ಬುಧವಾರ, ಜನವರಿ 17, 2018

ಪಾಠ ಹೇಳುವ ಯಂತ್ರ, ಪಾಠ ಕಲಿಯುವ ಯಂತ್ರ

ಟಿ. ಜಿ. ಶ್ರೀನಿಧಿ


ಮಾಹಿತಿ ತಂತ್ರಜ್ಞಾನದ ಸವಲತ್ತುಗಳ ಮಾತು ಬಂದಾಗಲೆಲ್ಲ ಶಿಕ್ಷಣ ಕ್ಷೇತ್ರದಲ್ಲಿ ಅವುಗಳ ಉಪಯುಕ್ತತೆ ಕುರಿತು ಚರ್ಚೆಯಾಗುವುದು ಸಾಮಾನ್ಯ. ಐಟಿ ಬಳಕೆಯಿಂದ ಶಿಕ್ಷಣದ ಗುಣಮಟ್ಟವನ್ನು ಬದಲಿಸಬಹುದು ಎಂಬ ಹೇಳಿಕೆಗಳು, ಅಂತಹ ಹೇಳಿಕೆಗಳಿಗೆ ಬೆಂಬಲವಾಗಿ ನಿಲ್ಲುವ ನೈಜ ಉದಾಹರಣೆಗಳು ನಮ್ಮ ಗಮನಕ್ಕೆ ಬರುವುದೂ ಅಪರೂಪವೇನಲ್ಲ. "ಕಂಪ್ಯೂಟರು - ಮೊಬೈಲು ಬಂದು ವಿದ್ಯಾರ್ಥಿಗಳೆಲ್ಲ ಹಾಳಾಗಿ ಹೋದ್ರು" ಎಂದು ಬೈಯುವವರೂ ಅವುಗಳ ಪರಿಣಾಮಕಾರಿ ಬಳಕೆ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಬಲ್ಲದು ಎಂದು ಒಪ್ಪುವಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗುತ್ತಿದೆ.

ಇಂತಹ ಉದಾಹರಣೆಗಳು ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ಪೋಷಿಸುವ ಅನೇಕ ಹೊಸ ಮಾರ್ಗಗಳನ್ನು ತೋರಿಸುತ್ತವೆ, ನಿಜ. ಆದರೆ ಬುದ್ಧಿಮತ್ತೆಯೆನ್ನುವುದೇನು ಬರೀ ಮನುಷ್ಯರ ಸ್ವತ್ತೇ? ಜೀವವೇ ಇಲ್ಲದ ಯಂತ್ರಗಳಲ್ಲೂ ಬುದ್ಧಿಮತ್ತೆಯನ್ನು ವಿಕಾಸಗೊಳಿಸಲು ಇದೇ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಲಾಗುತ್ತಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
ತನ್ನ ಅನುಭವ-ಅನಿಸಿಕೆಗಳ ಆಧಾರದ ಮೇಲೆ ಬೇರೆಬೇರೆ ಸಂದರ್ಭಗಳಿಗೆ ಬೇರೆ ರೀತಿಯಾಗಿ ಪ್ರತಿಕ್ರಿಯಿಸುವ  ಸಾಮರ್ಥ್ಯ ಮನುಷ್ಯನಲ್ಲಿರುವ ವೈಶಿಷ್ಟ್ಯ. ಇಂತಹುದೇ ಸಾಮರ್ಥ್ಯವನ್ನು ಯಂತ್ರಗಳಲ್ಲೂ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿರುವ ವಿಜ್ಞಾನದ ಶಾಖೆಯೇ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಎಐ). ಈ ಹೆಸರನ್ನು ಟಂಕಿಸಿದ ಶ್ರೇಯ ಅಮೆರಿಕಾದ ಜಾನ್ ಮೆಕಾರ್ಥಿ ಎನ್ನುವ ಕಂಪ್ಯೂಟರ್ ವಿಜ್ಞಾನಿಗೆ ಸಲ್ಲುತ್ತದೆ.

ತಂತ್ರಾಂಶ ಹೇಳಿದ್ದಷ್ಟನ್ನೇ ಮಾಡುವ ಬದಲು ಹೊಸ ವಿಷಯಗಳನ್ನು ಕಲಿಯುವ, ಹಾಗೆ ಕಲಿತದ್ದನ್ನು ಬಳಸುವ ಸಾಮರ್ಥ್ಯವೂ ಯಂತ್ರಗಳಲ್ಲಿರಬೇಕು ಎನ್ನುವುದು ಈ ಪರಿಕಲ್ಪನೆಯ ಆಶಯ. ಯಂತ್ರಗಳು ಮನುಷ್ಯರ ಧ್ವನಿಯನ್ನು - ಅಂಗಸನ್ನೆಗಳನ್ನು (ಜೆಸ್ಚರ್) ಗುರುತಿಸುವುದು, ಹೊಸ ಸಂಗತಿಗಳನ್ನು ತಾವಾಗಿಯೇ ಕಲಿಯುವುದು, ಸಮಸ್ಯೆಗಳನ್ನು ಬಿಡಿಸುವುದು (ಪ್ರಾಬ್ಲಂ ಸಾಲ್ವಿಂಗ್), ತಮ್ಮ ಮುಂದಿನ ಕೆಲಸಗಳನ್ನು ಯೋಜಿಸುವುದೆಲ್ಲ ಎಐ ಪರಿಧಿಯಲ್ಲಿ ಬರುತ್ತವೆ.

ವೀಡಿಯೋ‌ ಗೇಮ್‌ಗಳಲ್ಲಿ ಮಾನವ ಬಳಕೆದಾರರೊಡನೆ ಕಂಪ್ಯೂಟರೇ ಪ್ರತಿಸ್ಪರ್ಧಿಯಾಗಿ ಆಡುವುದರಿಂದ ಪ್ರಾರಂಭಿಸಿ ಹಣಕಾಸು ವಹಿವಾಟುಗಳಲ್ಲಿ ಸಂಭಾವ್ಯ ವಂಚನೆಗಳನ್ನು ಗುರುತಿಸುವವರೆಗೆ ಅನೇಕ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಸಾಧ್ಯ. ತಂತ್ರಜ್ಞಾನದ ವಿಕಾಸವಾದಂತೆ ಈ ಪರಿಕಲ್ಪನೆಯ ಅರ್ಥ ಹಾಗೂ ಈ ಕ್ಷೇತ್ರದ ವ್ಯಾಪ್ತಿ ಬದಲಾಗುತ್ತ ಹೋಗುವುದು ಸಾಮಾನ್ಯ - ಕೆಲ ವರ್ಷಗಳ ಹಿಂದೆ ಎಐ ವ್ಯಾಪ್ತಿಯಲ್ಲಿದೆಯೆಂದು ಭಾವಿಸಲಾಗಿದ್ದ ಓಸಿಆರ್‌ನಂತಹ ತಂತ್ರಜ್ಞಾನಗಳನ್ನು ಈಗ ಸಾಮಾನ್ಯ ತಂತ್ರಾಂಶವೆಂದಷ್ಟೇ ಪರಿಗಣಿಸಲಾಗುವುದನ್ನು ಇಲ್ಲಿ ಉದಾಹರಿಸಬಹುದು.

ಮಶೀನ್ ಲರ್ನಿಂಗ್
ಬುದ್ಧಿವಂತ ಯಂತ್ರಗಳು ತಯಾರಾಗಬೇಕಾದರೆ ಅವುಗಳೂ ಮನುಷ್ಯರಂತೆ ಹೊಸಹೊಸ ಸಂಗತಿಗಳನ್ನು ಕಲಿಯುತ್ತಲೇ ಇರಬೇಕಾಗುತ್ತದಲ್ಲ, ಇದನ್ನು ಸಾಧ್ಯವಾಗಿಸುವ ಪರಿಕಲ್ಪನೆಯ ಹೆಸರು ಮಶೀನ್ ಲರ್ನಿಂಗ್.

ಕಂಪ್ಯೂಟರಿನ ಉದಾಹರಣೆಯನ್ನೇ ತೆಗೆದುಕೊಂಡರೆ ಅದು ತನ್ನಲ್ಲಿರುವ ತಂತ್ರಾಂಶದ ನಿರ್ದೇಶನಗಳನ್ನು ಚಾಚೂತಪ್ಪದೆ ಅನುಸರಿಸುತ್ತದೆ. ಪ್ರತಿ ಸನ್ನಿವೇಶದಲ್ಲೂ ಈ ತಂತ್ರಾಂಶದ ಪ್ರತಿಕ್ರಿಯೆ ಒಂದೇ ರೀತಿಯದಾಗಿರುವುದು ಈಗ ಸಾಮಾನ್ಯವೆನಿಸುವ ಸಂಗತಿ. ಇದರ ಬದಲು ತಂತ್ರಾಂಶಗಳು ತಮ್ಮ ಕಾರ್ಯಾಚರಣೆಯಲ್ಲಿ ಎದುರಾಗುವ ಸನ್ನಿವೇಶಗಳಿಂದ ಕಲಿತು ಸಂದರ್ಭಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದು ಸಾಧ್ಯವಾಗಬೇಕು ಎನ್ನುವುದು ಮಶೀನ್ ಲರ್ನಿಂಗ್‌ನ ಉದ್ದೇಶ.

ನಿರ್ದಿಷ್ಟ ತಂತ್ರಾಂಶವೊಂದರ ಸಂಪರ್ಕಕ್ಕೆ ಬರುವ ದತ್ತಾಂಶವನ್ನು ವಿಶ್ಲೇಷಿಸಿ ಅದರ ಅಧಾರದ ಮೇಲೆ ತಂತ್ರಾಂಶದ ವರ್ತನೆಯನ್ನು ಬದಲಿಸಿಕೊಳ್ಳುವುದು ಈ ಕ್ಷೇತ್ರದಲ್ಲಿ ಬಳಕೆಯಾಗುವ ತಂತ್ರಗಳಲ್ಲೊಂದು. ನೀವು ಸಮಾಜಜಾಲಗಳಲ್ಲಿ ಯಾವ ರೀತಿಯ ಪೋಸ್ಟ್‌ಗಳನ್ನು ಹೆಚ್ಚಾಗಿ ಇಷ್ಟಪಡುತ್ತೀರಿ, ಸುದ್ದಿತಾಣಗಳಲ್ಲಿ ಎಂತಹ ಸುದ್ದಿಗಳನ್ನು ಓದುತ್ತೀರಿ ಎನ್ನುವುದನ್ನು ಗಮನಿಸುವ ಜಾಲತಾಣಗಳು ಮುಂದಿನ ಬಾರಿ ಅದೇ ರೀತಿಯ ಮಾಹಿತಿಯನ್ನು ನಿಮಗೆ ತೋರಿಸುತ್ತವಲ್ಲ, ಅದೂ ಮಶೀನ್ ಲರ್ನಿಂಗ್‌ನದೇ ಉದಾಹರಣೆ. ಧ್ವನಿರೂಪದ ಆದೇಶಗಳನ್ನು ಪಡೆದುಕೊಂಡು ಪ್ರತಿಕ್ರಿಯೆ ನೀಡುವ ಅಮೆಜಾನ್ ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಮುಂತಾದ ಸೌಲಭ್ಯಗಳೂ ತಮ್ಮ ಕಾರ್ಯನಿರ್ವಹಣೆಯನ್ನು ಉತ್ತಮಪಡಿಸಿಕೊಳ್ಳಲು ಮಶೀನ್ ಲರ್ನಿಂಗ್ ಪರಿಕಲ್ಪನೆಯನ್ನು ಬಳಸುತ್ತವೆ.

ಡಿಸೆಂಬರ್ ೨೭, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge