ಸೋಮವಾರ, ಏಪ್ರಿಲ್ 3, 2017

ವೈ-ಫೈ ವಿಷಯ

ಟಿ. ಜಿ. ಶ್ರೀನಿಧಿ

ವೈರು - ಕೇಬಲ್ಲುಗಳನ್ನು ಜೋಡಿಸುವ ಗೊಡವೆಯಿಲ್ಲದೆ ಸರಾಗವಾಗಿ ಅಂತರಜಾಲ ಸಂಪರ್ಕ ನೀಡಿಬಿಡುವ ವೈ-ಫೈ ತಂತ್ರಜ್ಞಾನದ ಪರಿಚಯ ನಮಗೆ ಚೆನ್ನಾಗಿಯೇ ಇದೆ. ರೇಡಿಯೋ ಅಲೆಗಳ ಮೂಲಕ ತನ್ನ ಸಂಪರ್ಕದಲ್ಲಿರುವ ಸಾಧನಗಳಿಗೆ ಅಂತರಜಾಲ ಸಂಪರ್ಕ ಒದಗಿಸಿಕೊಡುವುದು ಈ ತಂತ್ರಜ್ಞಾನದ ಹೆಗ್ಗಳಿಕೆ.

ಅಂತರಜಾಲ ಸಂಪರ್ಕ ನಮ್ಮ ಮನೆಯವರೆಗೆ ಹಲವು ವಿಧಗಳಲ್ಲಿ ತಲುಪಬಹುದು. ಅದು ನಮ್ಮ ಸಾಧನಗಳಿಗೆ ಅರ್ಥವಾಗುವ ರೂಪಕ್ಕೆ ಬದಲಾಗುವುದು ಮೋಡೆಮ್ ಮೂಲಕ. ಈ ಸಂಕೇತಗಳನ್ನು ವೈ-ಫೈ ರೂಪಕ್ಕೆ ತರುವುದು ರೌಟರ್ ಎನ್ನುವ ಸಾಧನದ ಕೆಲಸ (ಬಹಳಷ್ಟು ಸನ್ನಿವೇಶಗಳಲ್ಲಿ ಮೋಡೆಮ್, ರೌಟರ್ ಎರಡೂ ಸಾಧನಗಳ ಕೆಲಸವನ್ನು ಒಂದೇ ಯಂತ್ರ ಮಾಡುತ್ತದೆ). ಈ ಸಾಧನದಿಂದ ಹೊರಹೊಮ್ಮುವ ಸಂಕೇತಗಳನ್ನು ಬಳಸಲು ಶಕ್ತವಾದ ಯಾವುದೇ ಸಾಧನ ಅಂತರಜಾಲ ಸಂಪರ್ಕವನ್ನು ಪಡೆದುಕೊಳ್ಳಬಹುದು. ಕಂಪ್ಯೂಟರ್ - ಟ್ಯಾಬ್ಲೆಟ್ - ಮೊಬೈಲ್ ಮಾತ್ರವೇ ಅಲ್ಲ, ಸ್ಮಾರ್ಟ್‌ ಟೀವಿ - ಸ್ಮಾರ್ಟ್ ವಾಚ್ - ಸ್ಟ್ರೀಮಿಂಗ್ ಡಿವೈಸ್‌ಗಳಂತಹ ಇನ್ನೂ ಅನೇಕ ಸಾಧನಗಳೂ ವೈ-ಫೈ ಬಳಸುತ್ತವೆ.

ಅಂದಹಾಗೆ 'ವೈ-ಫೈ' ಹೆಸರಿನ ಹಿನ್ನೆಲೆ ಕುರಿತು ಕೊಂಚ ಗೊಂದಲವಿದೆ. 'ಹೈ-ಫೈ' ಎಲ್ಲರಿಗೂ ಪರಿಚಯವಿತ್ತಲ್ಲ, ಅದನ್ನೇ ಅನುಸರಿಸಿ ವೈ-ಫೈ ಎನ್ನುವ ಹೆಸರು ರೂಪಿಸಲಾಯಿತು ಎನ್ನುವುದನ್ನು ಅನೇಕರು ಒಪ್ಪುತ್ತಾರೆ. ಈ ತಂತ್ರಜ್ಞಾನ ಪರಿಚಯವಾದ ಹೊಸತರಲ್ಲಿ ಪ್ರಕಟವಾದ ಜಾಹೀರಾತುಗಳಲ್ಲಿ 'ವೈರ್‌ಲೆಸ್ ಫಿಡೆಲಿಟಿ' ಎನ್ನುವ ಹೆಸರಿನ ಪ್ರಸ್ತಾಪವೂ ಇತ್ತು; 'ವೈ-ಫೈ' ಎನ್ನುವುದು ಅದೇ ಹೆಸರಿನ ಹ್ರಸ್ವರೂಪ ಎನ್ನುವುದು ಇನ್ನು ಕೆಲವರ ಅನಿಸಿಕೆ.

ವೈ-ಫೈ ಬಳಸುವ ಮುನ್ನ ಬಹಳಷ್ಟು ಸಂದರ್ಭಗಳಲ್ಲಿ ವೈ-ಫೈ ಸಂಪರ್ಕದ ವೆಚ್ಚ ಕಡಿಮೆ (ಕೆಲವು ಕಡೆ ಅದು ಉಚಿತವೂ ಹೌದು), ಅಲ್ಲದೆ ೩ಜಿ-೪ಜಿಗಳ ಹೋಲಿಕೆಯಲ್ಲಿ ಬ್ಯಾಟರಿ ಬಳಕೆಯೂ ಕಡಿಮೆ; ಹಾಗಾಗಿ ನಮಗೆ ವೈ-ಫೈ ಬಗ್ಗೆ ಕೊಂಚ ಹೆಚ್ಚೇ ಪ್ರೀತಿ.

ಕಂಪ್ಯೂಟರಿನಲ್ಲೇನೋ ವೈ-ಫೈ ಹಾಗೂ ಈಥರ್ನೆಟ್ ಕೇಬಲ್ ಎರಡರ ಮೂಲಕವೂ ಅಂತರಜಾಲ ಸಂಪರ್ಕ ಪಡೆದುಕೊಳ್ಳಬಹುದು; ಆದರೆ ಕೇಬಲ್ ಚುಚ್ಚುವ ಸೌಲಭ್ಯವಿಲ್ಲದ ಸಾಧನಗಳಿಗೆ (ಮೊಬೈಲ್, ಟ್ಯಾಬ್ಲೆಟ್, ಸ್ಮಾರ್ಟ್‌ವಾಚ್ ಇತ್ಯಾದಿ) ವೈ-ಫೈ ಬಳಸುವುದು ಅನಿವಾರ್ಯವೆನ್ನುವಂತಹ ಪರಿಸ್ಥಿತಿ ಇದೆ.

ಕೇಬಲ್ ಚುಚ್ಚಿ ಅಂತರಜಾಲ ಸಂಪರ್ಕ ಪಡೆದುಕೊಂಡಾಗ ಅದು ನಮ್ಮ ಕಂಪ್ಯೂಟರಿಗಷ್ಟೇ ಸೀಮಿತವಾಗಿರುತ್ತದೆ. ಆದರೆ ವೈ-ಫೈ ಸಂಪರ್ಕಗಳಲ್ಲಿ ಹಾಗಲ್ಲ, ನಮ್ಮ ರೌಟರ್ ವ್ಯಾಪ್ತಿಯಲ್ಲಿರುವ ಯಾವುದೇ ಸಾಧನ ಅದರಿಂದ ಅಂತರಜಾಲ ಸಂಪರ್ಕ ಪಡೆದುಕೊಳ್ಳಬಹುದು. ಹಾಗಾಗಿ ಮನೆಯ ವೈ-ಫೈ ಸಂಪರ್ಕಗಳನ್ನು ಪಾಸ್‌ವರ್ಡ್ ಬಳಸುವ ಮೂಲಕ ಸುರಕ್ಷಿತವಾಗಿಟ್ಟುಕೊಳ್ಳುವುದು ಅನಿವಾರ್ಯ. ಈ ಪಾಸ್‌ವರ್ಡನ್ನು ಸಿಕ್ಕಸಿಕ್ಕವರಿಗೆಲ್ಲ ಕೊಡದಿರುವುದೂ ಮುಖ್ಯವೇ!

ಇದೇ ರೀತಿ ಮನೆಯಿಂದ ಹೊರಗೆ ವೈ-ಫೈ ಸಂಪರ್ಕಗಳನ್ನು ಬಳಸುವಾಗ ಅಲ್ಲಿಯೂ ಎಚ್ಚರಿಕೆ ಅಗತ್ಯ. ಇಂತಹ ಸಂಪರ್ಕಗಳನ್ನು ಯಾರುಬೇಕಾದರೂ ಉಪಯೋಗಿಸಬಹುದಾದ್ದರಿಂದ ಅಲ್ಲಿ ಕುತಂತ್ರಿಗಳಿರುವ ಸಾಧ್ಯತೆ ಖಂಡಿತಾ ಇರುತ್ತದೆ. ಹಾಗಾಗಿ ಅಲ್ಲಿ ಹಣಕಾಸು ವ್ಯವಹಾರ, ಖಾಸಗಿ ಮಾಹಿತಿಯ ರವಾನೆ ಮುಂತಾದವನ್ನು ಮಾಡದಿರುವುದು ಒಳ್ಳೆಯದು. ಕೆಲಸ ಮುಗಿದ ತಕ್ಷಣ ಇಂತಹ ಸಂಪರ್ಕಗಳನ್ನು ಕಡಿತಗೊಳಿಸುವುದು ಕೂಡ ಉತ್ತಮ ಅಭ್ಯಾಸ.

ಸೆಪ್ಟೆಂಬರ್ ೩-೪, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನಗಳ ಸಂಯುಕ್ತರೂಪ

ಕಾಮೆಂಟ್‌ಗಳಿಲ್ಲ:

badge