ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ: 'ಟೆಕ್ಸ್ಟ್‌ಬುಕ್ ಅಲ್ಲ, ಇದು ಟೆಕ್ ಬುಕ್!'

ಗುರುವಾರ, ಸೆಪ್ಟೆಂಬರ್ 28, 2017

ಮಾಹಿತಿ ಸುರಕ್ಷತೆಗೆ ಕ್ರಿಪ್ಟೋಗ್ರಫಿ

ಟಿ. ಜಿ. ಶ್ರೀನಿಧಿ

ಹಲವು ಸಂದರ್ಭಗಳಲ್ಲಿ ಮಾಹಿತಿ ವಿನಿಮಯಕ್ಕೆ ನೀಡುವಷ್ಟು, ಅಥವಾ ಅದಕ್ಕಿಂತ ಕೊಂಚ ಹೆಚ್ಚೇ, ಪ್ರಾಮುಖ್ಯವನ್ನು ಆ ವಿನಿಮಯ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದಕ್ಕೆ ಕೊಡಬೇಕಾಗುತ್ತದೆ. ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಸಂಬಂಧಿಸಿದ ಖಾಸಗಿ ಮಾಹಿತಿ ಮೂರನೆಯವರ ಕೈಸೇರದಂತೆ ಕಾಪಾಡಿಕೊಳ್ಳಲು ಇದು ಅತ್ಯಗತ್ಯ. ಇಂತಹ ಸಂದರ್ಭಗಳಲ್ಲಿ ಕ್ರಿಪ್ಟೋಗ್ರಫಿ ಅತ್ಯಂತ ಮಹತ್ವ ಪಡೆದುಕೊಳ್ಳುತ್ತದೆ.

ಮಾಹಿತಿಯನ್ನು ಸುರಕ್ಷಿತ ರೂಪಕ್ಕೆ ಪರಿವರ್ತಿಸುವ ಮೂಲಕ ಅದನ್ನು ಜೋಪಾನಮಾಡುವ ವಿಜ್ಞಾನವೇ ಕ್ರಿಪ್ಟೋಗ್ರಫಿ. ಮಾಹಿತಿಯನ್ನು ಹೀಗೆ ಸುರಕ್ಷಿತ ರೂಪಕ್ಕೆ ಪರಿವರ್ತಿಸಲು, ಕಿಡಿಗೇಡಿಗಳ ಕೈಗೆ ಸಿಕ್ಕದಂತೆ - ನಾವು ಯಾರಿಗೆ ಕಳುಹಿಸಿದ್ದೆವೋ ಅವರಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳಲು ಎನ್‍ಕ್ರಿಪ್‍ಶನ್ (ಗೂಢಲಿಪೀಕರಣ) ಎಂಬ ಪ್ರಕ್ರಿಯೆಯನ್ನು ಬಳಸಲಾಗುತ್ತದೆ.

ಕಳುಹಿಸಲಾಗುವ ಮಾಹಿತಿಯನ್ನು ನಿರ್ದಿಷ್ಟ ಸೂತ್ರ ಬಳಸಿ ಗೂಢಲಿಪಿಯನ್ನಾಗಿ ಪರಿವರ್ತಿಸುವುದು (ಎನ್‍ಕ್ರಿಪ್ಟ್ ಮಾಡುವುದು) ಈ ಪ್ರಕ್ರಿಯೆಯ ಮೂಲ ಮಂತ್ರ. ಮನೆಯ ಬಾಗಿಲಿಗೆ ಎರಡು ಡೋರ್‌ಲಾಕ್ ಇರುತ್ತದಲ್ಲ, ಹಾಗೆ ಗೂಢಲಿಪಿಯನ್ನಾಗಿ ಪರಿವರ್ತಿಸುವ ಸೂತ್ರದಲ್ಲೂ ಎರಡು ಭಾಗಗಳಿರುತ್ತವೆ. ಇವೆರಡೂ ಬೀಗದ ಕೀಲಿಗಳು ಸಿಕ್ಕವರು ಮಾತ್ರ ಗೂಢಲಿಪಿಯನ್ನು ಮತ್ತೆ ಮೂಲರೂಪಕ್ಕೆ ಬದಲಿಸಿಕೊಳ್ಳುವುದು ಸಾಧ್ಯವಾಗುತ್ತದೆ.

ಮಾಹಿತಿ ಸಂವಹನದಲ್ಲಿ ಎನ್‌ಕ್ರಿಪ್‌ಶನ್‌ನ ಹಲವು ವಿಧಾನಗಳು ಬಳಕೆಯಾಗುತ್ತವೆ. ನಾವು ಯಾರಿಗೆ ಕಳುಹಿಸಿದ್ದೆವೋ ಅವರು ನಾವು ಕಳುಹಿಸಿದ ಮಾಹಿತಿಯನ್ನು ಹೇಗೆ ಪಡೆದುಕೊಳ್ಳುತ್ತಾರೆ ಎನ್ನುವುದು ಆಯಾ ವಿಧಾನವನ್ನು ಅವಲಂಬಿಸಿರುತ್ತದೆ. 'ಪಬ್ಲಿಕ್ ಕೀ ಎನ್‌ಕ್ರಿಪ್‌ಶನ್‌' ಎನ್ನುವ ವಿಧಾನದಲ್ಲಿ ಮೇಲಿನ ಉದಾಹರಣೆಯ ಎರಡು ಬೀಗಗಳ ಪೈಕಿ ಒಂದರ ಕೀಲಿ ಮೂಲ ವಿಳಾಸದಾರರ ಬಳಿಯಲ್ಲಿ ಮಾತ್ರವೇ ಇರುವಂತೆ ನೋಡಿಕೊಳ್ಳಲಾಗುತ್ತದೆ.

ಅಂದಹಾಗೆ ಮಾಹಿತಿಯನ್ನು ಗೂಢಲಿಪಿಗೆ ಪರಿವರ್ತಿಸಿ ಸುರಕ್ಷಿತವಾಗಿ ಕಳಿಸುವ ಅಭ್ಯಾಸ ಹಿಂದಿನ ಕಾಲದಿಂದಲೇ ಇತ್ತು. ಇಂದಿನ ಸನ್ನಿವೇಶಕ್ಕೆ ತಕ್ಕಂತೆ ಡಿಜಿಟಲ್ ರೂಪದ ಮಾಹಿತಿಯನ್ನು ಜೋಪಾನಮಾಡಲು ಕ್ರಿಪ್ಟೋಗ್ರಫಿಯನ್ನು ಬಳಸಲಾಗುತ್ತದೆ. ಕಂಪ್ಯೂಟರ್ ವಿಜ್ಞಾನದ ಶಾಖೆಗಳಲ್ಲೊಂದಾದ ಕ್ರಿಪ್ಟೋಗ್ರಫಿ ಬಳಕೆಯ ಮೂಲಕ ನಮ್ಮ ಮಾಹಿತಿಯನ್ನು ಅನಧಿಕೃತ ವ್ಯಕ್ತಿಗಳ ಕೈಸೇರದಂತೆ ಜೋಪಾನಮಾಡುವುದು ಸಾಧ್ಯ.

ಕ್ರಿಪ್ಟೋಗ್ರಫಿಯ ದುರುಪಯೋಗ ಕೂಡ ಸಾಧ್ಯ. ಯಾರಾದರೂ ನಮ್ಮ ಕಂಪ್ಯೂಟರನ್ನು ಹ್ಯಾಕ್ ಮಾಡಿ ಅಲ್ಲಿರುವ ಮಾಹಿತಿಯನ್ನೆಲ್ಲ ಎನ್‍ಕ್ರಿಪ್ಟ್ ಮಾಡಿಟ್ಟರೆ ಆ ಮಾಹಿತಿಯನ್ನು ನಾವೇ ತೆರೆಯಲು ಸಾಧ್ಯವಾಗದಂತಹ ಪರಿಸ್ಥಿತಿ ರೂಪುಗೊಳ್ಳಬಹುದು. ಈಚಿನ ರಾನ್ಸಮ್‍ವೇರ್ ದಾಳಿಗಳಲ್ಲಿ ಆಗಿರುವುದು ಇದೇ.
ಇದನ್ನೂ ಓದಿ: ಎಚ್ಚರ, ಇದು ರಾನ್ಸಮ್‌ವೇರ್!
ಅಪರಿಚಿತರು ಕಳಿಸಿದ ಇಮೇಲ್-ಮೆಸೇಜುಗಳ ಮೂಲಕವಾಗಲಿ ಸಂಶಯಾಸ್ಪದ ಜಾಲತಾಣಗಳಿಂದಾಗಲಿ ಏನನ್ನೂ ಡೌನ್‌ಲೋಡ್ ಮಾಡದಿರುವುದು, ನಮ್ಮ ಮಾಹಿತಿಯನ್ನು ಕಾಲಕಾಲಕ್ಕೆ ಬ್ಯಾಕಪ್ ಮಾಡಿಡುವುದು ಹಾಗೂ ಕುತಂತ್ರಾಂಶ ನಿರೋಧಕಗಳನ್ನು ಬಳಸುವುದು - ಇವು ಇಂತಹ ಸನ್ನಿವೇಶದಿಂದ ಪಾರಾಗಲು ನಾವು ಕೈಗೊಳ್ಳಬಹುದಾದ ಕೆಲವು ಕ್ರಮಗಳು.

ಸೆಪ್ಟೆಂಬರ್ ೧೩, ೨೦೧೬ ಹಾಗೂ ಮೇ ೨೫, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನಗಳ ಸಂಯುಕ್ತರೂಪ

ಕಾಮೆಂಟ್‌ಗಳಿಲ್ಲ:

badge