ಗುರುವಾರ, ಏಪ್ರಿಲ್ 13, 2017

ಅನಗತ್ಯ ಸಂದೇಶಗಳನ್ನು ತಪ್ಪಿಸೋಣ!

ಟಿ. ಜಿ. ಶ್ರೀನಿಧಿ


ಇಮೇಲ್, ಫೇಸ್‌ಬುಕ್, ವಾಟ್ಸ್‌ಆಪ್‌ಗಳೆಲ್ಲವುದರ ಮೂಲಕ ಸಂದೇಶಗಳನ್ನು ಕಳುಹಿಸುವುದು ಬಹಳ ಸುಲಭ. ಒಂದು ಸಂದೇಶವನ್ನು ಒಬ್ಬರಿಗಷ್ಟೇ ಏಕೆ, ನಮ್ಮ ಅಡ್ರೆಸ್ ಬುಕ್‌ನಲ್ಲಿರುವ ಅಷ್ಟೂ ವಿಳಾಸಗಳಿಗೆ - ಮೊಬೈಲ್ ಸಂಖ್ಯೆಗಳಿಗೆ ಥಟ್ಟನೆ ಕಳುಹಿಸಿಬಿಡಬಹುದು.

ಈ ಸೌಕರ್ಯ ಬಹು ಉಪಯುಕ್ತ, ಸರಿ. ಆದರೆ ಹಲವು ಸಂದರ್ಭಗಳಲ್ಲಿ ಅನಪೇಕ್ಷಿತ ಹಾಗೂ ನಿರುಪಯುಕ್ತ (ಕೆಲವೊಮ್ಮೆ ಅಸಂಬದ್ಧ) ಸಂದೇಶಗಳನ್ನು ಹಂಚಲು ಈ ಮಾಧ್ಯಮಗಳು ಬಳಕೆಯಾಗುತ್ತಿರುವುದನ್ನು ನಾವು ನೋಡಬಹುದು. ಇದನ್ನು ತಪ್ಪಿಸಲು ಹಲವು ಮಾರ್ಗಗಳಿವೆ.

ಇಮೇಲ್ ಮೂಲಕವಿರಲಿ, ವಾಟ್ಸ್‌ಆಪ್‌ನಲ್ಲಿರಲಿ, ಗುಂಪುಗಳಿಗೆ ಸಂದೇಶಗಳನ್ನು ಕಳುಹಿಸುವಾಗ ಅದು ನಿಜಕ್ಕೂ ಉಪಯುಕ್ತವೇ ಎಂದು ಯೋಚಿಸುವುದು ಒಳ್ಳೆಯದು. ಗುಡ್ ಮಾರ್ನಿಂಗ್ - ಗುಡ್‌ನೈಟ್ ಸಂದೇಶಗಳನ್ನು, ಫಾರ್‌ವರ್ಡುಗಳನ್ನು ಸುಮ್ಮನೆ ಹಂಚಿಕೊಳ್ಳುವುದು ಖಂಡಿತಾ ಒಳ್ಳೆಯ ಅಭ್ಯಾಸವಲ್ಲ.

ವಾಟ್ಸ್‌ಆಪ್‌ನಲ್ಲಿ ಚಿತ್ರಗಳನ್ನು - ವೀಡಿಯೋಗಳನ್ನು ಕಳಿಸುವಾಗಲೂ ಅಷ್ಟೇ, ಅದು ಯಾವುದಕ್ಕೆ ಸಂಬಂಧಿಸಿದ್ದು ಎಂದು ಒಂದು ಸಾಲು ಮಾಹಿತಿ ಸೇರಿಸಿದರೆ ಆಸಕ್ತರು ಮಾತ್ರ ಡೌನ್‌ಲೋಡ್ ಮಾಡಿಕೊಳ್ಳಲು ನೆರವಾದಂತಾಗುತ್ತದೆ.

ಇದೇರೀತಿ ಇಮೇಲ್ ಬಳಸುವಾಗ 'ರಿಪ್ಲೈ ಆಲ್' ಆಯ್ಕೆಯನ್ನು ಅಗತ್ಯವಿದ್ದಾಗ ಮಾತ್ರ ಬಳಸುವುದು ಒಳಿತು. ಹೆಚ್ಚು ಜನರಿರುವ ಸಂಭಾಷಣೆಯಲ್ಲಿ ಎಲ್ಲರೂ 'ರಿಪ್ಲೈ ಆಲ್' ಮಾಡುತ್ತ ಕುಳಿತರೆ ಅನಗತ್ಯವಾಗಿ ಸಂದೇಶಗಳ ಸಂಖ್ಯೆ ಬೆಳೆಯುತ್ತದೆ, ಯಾರು ಏನು ಹೇಳುತ್ತಿದ್ದಾರೆಂದು ಅರ್ಥಮಾಡಿಕೊಳ್ಳುವುದೂ ಕಷ್ಟವಾಗುತ್ತದೆ!

ಕಡತಗಳನ್ನು ಹಂಚಿಕೊಳ್ಳುವಾಗಲೂ ಅಷ್ಟೆ, ಎರಡೆರಡು ಬಾರಿ ಯೋಚಿಸುವುದು ಉತ್ತಮ. ಅನಗತ್ಯವಾದ ಅಟ್ಯಾಚ್‌ಮೆಂಟುಗಳನ್ನು ಕಳುಹಿಸಲೇಬೇಡಿ. ಅತ್ಯಗತ್ಯವಾದ ಹೊರತು ದೊಡ್ಡಗಾತ್ರದ ಕಡತಗಳನ್ನು ಕಳುಹಿಸುವುದನ್ನು ಆದಷ್ಟೂ ತಪ್ಪಿಸಿ. ಹಾಗೊಮ್ಮೆ ಕಳುಹಿಸುವುದೇ ಆದರೆ ಕಡತವನ್ನು ಗೂಗಲ್ ಡ್ರೈವ್‌ನಂತಹ ವ್ಯವಸ್ಥೆಗಳಲ್ಲಿ ಉಳಿಸಿಟ್ಟು ಅದರ ಕೊಂಡಿಯನ್ನು ಮಾತ್ರ ಹಂಚಿಕೊಳ್ಳಬಹುದು.

ಜೂನ್ ೧೧, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge