಿಶ್ವಮಟ್ಟದಲ್ಲಿ ಮಾನ್ಯತೆ ದೊರೆಯುತ್ತಿದೆ.

೨೦೧೭ರ ವಿಜಯವಾಣಿ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನದ ಸಂಗ್ರಹರೂಪ; ಮುಂದಿನ ಕಂತಿನಲ್ಲಿ: ಮೂಲಸೌಕರ್ಯ ಹಾಗೂ ರಕ್ಷಣಾ ಕ್ಷೇತ್ರದ ಸಾಧನೆಗಳು

ಕಾಮೆಂಟ್‌ಗಳಿಲ್ಲ:

badge