ಶುಕ್ರವಾರ, ಜನವರಿ 13, 2017

ವೈರಸ್ ತಡೆಗೆ ಆಂಟಿವೈರಸ್

ಟಿ. ಜಿ. ಶ್ರೀನಿಧಿ 

ಕಂಪ್ಯೂಟರಿನ, ಸ್ಮಾರ್ಟ್‌ಫೋನಿನ ಸಾಫ್ಟ್‌ವೇರ್‌ನಿಂದ (ತಂತ್ರಾಂಶ) ಎಷ್ಟು ಉಪಯೋಗವಿದೆಯೋ ಅಷ್ಟೇ ಪ್ರಮಾಣದ ತೊಂದರೆಯೂ ಆಗಬಲ್ಲದು. ಒಳ್ಳೆಯ ಉದ್ದೇಶಕ್ಕೆ ತಂತ್ರಾಂಶಗಳಿರುವಂತೆ ಕೆಟ್ಟ ಕೆಲಸಗಳಿಗಾಗಿಯೂ ತಂತ್ರಾಂಶಗಳು (ಮಾಲ್‌ವೇರ್ - ಕುತಂತ್ರಾಂಶ) ರೂಪುಗೊಂಡಿರುವುದು ಇದಕ್ಕೆ ಕಾರಣ.

ಕಂಪ್ಯೂಟರ್ ಕಾರ್ಯಾಚರಣೆಗೆ ತೊಂದರೆಮಾಡುವುದು, ಶೇಖರಿಸಿಟ್ಟ ಮಾಹಿತಿಯನ್ನು ಹಾಳುಮಾಡುವುದು, ಖಾಸಗಿ ಮಾಹಿತಿಯನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುವುದು - ಹೀಗೆ ಕುತಂತ್ರಾಂಶಗಳು ಬೇಕಾದಷ್ಟು ಬಗೆಯಲ್ಲಿ ತೊಂದರೆಕೊಡುತ್ತವೆ. ವೈರಸ್, ಟ್ರೋಜನ್, ಸ್ಪೈವೇರ್, ಆಡ್‌ವೇರ್ ಇವೆಲ್ಲ ಕುತಂತ್ರಾಂಶಗಳಿಗೆ ಉದಾಹರಣೆಗಳು.

ರೋಗ ಬಾರದಂತಿರಲು, ಹಾಗೂ ಬಂದಾಗ ಅದನ್ನು ವಾಸಿಮಾಡಿಕೊಳ್ಳಲು ನಾವು ಔಷಧಿ ತೆಗೆದುಕೊಳ್ಳುತ್ತೇವಲ್ಲ, ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳ ಪಾಲಿಗೆ ಅಂತಹ ಔಷಧಿಯೆಂದರೆ ಆಂಟಿವೈರಸ್ ತಂತ್ರಾಂಶ. ಕುತಂತ್ರಾಂಶಗಳನ್ನು ಗುರುತಿಸಿ ಅವು ತೊಂದರೆಮಾಡದಂತೆ ತಡೆಯುವುದು ಈ ತಂತ್ರಾಂಶದ ಕೆಲಸ.

ಇವುಗಳ ಕೆಲಸ ನಡೆಯುವುದು ಕುತಂತ್ರಾಂಶಗಳ ಬಗ್ಗೆ ಸಮಗ್ರ ಮಾಹಿತಿ ಹೊಂದಿರುವ ದತ್ತಸಂಚಯವನ್ನು (ಡೇಟಾಬೇಸ್) ಆಧರಿಸಿಕೊಂಡು. ವೈರಸ್ ವಿರೋಧಿ ತಂತ್ರಾಂಶ ರೂಪಿಸುವ ಸಂಸ್ಥೆಗಳು ಯಾವೆಲ್ಲ  ಕುತಂತ್ರಾಂಶಗಳನ್ನು ಪತ್ತೆಮಾಡಿರುತ್ತವೆಯೋ ಅವೆಲ್ಲವುಗಳ 'ಸಿಗ್ನೇಚರ್', ಅರ್ಥಾತ್ ಗುಣಲಕ್ಷಣಗಳನ್ನು  ಇಂತಹ ದತ್ತಸಂಚಯಗಳಲ್ಲಿ ಸಂಗ್ರಹಿಸಲಾಗಿರುತ್ತದೆ. ಹೊಸಹೊಸ ಕುತಂತ್ರಾಂಶಗಳು ಪತ್ತೆಯಾದಂತೆಲ್ಲ ಅವುಗಳ ಬಗೆಗಿನ ಮಾಹಿತಿ ಈ ದತ್ತಸಂಚಯವನ್ನು ಸೇರಿಕೊಳ್ಳುತ್ತದೆ (ನಿರ್ದಿಷ್ಟ ಪರೀಕ್ಷೆಗಳ ಮೂಲಕ ಹೊಸ ಕುತಂತ್ರಾಂಶಗಳನ್ನು ತಡೆಯುವ ಚಾಕಚಕ್ಯತೆಯೂ ಹಲವು ಆಂಟಿವೈರಸ್‌ಗಳಲ್ಲಿರುತ್ತದೆ).

ಆಂಟಿವೈರಸ್ ತಂತ್ರಾಂಶಗಳನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡಿಕೊಳ್ಳುತ್ತಿರಬೇಕು ಎನ್ನುವುದು ಇದೇ ಕಾರಣಕ್ಕಾಗಿ. ಹೀಗೆ ಮಾಡುವುದರಿಂದ ಹೊಸ ಕುತಂತ್ರಾಂಶಗಳ ಬಗೆಗಿನ ಮಾಹಿತಿ ನಮ್ಮ ಕಂಪ್ಯೂಟರ್‌ ಅಥವಾ ಸ್ಮಾರ್ಟ್‌ಫೋನಿನಲ್ಲಿರುವ ವೈರಸ್ ವಿರೋಧಿ ತಂತ್ರಾಂಶಕ್ಕೂ ಸಿಗುವಂತೆ ಮಾಡಬಹುದು. ಇದರಿಂದಾಗಿ ನಮ್ಮ ಸಾಧನವನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಸಾಧ್ಯ. ಅಷ್ಟೇ ಅಲ್ಲ, ಕುತಂತ್ರಾಂಶಗಳು ಇತರೆಡೆಗೂ ಹರಡಿ ಬೇರೆಯವರಿಗೆ ತೊಂದರೆಯಾಗುವುದನ್ನು ಕೂಡ ತಪ್ಪಿಸಬಹುದು.

ನಾರ್ಟನ್, ಮೆಕ್‌ಆಫೀ, ಅವಾಸ್ತ್ ಮುಂತಾದ ಹಲವು ಆಂಟಿವೈರಸ್‌ಗಳು ಮಾರುಕಟ್ಟೆಯಲ್ಲಿವೆ. ಈ ಪೈಕಿ ಕೆಲವನ್ನು ಬಳಸಲು ಹಣ ಕೊಡಬೇಕಾಗುತ್ತದೆಯಾದರೆ ಇನ್ನು ಕೆಲವು ಉಚಿತವಾಗಿಯೇ ಸಿಗುತ್ತವೆ. ಯಾವುದೇ ಆಂಟಿವೈರಸ್ ಬಳಸುವ ಮುನ್ನ ಅದರ ಕಾರ್ಯಕ್ಷಮತೆಯ ಕುರಿತ ಅಭಿಪ್ರಾಯ-ವಿಮರ್ಶೆಗಳನ್ನು ನೋಡಿ ಮುಂದುವರೆಯುವುದು ಒಳ್ಳೆಯದು.

ಏಪ್ರಿಲ್ ೨೬ ಹಾಗೂ ಮೇ ೨೪, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನಗಳ ಸಂಯುಕ್ತರೂಪ
ಈ ವಿಷಯದ ಬಗ್ಗೆ ಮಾಹಿತಿ ಬೇಕೆಂದು ಬೇಡಿಕೆ ಸಲ್ಲಿಸಿದ್ದು 97XXX XXX05 ಎಂಬ ಮೊಬೈಲ್ ಸಂಖ್ಯೆಯ ಮೂಲಕ ನಮ್ಮ ವಾಟ್ಸ್‌ಆಪ್ ಬ್ರಾಡ್‌ಕಾಸ್ಟ್ ಪಟ್ಟಿ ಸೇರಿರುವ ಸದಸ್ಯರು. ನಿಮ್ಮ ಆಯ್ಕೆಯ ವಿಷಯವನ್ನೂ ನಮಗೆ ತಿಳಿಸಲು ವಾಟ್ಸ್‌ಆಪ್ ಅಥವಾ ಫೇಸ್‌ಬುಕ್ ಮೂಲಕ ನಮ್ಮನ್ನು ಸಂಪರ್ಕಿಸಿ. ಹೆಚ್ಚಿನ ವಿವರಗಳಿಗೆ: fb.me/ejnana

ಕಾಮೆಂಟ್‌ಗಳಿಲ್ಲ:

badge