ಗುರುವಾರ, ನವೆಂಬರ್ 23, 2017

ಈ ವಾರದ ವಿಶೇಷ: ಸೆಲ್ಫಿಗೆಂದೇ ಹೊಸ ಫೋನು

ಅಭಿಷೇಕ್ ಜಿ. ಎಸ್.

ಈಚಿನ ವರ್ಷಗಳಲ್ಲಿ ಮೊಬೈಲ್ ಫೋನಿನ ಅತಿಮುಖ್ಯ ಉಪಯೋಗಗಳಲ್ಲಿ ಸ್ಥಾನಪಡೆದುಕೊಂಡಿರುವುದು ಸೆಲ್ಫಿ. ಮೊಬೈಲ್ ಫೋನ್ ಬಳಕೆ ಹಾಗೂ ಸಮಾಜಜಾಲಗಳ (ಸೋಶಿಯಲ್ ನೆಟ್‌ವರ್ಕ್) ಜನಪ್ರಿಯತೆ ಎರಡೂ ಬೆಳೆದಂತೆ ಸೆಲ್ಫಿಗಳನ್ನು ಕ್ಲಿಕ್ ಮಾಡುವುದು ಹಾಗೂ ಇತರರೊಡನೆ ಹಂಚಿಕೊಳ್ಳುವುದು ಇದೀಗ ಸರ್ವೇಸಾಮಾನ್ಯವಾದ ಸಂಗತಿಯಾಗಿದೆ. [ಓದಿ: ಸೆಲ್ಫಿ ಸುತ್ತಮುತ್ತ]

ಸೆಲ್ಫಿ ಜನಪ್ರಿಯತೆ ಹೆಚ್ಚುತ್ತಿರುವಂತೆಯೇ ಸೆಲ್ಫಿ ಛಾಯಾಗ್ರಹಣವನ್ನೇ ಪ್ರಮುಖಾಂಶವಾಗಿಟ್ಟುಕೊಂಡ ಮೊಬೈಲುಗಳೂ ಮಾರುಕಟ್ಟೆಗೆ ಬರುತ್ತಿವೆ. ತೈವಾನಿನ ಟೆಕ್ ದಿಗ್ಗಜ ಏಸುಸ್ ಇತ್ತೀಚೆಗೆ ಪರಿಚಯಿಸಿರುವ 'ಜೆನ್‌ಫೋನ್ ೪ ಸೆಲ್ಫಿ ಪ್ರೋ' ಇಂತಹ ಫೋನುಗಳಿಗೊಂದು ಉದಾಹರಣೆ.

ಈಚೆಗೆ ಮಾರುಕಟ್ಟೆಗೆ ಬಂದಿರುವ ಹಲವು ಮೊಬೈಲುಗಳಲ್ಲಿ ಎರಡು ಪ್ರಾಥಮಿಕ ಕ್ಯಾಮೆರಾಗಳಿರುವುದನ್ನು (ಡ್ಯುಯಲ್ ಕ್ಯಾಮೆರಾ) ನಾವು ನೋಡಿದ್ದೇವಲ್ಲ, ಅದೇ ರೀತಿ ಈ ಮೊಬೈಲಿನಲ್ಲಿ ಎರಡು ಸೆಲ್ಫಿ ಕ್ಯಾಮೆರಾಗಳಿವೆ.

ಇಲ್ಲಿ ಬಳಕೆಯಾಗಿರುವ ೧೨ ಮೆಗಾಪಿಕ್ಸೆಲಿನ ಎರಡು ಕ್ಯಾಮೆರಾಗಳು ಸೇರಿ ೨೪ ಮೆಗಾಪಿಕ್ಸೆಲ್ ಸೆಲ್ಫಿಗಳನ್ನು ಸೆರೆಹಿಡಿಯಬಲ್ಲವು. ೧೨೦ ಡಿಗ್ರಿ ಫೀಲ್ಡ್ ಆಫ್ ವ್ಯೂ (ಎಫ್‌ಓವಿ) ಇರುವುದರಿಂದ ಸಾಮಾನ್ಯ ಫೋನುಗಳ ಹೋಲಿಕೆಯಲ್ಲಿ ಈ ಕ್ಯಾಮೆರಾ ಎದುರಿನ ದೃಶ್ಯದ ಹೆಚ್ಚು ಭಾಗವನ್ನು ಚಿತ್ರದಲ್ಲಿ ಅಡಕಗೊಳಿಸುವುದು ಸಾಧ್ಯವಾಗುತ್ತದೆ: ಸಾಮಾನ್ಯ ಸೆಲ್ಫಿಗಳಲ್ಲಿ ಒಬ್ಬರು-ಇಬ್ಬರು ಇದ್ದರೆ ಇಲ್ಲಿ ನಾಲ್ಕಾರು ಜನರಿರುವುದೂ ಸಾಧ್ಯ (ಯಾವುದೇ ಕ್ಯಾಮೆರಾ ತನ್ನ ಮುಂದಿನ ದೃಶ್ಯದ ಎಷ್ಟು ಭಾಗವನ್ನು ಸೆರೆಹಿಡಿಯಬಲ್ಲದು ಎನ್ನುವುದನ್ನು ಅದರ 'ಫೀಲ್ಡ್ ಆಫ್ ವ್ಯೂ' ಸೂಚಿಸುತ್ತದೆ).

ಇತರ ಮೊಬೈಲುಗಳಲ್ಲಿ ಪ್ರಾಥಮಿಕ ಅಥವಾ ಸೆಲ್ಫಿ ಕ್ಯಾಮೆರಾ ಆಯ್ದುಕೊಂಡಂತೆ ಇಲ್ಲಿ ಯಾವ ಸೆಲ್ಫಿ ಕ್ಯಾಮೆರಾ (ಸಾಮಾನ್ಯ ಅಥವಾ ಹೆಚ್ಚು ಎಫ್‌ಓವಿ ಇರುವ ಕ್ಯಾಮೆರಾ) ಬಳಸಬೇಕು ಎನ್ನುವುದನ್ನೂ ಆರಿಸಿಕೊಳ್ಳಬಹುದು. ಸೆಲ್ಫಿ ಚಿತ್ರಗಳ ಜೊತೆಗೆ ೪ಕೆ ಗುಣಮಟ್ಟದ ಸೆಲ್ಫಿ ವೀಡಿಯೋ ಛಾಯಾಗ್ರಹಣ ಕೂಡ ಸಾಧ್ಯ.

ಅಂದಹಾಗೆ ಇದರಲ್ಲಿರುವ ಪ್ರಾಥಮಿಕ ಕ್ಯಾಮೆರಾ ೧೬ ಮೆಗಾಪಿಕ್ಸೆಲಿನದು. ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯುವಲ್ಲಿ ನೆರವಾಗಲು ಇದರಲ್ಲಿ ಏಸಸ್ ಸೂಪರ್‌ಪಿಕ್ಸೆಲ್ ಕ್ಯಾಮೆರಾ ತಂತ್ರಜ್ಞಾನವನ್ನು ಬಳಸಲಾಗಿದೆ. ಪ್ರಾಥಮಿಕ ಕ್ಯಾಮೆರಾ ಜೊತೆಗೆ ಸೆಲ್ಫಿ ಕ್ಯಾಮೆರಾದಲ್ಲೂ ಫ್ಲ್ಯಾಶ್ ಇದೆ.


ಕ್ಯಾಮೆರಾ ಹೊರತಾಗಿಯೂ ಈ ಫೋನಿನಲ್ಲಿ ಹಲವು ವೈಶಿಷ್ಟ್ಯಗಳಿವೆ. ಅಂಚುಗಳಲ್ಲಿ ೬.೮೫ ಮಿಲೀಮೀಟರಿನಷ್ಟು ತೆಳುವಾದ, ೧೪೫ ಗ್ರಾಮ್ ತೂಗುವ ಈ ಫೋನಿನ ದೇಹ ಲೋಹದ್ದು. ಐದೂವರೆ ಇಂಚಿನ ಟಚ್‌ಸ್ಕ್ರೀನ್ ಪರದೆಗೆ ೨.೫ಡಿ ಗೊರಿಲ್ಲಾ ಗ್ಲಾಸ್ ರಕ್ಷಣೆಯಿದೆ. ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ ೬೨೫ ಪ್ರೊಸೆಸರ್, ಅಡ್ರೆನೋ ೫೦೬ ಜಿಪಿಯು, ಫಿಂಗರ್‌ಪ್ರಿಂಟ್ ಸೆನ್ಸರ್, ೪ ಜಿಬಿ ರಾಮ್, ೬೪ ಜಿಬಿ ಶೇಖರಣಾ ಸಾಮರ್ಥ್ಯ, ೩೦೦೦ ಎಂಎಎಚ್ ಬ್ಯಾಟರಿ, ಆಂಡ್ರಾಯ್ಡ್ ಎನ್ (೭.೦) ಕಾರ್ಯಾಚರಣ ವ್ಯವಸ್ಥೆ - ಈ ಫೋನಿನ ಇನ್ನಿತರ ವೈಶಿಷ್ಟ್ಯಗಳು.

೨ಟಿಬಿವರೆಗಿನ ಮೆಮೊರಿ ಕಾರ್ಡ್ ಬಳಸುವ ಅವಕಾಶ ಬೇಕೆಂದರೆ ಇದರಲ್ಲಿ ಎರಡನೇ ಸಿಮ್ ಕಾರ್ಡ್ ಬಳಸುವಂತಿಲ್ಲ. ಹಲವು ಫೋನುಗಳ ಜೊತೆ ಸ್ಕ್ರೀನ್ ಗಾರ್ಡ್ ಉಚಿತವಾಗಿ ಕೊಡುವಂತೆ ಈ ಪೋನಿನ ಜೊತೆ ಬ್ಯಾಕ್ ಕವರ್ ಉಚಿತವಾಗಿ ದೊರಕುತ್ತದೆ. ಹಿಂದಿನ ಆವೃತ್ತಿಗಳ ಹೋಲಿಕೆಯಲ್ಲಿ ಜೆನ್‌ಫೋನ್ ೪ ಸರಣಿಯಲ್ಲಿ ಏಸಸ್ ಸಂಸ್ಥೆಯ ಆಪ್‌ಗಳ ಸಂಖ್ಯೆ ಕಡಿಮೆಯಾಗಿರುವುದು ಒಳ್ಳೆಯ ವಿಷಯ.

ಉತ್ತಮ ರಚನೆ ಹಾಗೂ ಕೆಲವು ಕುತೂಹಲಕರ ಸೌಲಭ್ಯಗಳ ಹೊರತಾಗಿಯೂ ಇದರ ಬೆಲೆ (ರೂ. ೨೩೯೯೯) ಕೊಂಚ ಜಾಸ್ತಿಯೇ ಎನ್ನಿಸುತ್ತದೆ.
badge