ಸೋಮವಾರ, ಜನವರಿ 1, 2018

ಕಾರ್ಡ್ ಕತೆ

ಟಿ. ಜಿ. ಶ್ರೀನಿಧಿ


'ಕ್ಯಾಶ್‌ಲೆಸ್' ಎಂದಕೂಡಲೇ ನಮಗೆ ನೆನಪಾಗುವ ಸಂಗತಿಗಳಲ್ಲಿ ಕಾರ್ಡುಗಳಿಗೆ ಮೊದಲ ಸ್ಥಾನ. ಎಟಿಎಂ ಕಾರ್ಡ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ - ಹೀಗೆ ಒಂದಲ್ಲ ಒಂದು ಬಗೆಯ ಕಾರ್ಡಿನ ಪರಿಚಯ ನಮ್ಮೆಲ್ಲರಿಗೂ ಉಂಟಲ್ಲ!

'ಪ್ಲಾಸ್ಟಿಕ್ ಹಣ' ಎಂದು ಕರೆಸಿಕೊಳ್ಳುವ ಈ ಕಾರ್ಡುಗಳ ಕಾರ್ಯವೈಖರಿ ಮೇಲ್ನೋಟಕ್ಕೆ ಬಹಳ ಸರಳ ಎನ್ನಿಸುತ್ತದೆ: ನಿಮ್ಮ ಕಾರ್ಡ್ ವಿವರವನ್ನೂ ಹಣ ಪಡೆದುಕೊಳ್ಳಲು ದೃಢೀಕರಣವನ್ನೂ ನೀವು ಅಂಗಡಿಯವರಿಗೆ ನೀಡುತ್ತೀರಿ, ಅವರು ಅದನ್ನು ಬ್ಯಾಂಕಿಗೆ ಕಳಿಸಿ ನಿಮ್ಮ ಖಾತೆಯಿಂದ ತಮ್ಮ ಖಾತೆಗೆ ಹಣ ಪಡೆದುಕೊಳ್ಳುತ್ತಾರೆ.

ಅದೆಲ್ಲ ಸರಿ, ಆದರೆ ಇಷ್ಟೇ ಅಗಲದ ಆ ಕಾರ್ಡು ಇಷ್ಟೆಲ್ಲ ಮಾಡುವುದು ಹೇಗೆ?

ಪರ್ಸಿನಲ್ಲಿರುವ ಕಾರ್ಡ್ ತೆಗೆದು ನೋಡಿದರೆ ಅದರಲ್ಲಿ ಎರಡು ವಿಶೇಷ ಸಂಗತಿಗಳು ನಮ್ಮ ಗಮನಕ್ಕೆ ಬರುತ್ತವೆ: ಒಂದು, ಕಾರ್ಡ್ ಹಿಂಭಾಗದಲ್ಲಿರುವ ಕಪ್ಪನೆಯ ಪಟ್ಟಿ; ಇನ್ನೊಂದು, ಕಾರ್ಡ್ ಮುಂಭಾಗದಲ್ಲಿ ಕಾಣಸಿಗುವ ಪುಟ್ಟದೊಂದು ಚಿಪ್.


ಹಿಂದಿನ ಕಾಲದಲ್ಲಿ ಆಡಿಯೋ-ವೀಡಿಯೋ ಕ್ಯಾಸೆಟ್ಟುಗಳಂತೆ ಡೆಬಿಟ್-ಕ್ರೆಡಿಟ್ ಕಾರ್ಡುಗಳಲ್ಲಿರುವ ಕಪ್ಪನೆಯ ಪಟ್ಟಿಯೂ ಮಾಹಿತಿಯನ್ನು ಅಯಸ್ಕಾಂತೀಯ ಮಾಧ್ಯಮದಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಕ್ಯಾಸೆಟ್ಟಿನಲ್ಲಿ ಹಾಡು-ಸಿನಿಮಾ ಇರುವಂತೆ ಇಲ್ಲಿ ಶೇಖರವಾಗುವುದು ನಮ್ಮ ಖಾತೆಯ ಮಾಹಿತಿ ಎನ್ನುವುದಷ್ಟೇ ವ್ಯತ್ಯಾಸ. ನಮ್ಮ ಕಾರ್ಡನ್ನು ಅಂಗಡಿಯ ಮಶೀನಿನಲ್ಲಿ ಉಜ್ಜಿದಾಗ (ಸ್ವೈಪ್) ಆ ಮಶೀನಿಗೆ - ಅದರ ಮೂಲಕ ನಮ್ಮ ಬ್ಯಾಂಕಿಗೆ ಈ ಮಾಹಿತಿ ತಿಳಿಯುತ್ತದೆ, ಅಂಗಡಿಯಾತ ನಮ್ಮ ಖಾತೆಯಿಂದ ನಿಗದಿತ ಮೊತ್ತವನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ.

ಈ ವಹಿವಾಟಿನಲ್ಲಿ ಗ್ರಾಹಕ, ವ್ಯಾಪಾರಸ್ಥ ಹಾಗೂ ಬ್ಯಾಂಕುಗಳ ನಡುವಿನ ಸಂಪರ್ಕ ಸೇತುವಿನಂತೆ ವೀಸಾ, ಮಾಸ್ಟರ್‌ಕಾರ್ಡ್‌, ರುಪೇ ಮುಂತಾದ ಸಂಸ್ಥೆಗಳು ಕೆಲಸಮಾಡುತ್ತವೆ.

ವ್ಯಾಪಾರಸ್ಥನೊಡನೆ ವ್ಯವಹರಿಸುವಾಗ ಗ್ರಾಹಕ ತನ್ನ ಕಾರ್ಡ್ ಬಳಸಿರುತ್ತಾನಲ್ಲ, ಆತನ ಬ್ಯಾಂಕ್ ಖಾತೆ ಪರಿಶೀಲಿಸಿ ಅದರಲ್ಲಿ ಸಾಕಷ್ಟು ಹಣವಿದ್ದರೆ ಅದನ್ನು ಆತನ ಬ್ಯಾಂಕಿನಿಂದ ವ್ಯಾಪಾರಸ್ಥನ ಬ್ಯಾಂಕಿಗೆ-ಖಾತೆಗೆ ವರ್ಗಾಯಿಸಲು ನೆರವಾಗುವುದು ಈ ಸಂಸ್ಥೆಗಳ ಕೆಲಸ. ಇದಕ್ಕಾಗಿ ಅವು ಬ್ಯಾಂಕುಗಳಿಂದ ಶುಲ್ಕ ವಸೂಲಿ ಮಾಡುತ್ತವೆ.

ಇಷ್ಟೆಲ್ಲ ಕೆಲಸಕ್ಕಾಗಿ ಆಧಾರವಾಗಿ ಬಳಕೆಯಾಗುವುದು ಕಾರ್ಡಿನಲ್ಲಿ ಉಳಿಸಿಟ್ಟಿರುವ ಮಾಹಿತಿ. ಇದನ್ನೆಲ್ಲ ಅಯಸ್ಕಾಂತೀಯ ಪಟ್ಟಿಯಲ್ಲಿ ಉಳಿಸಿಟ್ಟಿದ್ದರೆ ಅದಕ್ಕೆ ಹೆಚ್ಚಿನ ಸುರಕ್ಷತೆಯೇನೂ ಇರುವುದಿಲ್ಲ. ನಮ್ಮ ಕಾರ್ಡನ್ನು ಪಡೆದುಕೊಂಡ ಯಾರು ಬೇಕಾದರೂ ಈ ಮಾಹಿತಿಯನ್ನು ನಕಲಿಸಿಕೊಳ್ಳುವುದು, ನಕಲಿ ಕಾರ್ಡನ್ನು ಸಿದ್ಧಪಡಿಸಿಕೊಳ್ಳುವುದು - ಸೈದ್ಧಾಂತಿಕವಾಗಿ - ಸಾಧ್ಯ.

ಕಾರ್ಡುಗಳಲ್ಲಿ ಚಿಪ್ ಬಳಕೆ ಪ್ರಾರಂಭವಾದದ್ದು ಅಂತಹ ಸಾಧ್ಯತೆಯನ್ನು ಕಡಿಮೆಮಾಡಲೆಂದೇ. ಕಾರ್ಡಿನಲ್ಲಿ ಚಿಪ್ ಇದೆಯೆಂದರೆ ಅದರಲ್ಲೊಂದು ಪುಟಾಣಿ ಕಂಪ್ಯೂಟರ್ ಇದ್ದಂತೆಯೇ. ನಮ್ಮ ಖಾತೆಗೆ - ಕಾರ್ಡಿಗೆ ಸಂಬಂಧಪಟ್ಟ ಮಾಹಿತಿಯನ್ನು ಇದರಲ್ಲಿ ಸುರಕ್ಷಿತವಾಗಿ ಉಳಿಸಿಡಲಾಗಿರುತ್ತದೆ ಹಾಗೂ ವ್ಯಾಪಾರಸ್ಥನ ಯಂತ್ರಕ್ಕೆ ವರ್ಗಾಯಿಸುವಾಗ ಇತರರು ಕದಿಯಲು ಸಾಧ್ಯವಾಗದ ರೂಪಕ್ಕೆ ಪರಿವರ್ತಿಸಲಾಗುತ್ತದೆ. ಹಾಗಾಗಿ ಕಾರ್ಡು ಅನಧಿಕೃತ ವ್ಯಕ್ತಿಗಳ ಕೈಗೆ ಸಿಕ್ಕಿದ ಸಂದರ್ಭದಲ್ಲೂ ಅವರು ಈ ಮಾಹಿತಿಯನ್ನು ಸುಲಭಕ್ಕೆ ನಕಲಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಅಂಗಡಿಗಳಲ್ಲಿ ಡೆಬಿಟ್ - ಕ್ರೆಡಿಟ್‌ ಕಾರ್ಡ್ ಬಳಸುವಾಗ ಹೆಚ್ಚುವರಿಯಾಗಿ ರಹಸ್ಯ ಸಂಖ್ಯೆಯನ್ನೂ (ಪಿನ್) ದಾಖಲಿಸಬೇಕೆಂದು ನಮ್ಮ ದೇಶದಲ್ಲಿ ರೂಪಿಸಲಾಗಿರುವ ನಿಯಮ ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನ.


ಅಂದಹಾಗೆ ಕಾರ್ಡನ್ನು ಅಂಗಡಿಯ ಯಂತ್ರದಲ್ಲಿ ಉಜ್ಜಲೇಬೇಕೆಂಬ ಅನಿವಾರ್ಯವೂ ಈಗಿಲ್ಲ. ಇದನ್ನು ಸಾಧ್ಯವಾಗಿಸಿರುವುದು ಎನ್‌ಎಫ್‌ಸಿ ತಂತ್ರಜ್ಞಾನ ಬಳಸಿ ಕೆಲಸಮಾಡುವ ಸಂಪರ್ಕರಹಿತ (ಕಾಂಟ್ಯಾಕ್ಟ್‌ಲೆಸ್) ವ್ಯವಸ್ಥೆಗಳು. ಕಾರ್ಡನ್ನು ಯಂತ್ರದ ಸಮೀಪ ಕೊಂಡೊಯ್ದ ಕೂಡಲೇ ನಮ್ಮ ವಹಿವಾಟನ್ನು ಪೂರ್ಣಗೊಳಿಸಲು ಈ ವ್ಯವಸ್ಥೆ ಅನುವುಮಾಡಿಕೊಡುತ್ತದೆ.

ಕಾರ್ಡುಗಳ ಬಳಕೆಯನ್ನೇ ಸಂಪೂರ್ಣವಾಗಿ ನಿಲ್ಲಿಸುವ ಯೋಚನೆಗೆ ಕಾರಣವಾಗಿರುವುದೂ ಇದೇ ವ್ಯವಸ್ಥೆ. ಕಾರ್ಡಿನಲ್ಲಿರುವ ಮಾಹಿತಿಯನ್ನೆಲ್ಲ ಮೊಬೈಲ್ ಫೋನಿನಲ್ಲೇ ಉಳಿಸಿಟ್ಟು ಆ ಪೈಕಿ ನಮ್ಮ ವಹಿವಾಟಿಗೆ ಬೇಕಾದಷ್ಟನ್ನು ಎನ್‌ಎಫ್‌ಸಿ ತಂತ್ರಜ್ಞಾನದ ಮೂಲಕ ಪಡೆದುಕೊಳ್ಳುವುದು ಈ ಯೋಚನೆಯ ಹೂರಣ. ಈಚೆಗೆ ಭಾರತದಲ್ಲೂ ಪ್ರಾರಂಭವಾಗಿರುವ 'ಸ್ಯಾಮ್‌ಸಂಗ್ ಪೇ'ಯಂತಹ ವ್ಯವಸ್ಥೆಗಳು ಈ ಯೋಚನೆಯನ್ನು ಈಗಾಗಲೇ ಕಾರ್ಯರೂಪಕ್ಕೆ ತಂದಿವೆ; ಹಣದ ಬಳಕೆ ಕಡಿಮೆಮಾಡುವ 'ಕ್ಯಾಶ್‌ಲೆಸ್' ಪರಿಕಲ್ಪನೆಯಂತೆ ಕಾರ್ಡ್ ಬಳಕೆಯೂ ಕಡಿಮೆಯಾಗುವ 'ಕಾರ್ಡ್‌ಲೆಸ್' ಯುಗಕ್ಕೆ ಮುನ್ನುಡಿ ಬರೆದಿವೆ!

ನವೆಂಬರ್ ೨೬, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ  | ಚಿತ್ರಗಳು: Designed by Freepik

ಕಾಮೆಂಟ್‌ಗಳಿಲ್ಲ:

badge