ಶುಕ್ರವಾರ, ಜನವರಿ 20, 2017

ಹ್ಯಾಶ್‌ಟ್ಯಾಗ್ ಬಳಸುವ ಮುನ್ನ

ಟಿ. ಜಿ. ಶ್ರೀನಿಧಿ

ಸಮಾಜಜಾಲಗಳಲ್ಲಿ ಕಾಣಸಿಗುವ ಹಲವು ಸಂದೇಶಗಳಲ್ಲಿ ಹ್ಯಾಶ್ (#) ಚಿಹ್ನೆಯಿಂದ ಪ್ರಾರಂಭವಾಗುವ ಪದಗಳನ್ನು ನಾವು ನೋಡುತ್ತೇವೆ. ಇಂತಹ ಪದಗಳಿಗೆ 'ಹ್ಯಾಶ್‌ಟ್ಯಾಗ್'ಗಳೆಂದು ಹೆಸರು.

ಸಂದೇಶ ಬರೆಯುವವರ ಭಾವನೆಯನ್ನು ಪ್ರತಿನಿಧಿಸುವುದರಿಂದ ಪ್ರಾರಂಭಿಸಿ ಸಂಸ್ಥೆಗಳ ಹೆಸರನ್ನೋ ಭಾಷೆಯ ವಿಷಯವನ್ನೋ ನಿರ್ದಿಷ್ಟ ಘಟನೆಯನ್ನೋ ನಿರ್ದೇಶಿಸುವವರೆಗೆ ಹ್ಯಾಶ್‌ಟ್ಯಾಗ್‌ಗಳು ಅನೇಕ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಬೆಂಗಳೂರಿಗೆ ಸಂಬಂಧಪಟ್ಟ ವಿಷಯವೆಂದು ಹೇಳಲು #Bengaluru, ಕನ್ನಡದ ಮಾಹಿತಿ ಎನ್ನುವುದಕ್ಕೆ #Kannada - ಹೀಗೆ ಯಾವುದೇ ಬಗೆಯ ಹ್ಯಾಶ್‌ಟ್ಯಾಗ್‌ಗಳನ್ನು ನಾವೇ ಸ್ವತಃ ರೂಪಿಸಿಕೊಳ್ಳಬಹುದು, ಅಥವಾ ಈಗಾಗಲೇ ಇರುವ ಟ್ಯಾಗ್‌ಗಳನ್ನು ನಮ್ಮ ಸಂದೇಶಗಳಲ್ಲಿ ಬಳಸಲೂಬಹುದು.

ಇಂತಹ ಯಾವುದೇ ಹ್ಯಾಶ್‌ಟ್ಯಾಗ್ ಬಳಸಿರುವ ಎಲ್ಲ ಸಂದೇಶಗಳನ್ನೂ ಸಮಾಜ ಜಾಲಗಳು ಪ್ರತ್ಯೇಕವಾಗಿ ವರ್ಗೀಕರಿಸುತ್ತವೆ. ಹಾಗಾಗಿ ನಿರ್ದಿಷ್ಟ ಹ್ಯಾಶ್‌ಟ್ಯಾಗ್ ಬಳಸಿರುವ ಸಂದೇಶಗಳನ್ನು ಒಟ್ಟಾಗಿ ನೋಡುವುದು, ಹಾಗೂ ಅದನ್ನು ಎಷ್ಟು ಮಂದಿ ಬಳಸಿದ್ದಾರೆ ಎನ್ನುವುದರ ಆಧಾರದ ಮೇಲೆ ಆ ವಿಷಯದ ಜನಪ್ರಿಯತೆಯನ್ನು ಅರಿಯುವುದು ಕೂಡ ಸಾಧ್ಯವಾಗುತ್ತದೆ. ನಿರ್ದಿಷ್ಟ ವಿಷಯದ ಕುರಿತು ಹಂಚಿಕೊಳ್ಳಲಾಗಿರುವ ಮಾಹಿತಿ ಅಥವಾ ಸಂದೇಶಗಳನ್ನು ಹುಡುಕುವುದಕ್ಕೂ ಹ್ಯಾಶ್‌ಟ್ಯಾಗ್‌ಗಳು ಸಹಕಾರಿ.

ಹ್ಯಾಶ್‌ಟ್ಯಾಗ್‌ನಲ್ಲಿ ಒಂದೇ ಪದ ಇರಬೇಕು, ಪ್ರಾರಂಭ '#'ನೊಡನೆ ಆಗಿರಬೇಕು ಎನ್ನುವುದು ನಿಯಮ. ಹ್ಯಾಶ್‌ಟ್ಯಾಗ್‌ನಲ್ಲಿ ಅಕ್ಷರ, ಅಂಕಿ ಹಾಗೂ ಅಂಡರ್‌ಸ್ಕೋರ್('_')ಗಳನ್ನು ಮಾತ್ರ ಬಳಸಬಹುದು. ಇತರ ಲೇಖನಚಿಹ್ನೆಗಳನ್ನು ಹಾಗೂ ಖಾಲಿಜಾಗಗಳಿಗೆ (ಸ್ಪೇಸ್) ಹ್ಯಾಶ್‌ಟ್ಯಾಗ್‌ನಲ್ಲಿ ಜಾಗವಿಲ್ಲ.

ಹ್ಯಾಶ್‌ಟ್ಯಾಗ್‌ಗಳನ್ನು ಯಾರು ಬೇಕಾದರೂ ಸೃಷ್ಟಿಸಬಹುದು. ಹಾಗೆ ಸೃಷ್ಟಿಸುವಾಗ ಕೆಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರಬೇಕು ಅಷ್ಟೆ.

ಇಂತಹ ಅಂಶಗಳ ಪೈಕಿ ಮೊದಲನೆಯದು ಹ್ಯಾಶ್‌ಟ್ಯಾಗ್‌ನ ಉದ್ದ. ತೀರಾ ಉದ್ದದ ಹ್ಯಾಶ್‌ಟಾಗ್ ರೂಪಿಸಿದರೆ ಓದುಗರಿಗೆ ಕಿರಿಕಿರಿಯಾಗುತ್ತದೆ; ಹಾಗಾಗಿ ನಿಮ್ಮ ಹ್ಯಾಶ್‌ಟ್ಯಾಗ್ ಜನಪ್ರಿಯತೆ ಗಳಿಸಿಕೊಳ್ಳುವುದು ಕಷ್ಟವಾಗಬಹುದು.

ಒಂದು ಪೋಸ್ಟಿನಲ್ಲಿ ಎಷ್ಟು ಹ್ಯಾಶ್‌ಟ್ಯಾಗ್ ಇದ್ದರೆ ಚೆಂದ ಎನ್ನುವುದು ಇನ್ನೊಂದು ಅಂಶ. ಒಂದೋ ಎರಡೋ ಟ್ಯಾಗ್ ಬಳಸಿದರೆ ಅದು ಓದುಗರನ್ನು ಸೆಳೆಯಬಲ್ಲದು; ಪೋಸ್ಟಿನುದ್ದಕ್ಕೂ ಸಿಕ್ಕ ಪದಗಳಿಗೆಲ್ಲ ಹ್ಯಾಶ್ ಅಂಟಿಸುತ್ತ ಹೋದರೆ ಓದುವುದೇ ಕಷ್ಟವಾಗಿಬಿಡುತ್ತದೆ!

ನಮ್ಮ ಪೋಸ್ಟ್ ಯಾವ ವಿಷಯದ ಬಗೆಗಿದೆಯೋ ಅದಕ್ಕೆ ಸಂಬಂಧಪಟ್ಟ ಹ್ಯಾಶ್‌ಟ್ಯಾಗ್‌ಗಳನ್ನಷ್ಟೇ ಬಳಸುವುದು ಒಳ್ಳೆಯ ಅಭ್ಯಾಸ.  ಬಳಸಲೇಬೇಕೆಂಬ ಹಟಕ್ಕೆ ಬಿದ್ದು ಯಾವಯಾವುದೋ ಟ್ಯಾಗ್‌ಗಳನ್ನು ಸೇರಿಸುವುದರಿಂದ ಏನೂ ಉಪಯೋಗವಾಗುವುದಿಲ್ಲ.

ಬೇರೊಬ್ಬರು ರೂಪಿಸಿರುವ ಹ್ಯಾಶ್‌ಟ್ಯಾಗ್ ಬಳಸುವಾಗ ಅದನ್ನು ಯಥಾವತ್ತಾಗಿಯೇ ಬಳಸಬೇಕು. ಅಕ್ಷರ ತಪ್ಪುಗಳೇನಾದರೂ ಸೇರಿದರೆ ನಿಮ್ಮ ಪೋಸ್ಟು ಆ ವಿಷಯದ ಇತರ ಪೋಸ್ಟುಗಳೊಡನೆ ಕಾಣಿಸದೇ ಹೋಗಬಹುದು. ಒಂದು ವಿಷಯಕ್ಕೆ ಸಂಬಂಧಪಟ್ಟ ಹೆಚ್ಚುಹೆಚ್ಚು ಪೋಸ್ಟುಗಳು ಒಂದೇ ಹ್ಯಾಶ್‌ಟ್ಯಾಗ್ ಬಳಸಿದಾಗಲಷ್ಟೇ ಆ ವಿಷಯ 'ಟ್ರೆಂಡ್' ಆಗುವುದು ಸಾಧ್ಯ.
ಇದನ್ನೂ ಓದಿ: ಹ್ಯಾಶ್‌ಟ್ಯಾಗ್ ಹೇಳುವ ಕತೆ
ಜುಲೈ ೨೪ ಹಾಗೂ ಸೆಪ್ಟೆಂಬರ್ ೨೩, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನಗಳ ಸಂಯುಕ್ತರೂಪ

ಕಾಮೆಂಟ್‌ಗಳಿಲ್ಲ:

badge