ಭಾನುವಾರ, ನವೆಂಬರ್ 26, 2017

ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬಳಕೆ

೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 'ವಿಜ್ಞಾನ, ತಂತ್ರಜ್ಞಾನ ಮತ್ತು ಕನ್ನಡದ ಬಳಕೆ' ಗೋಷ್ಠಿಯಲ್ಲಿ ಮಂಡಿಸಿದ ಅಭಿಪ್ರಾಯಗಳ ಸಾರಾಂಶ

ಉದಯ ಶಂಕರ ಪುರಾಣಿಕ  

ನಿರಂತರ ಸಂಶೋಧನೆ ಮತ್ತು ಆವಿಷ್ಕಾರಗಳಿಂದಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವಪೂರ್ಣ ಬದಲಾವಣೆಗಳಾಗುತ್ತಿವೆ. ಹೊಸ ಸಂಶೋಧನೆಗಳು, ಆವಿಷ್ಕಾರಗಳು ಮತ್ತು ತಂತ್ರಜ್ಞಾನಾಧಾರಿತ ಸೇವೆಗಳನ್ನು ಕನ್ನಡ ಭಾಷೆಯಲ್ಲಿ ನೀಡುವುದರಿಂದ ಹೇಗೆ
೧) ಮಾತೃ ಭಾಷೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಬಹುದು
೨) ಅರಣ್ಯ ಸಂರಕ್ಷಣೆ ಮಾಡಬಹುದು
೩) ದೀರ್ಘ ಕಾಲದ ಅಂತರ ರಾಜ್ಯ ಜಲವಿವಾದಗಳನ್ನು ಪರಿಹರಿಸಿಕೊಳ್ಳಬಹುದು
೪) ಮಳೆ, ಬೆಳೆ, ಪಶುರೋಗ ಮುನ್ಸೂಚನೆ ಮೊದಲಾದ ಮಾಹಿತಿಯನ್ನು ರೈತರಿಗೆ ನೀಡಬಹುದು
೫) ಕನ್ನಡಿಗರಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯುವಂತೆ ಮಾಡಬಹುದು

ಈ ೫ ಪ್ರಮುಖ ವಿಷಯಗಳನ್ನು ಕುರಿತು ಚರ್ಚಿಸುವ ಮೊದಲು, ಇದುವರೆಗೆ ತಂತ್ರಜ್ಞಾನ ಮತ್ತು ಸೇವೆಗಳಲ್ಲಿ ಕನ್ನಡದ ಸೌಲಭ್ಯ ಇರುವುದನ್ನು ಕುರಿತು ತಿಳಿದುಕೊಳ್ಳೋಣ.

೧) ನೂರಾರು ಕನ್ನಡ ಪುಸ್ತಕಗಳನ್ನು ಡಿಜಿಟಲ್ ಆವೃತ್ತಿಯಲ್ಲಿ ಕಣಜ ಜಾಲತಾಣದಲ್ಲಿರುವ ಇ-ಗ್ರಂಥಾಲಯ, ಉಸ್ಮಾನಿಯಾ ವಿಶ್ವವಿದ್ಯಾಲಯದ ಇ-ಗ್ರಂಥಾಲಯ, ರಾಷ್ಟ್ರೀಯ ಇ-ಗ್ರಂಥಾಲಯ, ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕೃತ ಜಾಲತಾಣ ಮೊದಲಾದ ಕಡೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ, ಕೆಲವು ಖಾಸಗಿ ಸಂಸ್ಥೆಗಳು ಕನ್ನಡ ಪುಸ್ತಕಗಳ ಡಿಜಿಟಲ್ ಆವೃತ್ತಿಯನ್ನು ಮಾರಾಟ ಮಾಡುತ್ತಿವೆ.
೨) ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಲೇಖನಗಳನ್ನು ಕಳೆದ ೧೦ ವರ್ಷಗಳಿಂದ 'ಇಜ್ಞಾನ ಡಾಟ್ ಕಾಮ್' ಜಾಲತಾಣದಲ್ಲಿ ಪ್ರಕಟಿಸಲಾಗುತ್ತಿದೆ, ರಾಷ್ಟ್ರೀಯ ವೈಮಾಂತರಿಕ್ಷ ಸಂಶೋಧನೆ ಪ್ರಯೋಗಾಲಯದ ಕನ್ನಡ ಸಂಘವು ಕಳೆದ ೪೨ ವರ್ಷಗಳಿಂದ ಕಣಾದ ವಾರ್ಷಿಕ ವಿಶೇಷಾಂಕವನ್ನು ಪ್ರಕಟಿಸುತ್ತಿದೆ. ಈ ವರ್ಷದಿಂದ ಕಣಾದ ಆನ್‌ಲೈನ್ ಅವೃತ್ತಿ ಲಭ್ಯವಾಗಲಿದೆ. ಇದಲ್ಲದೆ ಅನೇಕ ಕನ್ನಡ ಪತ್ರಿಕೆಗಳು, ಬ್ಲಾಗ್‌ಗಳು ಮತ್ತು ಜಾಲತಾಣಗಳಲ್ಲಿ  ವಿಜ್ಞಾನ, ತಂತ್ರಜ್ಞಾನ ಕುರಿತು ಅಂಕಣಗಳು, ಪ್ರಕಟವಾಗುತ್ತಿವೆ. ಕೆಲವು ಪ್ರಕಾಶನ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಜ್ಞಾನ ಲೇಖಕರ ಪರಿಶ್ರಮದಿಂದಾಗಿ ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಕುರಿತು ಪುಸ್ತಕಗಳು ದೊರೆಯುತ್ತಿವೆ.
೩) ಎಟಿಎಂ, ಮೊಬೈಲ್ ಫೋನ್ ಸೇವೆ ನೀಡುವ ಸಂಸ್ಥೆಗಳ ಕಾಲ ಸೆಂಟರ್‌ಗಳು, ಅಮೇಜಾನ್ ಸಂಸ್ಥೆಯ ಭಾರತಕ್ಕೆ ಮೀಸಲಾದ ಕಾಲ್ ಸೆಂಟರ್, ಮೊಬೈಲ್ ಫೋನ್ ಬಿಲ್‌ಗಳು, ಹಲವು ರಾಜ್ಯ ಸರ್ಕಾರದ ಇ-ಆಡಳಿತ ಸೇವೆಗಳು ಮತ್ತು ಜಾಲತಾಣಗಳಲ್ಲಿ ಕನ್ನಡ ಭಾಷೆಯ ಸೌಲಭ್ಯ ಲಭ್ಯವಿದೆ.
೪) ಸಹಕಾರಿ ಕ್ಷೇತ್ರದ ಬ್ಯಾಂಕು ಮತ್ತು ಸಂಸ್ಥೆಗಳಿಗೆ ಕನ್ನಡ ಬ್ಯಾಂಕಿಂಗ್ ತಂತ್ರಾಂಶ ಲಭ್ಯವಿದೆ, ಖಾಸಗಿ ಕ್ಷೇತ್ರದ ಬ್ಯಾಂಕು ತನ್ನ ಗ್ರಾಹಕರಿಗೆಂದು ಸಂಪೂರ್ಣವಾಗಿ ಕನ್ನಡದಲ್ಲಿರುವ ಮೊಬೈಲ್ ಬ್ಯಾಂಕಿಂಗ್ ತಂತ್ರಾಂಶ ನೀಡುತ್ತಿದೆ, ಭೀಮ್ ಮೊದಲಾದ ವ್ಯಾಲೆಟ್‌ಗಳಲ್ಲಿ ಕನ್ನಡ ಭಾಷೆಯ ಸೌಲಭ್ಯ ಲಭ್ಯವಿದೆ, ಮೊಬೈಲ್ ಫೋನ್‌ಗಳಲ್ಲಿ ಬಳಸಲು ಹಲವಾರು ಕನ್ನಡ ಆಪ್‌ಗಳು ಲಭ್ಯವಿದೆ.
೫) ೧೩ ಕನ್ನಡ ವಿಜ್ಞಾನ ಸಮ್ಮೇಳನಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸ್ವದೇಶಿ ವಿಜ್ಞಾನ ಆಂದೋಳನ ಸಂಸ್ಥೆ ಆಯೋಜಿಸಿದೆ. ಕನ್ನಡ ಮತ್ತು ತಂತ್ರಜ್ಞಾನ ಕುರಿತ ಸಂವಾದ ಮತ್ತು ಗೋಷ್ಠಿಗಳು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಹಲವು ವೇದಿಕೆಗಳಲ್ಲಿ ನೆಡೆಯುತ್ತಿವೆ.
೬) ಗೂಗಲ್ ಅನುವಾದ ಸೌಲಭ್ಯ, ಗೂಗಲ್ ಮ್ಯಾಪ್, ಗೂಗಲ್ ಸರ್ಚ, ಹೀಗೆ ಅನೇಕ ಸೌಲಭ್ಯಗಳು ಕನ್ನಡ ಭಾಷೆಯಲ್ಲಿ ದೊರೆಯುತ್ತಿವೆ. ನುಡಿ, ಬರಹ, ಕುವೆಂಪು ಕನ್ನಡ ತಂತ್ರಾಂಶಗಳಲ್ಲದೆ, ಹಲವಾರು ಮುಕ್ತ ತಂತ್ರಾಂಶಗಳು ಕನ್ನಡ ಭಾಷೆಯಲ್ಲಿ ದೊರೆಯುತ್ತಿವೆ.

ಹೀಗೆ ಲಭ್ಯವಿರುವ ಸೌಲಭ್ಯಗಳ ಪಟ್ಟಿಯನ್ನು ಮಾಡುತ್ತ ಹೋಗಬಹುದು. ಆದರೆ ಇಷ್ಟೆಲ್ಲಾ ಸೌಲಭ್ಯಗಳು ಕನ್ನಡ ಭಾಷೆಯಲ್ಲಿ ಲಭ್ಯವಿರುವಾಗ, ಅದನ್ನು ಎಷ್ಟು ಜನ ಕನ್ನಡಿಗರು ಬಳಸಿ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುವುವ ಪ್ರಶ್ನೆ ಎದುರಾಗುತ್ತದೆ.

ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಅದ್ಯತೆ ನೀಡಬೇಕು ಎನ್ನುವ ಕನ್ನಡಿಗರಿಗೆ ಹಕ್ಕೋತ್ತಾಯಕ್ಕೆ ತಂತ್ರಜ್ಞಾನ ಹೇಗೆ ಪೂರಕವಾಗಬಹುದು ಎಂದು ಒಂದು ಉದಾಹರಣೆಯೊಂದಿಗೆ ತಿಳಿದುಕೊಳ್ಳೋಣ.

ಖಾಸಗಿ ಶಿಕ್ಷಣ ಸಂಸ್ಥೆಗಳು, ಸರ್ಕಾರ ನೆಡೆಸುವ ಶಿಕ್ಷಣ ಸಂಸ್ಥೆಗಳ ನಡುವೆ ದುಬಾರಿಯಾದರೂ ಹೆಚ್ಚು ಜನ ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಒಲವು ತೋರಿಸುತ್ತಿರುವುದು, ಶಿಕ್ಷಣ ಕ್ಷೇತ್ರದ ವ್ಯಾಪಾರೀಕರಣ, ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮತ್ತು ಬಡವ ಮತ್ತು ಬಲ್ಲಿದರ ನಡುವೆ ಹೆಚ್ಚುತ್ತಿರುವ ಅಂತರ, ಹೀಗೆ ಹಲವಾರು ಸಮಸ್ಯೆಗಳನ್ನು ನೋಡುತ್ತೇವೆ.

ಅಕ್ಷರ ಸಮಾನತೆ:
ಖಾಸಗಿ, ಸರ್ಕಾರಿ ಅಥವಾ ಗ್ರಾಮೀಣ-ನಗರ, ಬಡವ-ಬಲ್ಲಿದ ಎನ್ನದೆ ಎಲ್ಲರಿಗೂ ಏಕರೂಪವಾದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕನ್ನಡದಲ್ಲಿ ನೀಡಲು ತಂತ್ರಜ್ಞಾನವನ್ನು ಬಳಸಬಹುದು. ಹೀಗೆ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿ ಮಾತೃ ಭಾಷೆಯಾದ ಚೀನಾ ಭಾಷೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಚೀನಾ ಸರ್ಕಾರ ಂiiಶಸ್ವಿಯಾಗಿದೆ.

೧) ೧೮ ಕೋಟಿ ೮೦ ಲಕ್ಷ ಶಾಲಾ ವಿದ್ಯಾರ್ಥಿಗಳು ಮತ್ತು ೧ ಕೋಟಿ ೪೦ ಲಕ್ಷ ಶಿಕ್ಷಕರು ತಂತ್ರಜ್ಞಾನ ಬಳಸಿ ಚೀನಾ ಭಾಷೆಯಲ್ಲಿ ನೀಡುವ ಶಾಲಾ ಶಿಕ್ಷಣದ ಪ್ರಯೋಜನ ಪಡೆಯುತ್ತಿದ್ದಾರೆ.
೨) ೭ ಕೋಟಿ ೩೦ ಲಕ್ಷ ಶಾಲೆಗಳಿಗೆ ಅಂತರಜಾಲ ಸಂಪರ್ಕ, ಪಠ್ಯಪುಸ್ತಕಗಳು ಡಿಜಿಟಲ್ ಆವೃತ್ತಿ ಮತ್ತು ಅಧುನಿತ ಮೌಲ್ಯಪಾಪನ ಮೊದಲಾದ ಸೌಲಭ್ಯಗಳನ್ನು ನೀಡಲಾಗಿದೆ.
೩) ಶಾಲೆಗಳಲ್ಲಿ ಕಲಿಸುವ ವಿಜ್ಞಾನ, ಗಣಿತ ಮೊದಲಾದ ಪಠ್ಯಗಳಿಗೆ ಸಂಬಂಧಿಸಿದ ೫೦ ಕೋಟಿ ಪ್ರಶ್ನೆಗಳು, ಉಪ ಪ್ರಶ್ನೆಗಳು ಮತ್ತು ಉತ್ತರಗಳನ್ನು ಡಿಜಿಟಲ್ ಗ್ರಂಥಾಲಯವನ್ನು ಅಭಿವೃದ್ಧಿಪಡಿಸಿ, ಇದನ್ನು ದಿನದ ೨೪ ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಚಿತವಾಗಿ ನೀಡಲಾಗುತ್ತಿದೆ.
ಇಂತಹ ಯೋಜನೆಯನ್ನು ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡಲು ರೂಪಿಸಿ, ಅನುಷ್ಠಾನಗೊಳಸಿದರೆ, ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವ ಆಶಯಕ್ಕೂ ಪೂರಕವಾಗುತ್ತದೆ ಮತ್ತು ಅಕ್ಷರ ಸಮಾನತೆಗೂ ಕಾರಣವಾಗುತ್ತದೆ.

ಪರಿಸರ ಸಂರಕ್ಷಣೆ:
ಚಿನ್ನದ ನಾಡು, ಸಿರಿಗಂಧದ ನಾಡು ಕನ್ನಡ ನಾಡಿನ ಅರಣ್ಯ ಸಂರಕ್ಷಣೆಯಲ್ಲೂ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸ ಬಹುದಾಗಿದೆ.

ಡೆಮೋಕ್ರಾಟಿಕ್ ರಿಪ್ಲಬಿಕ್ ಆಫ್ ಕಾಂಗೋದಲ್ಲಿ ಹೀಗೆ ತಂತ್ರಜ್ಞಾನ ಬಳಸಿದ್ದರಿಂದ ಕಾಡ್ಗಿಚ್ಚು, ಮರಗಳ್ಳತನ, ಒತ್ತುವರಿ ಮೊದಲಾದ ಸಮಸ್ಯೆಗಳಿಂದ ೮,೨೦,೮೮೪ ಎಕರೆ ಅರಣ್ಯವನ್ನು ಸಂರಕ್ಷಿಸಲಾಗಿದೆ.

ನಮ್ಮಲ್ಲಿ ಅರಣ್ಯಪಾಲಕರು, ಅರಣ್ಯ ಸಂರಕ್ಷಣೆಯಲ್ಲಿ ತೊಡಗಿರುವ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಕನ್ನಡ ಭಾಷೆಯಲ್ಲಿ ಈ ತಂತ್ರಜ್ಞಾನವನ್ನು ನೀಡಲು ಸಾಧ್ಯವಿದೆ.

ಅಂತರ ರಾಜ್ಯ ಜಲವಿವಾದಗಳ ಪರಿಹಾರ:
ಕಾವೇರಿ, ಮಹದಾಯಿ, ಕೃಷ್ಣಾ ಮೊದಲಾದ ಅಂತರ ರಾಜ್ಯ ಜಲವಿವಾದಗಳನ್ನು ಪರಿಹರಿಸಿಕೊಳ್ಳಲು ತಂತ್ರಜ್ಞಾನ ನೆರವಾಗಲಿದೆ.

ಆಫ್ರಿಕಾದ ೩ ದೇಶಗಳ ನಡುವೆ ಸುಮಾರು ೧೦೦ ವರ್ಷಗಳ ಕಾಲದಿಂದ ಇದ್ದ ಕೋಮತಿ ನದಿ ಜಲವಿವಾದವನ್ನು ಯಶಸ್ವಿಯಾಗಿ ಪರಿಹರಿಸಲು ಬಳಸಲಾಗಿರುವ ತಂತ್ರಜ್ಞಾನದಂತಹ ತಂತ್ರಜ್ಞಾನವನ್ನು ನಾವು ಕೂಡಾ ಬಳಸಬಹುದಾಗಿದೆ.

೧) ಜಲಾನಯನ ಪ್ರದೇಶದಲ್ಲಿ ಎಷ್ಟು ಮಳೆಯಾಯಿತು, ಮಳೆಯಿಂದಾಗಿ ಎಷ್ಟು ನೀರು ನದಿ ಪಾತ್ರವನ್ನು ಸೇರಿತು, ನದಿ ನೀರನ್ನು ಯಾವ ಪ್ರದೇಶದಲ್ಲಿ ಸದ್ಭಳಕೆ ಮಾಡಿಕೊಳ್ಳಲಾಗುತ್ತಿದೆ, ಎಲ್ಲಿ ನೀರು ಪೋಲಾಗುತ್ತಿದೆ, ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ, ಕುಡಿಯುವ ನೀರಿಗೆ ಮತ್ತು ವ್ಯವಸಾಯಕ್ಕೆ ಬಿಡುಗಡೆಯಾಗುತ್ತಿರುವ ನೀರಿನ ಪ್ರಮಾಣ ಇಂತಹ ಮಾಹಿತಿಯನ್ನು ಅವರ ಮಾತೃ ಭಾಷೆಯಲ್ಲಿ ರೈತರಿಗೆ ಪ್ರತಿದಿನವೂ ನೀಡಲು ಸಾಧ್ಯವಾಗುತ್ತದೆ.
೨) ಅನಾವೃಷ್ಟಿ ಸಮಯದಲ್ಲಿ ನೀರಿನ ಕೊರತೆ ಎಷ್ಟಿದೆ, ಹೇಗೆ ಲಭ್ಯವಿರುವ ನೀರನ್ನು ಬಳಸಿಕೊಳ್ಳಬಹುದು, ಮೊದಲಾದ ವಿಷಯಗಳನ್ನು ಕೂಡಾ ರೈತರಿಗೆ ಅವರ ಮಾತೃ ಭಾಷೆಯಲ್ಲಿ ನೀಡಬಹದು.
೩) ಜಲಾನಯನ ಪ್ರದೇಶದಿಂದ ಸಮುದ್ರ ಸೇರುವ ತನಕ ನದಿ, ಜಲಾಶಯಗಳು, ನೀರಿನ ಬಳಕೆ ಮತ್ತು ಪೋಲು ಕುರಿತು ಮಾಹಿತಿ ಸಂಬಂಧಪಟ್ಟ ಎಲ್ಲಾ ರಾಜ್ಯಗಳಿಗೆ, ಕೇಂದ್ರ ಸರ್ಕಾರ ಮತ್ತು ನ್ಯಾಯಾಲಕ್ಕೆ ನೀಡಲು ಸಾಧ್ಯವಾಗುತ್ತದೆ.

ಮಳೆ, ಬೆಳೆ, ಪಶು ರೋಗ ಮುನ್ಸೂಚನೆ ಕುರಿತು ಮಾಹಿತಿಯನ್ನು ರೈತರಿಗೆ ಕನ್ನಡದಲ್ಲಿ ನೀಡಬಹುದು:
ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಮಳೆ, ಬೆಳೆ ಮತ್ತು ಪಶು ರೋಗ ಮುನ್ಸೂಚನೆ ಕುರಿತ ಮಾಹಿತಿಯನ್ನು ಹೆಚ್ಚು ಕರಾರುವಕ್ಕಾಗಿ ನೀಡಲು ಸಾಧ್ಯವಿದೆ. ನೆರೆಯ ಮಹಾರಾಷ್ಟ್ರದಲ್ಲಿ ಇಂತಹ ಯೋಜನೆಯನ್ನು ಜಾರಿ ಗೊಳಿಸಲಾಗುತ್ತಿದೆ. ಕರ್ನಾಟಕದ ರೈತರಿಗೆ ಅನುಕೂಲವಾಗುವಂತೆ ಇಲ್ಲಿ ಕೂಡಾ ಇಂತಹ ಯೋಜನೆ ರೂಪಿಸಬಹುದಾಗಿದೆ.

ದಕ್ಷಿಣ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ನೆಡೆದ ಪಶುರೋಗ ಮುನ್ಸೂಚನೆ ಮಾಹಿತಿ ನೀಡುವ ಯೋಜನೆಯಲ್ಲಿ ೩ ತಿಂಗಳು ಮುಂಚಿತವಾಗಿ ಹಸುಗಳನ್ನು ಕಾಡುವ ಸಾಂಕ್ರಮಿಕ ರೋಗವೊಂದರ ಮುನ್ಸೂಚನೆ ನೀಡಲು ಸಾಧ್ಯವಾಗಿದೆ. ಇದನ್ನು ರಾಜ್ಯಾದ್ಯಂತ ವಿಸ್ತರಿಸಿದರೆ, ಹೆಚ್ಚು ರೈತರಿಗೆ ಅನುಕೂಲವಾಗಲಿದೆ.

ಕನ್ನಡಿಗರಿಗೆ ಹೆಚ್ಚಿನ ಉದ್ಯೋಗವಕಾಶ:
ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿರುವ ಉದ್ಯೋಗಾಂಕ್ಷಿ ಯುವಕ, ಯುವತಿಯರ ವಿದ್ಯಾರ್ಹತೆ, ಆಸಕ್ತಿ ಕುರಿತು ವೈಜ್ಞಾನಿಕವಾಗಿ ಮಾಹಿತಿ ಸಂಗ್ರಹಿಸಿ, ನವೋದ್ಯಮ, ಸ್ವಯಂ ಉದ್ಯೋಗ, ಖಾಸಗಿ ಮತ್ತು ಸರ್ಕಾರಿ ನೌಕರಿಗಳಲ್ಲಿ ಹೆಚ್ಚು ಕನ್ನಡಿಗರಿಗೆ ಲಭ್ಯವಾಗುವಂತೆ ಮಾಡಬಹುದಾಗಿದೆ.

ಸಿ.ಐ.ಐ-ಮೆಕೆನ್ಸಿ ಸಹಯೋಗದಲ್ಲಿ ಇಡೀ ರಾಜ್ಯದ ಸಮೀಕ್ಷೆ ನೆಡೆಸಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ನೀಡಲಾದ ಯೋಜನಾ ವರದಿಯನ್ನು ಇಂದಿನ ಅಗತ್ಯಗಳಿಗೆ ತಕ್ಕಂತೆ ಮರುಪರಿಶೀಲಿಸಿದರೆ, ಸಾವಿರಾರು ಜನ ಕನ್ನಡ ಮಾಧ್ಯಮದ ವಿಜ್ಞಾನ ಪದವಿಧರರಿಗೆ ಉದ್ಯೋಗ ದೊರೆಯಬಹುದಾಗಿದೆ.

ಈ ಚರ್ಚೆ ಈ ಗೋಷ್ಠಿಗೆ ಸೀಮಿತವಾಗದೆ, ಅನುಭವಿ ತಂತ್ರಜ್ಞರು, ವಿಜ್ಞಾನಿಗಳು, ಶಿಕ್ಷಣ ತಜ್ಞರು, ಸಾಹಿತಿಗಳು ಮತ್ತು ಜನಸಾಮಾನ್ಯರ ನಡುವೆ ಮುಂದುವರೆದರೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬಳಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ನನ್ನ ಅಭಿಪ್ರಾಯವಾಗಿದೆ.

(ನವೆಂಬರ್ ೨೬, ೨೦೧೭)

2 ಕಾಮೆಂಟ್‌ಗಳು:

arogya Satya ಹೇಳಿದರು...

ತುಂಬಾ ಚೆನ್ನಾಗಿ ಬರೆದಿದೀರಾ ಸಾರ್

ಮನಸು ಹೇಳಿದರು...

ತುಂಬಾ ಚೆನ್ನಾಗಿದೆ ಸರ್. ಜನ ಈಗೀಗ ಕನ್ನಡವನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಬಳಸಲು ಪ್ರಾರಂಭಿಸಿದ್ದಾರೆ ಎಂದೆನಿಸುತ್ತೆ. ಹಾಗೆ ಖಾಸಗಿ ಶಾಲೆಗಳಿಗೆ ಅನುದಾನ ನೀಡುವುದು ಬಿಟ್ಟು ಇರುವ ಸರ್ಕಾರಿ ಶಾಲೆಗಳನ್ನು ಉನ್ನತಮಟ್ಟಕ್ಕೆ ಏರಿಸಬೇಕು ಆಗಲೇ ಭಾಷೆ ಮತ್ತು ಸಮಾನತೆ ಬೆಳೆಯುತ್ತದೆ. ಜಾತಿ, ಭಾಷೆ, ಬದುಕು, ಬಡತನ ಯಾವುದೂ ರಾಜಕೀಯ ದಾಳವಾಗದಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ.

badge