ಸೋಮವಾರ, ಆಗಸ್ಟ್ 28, 2017

ಮೊಬೈಲ್ ಆಪ್ ಮೂರು ವಿಧ

ಟಿ. ಜಿ. ಶ್ರೀನಿಧಿ


ಸ್ಮಾರ್ಟ್‌ಫೋನಿನಲ್ಲಿ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡು ಬಳಸುವುದು ನಮಗೆ ಚೆನ್ನಾಗಿಯೇ ಅಭ್ಯಾಸವಾಗಿರುವ ಸಂಗತಿ. ಬೇರೆಬೇರೆ ಉದ್ದೇಶಗಳಿಗೆ ಬೇರೆಬೇರೆ ಆಪ್‌ಗಳನ್ನು ಬಳಸಬೇಕೆನ್ನುವುದೂ ನಮಗೆ ಗೊತ್ತು.

ಆಪ್‌ಗಳ ಉದ್ದೇಶ ಬೇರೆಬೇರೆಯಾಗಿರುವಂತೆ ಅವುಗಳ ಕಾರ್ಯಾಚರಣೆಯ ಸ್ವರೂಪವೂ ಬೇರೆಬೇರೆಯಾಗಿರುವುದು ಸಾಧ್ಯ. ಈ ಅಂಶವನ್ನೇ ಆಧಾರವಾಗಿಟ್ಟುಕೊಂಡು ಯಾವುದೇ ಮೊಬೈಲ್ ಆಪ್‌ ಅನ್ನು ನೇಟಿವ್ ಆಪ್, ವೆಬ್ ಆಪ್ ಅಥವಾ ಹೈಬ್ರಿಡ್ ಆಪ್‌ ಎಂದು ಪ್ರತ್ಯೇಕವಾಗಿ ಗುರುತಿಸಬಹುದು.

ನಮ್ಮ ಮೊಬೈಲಿನಲ್ಲೇ ಇನ್‌ಸ್ಟಾಲ್ ಆಗಿರುವ, ಅಂತರಜಾಲ ಸಂಪರ್ಕವಿಲ್ಲದೆಯೂ ಕೆಲಸಮಾಡಬಲ್ಲ ಆಪ್‌ಗಳನ್ನು 'ನೇಟಿವ್' (ಸ್ಥಳೀಯ) ಆಪ್‌ಗಳೆಂದು ಕರೆಯುತ್ತಾರೆ. ಇವನ್ನು ನಮ್ಮ ಮೊಬೈಲಿನ ಕಾರ್ಯಾಚರಣ ವ್ಯವಸ್ಥೆಗೆಂದೇ ವಿಶೇಷವಾಗಿ ರೂಪಿಸಲಾಗಿರುತ್ತದೆ. ನೇಟಿವ್‌ ಆಪ್‌ಗಳು (ಬಳಕೆದಾರರ ಅನುಮತಿ ಪಡೆದುಕೊಂಡು) ನಮ್ಮ ಮೊಬೈಲಿನ ಎಲ್ಲ ಸವಲತ್ತುಗಳನ್ನೂ ಬಳಸಲು ಶಕ್ತವಾಗಿರುತ್ತವೆ.

ನೋಡಲು ಮಾತ್ರ ಆಪ್‌ಗಳಂತೆ ಕಾಣುವ, ಆದರೆ ಮೂಲತಃ ಜಾಲತಾಣಗಳೇ ಆಗಿರುವವು 'ವೆಬ್' ಆಪ್‌ಗಳು. ಬ್ರೌಸರ್ ಮೂಲಕ ಕಾಣಸಿಗುವ ಜಾಲತಾಣದ ಇನ್ನೊಂದು ರೂಪವಾದ  ಇವು ತಾಂತ್ರಿಕವಾಗಿ ಆಪ್‌ಗಳೇ ಅಲ್ಲ. ಇಲ್ಲಿ ಬ್ರೌಸರ್‍‍ನ ಅಂಶಗಳನ್ನು (ಅಡ್ರೆಸ್ ಬಾರ್, ಮೆನು ಇತ್ಯಾದಿ) ಮರೆಮಾಡಿ ಜಾಲತಾಣವೇ ಆಪ್‍ನಂತೆ ಕಾಣುವ ಹಾಗೆ ಮಾಡಿರುತ್ತಾರೆ ಅಷ್ಟೇ. ಇವನ್ನು ಬಳಸಲು ಅಂತರಜಾಲ ಸಂಪರ್ಕ ಇರಲೇಬೇಕಾದ್ದು ಅನಿವಾರ್ಯ. ವೆಬ್ ಆಪ್‍ಗಳನ್ನು ಪ್ಲೇ ಸ್ಟೋರಿನಿಂದ ಡೌನ್‍ಲೋಡ್ ಮಾಡಿಕೊಳ್ಳುವ ಅಗತ್ಯವೂ ಇಲ್ಲ - ಜಾಲತಾಣದಲ್ಲೇ ಇರುವ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಆ ತಾಣಕ್ಕೆ ಕೊಂಡೊಯ್ಯುವ ಕೊಂಡಿಯೊಂದು ನಮ್ಮ ಮೊಬೈಲ್ ಪರದೆಗೆ ಸೇರ್ಪಡೆಯಾಗುತ್ತದೆ ಅಷ್ಟೇ.

ನೋಡಲು ಮೊಬೈಲ್ ಆಪ್‌ನಂತೆ ಕಾಣುವ, ಆಪ್‌ ಸ್ಟೋರಿನ ಮೂಲಕವೇ ದೊರಕುವ, ಮೊಬೈಲಿನ ಸೌಲಭ್ಯಗಳನ್ನು ಬಳಸಬಲ್ಲ, ಆದರೆ ತಮ್ಮ ಬಹಳಷ್ಟು ಕೆಲಸಗಳಿಗೆ ಬಾಹ್ಯ ಜಾಲತಾಣವನ್ನು ಅವಲಂಬಿಸಿರುವ ಆಪ್‌ಗಳಿಗೆ 'ಹೈಬ್ರಿಡ್' ಆಪ್‌ಗಳೆಂದು ಹೆಸರು. ನಮ್ಮ ಮೊಬೈಲಿನಲ್ಲೇ ಇನ್‌ಸ್ಟಾಲ್ ಆಗಿದ್ದರೂ, ಅಂತರಜಾಲ ಸೌಲಭ್ಯವಿಲ್ಲದಾಗಲೂ ತೆರೆಯಬಹುದಾಗಿದ್ದರೂ ಇವುಗಳ ಮೂಲಕ ದೊರಕುವ ಬಹಳಷ್ಟು ಮಾಹಿತಿ-ಸವಲತ್ತುಗಳು ನಿರ್ದಿಷ್ಟ ಜಾಲತಾಣದಿಂದ ಬರುತ್ತಿರುತ್ತವೆ. ಹಾಗಾಗಿ ಅಂತರಜಾಲ ಸಂಪರ್ಕವಿಲ್ಲದಾಗ ಇಂತಹ ಆಪ್‌ಗಳನ್ನು ತೆರೆದರೆ ಅದರ ಹಲವು ಸೌಲಭ್ಯಗಳು ಕೆಲಸಮಾಡದಿರುವ ಸಾಧ್ಯತೆಯೇ ಹೆಚ್ಚು.

ಜೂನ್ ೧೯, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹ

1 ಕಾಮೆಂಟ್‌:

shreyas ಹೇಳಿದರು...

ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

badge