ಗುರುವಾರ, ಏಪ್ರಿಲ್ 6, 2017

ಎಲ್ಲರ ಫೇವರಿಟ್ ಈ 'ಫೇವ್‌ಐಕನ್'!

ಟಿ. ಜಿ. ಶ್ರೀನಿಧಿ


ಅಂತರಜಾಲ ಸಂಪರ್ಕ ಬಳಸುವಾಗ ನಾವು ಒಂದಾದ ಮೇಲೆ ಒಂದರಂತೆ ಜಾಲತಾಣಗಳನ್ನು ತೆರೆಯುತ್ತಾ ಹೋಗುತ್ತೇವೆ. ಹಾಗೆ ತೆರೆದ ಜಾಲತಾಣಗಳು ಬೇರೆಬೇರೆ ಬ್ರೌಸರ್ ಕಿಟಕಿಗಳಲ್ಲೋ, ಒಂದೇ ಕಿಟಕಿಯ ವಿಭಿನ್ನ ಟ್ಯಾಬ್‌ಗಳಲ್ಲೋ ಕಾಣಿಸಿಕೊಳ್ಳುತ್ತವೆ ಎನ್ನುವುದೂ ನಮಗೆ ಗೊತ್ತು.

ಇಂತಹ ಪ್ರತಿಯೊಂದು ಕಿಟಕಿಯ ಮೇಲ್ಭಾಗದಲ್ಲೂ (ಬ್ರೌಸರಿನ ಟೈಟಲ್ ಬಾರ್‌ನಲ್ಲಿ) ನಾವು ತೆರೆದಿರುವ ತಾಣದ ಬಗ್ಗೆ ಕೆಲವು ಪದಗಳು ಮೂಡಿಬರುತ್ತವೆ. ಈ ಹೆಸರಿನ ಪಕ್ಕದಲ್ಲೇ ಪುಟ್ಟದೊಂದು ಚಿತ್ರವೂ ಇರುತ್ತದೆ.
ಈ ಚಿತ್ರವನ್ನು 'ಫೇವ್‌ಐಕನ್' (favicon) ಎಂದು ಗುರುತಿಸಲಾಗುತ್ತದೆ. ಇದು 'ಫೇವರಿಟ್ ಐಕನ್' ಎನ್ನುವ ಹೆಸರಿನ ಹ್ರಸ್ವರೂಪ.

ಗೂಗಲ್, ಫೇಸ್‌ಬುಕ್, ಜಿಮೇಲ್‌ಗಳಲ್ಲೆಲ್ಲ ಮಾಡಿದಂತೆ ಜಾಲತಾಣದ ಲಾಂಛನವನ್ನೇ ಅದರ ಫೇವ್‌ಐಕನ್ ಆಗಿಯೂ ಬಳಸುವುದು ಸಂಪ್ರದಾಯ. ಕೆಲ ತಾಣಗಳಲ್ಲಿ ಬೇರೆಯ ಚಿತ್ರಗಳೂ ಫೇವ್‌ಐಕನ್ ಆಗಿರುವುದುಂಟು. ಬ್ಲಾಗ್ ಸೇವೆ ಒದಗಿಸುವ ತಾಣದ ಲಾಂಛನವೇ ನಮ್ಮ ಬ್ಲಾಗುಗಳಲ್ಲೂ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ; ಆದರೆ ಅದನ್ನು ನಮ್ಮ ಇಷ್ಟದ ಚಿತ್ರಕ್ಕೆ ಬದಲಿಸಿಕೊಳ್ಳುವುದೂ ಸುಲಭ.

ಅಂದಹಾಗೆ ಬ್ರೌಸರುಗಳಲ್ಲಿ ಫೇವ್‌ಐಕನ್ ಪ್ರದರ್ಶಿಸುವ ಸೌಲಭ್ಯ ಪ್ರಾರಂಭವಾದದ್ದು ೧೯೯೯ರಲ್ಲಿ. ಈ ಸೌಲಭ್ಯವನ್ನು ಮೊದಲಿಗೆ ಪರಿಚಯಿಸಿದ ಬ್ರೌಸರ್ ಎಂಬ ಹೆಗ್ಗಳಿಕೆ ಆ ವರ್ಷ ಬಿಡುಗಡೆಯಾದ 'ಇಂಟರ್‌ನೆಟ್ ಎಕ್ಸ್‌ಪ್ಲೋರರ್ ೫'ಗೆ ಸಲ್ಲುತ್ತದೆ. ಬ್ರೌಸರ್ ಬಳಕೆದಾರರು ತಮಗೆ ಅಚ್ಚುಮೆಚ್ಚಿನದೆಂದು (ಫೇವರಿಟ್) ಉಳಿಸಿಟ್ಟುಕೊಂಡ ಜಾಲತಾಣಗಳ ವಿಳಾಸದೊಡನೆ ಪ್ರದರ್ಶಿಸಲು ಈ ಚಿತ್ರದ ಪರಿಕಲ್ಪನೆಯನ್ನು ಹುಟ್ಟುಹಾಕಲಾಯಿತಂತೆ.

ಸೆಪ್ಟೆಂಬರ್ ೩೦, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge