ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ: 'ಟೆಕ್ಸ್ಟ್‌ಬುಕ್ ಅಲ್ಲ, ಇದು ಟೆಕ್ ಬುಕ್!'

ಕಂಪ್ಯೂಟರ್ ಒಳಗಿನ 'ಕ್ಯಾಶ್'

ಟಿ. ಜಿ. ಶ್ರೀನಿಧಿ

ಪದೇಪದೇ ಬೇಕಾಗುವ ವಸ್ತುಗಳನ್ನು ಸುಲಭಕ್ಕೆ ಕೈಗೆ ಸಿಗುವಂತೆ ಇಟ್ಟುಕೊಳ್ಳುವುದು ನಮ್ಮೆಲ್ಲರ ಸಾಮಾನ್ಯ ಅಭ್ಯಾಸ ತಾನೇ? ಕಂಪ್ಯೂಟರು - ಮೊಬೈಲ್ ಫೋನುಗಳಿಗೂ ಈ ಅಭ್ಯಾಸ ಇದೆ. ತಮ್ಮ ಕಾರ್ಯನಿರ್ವಹಣೆಯಲ್ಲಿ ಆಗಾಗ್ಗೆ ಬಳಸುವ ನಿರ್ದೇಶನಗಳನ್ನು, ದತ್ತಾಂಶವನ್ನು ಸುಲಭಕ್ಕೆ ಸಿಗುವಂತೆ ಉಳಿಸಿಟ್ಟುಕೊಳ್ಳಲು ಅವು 'ಕ್ಯಾಶ್' ಎನ್ನುವ ಪರಿಕಲ್ಪನೆಯನ್ನು ಬಳಸುತ್ತವೆ. ಇಲ್ಲಿ ಕ್ಯಾಶ್ ಎಂದರೆ ಹಣ (cash) ಅಲ್ಲ. Cache ಎನ್ನುವುದು ಈ ಕ್ಯಾಶ್‌ನ ಸ್ಪೆಲ್ಲಿಂಗು.

ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಪದೇಪದೇ ಬಳಸುವ ನಿರ್ದೇಶನಗಳನ್ನು, ದತ್ತಾಂಶವನ್ನು ಮೆಮೊರಿಯಲ್ಲಿ ಪ್ರತ್ಯೇಕವಾಗಿ ಉಳಿಸಿಟ್ಟುಕೊಳ್ಳುವ ಮೂಲಕ ಅವನ್ನು ಥಟ್ಟನೆ ಪಡೆದುಕೊಳ್ಳುವುದನ್ನು ಸಾಧ್ಯವಾಗಿಸುವುದು ಕ್ಯಾಶ್‌‌ನ ಉದ್ದೇಶ. ಈ ಮೂಲಕ ಒಂದೇ ವಿಷಯವನ್ನು ಪದೇಪದೇ ಮೂಲದಿಂದ ಹೆಕ್ಕಿತರುವ ಅಗತ್ಯ ಇರುವುದಿಲ್ಲ; ಅಲ್ಲದೆ ಇದರಿಂದ ಸಂಪನ್ಮೂಲದ ಉಳಿತಾಯವೂ ಸಾಧ್ಯವಾಗುತ್ತದೆ.

ಇತರ ತಂತ್ರಾಂಶಗಳೂ ಕ್ಯಾಶ್ ಪರಿಕಲ್ಪನೆಯನ್ನು ಬಳಸುತ್ತವೆ. ನಾವು ಆಗಾಗ್ಗೆ ನೋಡುವ ಜಾಲತಾಣಗಳಲ್ಲಿರುವ ಮಾಹಿತಿಯನ್ನು ಬ್ರೌಸರ್ ಕ್ಯಾಶ್‌ನಲ್ಲಿ ಉಳಿಸಿಟ್ಟುಕೊಳ್ಳುವ ಮೂಲಕ ಅದನ್ನು ಪದೇಪದೇ ಡೌನ್‌‌ಲೋಡ್ ಮಾಡುವ ಅನಿವಾರ್ಯತೆ ತಪ್ಪುತ್ತದೆ. ಪದೇಪದೇ ಬೇಕಾಗುವ ಇಂತಹ ಮಾಹಿತಿಯನ್ನು ಉಳಿಸಿಟ್ಟುಕೊಳ್ಳಲು ಮೊಬೈಲ್ ಆಪ್‌ಗಳೂ ಇದೇ ತಂತ್ರ ಬಳಸುತ್ತವೆ.

ನಮ್ಮ ಬಳಕೆಗೆ ಅನುಗುಣವಾಗಿ ಕ್ಯಾಶ್‌ನಲ್ಲಿ ಉಳಿಯುವ ಮಾಹಿತಿ ಕ್ರಮೇಣ ಬದಲಾಗುತ್ತ ಹೋಗುತ್ತದೆ. ಆದರೂ ಅಗತ್ಯಬಿದ್ದಾಗ ಇಲ್ಲಿರುವ ಮಾಹಿತಿಯನ್ನು ನಾವೇ ಅಳಿಸಿಹಾಕುವುದು ಕೂಡ ಸಾಧ್ಯ. ನಾವು ಯಾವೆಲ್ಲ ತಾಣಗಳಲ್ಲಿ ಏನೆಲ್ಲ ಮಾಡಿದ್ದೇವೆ ಎನ್ನುವುದು ಬೇರೆಯವರಿಗೆ ಗೊತ್ತಾಗಬಾರದು ಎಂದಾಗ, ಕ್ಯಾಶ್‌ನಲ್ಲಿ ಉಳಿದ ಹಳೆಯ ಮಾಹಿತಿಯಿಂದಾಗಿ ಜಾಲತಾಣಗಳು ಸರಿಯಾಗಿ ಕೆಲಸಮಾಡದಿದ್ದಾಗ - ಹೀಗೆ ಅನೇಕ ಸಂದರ್ಭಗಳಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

ಸೆಪ್ಟೆಂಬರ್ ೯, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge