ಗುರುವಾರ, ಡಿಸೆಂಬರ್ 7, 2017

ಇದ್ದರೆ ಕೊಂಚವೇ ಎಚ್ಚರ, ವೈ-ಫೈ ಬಳಕೆ ಬಲು ಸರಳ!

ಟಿ. ಜಿ. ಶ್ರೀನಿಧಿ

ನಮ್ಮ ದೇಶದಲ್ಲಿ ಅಂತರಜಾಲ ಬಳಕೆ ಕಳೆದೊಂದು ವರ್ಷದಲ್ಲಿ ಹೆಚ್ಚಾಗಿದೆಯಲ್ಲ, ಆ ಏರಿಕೆಯ ಪ್ರಮಾಣ ಬಹುಶಃ ಜಾಗತಿಕ ಮಟ್ಟದಲ್ಲೇ ಒಂದು ದಾಖಲೆಯಿರಬೇಕು. ಮೊಬೈಲ್ ಡೇಟಾ ಬಳಕೆಯ ಪ್ರಮಾಣದಲ್ಲಂತೂ ವಿಶ್ವದ ರಾಷ್ಟ್ರಗಳ ಪೈಕಿ ನೂರೈವತ್ತನೇ ಸ್ಥಾನದಲ್ಲಿದ್ದ ಭಾರತ ಕಳೆದ ಒಂದೇ ವರ್ಷದಲ್ಲಿ ಮೊದಲ ಸ್ಥಾನಕ್ಕೇರಿಬಿಟ್ಟಿದೆ.

ಸದ್ಯ ಅಂತರಜಾಲ ಬಳಕೆಯ ದೊಡ್ಡದೊಂದು ಪಾಲು ಮೊಬೈಲ್ ಫೋನುಗಳ ಮೂಲಕವೇ ಆಗುತ್ತದೆ, ನಿಜ. ಆದರೆ ವೈ-ಫೈ (ನಿಸ್ತಂತು ಅಂತರಜಾಲ) ಬಳಕೆಯ ಪ್ರಮಾಣವೂ ಸಣ್ಣದೇನಲ್ಲ. ಕಚೇರಿಯ ಲ್ಯಾಪ್‌ಟಾಪ್, ಮನೆಯ ಸ್ಮಾರ್ಟ್ ಟೀವಿ, ಡೆಸ್ಕ್‌ಟಾಪ್, ಟ್ಯಾಬ್ಲೆಟ್ ಸೇರಿದಂತೆ ಅದೆಷ್ಟೋ ಸಾಧನಗಳು ಅಂತರಜಾಲದೊಡನೆ ಬೆಸೆದುಕೊಳ್ಳಲು ವೈ-ಫೈ ಸಂಪರ್ಕವನ್ನೇ ಅವಲಂಬಿಸಿರುತ್ತವೆ.

ವೈರು - ಕೇಬಲ್ಲುಗಳನ್ನು ಜೋಡಿಸುವ ಗೊಡವೆಯಿಲ್ಲದೆ ರೇಡಿಯೋ ಅಲೆಗಳ ಮೂಲಕ ಸರಾಗವಾಗಿ ಅಂತರಜಾಲ ಸಂಪರ್ಕ ನೀಡಿಬಿಡುವುದು ವೈ-ಫೈ ತಂತ್ರಜ್ಞಾನದ ಹೆಗ್ಗಳಿಕೆ.
ಇದನ್ನೂ ಓದಿ: ವೈ-ಫೈ ವಿಷಯ
ಬಹಳಷ್ಟು ಸಂದರ್ಭಗಳಲ್ಲಿ ನಮಗೆ ವೈ-ಫೈ ಸಂಪರ್ಕ ಒದಗಿಸಿಕೊಡುವುದು ಬ್ರಾಡ್‌ಬ್ಯಾಂಡ್ ಸಂಪರ್ಕ. ಮೋಡೆಮ್ ಒಳಗೇ ಇರುವ, ಅಥವಾ ಅದಕ್ಕೆ ಪ್ರತ್ಯೇಕವಾಗಿ ಜೋಡಿಸಲಾದ 'ರೂಟರ್' ಎನ್ನುವ ಉಪಕರಣ ನಮ್ಮ ವಿದ್ಯುನ್ಮಾನ ಸಾಧನಗಳಿಗೆ ನಿಸ್ತಂತು ಅಂತರಜಾಲ ಸಂಪರ್ಕವನ್ನು ಒದಗಿಸಿಕೊಡುತ್ತದೆ (ಬಹುತೇಕ ಮನೆಗಳಲ್ಲಿ ಅಂತರಜಾಲ ಸಂಪರ್ಕ ಕಲ್ಪಿಸಿಕೊಡುವ ಮೋಡೆಮ್ ಹಾಗೂ ವೈ-ಫೈ ಮೂಲಕ ಬೇರೆಬೇರೆ ಸಾಧನಗಳಿಗೆ ಅದನ್ನು ಒದಗಿಸುವ ರೂಟರ್ ಎರಡೂ ಒಂದೇ ಸಾಧನದಲ್ಲಿ ಅಡಕವಾಗಿರುವುದು ಸಾಮಾನ್ಯ).

ರೂಟರ್‌ನ ಆಂಟೆನಾದಿಂದ ಹೊರಹೊಮ್ಮುವ ಸಂಕೇತಗಳನ್ನು ಬಳಸಲು ಶಕ್ತವಾದ ಯಾವುದೇ ಸಾಧನ ಹೀಗೆ ಅಂತರಜಾಲ ಸಂಪರ್ಕ ಪಡೆದುಕೊಳ್ಳುವುದು ಸಾಧ್ಯ. ಕೆಲವೇ ನೂರು ರೂಪಾಯಿಗಳಿಗೆ ಸಿಗುವ ವೈ-ಫೈ ರಿಸೀವರ್ ಅಥವಾ ಅಡಾಪ್ಟರ್ ಬಳಸುವ ಮೂಲಕ ವೈ-ಫೈ ಸೌಲಭ್ಯವಿಲ್ಲದ ಹಳೆಯ ಕಂಪ್ಯೂಟರುಗಳಿಗೂ ವೈ-ಫೈ ಸಂಪರ್ಕ ನೀಡುವುದು ಸಾಧ್ಯ.

ಮೊಬೈಲ್ ಫೋನುಗಳನ್ನೂ ವೈ-ಫೈ ಸಂಪರ್ಕದ ಆಕರಗಳನ್ನಾಗಿ ಬಳಸಿಕೊಳ್ಳುವುದು ಸಾಧ್ಯ. ಬಹುತೇಕ ಮೊಬೈಲುಗಳಲ್ಲಿರುವ 'ಹಾಟ್‌ಸ್ಪಾಟ್' ಸೌಲಭ್ಯ ಬಳಸಿಕೊಳ್ಳುವ ಮೂಲಕ ಅದರ ಅಂತರಜಾಲ ಸಂಪರ್ಕವನ್ನು ಕಂಪ್ಯೂಟರ್ ಮತ್ತಿತರ ಸಾಧನಗಳೊಡನೆ ಹಂಚಿಕೊಳ್ಳುವುದು ಸಾಧ್ಯವಾಗುತ್ತದೆ.

ಸಿಮ್ ಕಾರ್ಡ್ ಬಳಸುವ, ಆದರೆ ಹಾಟ್‌ಸ್ಪಾಟ್‌ ಕೆಲಸವನ್ನಷ್ಟೇ ಮಾಡುವ ಪ್ರತ್ಯೇಕ ಸಾಧನಗಳೂ (ಉದಾ: ರಿಲಯನ್ಸ್‌ನ ಜಿಯೋಫೈ) ಮಾರುಕಟ್ಟೆಯಲ್ಲಿವೆ. ನಮ್ಮ ಮೊಬೈಲಿನ ಬ್ಯಾಟರಿ ಮತ್ತು ಡೇಟಾ ಮಿತಿ ಖರ್ಚಾಗುತ್ತದೆ ಎನ್ನುವ ಗೊಡವೆಯಿಲ್ಲದೆ ಇಂತಹ ಸಾಧನಗಳಲ್ಲಿ ಬೇರೆಯದೇ ಮೊಬೈಲ್ ಸಂಪರ್ಕವನ್ನು ಬಳಸಿಕೊಳ್ಳಬಹುದು.

ವೈ-ಫೈ ಬಳಸಲು ಇಂತಹ ಯಾವುದೇ ಮಾರ್ಗ ಅನುಸರಿಸಬಹುದು, ನಿಜ. ಆದರೆ ಎಲ್ಲ ಸಂದರ್ಭಗಳಲ್ಲೂ ನಮ್ಮ ಸಂಪರ್ಕದ ಸುರಕ್ಷತೆ ಕುರಿತು ಎಚ್ಚರ ವಹಿಸಬೇಕಾದ್ದು ಅನಿವಾರ್ಯ. ಈ ಪೈಕಿ ನಾವು ಕೈಗೊಳ್ಳಬಹುದಾದ ಮೊದಲನೆಯ, ಹಾಗೂ ಅತ್ಯಂತ ಸುಲಭದ ಕ್ರಮವೆಂದರೆ ನಮ್ಮ ಸಂಪರ್ಕವನ್ನು ಸದೃಢ ಪಾಸ್‌ವರ್ಡ್ ಮೂಲಕ ಸುರಕ್ಷಿತಗೊಳಿಸಿಕೊಳ್ಳುವುದು.

ನಮ್ಮ ವೈ-ಫೈ ಜಾಲದ ವ್ಯಾಪ್ತಿ ಪಕ್ಕದ ಮನೆಯಿಂದ ಮುಂದಿನ ಬೀದಿವರೆಗೂ ಹರಡಿಕೊಂಡಿರುವುದು ಸಾಧ್ಯ. ಈ ಪ್ರದೇಶದಲ್ಲಿರುವ, ನಮ್ಮ ಪಾಸ್‌ವರ್ಡ್ ತಿಳಿದಿರುವ ಯಾರು ಬೇಕಾದರೂ ನಮ್ಮ ಜಾಲದ ಮೂಲಕ ಅಂತರಜಾಲ ಸಂಪರ್ಕ ಪಡೆದುಕೊಳ್ಳಬಹುದು ಎಂಬ ವಿಷಯ ನಮ್ಮ ಗಮನದಲ್ಲಿರಬೇಕು. ಹೀಗೆ ಸಂಪರ್ಕ ಪಡೆದು ಅವರು ಮಾಡಬಹುದಾದ ಕೆಟ್ಟ ಕೆಲಸಗಳಿಗೆ ನಾವು ಹೊಣೆಯಾಗಬೇಕಾದ ಸಂದರ್ಭ ಬರಬಹುದಲ್ಲ, ಇದನ್ನು ತಪ್ಪಿಸಲು ನಮ್ಮ ಪಾಸ್‌ವರ್ಡ್ ಇತರರಿಗೆ ತಿಳಿಯದಂತೆ ಜೋಪಾನಮಾಡಿಕೊಳ್ಳುವುದೂ ಒಳ್ಳೆಯದೇ.

ಅಂತರಜಾಲ ಸಂಪರ್ಕ ಬಳಸುವ ಸಾಧನಗಳಲ್ಲಿ ನೆಟ್‌ವರ್ಕ್ ಹಾಗೂ ಸುರಕ್ಷತೆಗೆ ಸಂಬಂಧಿಸಿದ ತಂತ್ರಾಂಶಗಳ (ಫರ್ಮ್‌ವೇರ್, ಆಪರೇಟಿಂಗ್ ಸಿಸ್ಟಂ, ಕುತಂತ್ರಾಂಶ ವಿರೋಧಿ ತಂತ್ರಾಂಶಗಳು ಇತ್ಯಾದಿ) ಇತ್ತೀಚಿನ ಆವೃತ್ತಿ ಬಳಕೆಯಾಗುವಂತೆ ನೋಡಿಕೊಳ್ಳುವುದೂ ಅನಿವಾರ್ಯ. ವೈ-ಫೈ ಸಂಪರ್ಕಗಳನ್ನು ಬಾಧಿಸುವ ಕ್ರ್ಯಾಕ್ (ಕೀ ರೀಇನ್ಸ್‌ಟಲೇಶನ್ ಅಟ್ಯಾಕ್) ದಾಳಿ ಕಳೆದವಾರದಲ್ಲಿ ಸುದ್ದಿಯಾಗಿತ್ತಲ್ಲ, ಅಂತಹ ಆಪತ್ತುಗಳಿಂದ ಪಾರಾಗಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗ.

ಇದೇ ರೀತಿ ಮನೆಯಿಂದ ಹೊರಗೆ ವೈ-ಫೈ ಸಂಪರ್ಕಗಳನ್ನು ಬಳಸುವಾಗ ಅಲ್ಲಿಯೂ ಎಚ್ಚರಿಕೆ ಅಗತ್ಯ. ಇಂತಹ ಸಂಪರ್ಕಗಳನ್ನು ಯಾರುಬೇಕಾದರೂ ಉಪಯೋಗಿಸಬಹುದಾದ್ದರಿಂದ ಅಲ್ಲಿ ಕುತಂತ್ರಿಗಳಿರುವ ಸಾಧ್ಯತೆ ಖಂಡಿತಾ ಇರುತ್ತದೆ. ಹಾಗಾಗಿ ಅಲ್ಲಿ ಹಣಕಾಸು ವ್ಯವಹಾರ, ಖಾಸಗಿ ಮಾಹಿತಿಯ ರವಾನೆ ಮುಂತಾದವನ್ನು ಮಾಡದಿರುವುದು ಒಳ್ಳೆಯದು. ಕೆಲಸ ಮುಗಿದ ತಕ್ಷಣ ಇಂತಹ ಸಂಪರ್ಕಗಳನ್ನು ಕಡಿತಗೊಳಿಸುವುದು ಕೂಡ ಉತ್ತಮ ಅಭ್ಯಾಸ.

ಅಕ್ಟೋಬರ್ ೨೨, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

MANJUNATHA Y ಹೇಳಿದರು...

ತುಂಬಾ ಚೆನ್ನಾಗಿದೆ

badge