ಶುಕ್ರವಾರ, ಫೆಬ್ರವರಿ 17, 2017

ಕಂಪ್ಯೂಟರ್ ಬಳಕೆ: ಒಂದಷ್ಟು ಶಿಸ್ತಿರಲಿ!

ಟಿ. ಜಿ. ಶ್ರೀನಿಧಿ

ನಮ್ಮಲ್ಲಿ ಹಲವರು ಒಂದಲ್ಲ ಒಂದು ಉದ್ದೇಶಕ್ಕಾಗಿ ಕಂಪ್ಯೂಟರುಗಳನ್ನು ಬಳಸುತ್ತೇವೆ. ಹೀಗೆ ಬಳಸುವಾಗ ಅಪಾರ ಪ್ರಮಾಣದ ಮಾಹಿತಿ ನಮ್ಮ ಸಂಪರ್ಕಕ್ಕೆ ಬರುತ್ತದೆ, ಕಂಪ್ಯೂಟರಿನಲ್ಲಿ ಸಂಗ್ರಹವೂ ಆಗುತ್ತದೆ. ಈ ಮಾಹಿತಿಯನ್ನೆಲ್ಲ ಸೂಕ್ತವಾಗಿ ವಿಂಗಡಿಸಿಕೊಳ್ಳುವುದು, ಸರಿಯಾಗಿ ಶೇಖರಿಸಿಟ್ಟುಕೊಳ್ಳುವುದು ನಿಜಕ್ಕೂ ಉಪಯುಕ್ತ.

ಈಗಾಗಲೇ ಇರುವ ಮಾಹಿತಿಯಲ್ಲಿ ಅನಗತ್ಯವಾದುದನ್ನು ನಿವಾರಿಸುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ.
ನಾವು ಉಪಯೋಗಿಸದ ತಂತ್ರಾಂಶಗಳನ್ನು ತೆಗೆದುಹಾಕುವ, ಅನಗತ್ಯ ಕಡತಗಳನ್ನು ಅಳಿಸಿಹಾಕುವ ಮೂಲಕ ಈ ಕೆಲಸವನ್ನು ಶುರುಮಾಡಬಹುದು. ಸದ್ಯಕ್ಕೆ ಬೇಕಾಗದ ಕಡತಗಳನ್ನು ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್‌ನಂತಹ ಬಾಹ್ಯ ಶೇಖರಣಾ ಮಾಧ್ಯಮಗಳಿಗೆ ವರ್ಗಾಯಿಸುವ ಮೂಲಕವೂ ನಮ್ಮ ಕಂಪ್ಯೂಟರನ್ನು ಕಸದ ಸಮಸ್ಯೆಯಿಂದ ಪಾರುಮಾಡಬಹುದು.

ಅನಗತ್ಯ ಕಡತಗಳನ್ನು ನಿವಾರಿಸಿಕೊಂಡಮೇಲೆ ಮಿಕ್ಕ ಮಾಹಿತಿಯನ್ನು ವ್ಯವಸ್ಥಿತವಾಗಿ ಜೋಡಿಸಿಡುವುದು ಕೂಡ ಮುಖ್ಯ. ಕಡತಗಳು ಹಾಗೂ ಫೋಲ್ಡರುಗಳನ್ನು ಅಸ್ಪಷ್ಟ ಹೆಸರುಗಳೊಡನೆ ಉಳಿಸಿಡುವ ಅಭ್ಯಾಸ ತಪ್ಪಿಸುವುದು ಈ ನಿಟ್ಟಿನಲ್ಲಿ ಬೆಳೆಸಿಕೊಳ್ಳಬೇಕಾದ ಅಭ್ಯಾಸಗಳಲ್ಲೊಂದು. ಕಡತಗಳಿಗೆ-ಫೋಲ್ಡರುಗಳಿಗೆ ಹೆಸರಿಡಲು ನಿರ್ದಿಷ್ಟ ನಿಯಮಗಳನ್ನು ರೂಪಿಸಿಕೊಳ್ಳುವುದೂ ಒಳ್ಳೆಯದೇ. ಪ್ರತಿ ಕಡತವನ್ನೂ ಸೂಕ್ತವಾದ ಹೆಸರಿನೊಡನೆ ಉಳಿಸಿಡುವುದು ಹಾಗೂ ಸಂಬಂಧಿತ ಕಡತಗಳನ್ನೆಲ್ಲ ನಿರ್ದಿಷ್ಟ ಫೋಲ್ಡರುಗಳಲ್ಲೇ ಶೇಖರಿಸುವುದರ ಮೂಲಕ ನಮಗೆ ಬೇಕಾದ ಮಾಹಿತಿಯನ್ನು ಬೇಕಾದ ಕ್ಷಣದಲ್ಲೇ ಹುಡುಕಿಕೊಳ್ಳುವುದನ್ನು ಸಾಧ್ಯವಾಗಿಸಬಹುದು. ಅದೇರೀತಿ ನಮ್ಮ ಕಡತಗಳನ್ನು ಕಾಲಕಾಲಕ್ಕೆ ಬ್ಯಾಕಪ್ ಮಾಡಿಡುವುದು, ಅನಗತ್ಯ ಕಡತಗಳನ್ನು ಆಗಿಂದಾಗ್ಗೆ ಅಳಿಸಿಹಾಕುತ್ತಿರುವುದು ಕೂಡ ಮುಖ್ಯ.

ಇದನ್ನೂ ಓದಿ: 5S ಮತ್ತು ಕಂಪ್ಯೂಟರ್

ಜುಲೈ ೧೩, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge