ಸೋಮವಾರ, ಜೂನ್ 19, 2017

ಬಗ್ ಮತ್ತು ಡೀಬಗ್

ಟಿ. ಜಿ. ಶ್ರೀನಿಧಿ


ಕಂಪ್ಯೂಟರಿಗಾಗಲೀ ಸ್ಮಾರ್ಟ್‌ಫೋನ್‌ಗಾಗಲಿ ಸ್ವಂತ ಬುದ್ಧಿ ಇರುವುದಿಲ್ಲ. ನಿರ್ದಿಷ್ಟ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ಅದಕ್ಕೆ ನಿರ್ದೇಶನ ನೀಡಲಾಗಿರುತ್ತದೆಯೋ ಅದರ ವರ್ತನೆ ಅದೇ ರೀತಿಯಾಗಿರುತ್ತದೆ. ಹೀಗೆ ನಿರ್ದೇಶನ ನೀಡುವುದು ಸಾಫ್ಟ್‌ವೇರ್, ಅಂದರೆ ತಂತ್ರಾಂಶದ ಕೆಲಸ.

ಒಂದು + ಒಂದು = ಎರಡು ಎನ್ನುವ ಬದಲು ಒಂದು + ಒಂದು = ಹನ್ನೊಂದು ಎಂದು ತಂತ್ರಾಂಶದಲ್ಲಿ ಹೇಳಿದೆ ಎಂದುಕೊಳ್ಳಿ. ನೀವು ಆ ತಂತ್ರಾಂಶ ಬಳಸುವ ಕಂಪ್ಯೂಟರನ್ನು ಒಂದು + ಒಂದು ಎಷ್ಟು ಎಂದು ಕೇಳಿದರೆ ಉತ್ತರ ಹನ್ನೊಂದು ಎಂದೇ ಬರುತ್ತದೆ.

ಕಂಪ್ಯೂಟರ್ ಲೆಕ್ಕಾಚಾರದಲ್ಲಿ ಆಗುವ ಎಡವಟ್ಟುಗಳಿಗೆ ಇಂತಹ ತಪ್ಪುಗಳೇ ಕಾರಣ. ತಂತ್ರಾಂಶವನ್ನು ಸರಿಯಾಗಿ ಪರೀಕ್ಷಿಸದೆ ಬಳಕೆದಾರರಿಗೆ ಕೊಟ್ಟಾಗ ಇಂತಹ ತಪ್ಪುಗಳು ಅವರಿಗೆ ಸಾಕಷ್ಟು ತೊಂದರೆಕೊಡುತ್ತವೆ, ಹೆಚ್ಚೂಕಡಿಮೆ ತಿಗಣೆಕಾಟದ ಹಾಗೆ. ಇದರಿಂದಲೇ ಈ ತಪ್ಪುಗಳನ್ನು 'ಬಗ್' ಎಂದು ಕರೆಯುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನೂ ಓದಿ: ಬಗ್ ಬ್ಯಾಂಗ್! 
ಮಾಹಿತಿ ತಂತ್ರಜ್ಞಾನದ ಮೇಲೆ ನಮ್ಮ ಅವಲಂಬನೆ ಹೆಚ್ಚುತ್ತಿದ್ದಂತೆ ಬಗ್‌ಗಳಿಂದಾಗುವ ತೊಂದರೆಯೂ ಹೆಚ್ಚುತ್ತಿದೆ. ಬಗ್ ದೆಸೆಯಿಂದ ತಂತ್ರಾಂಶಗಳ ಕಾರ್ಯನಿರ್ವಹಣೆಯಲ್ಲಾಗುವ ವ್ಯತ್ಯಯ ಭಾರೀ ಪ್ರಮಾಣದ ಆರ್ಥಿಕ ನಷ್ಟವನ್ನೂ ಉಂಟುಮಾಡಬಲ್ಲದು.

ಹೀಗಾಗಿಯೇ ತಂತ್ರಾಂಶವನ್ನು ಬಳಕೆದಾರರಿಗೆ ನೀಡುವ ಮೊದಲು ಅದರಲ್ಲಿರಬಹುದಾದ ತಪ್ಪುಗಳನ್ನೆಲ್ಲ ಗುರುತಿಸಿ ಸರಿಪಡಿಸುವುದು ಅಪೇಕ್ಷಣೀಯ. 'ಡೀಬಗಿಂಗ್', ಅಂದರೆ 'ಡೀಬಗ್ ಮಾಡುವುದು' ಎಂದು ಗುರುತಿಸುವುದು ಈ ಪ್ರಕ್ರಿಯೆಯನ್ನೇ. ಈ ಕೆಲಸದ ಬಹುಪಾಲು ತಂತ್ರಾಂಶ ಪರೀಕ್ಷೆಯ (ಟೆಸ್ಟಿಂಗ್) ಸಂದರ್ಭದಲ್ಲಿ ನಡೆಯುತ್ತದೆ. ತಂತ್ರಾಂಶ ಅಭಿವರ್ಧನೆಯ (ಡೆವೆಲಪ್‌ಮೆಂಟ್) ಹಂತದಲ್ಲೂ ಆವರೆಗೆ ಸಿದ್ಧವಾದಷ್ಟು ಭಾಗವನ್ನು ಡೀಬಗ್ ಮಾಡುವುದು ಅಪರೂಪವೇನಲ್ಲ.

ಸಣ್ಣಪುಟ್ಟ ಬಗ್‌ಗಳನ್ನು ಹಿಡಿದುಹಾಕುವುದು ಸುಲಭವೇ. ಆದರೆ ಸಂಕೀರ್ಣ ತಂತ್ರಾಂಶಗಳಲ್ಲಿ ಕಾಣಿಸಿಕೊಳ್ಳುವ ಕೆಲ ತಪ್ಪುಗಳ ಮೂಲವನ್ನು ಹುಡುಕಿ ಸರಿಪಡಿಸುವುದು ಸವಾಲಿನ ಕೆಲಸ. ಈ ಪ್ರಕ್ರಿಯೆಯಲ್ಲಿ ನೆರವಾಗಲು ಡೀಬಗರ್‌ಗಳೆಂಬ ತಂತ್ರಾಂಶಗಳನ್ನು ಬಳಸಲಾಗುತ್ತದೆ. ಪರೀಕ್ಷಿಸಲಾಗುತ್ತಿರುವ ತಂತ್ರಾಂಶವನ್ನು ಹೆಜ್ಜೆಗಳಲ್ಲಿ ಕಾರ್ಯಗತಗೊಳಿಸುವ ಮೂಲಕ ನಡುವೆ ಎಲ್ಲೋ ಇರಬಹುದಾದ ತಪ್ಪನ್ನು ಗುರುತಿಸಲು ಸಹಾಯಮಾಡುವುದು ಈ ತಂತ್ರಾಂಶದ ಹೆಚ್ಚುಗಾರಿಕೆ. ಪರೀಕ್ಷೆಯ ಅಗತ್ಯಗಳಿಗೆ ತಕ್ಕಂತೆ ತಂತ್ರಾಂಶದ ಕಾರ್ಯಾಚರಣೆಯನ್ನು ನಿರ್ದಿಷ್ಟ ಹಂತದಲ್ಲಿ ನಿಲ್ಲಿಸುವ ಹಾಗೂ ಆ ಹಂತದ ಇನ್‌ಪುಟ್-ಔಟ್‌ಪುಟ್‌ಗಳನ್ನು ಪರಿಶೀಲಿಸುವ ಸೌಲಭ್ಯವೂ ಬಹುತೇಕ ಡೀಬಗರ್‌ಗಳಲ್ಲಿರುತ್ತದೆ.

ಆಗಸ್ಟ್ ೧, ೨೦೧೬ ಹಾಗೂ ಫೆಬ್ರುವರಿ ೨೬, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನಗಳ ಸಂಯುಕ್ತರೂಪ

ಕಾಮೆಂಟ್‌ಗಳಿಲ್ಲ:

badge