ಸೋಮವಾರ, ನವೆಂಬರ್ 13, 2017

ಕನ್ನಡ: ನಿನ್ನೆ, ಇಂದು ಮತ್ತು ನಾಳೆ

ಇಜ್ಞಾನ ವಾರ್ತೆ

ಕನ್ನಡ ಭಾಷೆಯ ಇತಿಹಾಸ, ವರ್ತಮಾನ ಹಾಗೂ ಭವಿಷ್ಯ ಕುರಿತ 'ಕನ್ನಡ: ನಿನ್ನೆ, ಇಂದು ಮತ್ತು ನಾಳೆ' ವಿಚಾರಸಂಕಿರಣ ಬರುವ ನವೆಂಬರ್ ೧೯ರಂದು ನಡೆಯಲಿದೆ. ವಿಜ್ಞಾನ, ತಂತ್ರಜ್ಞಾನ, ಕನ್ನಡ ಹಾಗೂ ಸಂಸ್ಕೃತಿ ಕುರಿತ ವಿವಿಧ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ನವಕರ್ನಾಟಕ ಪ್ರಕಾಶನದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಈ ವಿಚಾರಸಂಕಿರಣ ನಡೆಯಲಿದ್ದು ಕಾರ್ಯಕ್ರಮ ನವೆಂಬರ್ ೧೯, ೨೦೧೭ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಪ್ರಾರಂಭವಾಗಲಿದೆ.
ಹಿರಿಯ ವಿದ್ವಾಂಸರಾದ ಶ್ರೀ ಟಿ. ವಿ. ವೆಂಕಟಾಚಲ ಶಾಸ್ತ್ರೀ, ಲೇಖಕರಾದ ಶ್ರೀ ಎಸ್. ದಿವಾಕರ್ ಹಾಗೂ ಶ್ರೀ ವಸುಧೇಂದ್ರ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ಇವರೊಡನೆ ಶ್ರೀ ಚಿಂತಾಮಣಿ ಕೊಡ್ಲೆಕೆರೆ, ಶ್ರೀ ಜಿ. ಎಂ. ಕೃಷ್ಣಮೂರ್ತಿ ಹಾಗೂ ಶ್ರೀ ಮಂಜುನಾಥ ಕೊಳ್ಳೇಗಾಲ ಅವರೂ ವಿಚಾರಸಂಕಿರಣದಲ್ಲಿ ಭಾಗವಹಿಸಲಿದ್ದಾರೆ. ನವಕರ್ನಾಟಕ ಪ್ರಕಾಶನದ ಶ್ರೀ ಎ. ರಮೇಶ ಉಡುಪ, ಶ್ರೀ ಜನಾರ್ಧನ ಪೂಜಾರಿ ಹಾಗೂ ಸಿಬ್ಬಂದಿವರ್ಗದ ಜೊತೆಗೆ ಇಜ್ಞಾನ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

ನವಕರ್ನಾಟಕ ಪ್ರಕಾಶನದ 'ನವಕರ್ನಾಟಕ ಕನ್ನಡ ಕಲಿಕೆ' ಮಾಲಿಕೆಯ ೧೮ ಕೃತಿಗಳನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಗುವುದು. ಈ ಪುಸ್ತಕಗಳನ್ನು ರಾಜ್ಯದೆಲ್ಲೆಡೆಯ ೧೫೦ಕ್ಕೂ ಹೆಚ್ಚು ಶಾಲೆಗಳಿಗೆ ಉಚಿತವಾಗಿ ವಿತರಿಸುವ ಇಜ್ಞಾನ ಟ್ರಸ್ಟ್ ಕಾರ್ಯಕ್ರಮ 'ಕಲಿಕೆಗೆ ಕೊಡುಗೆ' ಹಾಗೂ ಟ್ರಸ್ಟ್ ಜಾಲತಾಣವನ್ನೂ ಅತಿಥಿಗಳು ಲೋಕಾರ್ಪಣೆ ಮಾಡಲಿದ್ದಾರೆ. ಪುಸ್ತಕ ವಿತರಣೆಗಾಗಿ ಶಾಲೆಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು ಆಯ್ಕೆಯಾದ ಶಾಲೆಗಳಿಗೆ ಈ ಕಾರ್ಯಕ್ರಮದ ನಂತರ ಪುಸ್ತಕಗಳನ್ನು ತಲುಪಿಸಲಾಗುವುದು.

ವಿಜ್ಞಾನ-ತಂತ್ರಜ್ಞಾನ ವಿಷಯಗಳಿಗೆ ಮೀಸಲಾದ ಕನ್ನಡ ಜಾಲತಾಣ 'ಇಜ್ಞಾನ ಡಾಟ್ ಕಾಮ್' ಅನ್ನು ಇಜ್ಞಾನ ಟ್ರಸ್ಟ್ ವತಿಯಿಂದ ನಿರ್ವಹಿಸಲಾಗುತ್ತಿದ್ದು ಟ್ರಸ್ಟ್ ಪದಾಧಿಕಾರಿಗಳು ಜಾಲತಾಣದ ಎಲ್ಲ ಓದುಗರಿಗೂ ಈ ಕಾರ್ಯಕ್ರಮಕ್ಕೆ ಆದರದ ಸ್ವಾಗತ ಬಯಸಿದ್ದಾರೆ.

ಕಾಮೆಂಟ್‌ಗಳಿಲ್ಲ:

badge