ಬುಧವಾರ, ಮಾರ್ಚ್ 15, 2017

ಏನಿದು 'ಫ್ಲೈಟ್ ಮೋಡ್'?

ಟಿ. ಜಿ. ಶ್ರೀನಿಧಿ

ಇಂದಿನ ಬಹುತೇಕ ಮೊಬೈಲ್ ಫೋನುಗಳಲ್ಲಿ 'ಫ್ಲೈಟ್ ಮೋಡ್' ಎನ್ನುವುದೊಂದು ಸೌಲಭ್ಯವಿರುತ್ತದೆ. ವಿಮಾನದಲ್ಲಿ ಪ್ರಯಾಣಿಸುವಾಗ ನಿಮ್ಮ ಮೊಬೈಲನ್ನು ಫ್ಲೈಟ್ ಮೋಡ್‌ಗೆ ಬದಲಾಯಿಸಿ ಎಂದು ಹೇಳುವುದನ್ನೂ ನೀವು ಕೇಳಿರಬಹುದು.

ಮೊಬೈಲಿನಿಂದ ಹೊರಡುವ ಅಥವಾ ಅದನ್ನು ತಲುಪುವ ರೇಡಿಯೋ ತರಂಗಾಂತರದ (radio-frequency) ಸಂಕೇತಗಳನ್ನು ನಿರ್ಬಂಧಿಸುವುದು ಫ್ಲೈಟ್ ಮೋಡ್‌ನ ಉದ್ದೇಶ.
ಇದನ್ನು ಬಳಸಿದಾಗ ನಮ್ಮ ಮೊಬೈಲಿನ ನೆಟ್‌ವರ್ಕ್ ಸಂಪರ್ಕ ಕಡಿದುಹೋಗುತ್ತದೆ, ಅಂತರಜಾಲ ಸಂಪರ್ಕ - ಬ್ಲೂಟೂತ್ ಇತ್ಯಾದಿಗಳು ನಿಷ್ಕ್ರಿಯವಾಗುತ್ತವೆ. ಫೋಟೋ ಕ್ಲಿಕ್ಕಿಸುವುದು, ಹಾಡು ಕೇಳುವುದು ಮುಂತಾದ - ಬಾಹ್ಯ ಸಂಪರ್ಕದ ಅಗತ್ಯವಿಲ್ಲದೆ ಮಾಡಬಹುದಾದ - ಕೆಲಸಗಳನ್ನು ಮಾತ್ರ ಯಾವುದೇ ನಿರ್ಬಂಧವಿಲ್ಲದೆ ಮಾಡಿಕೊಳ್ಳಬಹುದು.

ಟೇಕ್-ಆಫ್‌ನಿಂದ ಪ್ರಾರಂಭಿಸಿ ಲ್ಯಾಂಡಿಂಗ್‌ವರೆಗೆ ವಿಮಾನ ಪ್ರಯಾಣದಲ್ಲಿ ಮೊಬೈಲ್ ಬಳಕೆ ನಿಷಿದ್ಧ. ಮೊಬೈಲ್ ಸಂಕೇತಗಳು ವಿಮಾನದ ನಿಯಂತ್ರಣ ಹಾಗೂ ಸಂವಹನ ವ್ಯವಸ್ಥೆಗಳೊಡನೆ ಹಸ್ತಕ್ಷೇಪ ಮಾಡದಿರಲಿ ಎನ್ನುವುದು ಈ ನಿಷೇಧದ ಉದ್ದೇಶ. ಇದಕ್ಕೆ ಕಾರಣವಾದ ಸಂಕೇತಗಳನ್ನಷ್ಟೆ ನಿರ್ಬಂಧಿಸಿ ಮೊಬೈಲಿನ ಬೇರೆ ಸೌಲಭ್ಯಗಳನ್ನು ಬಳಸಲು ಅನುವುಮಾಡಿಕೊಡುವುದರಿಂದಲೇ ಫ್ಲೈಟ್ ಮೋಡ್‌ ಹೆಸರಿನಲ್ಲಿ ವಿಮಾನಕ್ಕೂ ಜಾಗ ಸಿಕ್ಕಿದೆ. ಅಂದಹಾಗೆ ಬೇರೆಬೇರೆ ಮೊಬೈಲುಗಳಲ್ಲಿ ಇದನ್ನು ಏರ್‌ಪ್ಲೇನ್ ಅಥವಾ ಏರೋಪ್ಲೇನ್ ಮೋಡ್ ಎಂದೂ ಗುರುತಿಸಲಾಗುತ್ತದೆ.

ಫ್ಲೈಟ್ ಮೋಡ್‌ನಲ್ಲಿದ್ದಾಗ ಮೊಬೈಲಿನ ಬ್ಯಾಟರಿ ಸಾಮಾನ್ಯಕ್ಕಿಂತ ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಮೊಬೈಲ್ ಕರೆ-ಸಂದೇಶಗಳ ಕಾಟ ಜಾಸ್ತಿ ಎನ್ನಿಸಿದಾಗ, ಮೊಬೈಲನ್ನು ಅಲಾರಂ ಗಡಿಯಾರದಂತೆಯೋ ಎಂಪಿತ್ರೀ ಪ್ಲೇಯರಿನಂತೆಯೋ ಮಾತ್ರವೇ ಬಳಸಬೇಕು ಎನ್ನಿಸಿದಾಗ ಇದನ್ನು ಖಂಡಿತಾ ಬಳಸಿ ನೋಡಬಹುದು!

ಜುಲೈ ೩೦, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge