ಸೋಮವಾರ, ಮೇ 29, 2017

'ಅನ್‌ಬಾಕ್ಸ್‌ಡ್' ಮೊಬೈಲಿಗೂ 'ರೀಫರ್ಬಿಶ್‌ಡ್' ಮೊಬೈಲಿಗೂ ವ್ಯತ್ಯಾಸವೇನು?

ಟಿ. ಜಿ. ಶ್ರೀನಿಧಿ

ಹೊಸ ಮಾದರಿ ಮೊಬೈಲ್ ಫೋನುಗಳನ್ನು ಪರಿಚಯಿಸುವ ವೀಡಿಯೋಗಳನ್ನು ನೀವು ಯೂಟ್ಯೂಬ್‌ನಲ್ಲಿ ನೋಡಿರಬಹುದು. ಇಂತಹ ಬಹುತೇಕ ವೀಡಿಯೋಗಳು ಪ್ರಾರಂಭವಾಗುವುದು ಮೊಬೈಲ್ ಇಟ್ಟಿರುವ ಪೆಟ್ಟಿಗೆಯನ್ನು (ಬಾಕ್ಸ್) ತೆರೆದು ಅದರೊಳಗೆ ಏನೆಲ್ಲ ಇದೆ ಎಂದು ಹೇಳುವ ಮೂಲಕ. ಹಾಗಾಗಿಯೇ ಈ ಪರಿಚಯಗಳನ್ನು 'ಅನ್‌ಬಾಕ್ಸಿಂಗ್' ಎಂದೂ ಕರೆಯುತ್ತಾರೆ.

ಈ ಪರಿಕಲ್ಪನೆಗೆ ಇನ್ನೊಂದು ಆಯಾಮವೂ ಇದೆ. ಆನ್‌ಲೈನ್ ಅಂಗಡಿಗಳಿಂದ ಮೊಬೈಲ್ ತರಿಸುವ ನಾವು ಮನೆಯಲ್ಲೇ ಅನ್‌ಬಾಕ್ಸ್ ಮಾಡುತ್ತೇವೆ: ಪ್ಲಾಸ್ಟಿಕ್ ಹೊರಕವಚವನ್ನು ಹರಿದು,  ಪೆಟ್ಟಿಗೆಯ ಮೇಲಿನ ಸೀಲ್ ಒಡೆದು ಮೊಬೈಲನ್ನು ಹೊರತೆಗೆಯುತ್ತೇವೆ.

ಇದರ ನಂತರದಲ್ಲೂ ಮೊಬೈಲನ್ನು ಅಂಗಡಿಗೆ ಮರಳಿಸುವಂತಹ ಸನ್ನಿವೇಶ ಕೆಲವೊಮ್ಮೆ ಎದುರಾಗುತ್ತದೆ.
ಅಂಗಡಿಯವರು ಒಪ್ಪಿದರೆ ಅದನ್ನು ಮರಳಿಸಿ ನಾವು ಆರಾಮಾಗಿರುತ್ತೇವೆ. ಆದರೆ ಹಾಗೆ ಮರಳಿಸಿದ ಫೋನನ್ನು ಅಂಗಡಿಯವರು ಮತ್ತೆ ಇನ್ನೊಬ್ಬರಿಗೆ ಮಾರುವುದು ಕಷ್ಟ - ತಾವು ಕೊಳ್ಳುವ ಫೋನಿನ ಪೆಟ್ಟಿಗೆ ಸೀಲ್ ಆಗಿರಬೇಕು ಎಂದು ಗ್ರಾಹಕರು ನಿರೀಕ್ಷಿಸುತ್ತಾರಲ್ಲ!

ಇಂತಹ ಫೋನುಗಳನ್ನು 'ಅನ್‌ಬಾಕ್ಸ್‌ಡ್' (unboxed) ಫೋನುಗಳೆಂಬ ಹಣೆಪಟ್ಟಿಯೊಡನೆ ಹಲವು ಆನ್‌ಲೈನ್ ಅಂಗಡಿಗಳಲ್ಲಿ ಮಾರಲಾಗುತ್ತದೆ. ಫೋನು ಹೊಸದೇ, ಪೆಟ್ಟಿಗೆಯಲ್ಲಿರಬೇಕಾದ ಇತರ ವಸ್ತುಗಳೂ ಫೋನಿನ ಜೊತೆಗಿರುತ್ತವೆ; ಆದರೆ ಪೆಟ್ಟಿಗೆ ಸೀಲ್ ಆಗಿಲ್ಲದ ಕಾರಣದಿಂದ ಅದರ ಬೆಲೆ ಮಾತ್ರ ಮೂಲ ಬೆಲೆಗಿಂತ ಕೊಂಚ ಕಡಿಮೆಯಿರುತ್ತದೆ. ವಾರಂಟಿಯೂ ಇರುತ್ತದಾದರೂ ಹೊಸ ಫೋನುಗಳ ಹೋಲಿಕೆಯಲ್ಲಿ ವಾರಂಟಿ ಅವಧಿ ಕೊಂಚ ಕಡಿಮೆ ಇರಬಹುದು.

ಇಂತಹ ಅಂಗಡಿಗಳಲ್ಲಿ ಮಾರಾಟವಾಗುವ ಇನ್ನು ಕೆಲ ಸಾಧನಗಳನ್ನು 'ರೀಫರ್ಬಿಶ್‌ಡ್' (refurbished) ಎಂದು ಗುರುತಿಸಿರುತ್ತಾರೆ. ಈಚೆಗೆ ಕೆಲ ಜಾಲತಾಣಗಳಲ್ಲಿ ಒನ್‌ಪ್ಲಸ್ ಸಂಸ್ಥೆಯ ಫೋನುಗಳನ್ನು ಕಡಿಮೆಬೆಲೆಗೆ ಮಾರಿದರಲ್ಲ, ಆ ಫೋನುಗಳೆಲ್ಲ ಇದೇ ಗುಂಪಿಗೆ ಸೇರಿದ್ದವು.

ರೀಫರ್ಬಿಶ್‌ಡ್ ಎನ್ನುವ ಪದವನ್ನು 'ಮತ್ತೆ ಹೊಸದಾಗಿಸಿದ' ಎಂದು ಅರ್ಥೈಸಬಹುದು. ವಾರಂಟಿ ಅವಧಿಯಲ್ಲಿ ಕೆಟ್ಟುಹೋದ ಸಾಧನಗಳನ್ನು ಗ್ರಾಹಕರು ಸೇವಾಕೇಂದ್ರಕ್ಕೆ ಮರಳಿಸುತ್ತಾರಲ್ಲ, ಅವುಗಳನ್ನು ತಯಾರಕರೇ ಸರಿಪಡಿಸಿ ಈ ಹೆಸರಿನಲ್ಲಿ ಮಾರಾಟಕ್ಕೆ ಬಿಡುಗಡೆ ಮಾಡುತ್ತಾರೆ. ಅಂಗಡಿಗಳಲ್ಲಿ ಪ್ರದರ್ಶನಕ್ಕಿಟ್ಟ ಸಾಧನಗಳು, ಪರೀಕ್ಷೆ - ವಿಮರ್ಶೆಗೆ ಬಳಕೆಯಾಗುವ ಸಾಧನಗಳೂ ಇದೇ ಹಾದಿಯತ್ತ ಹೊರಳುವುದು ಸಾಧ್ಯ.

ರೀಫರ್ಬಿಶ್‌ಡ್ ಸಾಧನಗಳಿಗೆ ಒಂದಷ್ಟು ಅವಧಿಯ ವಾರಂಟಿಯನ್ನೂ ಕೊಡುವ ಅಭ್ಯಾಸವಿದೆ. ಇವುಗಳ ಬೆಲೆ, ಹೊಸ ಸಾಧನಗಳ ಹೋಲಿಕೆಯಲ್ಲಿ, ಸಹಜವಾಗಿಯೇ ಕಡಿಮೆಯಿರುತ್ತದೆ.

ಇಂತಹ ಸಾಧನಗಳು ಸೇವಾಕೇಂದ್ರಕ್ಕೆ ಹೋಗುವ ಮುನ್ನ ಒಂದಷ್ಟು ದಿನ ಬಳಕೆಯಾಗಿರುತ್ತವಲ್ಲ, ಹಾಗಾಗಿ ನಾವು ಕೊಳ್ಳುವ ರೀಫರ್ಬಿಶ್‌ಡ್ ಸಾಧನಗಳಲ್ಲಿ ಸಣ್ಣಪುಟ್ಟ ಗೀಚುಗಳು ಇರುವುದು ಸಾಧ್ಯ. ಆದರೆ ತಯಾರಕರೇ ಸಂಪೂರ್ಣವಾಗಿ ಪರೀಕ್ಷಿಸಿ ಅಗತ್ಯಬಿದ್ದಲ್ಲಿ ಹೊಸ ಭಾಗಗಳನ್ನೂ ಅಳವಡಿಸಿರುವುದರಿಂದ ಇವು ಸೆಕೆಂಡ್ ಹ್ಯಾಂಡ್ ಸಾಧನಗಳಿಗಿಂತ ಕೊಂಚ ಭಿನ್ನ ಎನ್ನಬಹುದು.

ಸೆಪ್ಟೆಂಬರ್ ೨೧-೨೨, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನಗಳ ಸಂಯುಕ್ತರೂಪ

ಕಾಮೆಂಟ್‌ಗಳಿಲ್ಲ:

badge