ಸೋಮವಾರ, ಜನವರಿ 29, 2018

ಟೆಕ್ ಸಂತೆಯಲ್ಲಿ ಬ್ಯಾಟರಿಯದೇ ಚಿಂತೆ!

ಟಿ. ಜಿ. ಶ್ರೀನಿಧಿ


ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ವಸ್ತುಪ್ರದರ್ಶನ ನಡೆಯುತ್ತದಲ್ಲ, ಅದೇ ರೀತಿ ಅಮೆರಿಕಾದ ಲಾಸ್ ವೇಗಾಸ್‌ ನಗರದಲ್ಲೂ ವರ್ಷಕ್ಕೊಂದು ಬಾರಿ ವಿಶೇಷ ಪ್ರದರ್ಶನವೊಂದನ್ನು ಏರ್ಪಡಿಸಲಾಗುತ್ತದೆ. ಟೆಕ್ ಲೋಕದಲ್ಲಿ ಬಹಳ ಜನಪ್ರಿಯವಾದ ಈ ಸಂತೆಯ ಹೆಸರು 'ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್ ಶೋ', ಸಂಕ್ಷಿಪ್ತವಾಗಿ ಸಿಇಎಸ್.

ಮೊಬೈಲ್ ಫೋನ್, ಕಂಪ್ಯೂಟರ್, ಕ್ಯಾಮೆರಾ, ರೋಬಾಟ್, ಡ್ರೋನ್ - ಹೀಗೆ ನೂರೆಂಟು ಬಗೆಯ ವಿದ್ಯುನ್ಮಾನ ಸಾಧನಗಳಿಗೆ ಸಂಬಂಧಪಟ್ಟಂತೆ ಕಳೆದೊಂದು ವರ್ಷದಲ್ಲಿ ಏನೆಲ್ಲ ಹೊಸತು ಘಟಿಸಿದೆ ಎನ್ನುವುದನ್ನು ಜಗತ್ತಿಗೆ ಪರಿಚಯಿಸುವುದು ಸಿಇಎಸ್‌ನ ಉದ್ದೇಶ. ಜನವರಿ ೭ರಿಂದ ೧೨ರವರೆಗೆ ನಡೆದ ಈ ವರ್ಷದ ಸಿಇಎಸ್‌ನಲ್ಲೂ ಇಂತಹ ಹಲವಾರು ಹೊಸ ಬೆಳವಣಿಗೆಗಳು ಬೆಳಕಿಗೆ ಬಂದವು, ವಿಶ್ವದೆಲ್ಲೆಡೆ ಸುದ್ದಿಯಾದವು.

ಬೆಳಕಿಗೆ ಬಂದ ಸುದ್ದಿಗಳ ಜೊತೆಗೆ ಪ್ರದರ್ಶನದ ಸಭಾಂಗಣವೊಂದರಲ್ಲಿ ಬೆಳಕಿಲ್ಲದಂತಾಗಿದ್ದೂ ಸುದ್ದಿಯಾಗಿದ್ದು ಈ ವರ್ಷದ ವಿಶೇಷ. ವಿದ್ಯುನ್ಮಾನ ಸಾಧನಗಳ ಪ್ರದರ್ಶನದಲ್ಲಿ ಅವುಗಳ ಜೀವಾಳವಾದ ವಿದ್ಯುತ್ ಸಂಪರ್ಕ ಕೈಕೊಟ್ಟ ಈ ಘಟನೆ, ಸಹಜವಾಗಿಯೇ, ಸಾಕಷ್ಟು ಚರ್ಚೆಗೆ ಕಾರಣವಾಯಿತು.

ಹೌದಲ್ಲ, ಇಂದಿನ ವಿದ್ಯುನ್ಮಾನ ಸಾಧನಗಳು ಏನೆಲ್ಲ ವಿಸ್ಮಯಕಾರಿ ಸಾಧನೆ ಮಾಡಿದರೂ ಅವುಗಳ ಕಾರ್ಯಾಚರಣೆ ವಿದ್ಯುತ್ ಪೂರೈಕೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ. ಇಂತಹ ಬಹುತೇಕ ಸಾಧನಗಳು (ಉದಾ: ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಕ್ಯಾಮೆರಾ, ಸ್ಮಾರ್ಟ್‌ವಾಚ್) ನೇರವಾಗಿ ವಿದ್ಯುತ್ ಸಂಪರ್ಕವನ್ನು ಬಳಸುವುದಿಲ್ಲ; ಅವಕ್ಕೆಲ್ಲ ವಿದ್ಯುತ್ ಪೂರೈಸುವ ಕೆಲಸ ಬ್ಯಾಟರಿಯದ್ದಾದರಿಂದ ಬ್ಯಾಟರಿಯೇ ಅವುಗಳ ಜೀವ!

ಬ್ಯಾಟರಿಗಳ ಸಾಮರ್ಥ್ಯವನ್ನು ಎಂಎಎಚ್‌ (mAh) ಎಂಬ ಏಕಮಾನದಲ್ಲಿ ಅಳೆಯುತ್ತಾರಲ್ಲ, ಎಂಎಎಚ್ ಅಂದರೆ ಮಿಲಿ ಆಂಪಿಯರ್ ಅವರ್. ಯಾವುದೇ ಬ್ಯಾಟರಿ - ಪೂರ್ತಿ ಚಾರ್ಜ್ ಆಗಿದ್ದಾಗ - ಎಷ್ಟು ಪ್ರಮಾಣದ ವಿದ್ಯುತ್ತನ್ನು ಎಷ್ಟು ಹೊತ್ತಿನವರೆಗೆ ಪೂರೈಸಬಲ್ಲದು ಎನ್ನುವುದನ್ನು ಇದು ಸೂಚಿಸುತ್ತದೆ.

ವಾಹನಗಳಲ್ಲಿ ಇಂಧನ ಟ್ಯಾಂಕಿನ ಸಾಮರ್ಥ್ಯ ಇರುತ್ತದಲ್ಲ, ಇದೂ ಹಾಗೆಯೇ. ದ್ವಿಚಕ್ರ ವಾಹನದಲ್ಲಿ ಎರಡು ಲೀಟರ್ ಸಾಮರ್ಥ್ಯದ ಟ್ಯಾಂಕ್ ಇದ್ದರೆ ಫುಲ್ ಟ್ಯಾಂಕ್ ಮಾಡಿಸಿ ಆರಾಮವಾಗಿ ನೂರು ಕಿಲೋಮೀಟರ್ ಕ್ರಮಿಸಬಹುದು; ಅದೇ ಟ್ಯಾಂಕ್ ಕಾರಿನಲ್ಲಿದ್ದರೆ ಇಪ್ಪತ್ತೋ ಮೂವತ್ತೋ ಕಿಲೋಮೀಟರ್ ಹೋಗುವಷ್ಟರಲ್ಲಿ ಇನ್ನೊಂದು ಪೆಟ್ರೋಲ್ ಬಂಕ್ ಹುಡುಕಬೇಕಾಗುತ್ತದೆ.

ಬ್ಯಾಟರಿ ಸಾಮರ್ಥ್ಯವೂ ಅಷ್ಟೆ. ಉದಾಹರಣೆಗೆ ೩೦೦೦ ಎಂಎಎಚ್ ಸಾಮರ್ಥ್ಯದ ಒಂದು ಬ್ಯಾಟರಿಯನ್ನು ತೆಗೆದುಕೊಂಡರೆ ಅದರ ವರ್ತನೆ ಬೇರೆಬೇರೆ ಗ್ಯಾಜೆಟ್‌ಗಳಲ್ಲಿ ಬೇರೆಬೇರೆ ರೀತಿಯಲ್ಲಿರುತ್ತದೆ. ಗಂಟೆಗೆ ೧೦೦ ಮಿಲಿಆಂಪಿಯರ್ ವಿದ್ಯುತ್ ಬೇಡುವ ಗ್ಯಾಜೆಟ್‌ಗೆ ಈ ಬ್ಯಾಟರಿ ೩೦ ಗಂಟೆಗಳ ಕಾಲ ಜೀವತುಂಬಬಲ್ಲದು; ಅದೇರೀತಿ ಗಂಟೆಗೆ ೨೦೦ ಮಿಲಿಆಂಪಿಯರ್ ಬೇಕಾದಾಗ ೧೫ ಗಂಟೆಗಳಲ್ಲೇ ಬ್ಯಾಟರಿ ಖಾಲಿಯಾಗಿಬಿಡುತ್ತದೆ.
ಇದನ್ನೂ ಓದಿ - ಪವರ್‌ಸ್ಟೋರಿ: ಇದು ಬ್ಯಾಟರಿ ಸಮಾಚಾರ!
ಅಂದರೆ, ಒಮ್ಮೆ ಚಾರ್ಜ್ ಮಾಡಿದ ಮೊಬೈಲಿನ ಬ್ಯಾಟರಿ ಎಷ್ಟು ಹೊತ್ತು ಬಾಳುತ್ತದೆ ಎನ್ನುವುದು ಅದರ ಸಾಮರ್ಥ್ಯದ ಜೊತೆಗೆ ಆ ಸಾಧನ (ಮೊಬೈಲ್ ಫೋನ್, ಲ್ಯಾಪ್‌ಟಾಪ್ ಇತ್ಯಾದಿ) ಎಷ್ಟು ಪ್ರಮಾಣದ ವಿದ್ಯುತ್ ಬಳಸುತ್ತದೆ ಎನ್ನುವುದರ ಮೇಲೂ ಅವಲಂಬಿತವಾಗಿರುತ್ತದೆ.

ಹೇಳುವುದಕ್ಕೂ ಕೇಳುವುದಕ್ಕೂ ಇದು ಬಹಳ ಸರಳವೆನಿಸುವ ವಿಷಯ: ಬ್ಯಾಟರಿ ಸಾಮರ್ಥ್ಯವನ್ನು ಸಾಧ್ಯವಾದಷ್ಟೂ ಹೆಚ್ಚಿಸಿ ವಿದ್ಯುನ್ಮಾನ ಸಾಧನಗಳು ಬಳಸುವ ವಿದ್ಯುತ್ತಿನ ಪ್ರಮಾಣವನ್ನು ಸಾಧ್ಯವಾದಷ್ಟೂ ಕಡಿಮೆಮಾಡಿದರೆ ಆಯಿತು! ಇಷ್ಟು ಮಾಡಿದೆವೆಂದರೆ ವಿದ್ಯುನ್ಮಾನ ಸಾಧನಗಳನ್ನು ಪದೇಪದೇ ಚಾರ್ಜ್ ಮಾಡುವ ಅಗತ್ಯವೂ ಇರುವುದಿಲ್ಲ, ಅನಿರೀಕ್ಷಿತ ಸಂದರ್ಭಗಳಲ್ಲಿ ಬ್ಯಾಟರಿ ಖಾಲಿಯಾಗಿ ಫೋನು - ಲ್ಯಾಪ್‌ಟಾಪುಗಳೆಲ್ಲ ಕೈಕೊಡುವುದೂ ಇಲ್ಲ.

ಆದರೆ ಇದು ಹೇಳಿದಷ್ಟು ಸುಲಭವಲ್ಲ. ಮೊಬೈಲ್ ಫೋನ್ ಇರಲಿ, ಲ್ಯಾಪ್‌ಟಾಪ್ ಇರಲಿ, ಸ್ಮಾರ್ಟ್‌ವಾಚೇ ಇರಲಿ, ಅವುಗಳಲ್ಲಿ ಲಭ್ಯವಿರುವ ಸೌಲಭ್ಯಗಳು ದಿನೇದಿನೇ ಹೆಚ್ಚುತ್ತಲೇ ಇವೆ. ಇದರ ಜೊತೆಯಲ್ಲೇ ಆ ಸಾಧನಗಳ ಗಾತ್ರ ಒಂದೇಸಮನೆ ಕುಗ್ಗುತ್ತಿದೆ. ಹೆಚ್ಚಿನ ಸೌಲಭ್ಯಗಳಿಂದ ವಿದ್ಯುತ್ತಿನ ಬೇಡಿಕೆ ಹೆಚ್ಚುತ್ತಿದೆ, ಕುಗ್ಗುತ್ತಿರುವ ಗಾತ್ರದಿಂದಾಗಿ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಅಳವಡಿಸುವುದು ಸಾಧ್ಯವಾಗುತ್ತಿಲ್ಲ!

ಈ ಪರಿಸ್ಥಿತಿ ಬದಲಿಸಲು, ವಿದ್ಯುತ್ ಬಳಕೆಯಲ್ಲಿ ಮಿತವ್ಯಯ ಸಾಧಿಸಿ ಇದ್ದುದರಲ್ಲೇ ಪರಿಸ್ಥಿತಿ ನಿಭಾಯಿಸಲು ವಿದ್ಯುನ್ಮಾನ ಸಾಧನಗಳ ತಯಾರಕರು - ಅವುಗಳಲ್ಲಿ ಬಳಕೆಯಾಗುವ ತಂತ್ರಾಂಶಗಳ ನಿರ್ಮಾತೃಗಳು ಸತತವಾಗಿ ಪ್ರಯತ್ನಿಸುತ್ತಿದ್ದಾರೆ.

ಮೇಲೆ ಹೇಳಿದ ಟೆಕ್ ಸಂತೆಯಲ್ಲಿ ಇಂತಹ ಹಲವು ಪ್ರಯತ್ನಗಳನ್ನು ಪ್ರದರ್ಶಿಸಲಾಗಿತ್ತು. ಇಂತಹ ಪ್ರಯತ್ನಗಳ ಮುಂಚೂಣಿಯಲ್ಲಿದ್ದದ್ದು, ಸಹಜವಾಗಿಯೇ ಪ್ರಾಸೆಸರ್ ತಯಾರಕರು. ಬಹುಪಾಲು ಸ್ಮಾರ್ಟ್ ಸಾಧನಗಳಲ್ಲಿ ಬಳಕೆಯಾಗುವ ಪ್ರಾಸೆಸರುಗಳನ್ನು ಕೆಲವೇ ಸಂಸ್ಥೆಗಳು ತಯಾರಿಸುವುದರಿಂದ ಅವರ ಪ್ರಯತ್ನಗಳ ಗ್ಯಾಜೆಟ್ ಜಗತ್ತಿನಲ್ಲಿ ಎಲ್ಲಿಲ್ಲದ ಕುತೂಹಲ. ಈ ಪೈಕಿ ಕ್ವಾಲ್‌ಕಾಮ್‌ನ ಹೊಸ ಪ್ರಾಸೆಸರ್ ಬಳಸುವ ಲೆನೋವೋ ಟ್ಯಾಬ್ಲೆಟ್ (Miix 630) ಒಮ್ಮೆ ಚಾರ್ಜ್ ಮಾಡಿ - ೨೦ ಗಂಟೆಗಳ ಕಾಲ ಉಪಯೋಗಿಸಿ ಎನ್ನುವ ಜಾಹೀರಾತಿನೊಡನೆ ಗಮನಸೆಳೆದಿದೆ.

ಮೊಬೈಲು-ಕಂಪ್ಯೂಟರುಗಳ ಅಂತರಜಾಲ ಇದೀಗ ವಸ್ತುಗಳ ಅಂತರಜಾಲವಾಗಿ (ಇಂಟರ್‌ನೆಟ್ ಆಫ್ ಥಿಂಗ್ಸ್, ಐಓಟಿ) ಬದಲಾಗುತ್ತಿದೆಯಲ್ಲ, ಈ ಜಾಲದ ಬಹುದೊಡ್ಡ ಭಾಗವಾದ ಸೆನ್ಸರುಗಳ ಬ್ಯಾಟರಿ ವರ್ಷಗಟ್ಟಲೆ ಬಾಳುವಂತೆ ಮಾಡುವ ಪ್ರಯತ್ನ ಕೂಡ ಸಿಇಎಸ್‌ ಸಂದರ್ಭದಲ್ಲಿ ಸುದ್ದಿಮಾಡಿತ್ತು.

ಬ್ಯಾಟರಿ ಚಾರ್ಜ್ ಮಾಡಲು ನಿಸ್ತಂತು ತಂತ್ರಜ್ಞಾನ ಅಲ್ಲಲ್ಲಿ ಬಳಕೆಯಾಗುತ್ತಿದೆಯಲ್ಲ, ಅದೇ ತಂತ್ರಜ್ಞಾನ ಬಳಸಿ ವಿದ್ಯುನ್ಮಾನ ಸಾಧನಕ್ಕೆ ನೇರವಾಗಿ ವಿದ್ಯುತ್ ಪೂರೈಸಿದರೆ ಬ್ಯಾಟರಿಯೇ ಬೇಡವಲ್ಲ! ಗೇಮಿಂಗ್ ಯಂತ್ರಾಂಶ ಸಂಸ್ಥೆ 'ರೇಜರ್' ತನ್ನ ಹೊಸ ಮೌಸ್‌ನಲ್ಲಿ ಇಂಥದ್ದೊಂದು ಪ್ರಯೋಗ ಮಾಡಿದೆ. ಅಲ್ಲಿಗೆ, ಬ್ಯಾಟರಿ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹೊರಟವರ ಪ್ರಯತ್ನ ಬ್ಯಾಟರಿಯ ಅಗತ್ಯವನ್ನೇ ಪ್ರಯತ್ನಿಸುವ ಮಟ್ಟವನ್ನೂ ತಲುಪಿಬಿಟ್ಟಿದೆ.

ಇಂತಹ ಪ್ರಯತ್ನಗಳೆಲ್ಲ ಎಲ್ಲಿಗೆ ಹೋಗಿ ಮುಟ್ಟುತ್ತವೆಯೋ, ನಮ್ಮ ಮೊಬೈಲಿನ ಜೊತೆ ಪವರ್‌ಬ್ಯಾಂಕನ್ನೂ ಕೊಂಡೊಯ್ಯುವ ಅನಿವಾರ್ಯ ಯಾವಾಗ ನಿವಾರಣೆಯಾಗುತ್ತೋ - ಮುಂದಿನ ಟೆಕ್ ಸಂತೆಯಲ್ಲಿ ಕೊರವಂಜಿಯೇನಾದರೂ ಸಿಕ್ಕರೆ ಆಕೆಯನ್ನೇ ಕೇಳಬೇಕು!

ಜನವರಿ ೧೭, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge