ಬುಧವಾರ, ಫೆಬ್ರವರಿ 15, 2017

ಡಿಪಿಐ ಮತ್ತು ಪಿಪಿಐ

ಟಿ. ಜಿ. ಶ್ರೀನಿಧಿ

ಡಿಜಿಟಲ್ ಚಿತ್ರಗಳ ಗುಣಮಟ್ಟದ ಬಗ್ಗೆ ಮಾತನಾಡುವಾಗ 'ಡಿಪಿಐ' ಪ್ರಸ್ತಾಪ ಬರುತ್ತದಲ್ಲ, ಅದು 'ಡಾಟ್ಸ್ ಪರ್ ಇಂಚ್' ಎನ್ನುವುದರ ಹ್ರಸ್ವರೂಪ.

ಇಂಕ್‌ಜೆಟ್ ಪ್ರಿಂಟರಿನಲ್ಲಿ ಮುದ್ರಿತವಾದ ಚಿತ್ರವನ್ನು ನೋಡಿದರೆ ಅದು ಬೇರೆಬೇರೆ ಬಣ್ಣದ ಅಸಂಖ್ಯ ಚುಕ್ಕೆಗಳ ಜೋಡಣೆಯಿಂದ ರೂಪುಗೊಂಡಿರುವುದನ್ನು ಗಮನಿಸಬಹುದು. ಒಂದು ಇಂಚು ಜಾಗದಲ್ಲಿ ಅಂತಹ ಎಷ್ಟು ಚುಕ್ಕೆಗಳನ್ನು ಮುದ್ರಿಸಲಾಗಿದೆ ಎಂಬುದನ್ನು ಸೂಚಿಸುವ ಮಾನಕವೇ ಈ ಡಿಪಿಐ. ಬೇರೆಬೇರೆ ಬಗೆಯ ಪ್ರಿಂಟರುಗಳಲ್ಲಿ ಬೇರೆಬೇರೆ ಡಿಪಿಐ ಸಾಮರ್ಥ್ಯ ಇರುತ್ತದೆ. ಡಿಪಿಐ ಜಾಸ್ತಿಯಿದ್ದಷ್ಟೂ ಮುದ್ರಣ ಉತ್ತಮವಾಗಿರುತ್ತದೆ ಎನ್ನುವುದು ಒಂದು ಹಂತದವರೆಗೆ ಮಾತ್ರ ಸರಿ. ಏಕೆಂದರೆ ಡಿಪಿಐ ಲೆಕ್ಕದ ಜೊತೆಗೆ ಮೂಲ ಚಿತ್ರದ ಸ್ಪಷ್ಟತೆ, ಮುದ್ರಿಸುತ್ತಿರುವ ಗಾತ್ರ ಮುಂತಾದ ಹಲವು ಅಂಶಗಳು ಚಿತ್ರದ ಒಟ್ಟು ಗುಣಮಟ್ಟವನ್ನು ತೀರ್ಮಾನಿಸುತ್ತವೆ.

ಮುದ್ರಣದ ವಿಷಯದಲ್ಲಿ ಡಾಟ್ಸ್ ಇದ್ದಂತೆ ಕಂಪ್ಯೂಟರಿನ ಚಿತ್ರಗಳಲ್ಲಿ 'ಪಿಕ್ಸೆಲ್'ಗಳಿರುತ್ತವೆ. ಫೋಟೋಶಾಪ್‌ನಂತಹ ತಂತ್ರಾಂಶಗಳಲ್ಲಿ ಚಿತ್ರವನ್ನು ರೂಪಿಸುವಾಗ ಅಲ್ಲಿರುವುದು 'ಪಿಕ್ಸೆಲ್ಸ್ ಪರ್ ಇಂಚ್' (ಪಿಪಿಐ) - ಚಿತ್ರದ ಪ್ರತಿ ಇಂಚು ವಿಸ್ತೀರ್ಣದಲ್ಲಿ ಎಷ್ಟು ಪಿಕ್ಸೆಲ್‌ಗಳಿರುತ್ತವೆ ಎಂಬ ಲೆಕ್ಕ. ೧೦೦x೧೦೦ ಪಿಕ್ಸೆಲ್‌ನ ಚಿತ್ರಕ್ಕೆ ೧೦ ಪಿಪಿಐ ನಿಗದಿಪಡಿಸಿದರೆ ಅದು ಹತ್ತಿಂಚು ಉದ್ದ-ಅಗಲದಲ್ಲಿ ಮುದ್ರಣವಾಗುತ್ತದೆ. ಅದೇ ೧೦೦ ಪಿಪಿಐ ಇಟ್ಟರೆ ಚಿತ್ರದ ಗಾತ್ರ ಒಂದೇ ಇಂಚು ಉದ್ದ-ಅಗಲಕ್ಕೆ ಇಳಿಯುತ್ತದೆ. ಇದನ್ನು ಪಿಕ್ಸೆಲ್ ಸಾಂದ್ರತೆ (ಪಿಕ್ಸೆಲ್ ಡೆನ್ಸಿಟಿ) ಎಂದೂ ಗುರುತಿಸಲಾಗುತ್ತದೆ. ಇದನ್ನೂ ಡಿಪಿಐ ಎಂದೇ ಕರೆಯುವುದು ಸಾಮಾನ್ಯ ಅಭ್ಯಾಸ ಅಷ್ಟೆ.

ಸ್ಕ್ಯಾನರ್ ಬಳಸಿ ಡಿಜಿಟಲೀಕರಿಸುವ ಚಿತ್ರಗಳು ಹಾಗೂ ಮೊಬೈಲ್, ಟ್ಯಾಬ್ಲೆಟ್ ಮುಂತಾದ ಸಾಧನಗಳ ಪರದೆಯ ಗುಣಮಟ್ಟವನ್ನು ಸೂಚಿಸಲಿಕ್ಕೂ 'ಪಿಪಿಐ' ಬಳಕೆಯಾಗುತ್ತದೆ. ಹೆಚ್ಚು ಪಿಪಿಐ ಇರುವ ಪರದೆಯಲ್ಲಿ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಮೂಡುತ್ತವೆ. ಹಾಗೆಯೇ ಹೆಚ್ಚು ಪಿಪಿಐ ಅಥವಾ ಡಿಪಿಐನಲ್ಲಿ ಸ್ಕ್ಯಾನ್ ಮಾಡಿದ ಚಿತ್ರಗಳ ಗುಣಮಟ್ಟ ಕೂಡ ಹೆಚ್ಚು ಉತ್ತಮವಾಗಿರುತ್ತದೆ.

ಜುಲೈ ೪, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge